BSY : ಜಗದೀಶ್‌ ಶೆಟ್ಟರ್‌ ಮಾಡಿದ ತಪ್ಪಿಗೆ ಕ್ಷಮೇನೆ ಇಲ್ಲ : ಸುದ್ದಿಗೋಷ್ಟಿ ನಡೆಸಿ ಬಿಎಸ್‌ವೈ ಕಿಡಿ

ಬೆಂಗಳೂರು: ವಿಧಾನ ಸಭೆ ಚುನಾವಣಾ ಹೊಸ್ತಿಲಿನಲ್ಲೇ ಹಲವು ಬಿಜೆಪಿ ಪ್ರಬಲ ನಾಯಕರು ರಾಜೀನಾಮೆ ನೀಡಿದ ಬೆನ್ನಲ್ಲೆ ಬಿಜೆಪಿ ಅಲರ್ಟ್‌ ಆಗಿದ್ದು, ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ ಸುದ್ದಿಗೋಷ್ಟಿ ನಡೆಸುತ್ತಿದ್ದಾರೆ.

 

ಜಗದೀಶ್ ಶೆಟ್ಟರ್ ರಾಜೀನಾಮೆ ಬೆನ್ನಲ್ಲೇ ಮಧ್ಯಾಹ್ನ ಬಿಜೆಪಿ ಮಾಧ್ಯಮ ಕಚೇರಿಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ ಕರ್ನಾಟಕದ ಬಿಜೆಪಿಯ ಭೀಷ್ಮ ಯಡಿಯೂರಪ್ಪ. ಜನಸಂಘದ ಕಾಲದಿಂದಲೂ ಕಾಲದಿಂದಲೂ ಶೆಟ್ಟರ್ ಬಿಜೆಪಿ ಜತೆಗಿದ್ದಾರೆ. ಶೆಟ್ಟರ್ ಅವರನ್ನು ಪಕ್ಷವು ಶಾಸಕ, ಬೆಜೆಪಿ ರಾಜ್ಯಾಧ್ಯಕ್ಷ, ಮಂತ್ರಿ, ಮುಖ್ಯಮಂತ್ರಿ ಹೀಗೆ ಏನೆಲ್ಲಾ ಮಾಡಿದ್ವಿ. ನಾವು ಬಿಬಿ ಶಿವಪ್ಪರನ್ನು ಎದುರು ಹಾಕಿಕೊಂಡು ಶೆಟ್ಟರ್ ಅವರನ್ನು ವಿಪಕ್ಷ ನಾಯಕ ಮಾಡಿದ್ದೆವು. ನಾನು, ಅನಂತ ಕುಮಾರ್ ಅವರಿಗೆ ಕಾವಲು ಥರ ಇದ್ದೆವು. ನಮ್ಮ ಜತೆ ಹೆಜ್ಜೆ ಹಾಕುವುದು ಅವರ ಜವಾಬ್ದಾರಿ ಆಗಿತ್ತು. ಮೋದಿಯವರ ಬಗ್ಗೆ ಜಗತ್ತಿನಾದ್ಯಂತ ಗೌರವ ಇದೆ. ಇಂಥ ಸಂದರ್ಭದಲ್ಲಿ ಶೆಟ್ಟರ್ ಹೇಳಿಕೆ ಮತ್ತವರ ನಿರ್ಧಾರ ಅವರು ನಂಬಿಕೊಂಡು ಬಂದ ತತ್ವ ವಿಚಾರಕ್ಕೆ ತದ್ವಿರುದ್ಧ ಇದೆ ಎಂದವರು ನುಡಿದರು.

