BJP – Congress : ಮಡಿಕೇರಿಯಲ್ಲಿ ಪ್ರತ್ಯಕ್ಷನಾದ ಕಾಂಗ್ರೆಸ್ ಬಿಜೆಪಿಯ ಈ ವಿಚಿತ್ರ ‘ ಅವಳಿ – ಜವಳಿ ‘ ವ್ಯಕ್ತಿ, ವೈರಲ್ ಆಗಿದೆ ಈ ಫೋಟೋ !
BJP – Congress: ಬಿಜೆಪಿ ಮತ್ತು ಕಾಂಗ್ರೆಸ್ ರಾಜ್ಯದ ಎರಡು ದೊಡ್ಡ ರಾಷ್ಟ್ರೀಯ ಪಕ್ಷಗಳು ಮತ್ತು ಅವು ಸದಾ ವೈರಿಗಳು. ಅವರಿಬ್ಬರ ಮದ್ಯೆ ಯಾವುದೇ ಸಂಧಾನವಾಗಲಿ, ಸಾಂಗತ್ಯವಾಗಲಿ ನಡೆಯೋದೇ ಇಲ್ಲ. ಹೊಂದಾಣಿಕೆಯ ಮಾತೇ ಅವರಿಬ್ಬರ ಮಧ್ಯೆ ಇರಲ್ಲ. ಬಿಜೆಪಿ ಕಾಂಗ್ರೆಸ್ ಇದ್ದಲ್ಲಿ ವೈರತ್ವ ಸಹಜವಾಗಿ ಇರತ್ತೆ. ಎದುರಾ ಎದುರು ವಿರುದ್ಧ ಪಕ್ಷದ ಕಾರ್ಯಕರ್ತರು ಬಂದಾಗ ಇಬ್ಬರ ಹುಬ್ಬುಗಳು ಗಂಟು ಕಟ್ಟಿಕೊಳ್ಳುತ್ತದೆ. ಆದರೆ ಮೊನ್ನೆ ಮಡಿಕೇರಿಯಲ್ಲಿ ಆದದ್ದೇ ಬೇರೆ.
ಅದಕ್ಕೆ ಕಾರಣ ಆದವನು ಅವನೊಬ್ಬ. ಹೌದು, ಅವನ್ಯಾರೋ ಗೊತ್ತಿಲ್ಲ. ಆದರೆ ಈವತ್ತು ಆತ ಕರ್ನಾಟಕದಾದ್ಯಂತ ಫುಲ್ ಫೇಮಸ್. L ಆತನ ಬಗ್ಗೆ ಕೆಲವರಿಗೆ ಇನ್ನೂ ಗೊತ್ತಿಲ್ಲ. ಅದಕ್ಕಾಗಿ ನಾವವನನ್ನು ಇಲ್ಲಿ ಪರಿಚಯಿಸುತ್ತಿದ್ದೇವೆ. ಆತ ಈಗ ಕಾಂಗ್ರೆಸ್ – ಬಿಜೆಪಿಯ(BJP – Congress) ‘ ಅವಳಿ-ಜವಳಿ ‘ ಅಂತಾನೆ ಫೇಮಸ್ !
ಮೊನ್ನೆ ಮಡಿಕೇರಿಯ ಬಸ್ ಸ್ಟ್ಯಾಂಡ್ ಪಕ್ಕದ ಕಾಂಪೌಂಡ್ ಗೋಡೆಗೆ ಬೆನ್ನು ಹಾಕಿ ಒಬ್ಬಾತ ಬಿಸಿ ಬಿಸಿ ಕಾಫಿ ಹೀರುವುದರಲ್ಲಿ ಮಗ್ನನಾಗಿದ್ದ. ಆತನನ್ನು ಕೂಡಲೇ ನೋಡಿದರೆ ಏನೂ ತಿಳಿಯದಾದರೂ ಕೊಂಚ ಗಮನವಿಟ್ಟು ನೋಡಿದಾಗ ಒಮ್ಮೆ ನಿಮಗೂ ಕಸಿವಿಸಿಯಾಗಿ ಕನಫ್ಯೂಸ್ ಆಗೋದು ಪಕ್ಕಾ. ಯಾಕೆಂದರೆ ಆತ ತಲೆಯಲ್ಲಿ ಕಾಂಗ್ರೆಸ್ ಪಕ್ಷದ ಹಸ್ತದ ಚಿಹ್ನೆಯಿರುವ ಕ್ಯಾಪ್ ಧರಿಸಿದ್ದಾನೆ. ಕುತ್ತಿಗೆಯಲ್ಲಿ ಬಿಜೆಪಿಯ ಶಾಲು ಹೊದೆದಿದ್ದಾನೆ ! ಇದು ನಿಮ್ಮ ಅರಿವಿಗೆ ಬಂದೊಡನೆ ಅಯ್ಯೋ ದೇವ್ರೇ ಇವನ್ಯಾವ ಪಕ್ಷದ ಕಾರ್ಯಕರ್ತನಪ್ಪಾ? ಅಂತ ತಲೆಯಲ್ಲಿ ಗೊಂದಲ ಸೃಷ್ಟಿಯಾಗುತ್ತದೆ.
