Jagadish Shettar Resigned: ಬಿಜೆಪಿಯದ್ದು ಯೂಸ್‌ ಆ್ಯಂಡ್‌ ಥ್ರೋ ಪಾಲಿಸಿ: ಶಾಕಿಂಗ್ ಹೇಳಿಕೆ ನೀಡಿದ ಜಗದೀಶ್‌ ಶೆಟ್ಟರ್ !

Jagadish Shettar Resigned: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಹುಬ್ಬಳ್ಳಿ ಸೆಂಟ್ರಲ್‌ ಕ್ಷೇತ್ರದ ಬಿಜೆಪಿ ಟಿಕೆಟ್‌ ಪಡೆಯುವಲ್ಲಿ ವಿಫಲವಾಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ( Shettar declined BJP ticket) ಬಂಡಾಯದ ಕಹಳೆ ಮೊಳಗಿಸಿದ್ದಾರೆ. ಬಿಜೆಪಿ ವರಿಷ್ಠರ ನಡೆಯಿಂದ ಬೇಸರವಾಗಿದ್ದು, ಶಾಸಕ ಸ್ಥಾನ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಜಗದೀಶ್‌ ಶೆಟ್ಟರ್‌ ಘೋಷಿಸಿದ್ದಾರೆ. (Jagadish Shettar Resigned)

ಈ ಸಂದರ್ಭ ಬಿಜೆಪಿಯು ಲಿಂಗಾಯತ ನಾಯಕರನ್ನು (Lingayat Leaders Sidelined) ಟಾರ್ಗೆಟ್‌ ಮಾಡುತ್ತಿದ್ದು, ಯೂಸ್‌ ಆ್ಯಂಡ್‌ ಥ್ರೋ ( Use and Throw) ಮಾಡುತ್ತಿದೆ ಎಂದು ಜಗದೀಶ್‌ ಶೆಟ್ಟರ್‌ ಗಂಭೀರ ಆರೋಪ ಮಾಡಿದ್ದಾರೆ.

ನಿನ್ನೆ ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಸಚಿವರ ಸಂಧಾನ ಸಭೆ ಬಳಿಕ ಮಾಹಿತಿ ನೀಡಿದ ಅವರು, ಭಾನುವಾರ ಶಿರಸಿಗೆ ತೆರಳಿ ವಿಧಾನಸಭೆ ಸ್ಪೀಕರ್‌ ಕಾಗೇರಿ ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಟಿಕೆಟ್‌ ನಿರಾಕರಿಸುವ ಮೂಲಕ ಬಿಜೆಪಿ ಹೈಕಮಾಂಡ್‌ ನನ್ನನ್ನು ಅವಮಾನಿಸಿದೆ. ಪಕ್ಷದ ರಾಜ್ಯಾಧ್ಯಕ್ಷನಾಗಿ, ವಿರೋಧ ಪಕ್ಷದ ನಾಯಕನಾಗಿ, ಮುಖ್ಯಮಂತ್ರಿಯಾಗಿ ನಾನು ಈ ನಾಡಿಗೆ ಸೇವೆ ಸಲ್ಲಿಸಿದ್ದೇನೆ. ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆಯಾದರೂ, ನಾನೂ ಕೂಡ ಈ ರಾಜ್ಯದಲ್ಲಿ ಪಕ್ಷದ ಬೆಳವಣಿಗೆಯಲ್ಲಿ ಮಹತ್ತರವಾದ ಪಾತ್ರ ನಿರ್ವಹಿಸಿದ್ದೇನೆ ಎಂದು ಜಗದೀಶ್‌ ಶೆಟ್ಟರ್‌ ಭಾವುಕರಾಗಿ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಪಕ್ಷದಲ್ಲಿ ಲಿಂಗಾಯತ ಮುಖಂಡರನ್ನು ಟಾರ್ಗೆಟ್‌ ಮಾಡಲಾಗುತ್ತಿದೆ. ಹಲವಾರು ಲಿಂಗಾಯತ ನಾಯಕರಿಗೆ ಈಗಾಗಲೇ ಅನ್ಯಾಯ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ‌ ಕೂಡ ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದಿದ್ದಾರೆ. ಈಗ ಉಳಿದ ಬಿಜೆಪಿ ರಾಜ್ಯ ನಾಯಕರಲ್ಲಿ ನಾನೇ ಹಿರಿಯನಾಗಿದ್ದು, ಈಗ ನನಗೂ ಟಿಕೆಟ್‌ ನಿರಾಕರಿಸಿ ಅವಮಾನ ಮಾಡಲಾಗಿದೆ. ಈ ಬಗ್ಗೆ ಲಿಂಗಾಯತ ಸಮುದಾಯದಲ್ಲಿ ಬೇಸರವಿದೆ ಎಂದು ಶೆಟ್ಟರ್‌ ಹೇಳಿದರು.
Hubballi, Karnataka | “They (Union Minister Dharmendra Pradhan & CM Basavraj Bommai) met me…….they told me that my family members can contest the election & I will be given other important position, but I refused…”: BJP leader & Former Karnataka CM Jagadish Shettar… pic.twitter.com/4bU0AcxWjl

