Samantha About Chittibabu: ಶಾಕುಂತಲಂ ಸಿನಿಮಾದ ಸೋಲಿಗೆ ನಿಂದನೆ ಮಾಡಿದ ನಿರ್ದೇಶಕನಿಗೆ ಎದಿರೇಟು ನೀಡಿದ ಸಮಂತಾ!

Samantha About Chittibabu: ಸೌತ್ ಸ್ಟಾರ್ ಸಮಂತಾ ರುತ್​ಪ್ರಭು(Samantha Ruth Prabhu)ನಟನೆಯ ಶಾಕುಂತಲಂ ಸಿನಿಮಾ(Shaakuntalam Movie) ರಿಲೀಸ್ ಆಗುವ ಮೊದಲು ಭಾರೀ ನಿರೀಕ್ಷೆ ಹುಟ್ಟು ಹಾಕಿತ್ತು. ಆದರೆ, ಅದೇಕೋ ಶಾಕುಂತಲಂ ಸಿನಿಮಾ ರಿಲೀಸ್ ಆದ ಬಳಿಕ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಮಕಾಡೆ ಮಲಗಿದ್ದು, ಜನರ ಮನಗೆಲ್ಲುವಲ್ಲಿ ಎಡವಿತೇ ಎಂಬ ಅನುಮಾನ ಕಾಡುತ್ತಿದೆ. ಸಮಂತಾ ಇದೇ ಮೊತ್ತ ಮೊದಲ ಬಾರಿಗೆ ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾ ಸೋಲುತ್ತಿದೆ ಎಂಬ ಅರಿವಾಗುತ್ತಿದ್ದಂತೆ ಕೆಲ ನಿರ್ದೇಶಕರು ಸ್ಯಾಮ್ ಅವರ ಸಿನಿಮಾ ಅವರನ್ನು ಅವಮಾನ ಮಾಡುವ ಕುಹಕ ಮಾತುಗಳಿಂದ ಜರಿಯುವ ಪ್ರಯತ್ನ ನಡೆಸಿ, ಸಿನಿಮಾ ಜರ್ನಿ ಮುಗಿಯಿತು ಅನ್ನೋ ರೀತಿ ಪೋಸ್ಟ್ ಮಾಡಿದ್ದರು. ಇದೀಗ, ಸಮಂತಾ ಅವರು ಪೋಸ್ಟ್ ಮೂಲಕ ತಮ್ಮ ವಿರುದ್ಧ (Samantha About Chittibabu)ವಾಗ್ದಾಳಿ ನಡೆಸುವ ಮಂದಿಗೆ ಉತ್ತರ ನೀಡಿದ್ದಾರೆ.

 

ಏಪ್ರಿಲ್ 14ರಂದು ರಿಲೀಸ್ ಆದ ಶಾಕುಂತಲಂ ಸಿನಿಮಾ ತೆಲುಗು ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ತೆರೆ ಕಂಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಂದ ಶಾಕುಂತಲಂ ಸಿನಿಮಾ ಹೀನಾಯ ಸೋಲುಂಡಿದ್ದು, ಬಹುಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆದ ‘ಶಾಕುಂತಲಂ’ ಬಾಕ್ಸ್ ಆಫೀಸ್ ಗಳಿಕೆ ನೀರಸವಾಗಿದ್ದು, ವೀಕೆಂಡ್ ನಲ್ಲಿಯಾದರೂ ಉತ್ತಮ ಕಲೆಕ್ಷನ್ ಆಗಬಹುದು ಎಂಬ ನಿರೀಕ್ಷೆಯಿತ್ತು. ಸದ್ಯ ಅದು ಕೂಡ ಹುಸಿಯಾಗಿದೆ.

