Karnataka Polls: 10,000 ಮನೆಗಳಲ್ಲಿ ಭಿಕ್ಷೆ ಬೇಡಿ, 10,000 ನಾಣ್ಯ ತಂದು ನಾಮಪತ್ರ ಸಲ್ಲಿಸಿದ ಅಭ್ಯರ್ಥಿ ; ಚಿಲ್ಲರೆ ಎಣಿಸಿದ ಅಧಿಕಾರಿಗಳು ಸುಸ್ತೋ ಸುಸ್ತು !
Independent candidate : ಕರ್ನಾಟಕ ವಿಧಾನಸಭೆಯ ನಿಮಿತ್ತ ರಾಜ್ಯದಲ್ಲಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಯಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಈ ನಡುವೆ ಅನೇಕ ಪಕ್ಷೇತರ ಹಾಗೂ ಸ್ವತಂತ್ರ ಅಭ್ಯರ್ಥಿಗಳು (Independent candidate) ಕೂಡ ಭಾರೀ ಸದ್ಧು ಮಾಡುತ್ತಿದ್ದಾರೆ. ಇತ್ತೀಚೆಗಷ್ಟೆ 60 ವರ್ಷದ ವೃದ್ಧೆಯೊಬ್ಬರು ತಮ್ಮ ಊರಿಂದಲೂ ಎತ್ತಿನೆಗಾಡಿ ಮೂಲಕ ಮೆರವಣಿಗೆ ಬಂದು ನಾಮಪತ್ರ ಸಲ್ಲಿಸಿ ಭಾರೀ ಸುದ್ದಿಯಾಗಿದ್ದರು. ಅಂತೆಯೇ ಇದೀಗ ಮತ್ತೊಬ್ಬರು ಪಕ್ಷೇತರ ಅಭ್ಯರ್ಥಿ ತನ್ನ ವಿಶೇಷತೆಯಿಂದಲೇ ಸಖತ್ ಫೇಮಸ್ ಆಗ್ತಿದ್ದಾನೆ.
ಹೌದು, ಯಾದಗಿರಿ (Yadgiri) ಜಿಲ್ಲೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದು, ನಾಮಪತ್ರ ಸಲ್ಲಿಸುವಾಗ ಸುಮಾರು 10ಸಾವಿರ ರೂಪಾಯಿಗಳನ್ನು ಠೇವಣಿ ಇಟ್ಟಿದ್ದಾರೆ. ಇಷ್ಟು ಮಾತ್ರಕ್ಕೆ ಅವರು ಸುದ್ದಿಯಾಗ್ತಿರಲಿಲ್ಲವೇನೋ. ಆದರೆ ಅವರು ತಮ್ಮ ಠೇವಣಿ (Deposite) ಹಣ 10,000 ರೂ.ಗಳನ್ನು ಸಂಪೂರ್ಣವಾಗಿ ಒಂದು ರೂಪಾಯಿ ನಾಣ್ಯಗಳಲ್ಲಿ ಪಾವತಿಸಿದ್ದಾರೆ. ಇದರಿಂದ ಹತ್ತು ಸಾವಿರ ನಾಣ್ಯಗಳನ್ನು ಎಣಿಸುವಲ್ಲಿ ಚುನಾವಣಾ ಅಧಿಕಾರಿಗಳು ಸುಸ್ತು ಹೊಡೆದುಬಿಟ್ಟಿದ್ದಾರೆ.
ಅಂದಹಾಗೆ ಹೀಗೆ ಒಂದೊಂದು ರೂಪಾಯಿ ನಾಣ್ಯಗಳನ್ನು ನೀಡಿ ಹತ್ತು ಸಾವಿರ ಠೇವಣಿ ಭರಿಸಿರುವ ಈ ಪಕ್ಷೇತರ ಅಭ್ಯರ್ಥಿ (Independent Candidate) ಹೆಸರು ಯಂಕಪ್ಪ. ಇವರ ಹಿನ್ನೆಲೆ ಕೇಳಿದ್ರೆ ನೀವೇ ಅಚ್ಚರಿ ಪಡುತ್ತೀರಿ. ಯಾಕೆಂದರೆ ಅವರ ಚುನಾವಣಾ ತಯಾರಿ ಹಾಗಿದೆ.