— ANI (@ANI) April 15, 2023

ಈ ಸಾರಿ ನಾನು ಸಿಎಂ ಹುದ್ದೆ ಆಕಾಂಕ್ಷಿ ಎಂಬ ಕಾರಣಕ್ಕೆ ಕೆಲವರು ನನ್ನ ವಿರುದ್ಧ ಕೆಲವರು ಷಡ್ಯಂತ್ರ ನಡೆಸಿ, ಟಿಕೆಟ್‌ ಕೈತಪ್ಪುವಂತೆ ಮಾಡಿದ್ದಾರೆ. ಈ ಭಾಗದಲ್ಲಿ ನನ್ನ ಜನಪ್ರಿಯತೆಯನ್ನು ಕಂಡು ಕೆಲವರಿಗೆ ಹೊಟ್ಟೆಯುರಿ ಎಂದು ಜಗದೀಶ್‌ ಶೆಟ್ಟರ್‌ ತೀವ್ರ ವಾಗ್ದಾಳಿ ನಡೆಸಿದ್ದು, ನಮ್ಮ ಕುಟುಂಬ ಜನಸಂಘದ ಕಾಲದಿಂದಲೂ ರಾಜಕೀಯ ಮಾಡಿಕೊಂಡು ಬಂದಿದೆ. ನಾನು ಸ್ವತಂತ್ರ ಭಾರತದಲ್ಲಿ ದಕ್ಷಿಣ ಭಾರತದ ಮೊಟ್ಟ ಮೊದಲ ಬಿಜೆಪಿ ಮೇಯರ್.‌ ದಶಕಗಳ ಕಾಲ ಪಕ್ಷ ಸಂಘಟನೆಗಾಗಿ ದುಡಿದ ನನ್ನನ್ನು ಈ ರೀತಿ ಅವಮಾನ ಮಾಡಿರುವುದು ಸರಿಯಲ್ಲ ಎಂದು ಜಗದೀಶ್‌ ಶೆಟ್ಟರ್‌ ಕಿಡಿಕಾರಿದ್ದಾರೆ.

ಬಂಡಾಯವೆದ್ದಿದ್ದ ಜಗದೀಶ್‌ ಶೆಟ್ಟರ್‌ ಅವರನ್ನು ಸಮಾಧಾನಪಡಿಸಲು, ಸಿಎಂ ಬೊಮ್ಮಾಯಿ, ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್‌, ಪ್ರಹ್ಲಾದ್‌ ಜೋಶಿ ಅವರು ಶನಿವಾರ ತಡರಾತ್ರಿ ಸಭೆ ನಡೆಸಿ ಪ್ರಯತ್ನಿಸಿದ್ದರು. ಆದ್ರೆ ಸಭೆಯ ಬಳಿಕ ಅಸಮಾಧಾನದಿಂದಲೇ ಹೊರಬಂದ ಶೆಟ್ಟರ್‌, ಶಾಸಕ ಸ್ಥಾನ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಘೊಷಿಸಿದರು. ಈ ಮೂಲಕ ಉತ್ತರ ಕರ್ನಾಟಕದಲ್ಲಿ ದಶಕಗಳ ಕಾಲ ಬಿಜೆಪಿ ಕಟ್ಟಿ ಬೆಳೆಸಿದ್ದ ಹಿರಿಯ ನಾಯಕರೊಬ್ಬರು ಟಿಕೆಟ್‌ ಸಿಗದ ಕಾರಣ ಪಕ್ಷವನ್ನು ತೊರೆದಂತಾಗಿದೆ.

ತಾವು ಬೇರೆ ಪಕ್ಷ ಸೇರುವ ಬಗ್ಗೆ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಬಗ್ಗೆ ಕೆಲವೇ ದಿನಗಳಲ್ಲಿ ಉತ್ತರ ದೊರೆಯಲಿದೆ ಎಂದೂ ಇದೇ ವೇಳೆ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ.

Leave A Reply

Your email address will not be published.