Puttur Dirty Politics: ಪುತ್ತೂರು ಬಿಜೆಪಿ ಅಭ್ಯರ್ಥಿ ಆಯ್ಕೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಖುದ್ದು ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ಅಮಿತ್ ಷಾ ಮತ್ತು ಮೋದಿಗೆ ಲಿಖಿತ ದೂರು ಸಲ್ಲಿಕೆ

Puttur Dirty Politics: ಪುತ್ತೂರು ಶಾಸಕ ಮತ್ತು ಬಿಜೆಪಿಯ ಸೈಲೆಂಟ್ ವರ್ಕರ್ ಸಂಜೀವ ಮಠಂದೂರು (Sanjeeva Matandoor) ಅವರಿಗೆ ಟಿಕೆಟ್ ತಪ್ಪಿ, ಅತ್ತ ಅಮಾಯಕಿ ಆಶಾ ತಿಮ್ಮಪ್ಪ ಗೌಡರಿಗೆ ಟಿಕೇಟ್ ದೊರೆತಿದೆ. ಪುತ್ತೂರು ಬಿಜೆಪಿಯಲ್ಲಿ (Puttur Dirty Politics) ಇವತ್ತು ಎಲ್ಲವೂ ಅಯೋಮಯ. ಸಹಜವಾಗಿ ಯಾರಿಗೇ ಟಿಕೆಟ್ ದೊರಕಲಿ, ಆಗ ಬಿ ಫಾರ್ಮ್ ನೀಡುವ ನಾಯಕತ್ವ ಯಾಕೆ ಟಿಕೆಟ್ ಕೊಟ್ಟೆ ಎನ್ನುವುದನ್ನು ಸ್ಪಷ್ಟ ಪಡಿಸಬೇಕು. ಇವತ್ತಿಗೂ ಅಲ್ಲಿನ ಆಶಾ ತಿಮ್ಮಪ್ಪ ಗೌಡರಿಗೆ (Asha Timmappa Gowda) ಟಿಕೆಟ್ ನೀಡಿದ್ದು ಏಕೆ ಎಂದು ಯಾರಿಗೂ ಉತ್ತರ ಸಿಗುತ್ತಿಲ್ಲ. ಬಿಜೆಪಿಯ ಸಹಜವಾದ ಮಾನದಂಡಗಳು ಎನ್ನಲಾಗುತ್ತಿರುವ ಯುವಕರಿಗೆ ಅವಕಾಶ, ದೀರ್ಘ ಕಾಲದ ಸೀನಿಯಾರಿಟಿ, ಎಕ್ಟ್ರಾ ಆರ್ಡಿನರಿ ನಾಯಕತ್ವ, ಮಾಸ್ ಲೀಡರ್ ಶಿಪ್ ಹೀಗೆ ಯಾವುದನ್ನೂ ತೋರಿಸಲಾಗದೆ ಪುತ್ತೂರು ಬಿಜೆಪಿಯ ಶಕ್ತಿ ಕೇಂದ್ರದ ನಾಯಕರುಗಳು ಜನರಿಗೆ ಸರಿಯಾಗಿ ಉತ್ತರಿಸಲಾಗದೆ, ಸಪ್ಪೆ ಮೋರೆ ಹಾಕಿಕೊಂಡು ಕೇವಲ ಕೈಸನ್ನೆಯಿಂದ ಹೈಕಮಾಂಡ್ ಕಡೆ ಕೈ ಬೆರಳು ತೋರಿಸುತ್ತಿದ್ದಾರೆ. ಅದಿರಲಿ.

