High Voltage Varuna : ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ಪ್ರಚಾರ ಶುರು, ಅದ್ಯಾವ ಬಿರು ಮಳೆಗೂ ಇನ್ನು ತಂಪಾಗದು ‘ ವರುಣಾ ‘ !
High Voltage Varuna : ಜಿದ್ದಾಜಿದ್ದಿ ಕ್ಷೇತ್ರವಾಗಿರುವ ವರುಣಾದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರೂ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಸತಿ ಸಚಿವ ವಿ.ಸೋಮಣ್ಣನವರನ್ನು ಏರ್ ಲಿಫ್ಟ್ ಮಾಡಿ ತಂದು ಕಣಕ್ಕಿಳಿಸಲಾಗಿದೆ. ಸ್ಥಳೀಯ ಸಿದ್ದು ವಿರುದ್ಧ ವರುಣಾದಿಂದ(High Voltage Varuna )ಪ್ರಬಲ ಲಿಂಗಾಯತ ನಾಯಕ ಸೋಮಣ್ಣ ಅವರನ್ನು ಕಣಕ್ಕಿಳಿದಿರುವುದರಿಂದ ರಣಕಣ ಏಕಾಏಕಿ ಬಿಸಿಯಾಗಿದೆ.
ಕಾಂಗ್ರೆಸ್ ನ ಸಿದ್ದುರನ್ನು ಹೇಗಾದರೂ ಮಾಡಿ ಮಡಚಿ ಮೂಲೆಗೆ ಕೂರಿಸಬೇಕು ಎಂದು ವಸತಿ ಸಚಿವ ಸೋಮಣ್ಣ ಅವರನ್ನು ಕಣಕ್ಕಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಚಾರದ ನಿರ್ವಹಣೆ ಮತ್ತು ಕಾರ್ಯಕರ್ತರೊಂದಿಗೆ ನಿಕಟವಾಗಿ ಕೆಲಸ ಮಾಡಲು ಕೇಂದ್ರ ವೀಕ್ಷಕರಾಗಿ ಖುದ್ದು ತಮ್ಮ ಅತ್ಯಾಪ್ತ ದಿಲೀಪ್ ಕುಮಾರ್ ಜೈಸ್ವಾಲ್’ರನ್ನು ನೇಮಿಸಿದ್ದಾರೆ.
ಪ್ರಚಾರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಲಿಂಗಾಯತ ನಾಯಕ ಬಿಎಸ್ ಯಡಿಯೂರಪ್ಪ ಮತ್ತು ಇತರ ದಲಿತ ನಾಯಕರ ಗುಂಪನ್ನು ಪ್ರಚಾರಕ್ಕೆ ಕರೆತರಲು ಪಕ್ಷವು ಚಿಂತನೆ ನಡೆಸಿದೆ. ಕಳೆದ 2018 ಚುನಾವಣೆ ವೇಳೆ ಚಾಮುಂಡೇಶ್ವರಿ ಕ್ಷೇತ್ರದಿಂದ ಬಂದ ಫಲಿತಾಂಶವನ್ನು (ಅಂದರೆ ಅಲ್ಲಿ ಸಿದ್ದು ಸೋತಿದ್ದರು) ಪುನರಾವರ್ತಿಸುವ ಆಲೋಚನೆ ಬಿಜೆಪಿಯದ್ದು. ಹಾಗಾಗಿ ಕಾಂಗ್ರೆಸ್ ಪಕ್ಷದಲ್ಲಿಯೇ ಇರುವ ಸಿದ್ದರಾಮಯ್ಯ ವಿರುದ್ಧ ವಿರೋಧಿ ಶಕ್ತಿಗಳನ್ನು ಉತ್ತೇಜಿಸಲು, ಒಗ್ಗೂಡಿಸಲು, ಬಳವರ್ಧಿಸಿ ಬಳಸಿಕೊಳ್ಳಲು ಬಿಜೆಪಿ ತಂಡ ಮುಂದಾಗಿದೆ.