ಯಂಕಪ್ಪ ಅವರು ಚುನಾವಣೆಗೆ ಒಂದು ವರ್ಷಗಳಿವೆ ಅಂದಾಗಿನಿಂದ ಕೊರಳಿಗೆ ಪೋಸ್ಟರ್ ಒಂದನ್ನು ನೇತುಹಾಕಿಕೊಂಡು ಯಾದಗಿರಿ ವಿಧಾನಸಭಾ ಕ್ಷೇತ್ರದ ಸುಮಾರು 10 ಸಾವಿರ ಮನೆಗಳಲ್ಲಿ ಭಿಕ್ಷೆ (Beg) ಬೇಡಿ, ಪ್ರತೀ ಮನೆಯಲ್ಲಿ ಒಂದು ರೂ.ಗಳಂತೆ ಹತ್ತು ಸಾವಿರ ಸಂಗ್ರಹಿಸಿದ್ದಾರೆ. ವಿಶೇಷ ಅಂದ್ರೆ ಒಂದು ವರ್ಷ ಮನೆಬಿಟ್ಟು ಠೇವಣಿ ಸಂಗ್ರಹಿಸಿರುವ ಇವರು, ಯಾವುದೇ ಗ್ರಾಮದಲ್ಲಿ ವಾಸ್ತವ್ಯ ಹೂಡಬೇಕಿದ್ದರೂ ಅಲ್ಲಿನ ದೇವಸ್ಥಾನಗಳಲ್ಲೇ ಇರುತ್ತಿದ್ದರು. ಅದೇ ಊರಿನ ಮನೆಗಳಲ್ಲಿ ಭಿಕ್ಷೆ ಬೇಡಿ ಊಟವನ್ನೂ ಮಾಡುತ್ತಿದ್ದರು.
ಇನ್ನು ಕಲಬುರಗಿ (Kalaburagi) ಜಿಲ್ಲೆಯ ಗುಲ್ಬರ್ಗ (Gulbarga) ವಿಶ್ವವಿದ್ಯಾನಿಲಯದಿಂದ ಕಲಾ ಪದವೀಧರರಾಗಿರುವ ಇವರು, 60 ಸಾವಿರ ರೂ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಅವರ ತಂದೆ ದೇವಿಂದ್ರಪ್ಪ ಒಂದು ಎಕರೆ 16 ಗುಂಟೆ ಜಮೀನು ಹೊಂದಿದ್ದಾರೆ.
ಯಂಕಪ್ಪ ತಮ್ಮ ಕೊರಳಿಗೆ ಹಾಕಿಕೊಂಡಿದ್ದ ಪೋಸ್ಟರ್‌ನಲ್ಲಿ 12ನೇ ಶತಮಾನದ ಸಮಾಜ ಸುಧಾರಕರಾದ ಬಸವೇಶ್ವರ, ಕನಕದಾಸ, ಸ್ವಾಮಿ ವಿವೇಕಾನಂದ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿತ್ರಗಳು ಮತ್ತು ಸಂವಿಧಾನದ ಪೀಠಿಕೆ ಹಾಕಿಕೊಂಡು ಊರೂರು ಸುತ್ತಾಡಿ ಹಣ ಸಂಗ್ರಹಿಸಿದ್ದಾರೆ. ಇದು ಜನರನ್ನು ಆಕರ್ಷಿಸಿದೆ. ಈ ಚಿತ್ರಗಳ ಕೆಳಗೆ ಕನ್ನಡದಲ್ಲಿ ಕೇವಲ ಒಂದು ರೂಪಾಯಿ ಅಲ್ಲ, ನಿಮ್ಮ ಒಂದು ಮತ, ನೀವು ಒಂದು ದಿನ ನನಗೆ ಮತ ನೀಡಿ, ನಾನು ನಿಮಗೆ ಬಡತನದಿಂದ ಮುಕ್ತಿ ನೀಡುತ್ತೇನೆ ಎಂಬ ಘೋಷವಾಕ್ಯದೊಂದಿಗೆ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ.
ಒಟ್ಟಿನಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಗೆ (Election) ನಾಮಪತ್ರ (Nomination Papers) ಸಲ್ಲಿಸುವ ವೇಳೆ ಹಲವು ಕುತೂಹಲಕಾರಿ ವಿಷಯಗಳು ಹೊರಬರುತ್ತಿವೆ. ಆರಂಭದಲ್ಲಿ ಹೇಳಿದಂತೆ 60 ವರ್ಷದ ವೃದ್ಧೆಯೊಬ್ಬರು ತಮ್ಮ ಊರಿಂದಲೂ ಎತ್ತಿನೆಗಾಡಿ ಮೂಲಕ ಮೆರವಣಿಗೆ ಬಂದು ನಾಮಪತ್ರ ಸಲ್ಲಿಸಿ ಭಾರೀ ಸುದ್ದಿಯಾಗಿದ್ದರು. ಅಲ್ಲದೆ ಒಬ್ಬರು ಅಭ್ಯರ್ಥಿ ಆನೆಯ ಮೇಲೆ ಬಂದು ನಾಮಪತ್ರ ಸಲ್ಲಿಸಿ ಸಾಕಷ್ಟು ವೈರಲ್ ಆಗಿದ್ದರು.
ಇದನ್ನೂ ಓದಿ: Ecuador Beach: ಟ್ರಿಪ್ ಹೋಗಿದ್ದ ಮೂವರು ಸುಂದರಿಯರ ಭೀಕರ ಹತ್ಯೆ! ಅಷ್ಟಕ್ಕೂ ಈಕ್ವೆಡಾರ್ ಬೀಚ್‌ನಲ್ಲಿ ನಡೆದಿದ್ದೇನು?