ಇದೀಗ ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣಾ (Puttur Constituency) ಅಖಾಡದಲ್ಲಿ ಮಹತ್ವದ ಬದಲಾವಣೆಗಳು ನಡೆದಿದೆ. ಪುತ್ತೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಈಗ ತಾನೇ ಟಿಕೆಟ್ ಗಿಟ್ಟಿಸಿಕೊಂಡ ಖುಷಿಯಲ್ಲಿದ್ದಾರೆ ಅಶೋಕ್ ಕುಮಾರ್ ರೈಯವರು. ಕ್ಷೇತ್ರದ ಚುನಾವಣಾ ಟಿಕೆಟ್ ಆಕಾಂಕ್ಷಿಯಾಗಿದ್ದ ಅರುಣ್ ಕುಮಾರ್ ಪುತ್ತಿಲ ಅವರು ಪಕ್ಷೇತರರಾಗಿ ಸ್ಪರ್ಧಿಸುವುದು ಪಕ್ಕಾ ಆಗಿದೆ. ಅತ್ತ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ದಿವ್ಯ ಪ್ರಭಾ ಚಿಲ್ತಡ್ಕ ಅವರು ಕಾಂಗ್ರೆಸ್ ತ್ಯಜಿಸಿ ಜೆಡಿಎಸ್ ಸೇರಿದ್ದಾರೆ. ಇದರ ಹಿಂದೆಯೂ ಕೆಲವರ ‘ಕೈ’ ವಾಡ ಇದೆ. ಸದ್ಯದ ಟ್ರೆಂಡಿಂಗ್‌ನಲ್ಲಿ ಮುಸ್ಲಿಂ ಪರಿಷತ್ತಿನ ಅಧ್ಯಕ್ಷ ಅಶ್ರಫ್ ಕಲ್ಲೇಗ ಕಣದಲ್ಲಿ ದೊಡ್ಡದಾಗಿ ಸದ್ದು ಮಾಡುವ ಲಕ್ಷಣ ಕಾಣುತ್ತಿದೆ. ಇದರಿಂದ ಯಾರಿಗೆ ಲಾಭ ಯಾರಿಗೆ ನಷ್ಟ ಅಂತ ಲೆಕ್ಕ ಹಾಕಲು ಇನ್ನೂ ಸಮಯ ಇದೆ. ಕೊನೆಯ ಕ್ಷಣದವರೆಗೂ ಕಣದಲ್ಲಿ ಉಳಿಯುವವರನ್ನು ನೋಡಿಕೊಂಡು ಅದರ ಅನಲೈಸ್ ಆ ನಂತರ ಮಾಡಬಹುದು.

ಪುತ್ತೂರಿನಲ್ಲಿ ಶಾಸಕ ಮಠಂದೂರು ಅವರಿಗೆ ಟಿಕೆಟ್ ತಪ್ಪಲು ಕಾರಣ ಏನು ? ಪಕ್ಷದ ಮತ್ತು ಸಂಘ ಪರಿವಾರದ ಕಟ್ಟುನಿಟ್ಟಿನ ಕಾರ್ಯಕರ್ತರಾಗಿರುವ ಸಂಜೀವ ಮಠಂದೂರು ಅವರು ಕಳೆದ ಬಾರಿ ಸಹಸ್ರ ಕೋಟಿಗಳ ಅಭಿವೃದ್ಧಿಯನ್ನು ಪುತ್ತೂರು ತಾಲೂಕಿನಲ್ಲಿ ಮಾಡಿ ಸೈ ಎನಿಸಿಕೊಂಡಿದ್ದರು. ಆದರೆ ತೀರ ಚುನಾವಣೆಗೆ ಆರು ತಿಂಗಳು ಇದೆ ಎನ್ನುವಾಗ ಪುತ್ತೂರು ತಾಲೂಕಿನಲ್ಲಿ ದೊಡ್ಡ ಮಟ್ಟದ ಹುನ್ನಾರಕ್ಕೆ ಸ್ಕೆಚ್ ಬರೆಯಲಾಗಿದೆ. ಜಾತಿ ರಾಜಕೀಯದ ಷಡ್ಯಂತ್ರಕ್ಕೆ ಸಂಜೀವ ಮಠಂದೂರು ಬಲಿಯಾದ್ದು ಎನ್ನುವುದು ಈ ತನಕ ಎಲ್ಲರೂ ನಂಬಿಕೊಂಡು ಬಂದ ಸತ್ಯ.