ಹಾಗಾಗಿ ಅಲ್ಲಿನ ಕಾಂಗ್ರೆಸ್’ನ ಸಾಂಪ್ರದಾಯಿಕ ಮತಗಳಿಗೆ ಕತ್ತರಿ ಹಾಕಲು ಯೋಜನೆ ರೂಪುಗೊಂಡ ಹಾಗಿದೆ. ಪ್ರಬಲ ಲಿಂಗಾಯತರು, ದಲಿತರು, ಕುರುಬರು, ಪರಿಶಿಷ್ಟ ಪಂಗಡಗಳು ಮತ್ತು ಇತರ ಎಲ್ಲಾ ಸಮುದಾಯಗಳ ಪ್ರಾಬಲ್ಯವಿರುವ ಕ್ಷೇತ್ರ ವರುಣಾ. ಈ ಕ್ಷೇತ್ರದಲ್ಲಿ ಬಿಜೆಪಿಯು ಹಿಂದೆಂದಿಗಿಂತಲೂ ಆಕ್ರಮಣಕಾರಿ ರೀತಿಯಲ್ಲಿ ಪ್ರಚಾರ ನಡೆಸುತ್ತಿದೆ. ಕಾರಣ ಸಿದ್ದರಾಮಯ್ಯನವರು ಪದೇ ಪದೇ ಬಿಜೆಪಿಯ ಮಾತೃ ಸಂಸ್ಥೆ ಆರೆಸ್ಸೆಸ್ ಮೇಲೆ ಮಾಡುತ್ತಿದ್ದ ಅಟ್ಯಾಕ್ ! ಅದಕ್ಕಾಗಿ ಈ ಸಲ ಸಿದ್ದುವನ್ನ ಅವರ ಕ್ಷೇತ್ರದಲ್ಲಿಯೇ ಸೈಡ್ ಲೈನ್ ಮಾಡಲು ಸಕಲ ತಯಾರಿ ಮಾಡಿಕೊಂಡಿದೆ ಬಿಜೆಪಿ.
ಸಿದ್ದರಾಮಯ್ಯನವರು ರಾಜ್ಯದ ಬೇರೆ ಸ್ಥಳಗಳಲ್ಲಿ ಪ್ರಚಾರ ಮಾಡದಂತೆ, ಕೇವಲ ಅವರ ಸೀಟು ಉಳಿಸಿಕೊಳ್ಳಲು ಹೆಣಗಾಡುವ ಹಾಗೆ ಮಾಡಲು ವರುಣಾ ಕ್ಷೇತ್ರದಲ್ಲಿ ಮಾತ್ರವೇ ಪ್ರಚಾರದಲ್ಲಿ ತೊಡಗಿಕೊಳ್ಳುವಂತೆ ಮಾಡುವುದು ಪ್ಲಾನ್ ನ ಒಂದು ಭಾಗ. ಹಾಗೆ ಸಿದ್ದರಾಮಯ್ಯ ಅವರನ್ನು ಬ್ಯುಸಿಯಾಗಿರುವಂತೆ ಮಾಡಲು ಸೋಮಣ್ಣ ಮತ್ತು ಅವರ ತಂಡಕ್ಕೆ ಅಮಿತ್ ಶಾ ಸೂಚಿಸಿದ್ದಾರೆಂದು ಮಾಹಿತಿ ಲಭ್ಯ ಆಗಿದೆ. ಜೈಸ್ವಾಲ್ ಅವರು, ಚಾಮರಾಜನಗರ ಬೆಳವಣಿಗೆಗಳ ಬಗ್ಗೆ ದಿನನಿತ್ಯದ ಮಾಹಿತಿ ನೀಡುವಂತೆ ನಾಯಕರಿಗೆ ಸೂಚಿಸಿದ್ದಾರೆ.
ಸೋಮಣ್ಣ ಅವರು, ಶನಿವಾರ ಚಾಮರಾಜನಗರದಲ್ಲಿ ಪ್ರಚಾರ ಆರಂಭಿಸಿದ್ದು, ಎರಡು ದಿನಗಳ ಕಾಲ ಪ್ರಚಾರ ನಡೆಯಲಿದ್ದಾರೆಂದು ತಿಳಿದುಬಂದಿದೆ. ವರುಣಾದಲ್ಲಿ ಸೋಮಣ್ಣ ಕಣಕ್ಕಿಳಿಯುತ್ತಿದ್ದು, ಚಾಮರಾಜನಗರದಲ್ಲಿ ಅವರ ಪ್ರಚಾರಕ್ಕೆ ಹೊಡೆತ ಬೀಳದಂತೆ ನೋಡಿಕೊಳ್ಳುವಂತೆಯೂ ಸೂಚನೆ ಬಂದಿದೆ.
ಏಪ್ರಿಲ್ 19 ರಂದು ಸೋಮಣ್ಣ ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಕುಟುಂಬ ಸದಸ್ಯರು ಬೃಹತ್ ರ್ಯಾಲಿಗೆ ನಡೆಸಲು ಉದ್ದೇಶಿಸಲಾಗಿದೆ. ಅಲ್ಲದೆ, ಸೋಮಣ್ಣ ಅವರ ಪತ್ನಿ ಶ್ಯಾಮಲಾ ಅವರು ಬಿಜೆಪಿ ನಾಯಕಿ ಹಾಗೂ ಟಿಕೆಟ್ ಆಕಾಂಕ್ಷಿ ನಾಗಶ್ರೀ ಪ್ರತಾಪ್ ಅವರನ್ನು ಭೇಟಿ ಮಾಡಿದ್ದು, ಅವರ ಬೆಂಬಲವನ್ನು ಕೂಡಾ ಕೋರಿದ್ದಾರೆ.