Jagadish Shettar: ಶೆಟ್ಟರ್ ಕಾಂಗ್ರೆಸ್ ಪಕ್ಷದ ಮುಂದಿಟ್ಟ ಬೇಡಿಕೆ ಏನು ಗೊತ್ತಾ?

Jagadish Shettar: ಕರ್ನಾಟಕ ಚುನಾವಣಾ ಅಖಾಡಕ್ಕೆ (Karnataka Election)ಕ್ಷಣಗಣನೆ ಆರಂಭವಾಗಿದ್ದು, ಹೀಗಾಗಿ, ರಾಜಕೀಯ ಪಕ್ಷಗಳು ಚುನಾವಣ ಕಣದಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗುತ್ತಿದ್ದಂತೆ ಕಮಲ ಪಾಳಯದಲ್ಲಿ(BJP) ಕೋಪಾಗ್ನಿ ಸ್ಫೋಟಗೊಂಡಿದ್ದು, ಈ ನಡುವೆ ಕೆಲ ರಾಜಕೀಯ ಮುಖಂಡರು ಪಕ್ಷಕ್ಕೆ ಗುಡ್ ಬೈ ಹೇಳಿ ರಾಜೀನಾಮೆ ನೀಡಿದ್ದು ಗೊತ್ತಿರುವ ವಿಚಾರವೇ!

ರಾಜಕೀಯ ರಣರಂಗದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್(Jagadish Shettar) ಅವರ ಮುಂದಿನ ನಡೆಯೇನು ಎಂಬ ವಿಚಾರ ಸದ್ಯ ಭಾರೀ ಕುತೂಹಲ ಹುಟ್ಟು ಹಾಕಿದೆ. ರಾಜಕೀಯ ಕಾಳಗದಲ್ಲಿ ದಿನಕ್ಕೊಂದು ಹೊಸ ತಿರುವು ಕಾಣುತ್ತಿದ್ದು, ಹೀಗಾಗಿ ಜನವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಸದ್ಯ, ಬಿಜೆಪಿ (BJP) ಪಾಳಯದಲ್ಲಿ ಎಲ್ಲರ ನಿರೀಕ್ಷೆ ತಲೆ ಕೆಳಗಾಗುವ ಹಾಗೆ ಈ ಬಾರಿ ಹಳೆಯ ಮುತ್ಸದ್ದಿ ನಾಯಕರನ್ನು ಬಿಟ್ಟು ಹೊಸ ಮುಖಗಳಿಗೆ ಅವಕಾಶ ನೀಡಿರುವುದು ಕಂಡುಬಂದಿದೆ. ಹೀಗಾಗಿ, ಟಿಕೇಟ್ ವಂಚಿತರು ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದ ಪ್ರಭಾವಿ ರಾಜಕಾರಣಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar)ಸದ್ಯ, ಬಿಜೆಪಿಗೆ ಗುಡ್‌ಬೈ ಹೇಳಿದ್ದು ಬೇರೆ ಪಕ್ಷಕ್ಕೆ ಬೆಂಬಲ ಸೂಚಿಸುವ ಸಾಧ್ಯತೆ ದಟ್ಟವಾಗಿ ಗೋಚರಿಸುತ್ತಿದೆ.

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಈಗಾಗಲೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬೆನ್ನಲ್ಲೇ ಕಾಂಗ್ರೆಸ್ ಪಕ್ಷಕ್ಕೆ(Congress Party) ಸೇರ್ಪಡೆಯಾಗುವ ಮೊದಲೇ ಕೆಲವು ಡಿಮ್ಯಾಂಡ್ ಗಳನ್ನ ಕೈಪಾಳಯದ ಮುಂದಿಟ್ಟಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಶಾಮನೂರ ಶಿವಶಂಕರಪ್ಪನವರ ನಿವಾಸದಲ್ಲಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರ ಜೊತೆಗೆ ಸಭೆ ಕರೆಯಲಾಗಿದೆ. ಈ ಸಂದರ್ಭ ತಮ್ಮ ಜೊತೆ ಬರುವ ಎಂಟು ನಾಯಕರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಬೇಕೆಂದು ಬೇಡಿಕೆ ಇಟ್ಟಿದ್ದು, ಹೀಗಾಗಿ ಪಕ್ಷಕ್ಕೂ ಸೇರ್ಪಡೆಯಾಗುವ ಮುನ್ನವೇ ತಮ್ಮ ಬೆಂಬಲಿಗರಿಗೆ ಸ್ಥಾನಮಾನ ನೀಡುವ ಕುರಿತಾಗಿ ಅವರು ಕಾಂಗ್ರೆಸ್ ನಾಯಕರ ಮುಂದೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಶಾಮನೂರು ಶಿವಶಂಕರಪ್ಪನವರ ಮನೆಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಎಂ.ಬಿ.ಪಾಟೀಲ್ ಕೂಡ ಭಾಗಿಯಾಗಿದ್ದಾರೆ ಎನ್ನಲಾಗಿದೆ.

ಜಗದೀಶ್ ಶೆಟ್ಟರ್ ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಸಹ ಬಿಜೆಪಿ(BJP) ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡದೆ ಇರುವುದರಿಂದ ಶೆಟ್ಟರ್ ಅವರ ರಾಜಕೀಯ ಚದುರಂಗದಾಟದ ಮುಂದಿನ ಹೆಜ್ಜೆ ಭಾರೀ ಕುತೂಹಲ ಹುಟ್ಟು ಹಾಕಿದೆ. ಕಾಂಗ್ರೆಸ್ ನಾಯಕರು ತಮ್ಮ ಬೇಡಿಕೆಗಳಿಗೆ ಯಾವ ರೀತಿ ಸ್ಪಂದಿಸುತ್ತಾರೆ ಎಂಬುದನ್ನು ಆಧರಿಸಿಕೊಂಡು ಶೆಟ್ಟರ್ ತಮ್ಮ ರಾಜಕೀಯ ತೀರ್ಮಾನ ಕೈಗೊಳ್ಳಲಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

Leave A Reply

Your email address will not be published.