ಇದೀಗ ಇನ್ನೊಂದು ಹೊಸ ಥಿಯರಿ ಹುಟ್ಟಿಕೊಂಡಿದೆ. ಈ ಬಗ್ಗೆ ಖುದ್ದು ಬಿಜೆಪಿ ಅಧ್ಯಕ್ಷ ನಡ್ದ, ಅಮಿತ್ ಶಾ, ಬಿ. ಎಲ್ ಸಂತೋಷ್ ಮತ್ತು ಪ್ರಧಾನಮಂತ್ರಿ ಮೋದಿ ಮತ್ತಿತರ ನಾಯಕರುಗಳಿಗೆ ದೂರು ನೀಡಲಾಗಿದೆ.

ಏನದು ಹೊಸ ಥಿಯರಿ, ಈ ದೂರಿನಲ್ಲಿ ಏನಿದೆ ?

ಡಿವಿ ಸದಾನಂದ ಗೌಡರು ಈ ಹಿಂದೆ ಕೇಂದ್ರ ಮಂತ್ರಿಯಾಗಿದ್ದು, ಇದೀಗ ಸಂಸದರಾಗಿದ್ದಾರೆ. ಅವರ ಹೇರಳ ಸಂಪತ್ತು ಅವರ ಆಪ್ತಮಿತ್ರ ಮತ್ತು ಬ್ಯುಸಿನೆಸ್ ಪಾರ್ಟ್ನರ್ ಆಗಿರುವ ಇದೀಗ ಕಾಂಗ್ರೆಸ್ ಅಭ್ಯರ್ಥಿ ಎಂದು ಬಿಂಬಿಸಲ್ಪಡುತ್ತಿರುವ ಅಶೋಕ್ ಕುಮಾರ್ ರೈ ಅವರ ಬಳಿ ಹೂಡಿಕೆ ಆಗಿದೆ. ಡಿ.ವಿ. ಸದಾನಂದ ಗೌಡರು ಮತ್ತು ಡಿಕೆ ಶಿವಕುಮಾರ್ ಅವರಿಗೆ ತಕ್ಕ ಮಟ್ಟಿಗೆ ಆತ್ಮೀಯತೆ ಇದೆ. ಆ ಆತ್ಮೀಯತೆಯನ್ನು ಬಳಸಿಕೊಂಡು ಕಾಂಗ್ರೆಸ್ ಸೇರಿದ ಕೇವಲ 1 ತಿಂಗಳಲ್ಲೇ ಅಶೋಕ್ ಕುಮಾರ್ ರೈ ಗಳಿಗೆ ಕಾಂಗ್ರೆಸ್ ಟಿಕೆಟ್ ದಕ್ಕುವಂತೆ ಮಾಡಲಾಗಿದೆ. ಇದೆಲ್ಲ ಡೀಲ್. ಒಟ್ಟಾರೆ ಅಶೋಕ್ ಕುಮಾರ್ ರೈ ಗಳು ಗೆಲ್ಲಬೇಕು. ಆದರೆ ಗೆಲುವು ಅಷ್ಟು ಸುಲಭವಿಲ್ಲ. ಕಾರಣ ಪುತ್ತೂರಿನಲ್ಲಿ ಸೈಲೆಂಟ್ ಕೆಲಸಗಾರ, ಜಾತಿ ಮತ ಧರ್ಮ ಭೇದ ಮಾಡದೆ ಕೆಲಸ ಮಾಡಿದ ಸಂಜೀವ ಮಠಂದೂರು ಇದ್ದಾರೆ. ಅವರ ನೇತೃತ್ವದ ಬಿಜೆಪಿಯ ಎದುರು ಗೆಲುವು ಅಸಾಧ್ಯ. ಇಂತಹ ಪರಿಸ್ಥಿತಿಯಲ್ಲಿ ಪುತ್ತೂರು ಹಾಲಿ ಶಾಸಕ ಸಂಜೀವ ಮಠಂದೂರು ಅವರಿಗೆ ಟಿಕೆಟ್ ತಪ್ಪಬೇಕು. ಅದಕ್ಕಾಗಿ ದೊಡ್ಡ ಮಟ್ಟದ ‘ ಮಲ್ಟಿ ಲೇಯರ್ ‘ (ಹಲವು ಹಂತಗಳ) ಷಡ್ಯಂತ್ರ ಹೆಣೆಯಲಾಗಿದೆ ಎನ್ನುವುದು ಈ ದೂರಿನ ಒಟ್ಟಾರೆ ಸಾರಾಂಶ.