ಅಂದಹಾಗೆ ಈ ಆಸಾಮಿ ಹೀಗೆ ಎರಡೂ ಪಕ್ಷಗಳ ಚಿಹ್ನೆಯನ್ನು ಹೊದ್ದು ಆರಾಮಾಗಿ ಕಾಫಿ ಹೀರೋದನ್ನು ನೋಡಿದರೆ, ಇವನಿಗೆ ಅದರ ಪರಿವೆಯೆ ಇಲ್ಲ ಅನ್ಬೋದು. ಅಥವಾ, ಎಲೆಕ್ಷನ್ ಟೈಮಿನಲ್ಲಿ ಇದು ತನ್ನ ಮಾಮುಲೀ ಡ್ಯೂಟಿ ಅನ್ಸುತ್ತೆ. ಎಲ್ಲೋ (ಕಾಂಗ್ರೆಸ್) ಡ್ಯೂಟಿ ಮುಗಿಸಿಕೊಂಡು ಬಂದು, ಕ್ಯಾಪ್ ತೆಗೆಯದೆಯೆ ಇನ್ನೊಂದು ಕಡೆ ಡ್ಯೂಟಿ ರಿಪೋರ್ಟ್ ಮಾಡಿಕೊಂಡಿರಬೇಕು ಆಸಾಮಿ !
ಅಂದ,ರೆ ಈ ವೇಳೆ ಯಾವ ಕಡೆ ಸರಿ ಎನಿಸುತ್ತೋ ಆ ಕಡೆಗೆ ಜೈ. ಅಲ್ಲಿ ಬೋರಾಯ್ತು ಅಂದ್ರೆ ಮತ್ತೊಂದು ಕಡೆಗೂ ಸೈ. ಒಟ್ನಲ್ಲಿ ಮೊದಲು ಹೇಳಿದಂತೆ ಆತ ಕಾಂಗ್ರೆಸ್ ಮತ್ತು ಬಿಜೆಪಿಯ ಅವಳಿ-ಜವಳಿಯೇ ಸರಿ.
ಇನ್ನು ಇಂತಹ ಆಸಾಮಿಗಳು ನಮಗೆ ಕಂಡುಬಂದದ್ದು ಇದೇ ಮೊದಲೇನಲ್ಲ. ಯಾಕೆಂದರೆ ಸಿದ್ದು ದೋಸ್ತು, ‘ ಹೌದು ಹುಲಿಯಾ ‘ ನಿಮಗೆಲ್ಲರಿಗೂ ಚೆನ್ನಾಗಿ ಗೊತ್ತಿರಬೇಕು ಅಲ್ವಾ? ಸಿದ್ದರಾಮಯ್ಯ ಅವರು ರಾಜಕೀಯ ಸಮಾವೇಶದಲ್ಲೊಮ್ಮೆ ಮಾತನಾಡುವಾಗ ಸುರಪಾನ ಗೈದು, ವಿವಿಧ ರೀತಿಯ ಹಾವಾಭಾವ ತೋರುತ್ತಾ ಮಾತು ‘ ಹೌದು ಹುಲಿಯಾ ‘ಎಂದು ಅರಚುತ್ತಾ ನಾಡಿನಾದ್ಯಂತ ಫೇಮಸ್ ಆಗಿದ್ದ. ಅಂದು ಎಲ್ಲರ ವಾಟ್ಸಾಪ್ ಸ್ಟೇಟಸ್ಗಳಲ್ಲಿ ಮಿಂಚಿದ್ದ ಆತನನ್ನು ಮರೆಯಲು ಸಾಧ್ಯವೇ ಎಂದು ನೀವು ಕೇಳಬಹುದು !