ಶೆಟ್ಟರ್ ಅವರು ಕೇಳಿದ್ದನ್ನು ಎಲ್ಲವೂ ಪಕ್ಷ ಅವರಿಗೆ ನೀಡಿದೆ. ಸ್ಥಾನಮಾನ ಸಿಗಲಿ ಸಿಗದಿರಲಿ, ದೇಶಕ್ಕಾಗಿ ಕೆಲಸ ಮಾಡಬೇಕಿರುವುದು ನಾವು ನಡೆದುಕೊಂಡು ಬಂದ ದಾರಿಯಾಗಿದೆ. ಪಕ್ಷದ ಸಹಕಾರ ಇಲ್ಲದಿದ್ದರೆ ವ್ಯಕ್ತಿ ಎತ್ತರಕ್ಕೆ ಬೆಳೆಯಲಾರ. ಪಕ್ಷದ ಸಹಕಾರ ಇಲ್ಲದಿದ್ರೆ ವ್ಯಕ್ತಿ ಸಿಎಂ ಆಗಲಾರ. ಆದರೂ ಶೆಟ್ಟರ್ ಹಠ ಮಾಡಿ ಕಾಂಗ್ರೆಸ್ ಜೊತೆ ಕೈಜೋಡಿಸಲು ಹೋಗಿರೋದು ಅಕ್ಷಮ್ಯ ಅಪರಾಧವಾಗಿದೆ. ಶೆಟ್ಟರ್‍ಗೆ ನಾವೇನೂ ಕಮ್ಮಿ ಮಾಡಿರಲಿಲ್ಲ. ಶೆಟ್ಟರ್ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಇದನ್ನು ಯಾರೂ ಕ್ಷಮಿಸಲ್ಲ ಎಂದು ಅವರು ಕಿಡಿಕಾರಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ನಾವು ಹಳೇಬೇರು ಹೊಸ ಚಿಗುರು ಸೇರಿ ಈ ಪಕ್ಷವನ್ನು ಇನ್ನಷ್ಟು ಬೆಳೆಸಬೇಕಾಗಿದೆ. ನಿಮ್ಮನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಕೇಂದ್ರದಲ್ಲಿ ಮಂತ್ರಿ ಸ್ಥಾನ ನೀಡಲಾಗುವುದು ಎಂದು ಪಕ್ಷದ ಹೈಕಮಾಂಡ್ ಹೇಳಿತ್ತು. ಆದರೂ ಶೆಟ್ಟರ್ ಅವರು ದುಡುಕಿ ಎಲ್ಲವನ್ನೂ ಧಿಕ್ಕರಿಸಿ ಲಿಂಗಾಯತ ಸಮಾಜವನ್ನು ಒಡೆಯಲು ಪ್ರಯತ್ನಿಸಿದ ಕಾಂಗ್ರೆಸ್ ಅನ್ನು ಸೇರಲು ಮುಂದಾಗಿದ್ದಾರೆ ಎಂದು ಯಡಿಯೂರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ನನಗೆ, ಶೆಟ್ಟರ್‌ಗೆ, ಸವದಿಗೆ, ಈಶ್ವರಪ್ಪಗೆ- ಹೀಗೆ ಪಕ್ಷವು ಸಮಾನ ಸ್ಥಾನಮಾನ ಕೊಟ್ಟು, ಅನೇಕ ಅವಕಾಶ ಕಲ್ಪಿಸಿದೆ. ನನ್ನಂಥ ಸಾಮಾನ್ಯ ಕಾರ್ಯಕರ್ತ ರಾಜ್ಯದ ಉದ್ದಗಲಕ್ಕೂ ಜನರ ಪ್ರೀತಿ ಗಳಿಸಲು ಬಿಜೆಪಿ ಪಕ್ಷವು ಕಾರಣೀಭೂತವಾಗಿದೆ. ಅವತ್ತು ಸವದಿಯವರು ಸೋತರೂ ಅವರನ್ನು ಪರಿಷತ್ ಸದಸ್ಯರನ್ನಾಗಿ ಮಾಡಿ ಡಿಸಿಎಂ ಹುದ್ದೆಯನ್ನು ಕೂಡಾ ನೀಡಲಾಗಿತ್ತು. ಸವದಿಯವರನ್ನು ಬಿಜೆಪಿಗೆ ಕರೆತಂದು ಶಾಸಕ, ಮಂತ್ರಿ, ಎಮ್‍ಎಲ್ಸಿ, ಡಿಸಿಎಂ, ಕೋರ್ ಕಮಿಟಿ ಸದಸ್ಯರಾಗಿ ಮಾಡಿ ಎಲ್ಲ ಸ್ಥಾನಮಾನ ಕೊಟ್ಟಿದ್ದೇವೆ. ಅವರಿಗೆ ನಾವೇನು ಕಮ್ಮಿ ಮಾಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸವದಿಯವರನ್ನು ಮತ್ತೊಮ್ಮೆ ಸಚಿವರಾಗಿ ಮಾಡಲು ನಮಗೆ ಯಾವುದೇ ಅಡ್ಡಿ ಇರಲಿಲ್ಲ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಹೋಗಿದ್ದು,ಅವರು ಜನತೆಗೆ ಮಾಡಿದ ದೊಡ್ಡ ದ್ರೋಹವಾಗಿದೆ. ಸವದಿ ಅವರೇ ನಿಮಗೆ ಏನು ಅನ್ಯಾಯ ಆಗಿತ್ತು? ನಿಮಗೆ ಏನು ಆತಂಕ ಇತ್ತು? ನೀವು ಮಾಡಿದ್ದು ನಂಬಿಕೆ ದ್ರೋಹ, ವಿಶ್ವಾಸ ದ್ರೋಹ. ಜನ ಸವದಿಯವರನ್ನು ಕ್ಷಮಿಸಲ್ಲ ಎಂದು ಗುಡುಗಿದರು.

ಈಗ ನನಗೆ ಎಂಭತ್ತು ವರ್ಷ. ನಾನು ಸಂಪುರ್ಣ ಬದುಕನ್ನು ಬಿಜೆಪಿ, ದೇಶಕ್ಕೆ ಮುಡಿಪಿಟ್ಟಿದ್ದೇನೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ಯಾರೂ ತಡೆಯೋಕ್ಕೆ ಆಗಲ್ಲ. ಈ ಸಾರಿ ಹೊಸಮುಖಗಳಿಗೆ ಅವಕಾಶ ಮಾಡಿದ್ದೇವೆ. ಎಲ್ಲ ಸಮುದಾಯ ಜೊತೆಗೆ ಕೊಂಡೊಯ್ಯುವ ಪ್ರಯತ್ನ ಮಾಡಿದ್ದೇವೆ. ಬಿಜೆಪಿಯಲ್ಲಿ ಹೊಸತನ, ಹೊಸ ಹುರುಪು ಬರುವಂತಾಗಲು ಹಿರಿಯರು ಅವಕಾಶ ಮಾಡಿಕೊಡಬೇಕು. ಎಲ್ಲ ಹುದ್ದೆಗಳನ್ನು ನೀಡಿದ ಬಿಜೆಪಿಗೆ ರಾಜೀನಾಮೆ ನೀಡಿರುವುದು ಅಕ್ಷ್ಯಮ್ಯ ಅಪರಾಧ ಎಂದು ಕಿಡಿಕಾರಿದರು.

Leave A Reply

Your email address will not be published.