ಹಂತ -1:
ಅದರ ಮೊದಲನೆಯ ಹಂತವಾಗಿ ಮಠಂದೂರು ಅವರ ಚಾರಿತ್ರ್ಯಹನನಕ್ಕೆ ನಡೆದ ಪ್ರಯತ್ನ. ಅದರ ಅಂಗವಾಗಿ ಎಡಿಟ್ ಮಾಡಲಾದ ಫೋಟೋಗಳನ್ನು ಹರಿಯಬಿಟ್ಟು ಮತದಾರರನ್ನು, ಸಾಮಾನ್ಯ ಕಾರ್ಯಕರ್ತರನ್ನು ಮತ್ತು ಬಿಜೆಪಿ ನಾಯಕತ್ವವನ್ನು ಗಲಿಬಿಲಿಗೊಳಿಸಲಾಯಿತು. ಅದರಲ್ಲಿ ಜಾತಿ ರಾಜಕೀಯ ಮತ್ತು ಮಾಧ್ಯಮವೊಂದು ಭಾಗಿಯಾಗಿದೆ. ಜತೆಗೆ ಸ್ವಾಮೀಜಿಯನ್ನು ಭೇಟಿಯಾಗಿ ಬೆಂಬಲ ಕೋರಿದ ಏಕೈಕ ಕಾರಣಕ್ಕಾಗಿ ‘ ಜಾತಿಯ ಹಣೆಪಟ್ಟಿ ‘ ಕಟ್ಟಲಾಯಿತು.

ಹಂತ -2:
ಮಠಂದೂರರಿಗೆ ಟಿಕೆಟ್ ತಪ್ಪಿಸಿದ ಕೂಡಲೇ ಕೆಲಸ ಆಗೋಲ್ಲ. ಕ್ಷೇತ್ರದ ನಾಡಿ ಮಿಡಿತ ಬಲ್ಲ ಇನ್ನೊಬ್ಬ ಸಮರ್ಥ ನಾಯಕ (ಕಿ)ನನ್ನು ಬಿಜೆಪಿ ಹುಡುಕುತ್ತದೆ. ಹಾಗೆ ಹುಡುಕಿ ಗೆಲ್ಲಿಸುವ ತಾಕತ್ತು ಬಿಜೆಪಿಗೆ ಇದೆ. ಇಂತಹಾ ಆಯ್ಕೆಯಲ್ಲಿ ನಮಗೆ ಕಂಡು ಬರುವ ಇನ್ನೊಂದು ಟ್ರೆಂಡಿಂಗ್ ಹೆಸರು ಅರುಣ್ ಪುತ್ತಿಲ.
ಹಾಗೊಂದು ವೇಳೆ ಅರುಣ್ ಪುತ್ತಿಲ ತರಹದ ‘ ಹಿಂದೂ ಬ್ರಾಂಡ್ ‘ ಅನ್ನು ಮುನ್ನಲೆಗೆ ತಂದರೆ ಮತ್ತೆ ಬಿಜೆಪಿ ಗೆಲ್ಲುತ್ತದೆ. ಆಗ ಹೇಗೆ ತಾನೇ ಅಶೋಕ್ ಕುಮಾರ್ ರೈಯವರು ಶಾಸಕನಾಗಿ ಆಯ್ಕೆ ಆದಾರು ನೀವೇ ಹೇಳಿ ? ಅದಕ್ಕಾಗಿ ಪುತ್ತಿಲ ಅವರನ್ನು ಆಯ್ಕೆ ಮಾಡದೆ ಓರ್ವ ವೀಕ್ ಅಭ್ಯರ್ಥಿಯನ್ನು ತಲಾಶ್ ಮಾಡಬೇಕಾಗುತ್ತದೆ.