ಆತನ ನಸೀಬು ಹೇಗಿತ್ತು ನೋಡಿ, ಫೇಮಸ್ ಆದ ಕೆಲವೇ ದಿನಗಳಲ್ಲಿ ಸಿದ್ದರಾಮಯ್ಯನನ್ನು ನೇರವಾಗಿ ಭೇಟಿ ಮಾಡೋ ಅವಕಾಶವನ್ನು ಆತ ಗಿಟ್ಟಿಸಿಕೊಂಡ. ಆ ವೇಳೆ ಸಿದ್ದುವೇ ಖುದ್ದಾಗಿ ಆತನನ್ನು ಪ್ರಶಂಸಿಸಿ ‘ಏನಯ್ಯಾ ಇಷ್ಟು ಬೇಗ ಫೇಮಸ್ ಆಗ್ಬಿಟ್ಯಾ? ಕಾಂಗ್ರೆಸ್ ಅಲ್ಲೇ ಇರ್ತಿಯಾ ಅಲ್ವಾ?’ ಎಂದು ಪಕ್ಷದ ಶಾಲೂ ಹೊದೆಸಿದ್ದರು. ನಂತರ ಹಲವು ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ಆತ ಕಾಣಿಸಿದ್ದ. ಆದರೆ ನಂತರ ಆದದ್ದೇ ಬೇರೆ. ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೋ ಒಂದರಲ್ಲಿ ಈ ಹೌದು ಹುಲಿಯಾ ಬಿಜೆಪಿ ಶಾಲು ಹಾಕಿಕೊಂಡು ಜೈಕಾರ ಕೂಗುತ್ತಾ ತಿರುಗಾಡುತ್ತಿದ್ದ!
ಇದಲ್ಲದೆ, ಇತ್ತೀಚೆಗೆ ಒಂದು ಭಾರೀ ಮಜವಾದ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿತ್ತು. ಅದೇನಂದ್ರೆ ಒಬ್ಬ ಶಾಲೆಗೆ ಹೋಗೋ ಚಿಕ್ಕ ಹುಡುಗ. ಕಾಂಗ್ರೆಸ್ ಕ್ಯಾನ್ವಾಸ್ ವೇಳೆ ಮುಂಚೂಣಿಯಲ್ಲಿ ನಿಂತು ಜೋರಾಗಿ ಕಿರುಚುತ್ತಾ, ಬೊಬ್ಬೆ ಹೊಡೆಯುತ್ತಾ ಕಾಂಗ್ರೆಸ್ ಪರ ಘೋಷಣೆ ಕೂಗುತ್ತಾ ಬೀದಿಯಲ್ಲಿ ಮುನ್ನುಗ್ಗುತ್ತಿದ್ದಾನೆ. ಆತ ಅರಚುವುದು ನೋಡಿದರೆ ಕಾಂಗ್ರೆಸ್ಸಿನ ಅಪ್ಪಟ ಅಭಿಮಾನಿ ಅನ್ನೋದರಲ್ಲಿ ಸಂಶಯವೆ ಇಲ್ಲ. ಆದರೆ ಆ ವಿಡಿಯೋ ಅರ್ಧ ಮುಗಿದ ಬಳಿಕ ಇನ್ನರ್ಧದಲ್ಲಿ ಅದೇ ಹುಡುಗ, ಅದೇ ಬೀದಿಯಲ್ಲಿ, ಅದೇ ರೀತಿ ಘೋಷಣೆ ಕೂಗುತ್ತಾ, ಜೈಕಾರ ಹಾಕುತ್ತಾ ರಾಜಾರೋಷವಾಗಿ ಮುನ್ನುಗ್ಗುತ್ತಿದ್ದಾನೆ. ಆದರೆ ಕುತ್ತಿಗೆಯಲ್ಲಿ ಬಿಜೆಪಿ ಶಾಲು, ಕೈಯಲ್ಲಿ ಕಮಲದ ಬಾವುಟವಿದೆ ! ಬಹುಶಃ ಆತ ಶಿಫ್ಟ್ ಗಳಲ್ಲಿ ಕೆಲಸ ಮಾಡುತ್ತಿದ್ದಿರಬೇಕು !!
ಹೀಗೆ ಇದೆ ನೋಡಿ ನಮ್ಮ ಸಮಾಜ. ಎಂತೆಂತ ವಿಚಿತ್ರ ಜೀವಗಳು ನಮ್ಮ ನಡುವೆ ಇದ್ದಾವೆ ಅಲ್ವೇ? ಈಗ ಹೇಳಿದ ಈ ಮೂವರು ಕೇವಲ ಉದಾಹರಣೆ ಅಷ್ಟೆ. ಆದರೆ ಇಂತಹ ಎಷ್ಟೋ ರಾಜಕೀಯ ಅವಳಿ ಜವಳಿಗಳು ನಮ್ಮ ನಡುವೆ ಇದ್ದಾವೆ – ಹೆಚ್ಚಿನವರು ರಾಜಕೀಯ ಪಕ್ಷದ ನಾಯಕರು ಆಗಿದ್ದಾರೆ. ಅವಳಿ ಜವಳಿ ತ್ರಿವಳಿಗಳು ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಮುಖವಾಡದಲ್ಲಿ ಅಡಗಿ ಕುಳಿತು ಹೊಂಚು ಹಾಕಿ ಅವಕಾಶಕ್ಕಾಗಿ ಕಾಯುತ್ತಿವೆ.