ವೈಯಕ್ತಿಕವಾಗಿ ಸಮಂತಾ ಅವರಿಗೆ ದೊಡ್ಡ ಹಿನ್ನಡೆ ಎನ್ನಬಹುದು. ನೋವಿನ ಮೇಲೆ ಬರೆ ಎಳೆದಂತಾಗಿದೆ ಸ್ಯಾಮ್ ಪರಿಸ್ಥಿತಿ ಎಂದರೂ ತಪ್ಪಾಗಲಾರದು. ವಿಚ್ಛೇದನ, ಅನಾರೋಗ್ಯದ ನೋವಿನ ರುಚಿ ಉಂಡಿದ್ದ ನಟಿಗೆ ಈಗ ಸಿನಿಮಾ ಸೋಲು ಮತ್ತಷ್ಟು ಕುಗ್ಗಿಸಿದೆ. ‘ಶಾಕುಂತಲಂ’ ಸೋಲಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಜೋರಾಗಿ ನಡೆಯುತ್ತಿದ್ದು, ಈ ಬಗ್ಗೆ ಸಮಂತಾ ಕ್ಯಾರೇ ಎನ್ನದೇ ಸುಮ್ಮನಿದ್ದರು. ಆದರೆ, ಟಾಲಿವುಡ್‌ ನಿರ್ದೇಶಕ ನಿರ್ಮಾಪಕರಾದ ಚಿಟ್ಟಿ ಬಾಬು (Samantha about Chittibabu)ಸಮಂತಾ ಅವರ ಕಾಲೆಳೆಯುತ್ತಾ ಮತ್ತಷ್ಟು ನೋವು ಕೊಟ್ಟ ಬಳಿಕ ಸ್ಯಾಮ್ ಮೌನ ಮುರಿದಿದ್ದಾರೆ. ಹೌದು!! ನಟಿ ಸಮಂತಾ ಅವರು ಸಾಮಾಜಿಕ ಜಾಲತಾಣದಲ್ಲಿ ಭಗವದ್ಗೀತೆಯ ಸಾಲುಗಳನ್ನು ಬರೆದುಕೊಂಡಿದ್ದಾರೆ.

ಸಮಂತಾ ಐರನ್‌ ಲೇಡಿ, ನಾಗಚೈತನ್ಯ ಅವರೊಂದಿಗೆ ಡಿವೋರ್ಸ್‌ ಆದ ಬಳಿಕವೂ ಕೆಲವು ದಿನಗಳ ಕಾಲ ಡಿಪ್ರೆಷನ್‌ನಲ್ಲಿದ್ದ ಆಕೆ, ಮಯೋಸಿಟಿಸ್‌ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಈಗ ಅವರು ಮಾನಸಿಕ, ದೈಹಿಕ ನೋವಿನಿಂದ ಹೊರಗೆ ಬರುತ್ತಿದ್ದಾರೆ. ಯಾರು ಎಷ್ಟು ನೋಯಿಸಿದರೂ ಕೂಡ ನಟಿ ಸಮಂತಾ ಮತ್ತಷ್ಟು ಸ್ಟ್ರಾಂಗ್‌ ಆಗುತ್ತಲೇ ಹೋಗುತ್ತಾರೆ ಎಂದು ಅಭಿಮಾನಿಗಳು ಕಮೆಂಟ್‌ ಮಾಡಿದ್ದು, ನಿಮ್ಮಲ್ಲಿ ಎಲ್ಲವನ್ನೂ ಎದುರಿಸುವ ಶಕ್ತಿ, ಸಾಮರ್ಥ್ಯವಿದೆ ಜೊತೆಗೆ ನಿಮ್ಮ ಜೊತೆಗೆ ನಾವಿದ್ದೇವೆ ಎಂಬಂತೆ ಅಭಿಮಾನಿಗಳು ನೈತಿಕ ಬೆಂಬಲ ನೀಡಿದ್ದಾರೆ.

ಸಮಂತಾ ಅಭಿನಯದ ‘ಯಶೋಧ’ ಸಿನಿಮಾ ದೊಡ್ಡ ಯಶಸ್ಸು ಕಂಡಬಳಿಕ ಸಹಜವಾಗಿಯೇ ಅಭಿಮಾನಿಗಳಲ್ಲಿ ಶಾಕುಂತಲಂ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಾಗಿತ್ತು. ಆದರೆ,65 ಕೋಟಿ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಲಾದ ಸಿನಿಮಾ 10 ಕೋಟಿ ಕೂಡ ಗಳಿಸಲು ಸಾಧ್ಯವಾಗಿಲ್ಲ. ಈ ಸಂದರ್ಭ ಟಾಲಿವುಡ್‌ ನಿರ್ಮಾಪಕ, ನಿರ್ದೇಶಕ ಚಿಟ್ಟಿಬಾಬು, ಸಮಂತಾ ಅವರನ್ನು ಕುರಿತು, ”ಇನ್ನು ಸಮಂತಾ ಅಧ್ಯಾಯ ಮುಗಿಯಿತು” ಎಂದು ವ್ಯಂಗ್ಯವಾಡಿದ್ದರು. ಚಿಟ್ಟಿಬಾಬು ಅವರ ಮಾತುಗಳು ವೈರಲ್‌ ಆದ ಬಳಿಕ ನಟಿ ಸಮಂತಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್‌ ಹಂಚಿಕೊಂಡಿದ್ದು, ತಮ್ಮ ಫೋಟೋ ಜೊತೆಗೆ ಅವರು ಭಗವದ್ಗೀತೆಯ ಕೆಲವೊಂದು ಸಾಲುಗಳನ್ನು ಬರೆದುಕೊಂಡಿದ್ದಾರೆ.

”ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ, ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋಸ್ತ್ವಕರ್ಮಣಿ, ಯೋಗಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ, ಸಮೋಭೂತ್ವಾ ಸಮತ್ವಂ ಯೋಗ ಉಚ್ಯತೇ”

ಭಗವದ್ಗೀತೆಯ ಈ ಶ್ಲೋಕದ ಅರ್ಥವೇನು ಎಂದು ಗಮನಿಸಿದರೆ,
”ನಿನಗೆ ನಿನ್ನ ಕರ್ಮ ಮಾಡುವುದರಲ್ಲಿ ಮಾತ್ರ ಅಧಿಕಾರವಿದೆಯೇ ಹೊರತು ಅದರ ಫಲದಲ್ಲಿ ಅಲ್ಲ. ಹೀಗಾಗಿ, ಮಾಡಿದ ಕೆಲಸಕ್ಕೆ ಪ್ರತಿಫಲಾಪೇಕ್ಷೆಯಾಗಿ ಫಲಕ್ಕೆ ಕಾರಣನೂ ನೀನೆಂದುಕೊಳ್ಳಬೇಡ ಜೊತೆಗೆ ಕರ್ಮ ಮಾಡದೇ ಜೀವಿಸಬೇಕೆಂಬ ಹಂಬಲ ನಿನ್ನಲ್ಲಿ ಹುಟ್ಟದಿರಲಿ. ಹಾಗೆ ಗೆಲವು-ಸೋಲುಗಳಿಗೆ ಕುಗ್ಗದೇ ಎರಡನ್ನೂ ಸಮಾನಚಿತ್ತದಿಂದ ಸ್ವೀಕರಿಸುತ್ತ ನಿನ್ನ ಕರ್ತವ್ಯಗಳನ್ನು ಮಾಡು. ಈ ಸಮತ್ತ್ವಭಾವವೇ ಯೋಗ” ಎಂಬುದನ್ನು ವಿವರಿಸುತ್ತದೆ.

ಈ ಮೂಲಕ ಯಾರು ಏನೇ ಹೇಳಲಿ, ನಿನ್ನ ಕಾರ್ಯವನ್ನು ಸರಿಯಾಗಿ ನೀನು ಮಾಡು. ಗೆಲುವೇ ಬರಲಿ. ಸೋಲೇ ಬರಲಿ ಎರಡನ್ನೂ ಸಮಚಿತ್ತತೆಯಿಂದ ಒಪ್ಪಿಕೋ. ಮಾಡಿದ ಕಾರ್ಯಕ್ಕೆ ಪ್ರತಿಫಲವಾಗಿ ಜರುಗುವ ಪರಿಣಾಮಕ್ಕೆ ನೀನೇ ಜವಾಬ್ದಾರಿ ಎಂಬಂತೆ ನಿನ್ನ ನೀನು ಹಳಿದುಕೊಳ್ಳಬೇಡ ಎಂಬ ಅರ್ಥದಲ್ಲಿ ತನಗೆ ಟಾಂಗ್ ಕೊಟ್ಟು ಕಾಲೆಳೆಯುವ ಮಂದಿಗೆ ಸ್ಯಾಮ್ ಭಗವದ್ಗೀತಾ ಪಾಠ ಮಾಡಿದ್ದಾರೆ. ಸಮಂತಾ ಬರೆದಿರುವ ಈ ಸಾಲುಗಳು, ಅವರು ಪರೋಕ್ಷವಾಗಿ ತಮ್ಮನ್ನು ನಿಂದಿಸಿದ ಚಿಟ್ಟಿಬಾಬು ಅವರಿಗೆ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.

 

ಇದನ್ನು ಓದಿ : Temrature of the sun: ಅಬ್ಬಬ್ಬಾ, ಎಂಥಾ ಬಿಸಿಲು! ಇದರ ಶಾಖದಿಂದ ಹೀಗೆ ತಪ್ಪಿಸಿಕೊಳ್ಳಿ

Leave A Reply

Your email address will not be published.