ಹಂತ -3:
ಆಗ ಸಿಕ್ಕವರೇ ಆಶಾ ತಿಮ್ಮಪ್ಪ ಗೌಡ ! ಮಠಂದೂರರಿಗೆ ಟಿಕೆಟ್ ತಪ್ಪಿದರೆ, ನಂತರದ ಸ್ಥಾನದಲ್ಲಿರುವ ಅರುಣ್ ಪುತ್ತಿಲ ಅವರಿಗೆ ಸೀಟು ಕೊಡಬೇಕಿತ್ತು. ಅವರಿಗೂ ಸೀಟು ನೀಡದೆ, ರೇಸಿನಲ್ಲಿ ಇಲ್ಲದ ವ್ಯಕ್ತಿಯೊಬ್ಬರನ್ನು ( ಆಶಾ ತಿಮ್ಮಪ್ಪ) ಕೊನೆಯ ಕ್ಷಣದಲ್ಲಿ ಮತ ಮೈದಾನಕ್ಕೆ ಕರೆತರಲಾಗುತ್ತದೆ. ಅದು ಕೂಡಾ ದುಷ್ಟ ಕೂಟ ರಚಿಸಿದ ಪಕ್ಕಾ ಪ್ಲಾನ್. ಮಠಂದೂರರಿಗೆ ಟಿಕೆಟ್ ತಪ್ಪಿಸಿ ಆಶಾ ತಿಮ್ಮಪ್ಪ ಗೌಡ ಎನ್ನುವ ದುರ್ಬಲ ಕ್ಯಾಂಡಿಡೇಟ್ ಗೆ ಟಿಕೆಟ್ ನೀಡಲಾಗಿದೆ. ಈ ಮೂಲಕ ಹೇಗಾದರೂ ಸರಿ, ಅಶೋಕ್ ಕುಮಾರ್ ರೈ ಅವರನ್ನು ಗೆಲ್ಲುವಂತೆ ನೋಡಿಕೊಳ್ಳುವುದು ಸ್ಟ್ರಾಟೆಜಿ. ಈ ಒಕ್ಕಣೆಯ ಪತ್ರವು ಇದೀಗ ಕೇಂದ್ರ ಹೈಕಮಾಂಡ್ ಗೆ ತಲುಪಿದೆ.

” ಸದಾನಂದ ಗೌಡರು ತಮ್ಮ ಆಪ್ತ ಅಶೋಕ್ ಕುಮಾರ್ ರೈ ನನ್ನು ಚುನಾವಣೆಗೆ ಕೇವಲ 1 ತಿಂಗಳು ಇರುವಾಗ ಕಾಂಗ್ರೆಸ್ ಗೆ ಕಳಿಸಿ ಅಲ್ಲಿ ಟಿಕೆಟ್ ಕೊಡಿಸುತ್ತಿದ್ದಾರೆ. ( ಶಕುಂತಳಾ ಶೆಟ್ಟಿತಂತಹಾ ಸ್ಟ್ರಾಂಗ್ ಅಭ್ಯರ್ಥಿ ಇದ್ದರೂ ) ಜತೆಗೆ ಬಿಜೆಪಿಗೆ ಡಮ್ಮಿ ಅಭ್ಯರ್ಥಿಯನ್ನು ಹಾಕಲಾಗಿದೆ. ಇದೆಲ್ಲ ಸೂಪರ್ ಸ್ಟ್ರಾಟೆಜಿಸ್ಟ್ ಸದಾನಂದ ಗೌಡರ ಪ್ಲಾನ್. ಇದರಲ್ಲಿ ಬಿಜೆಪಿ ಅಧ್ಯಕ್ಷರ ಕೈವಾಡವೂ ಇದೆ. How mindless Nalin agreed to this decission? ಅದು ಹೇಗೆ ಬಿ. ಎಲ್ ಸಂತೋಷ್ ಅವರು ಈ ಟ್ರಾಪ್ ಗೆ ಬಿದ್ದರೋ ಅರ್ಥ ಆಗುತ್ತಿಲ್ಲ.” ಎನ್ನುವ ಸಾರಾಂಶದ ಪತ್ರವೊಂದನ್ನು ಬುದ್ಧಿವಂತರೊಬ್ಬರು ಕೇಂದ್ರ ಬಿಜೆಪಿ ನಾಯಕರಿಗೆ ಈಗಾಗಲೇ ರವಾನೆ ಮಾಡಿದ್ದಾರೆ.

” ನಾನು ಬಿಜೆಪಿಯ ಕೇಂದ್ರ ನಾಯಕರುಗಳಿಗೆ ಚಾಲೆಂಜ್ ಮಾಡ್ತೇನೆ, ಪುತ್ತೂರಲ್ಲಿ ಬಿಜೆಪಿ 200 % ಸೋಲುತ್ತದೆ. ದಯವಿಟ್ಟು ಈ ವಿಚಾರದ ಬಗ್ಗೆ ಕೂಲಂಕಷ ತನಿಖೆ ನಡೆಸಿ.” ಎಂದೂ ಆ ಪತ್ರದಲ್ಲಿ ಕಳಕಳಿಯಾಗಿ ವಿನಂತಿಸಲಾಗಿದೆ. ಈ ಸ್ಫೋಟಕ ಪತ್ರವು ಇದೀಗ ‘ ಹೊಸ ಕನ್ನಡ ‘ ಪತ್ರಿಕೆಗೆ ಲಭ್ಯ ಆಗಿದ್ದು, ಅದರ ಸಾರಾಂಶವನ್ನು ನಿಯತ್ತಾಗಿ ನಮ್ಮ ಪ್ರೀತಿಯ ಓದುಗರಿಗೆ ತಲುಪಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ.

ಅಲ್ಲದೇ, ಬಿಜೆಪಿಗೆ ದುರ್ಬಲ ಅಭ್ಯರ್ಥಿ ಒಬ್ಬರನ್ನು ಹಾಕಲು ಪರಿವಾರದ ಹಳೆಯ ನಾಯಕರೊಬ್ಬರು ಸಹಾಯ ಮಾಡಿದ್ದಾರೆ ಎನ್ನುವ ಗುಸುಗುಸು ಗುಮಾನಿ ಈಗ ಎಲ್ಲೆಡೆ ನಾರಲು ಆರಂಭಿಸಿದೆ. ಈ ಒಟ್ಟಾರೆ ದುಷ್ಟ ಕೂಟದ ಪ್ಲಾನ್ ಹಲವು ಕೋಟಿಗಳ ಬಹುದೊಡ್ಡ ವ್ಯೂಹ. ಅದರಲ್ಲಿ ಯಾರ್ಯಾರು ಏನೇನು ಕೆಸರು ತಿಂದಿದ್ದಾರೆ ಎನ್ನುವುದನ್ನು ಪತ್ತೆ ಮಾಡುವ ಜವಾಬ್ದಾರಿ ‘ ನಾನು ತಿನ್ನಲ್ಲ, ಯಾರನ್ನೂ ತಿನ್ನಲು ಬಿಡಲ್ಲ ‘ ಅನ್ನುವ ನರೇಂದ್ರ ಮೋದಿಯ ರಾಷ್ಟ್ರೀಯ ತಂಡದ್ದು. ಪಕ್ಷದ ಒಳಗಿನ ಶತ್ರುಗಳನ್ನು ಮಟ್ಟ ಹಾಕುವುದು ಬಿಜೆಪಿ ಹೈಕಮಾಂಡ್ ನ ಜವಾಬ್ದಾರಿ. ಅದರ ಬಗ್ಗೆ ಸಮಗ್ರ ತನಿಖೆ ನಡೆಯಲಿ ಎನ್ನುವುದೇ ನಮ್ಮೆಲ್ಲರ ಆಶಯ. ಯಾವುದಕ್ಕೂ ಮತದಾರರೇ ಎಚ್ಚರ. ಹೊಲಸು ಮನೆಬಾಗಿಲಿಗೆ ಬರತ್ತೆ, ಜಾಗ್ರತೆ !!!

Leave A Reply

Your email address will not be published.