Kantara : ಕಾಂತಾರ ಚಿತ್ರತಂಡಕ್ಕೆ ಕೇರಳ ಹೈಕೋರ್ಟ್‌ನಿಂದ ಮತ್ತೆ ಶಾಕ್!
Kantara : ಭಾರತ ಚಿತ್ರರಂಗದಲ್ಲಿಯೇ ಅದ್ಭುತವಾಗಿ ಹೊರಹೊಮ್ಮಿರುವ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಬಂದಿರುವ ಹಾಗೆಯೇ ಕಾಲೆಳೆಯೋ ಕೆಲಸ ಕೂಡಾ ನಡೆದಿದೆ ಎಂಬ ವಿಚಾರ ಈಗಾಗಲೇ ತಿಳಿದಿರಬಹುದು. ಕಳೆದ ವರ್ಷ ಸೆಪ್ಟೆಂಬರ್ 30 ರಂದು ‘ಕಾಂತಾರ’ (Kantara )ಸಿನಿಮಾ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಕಾನೂನು ಹೋರಾಟ ಪ್ರಾರಂಭಿಸಲಾಯಿತು.
ಸದ್ಯ ಕಾಂತಾರ ಸಿನಿಮಾದ ವರಾಹ ರೂಪಂ ಹಾಡಿನ ಕುರಿತು ಈಗಾಗಲೇ ವಿವಾದ ಎದ್ದಿದ್ದು ಕಾಂತಾರ ಚಿತ್ರತಂಡಕ್ಕೆ ಕೇರಳ ಕೋರ್ಟ್ ಮತ್ತೆ ಶಾಕ್ ನೀಡಿದೆ. ಥಿಯೇಟರ್, ಒಟಿಟಿಯಲ್ಲಿ ವರಾಹ ರೂಪಂ ಹಾಡು ಬಳಸದಂತೆ ಕೇರಳ ಜಿಲ್ಲಾ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ನೀಡಿದೆ.
ಕಾಂತಾರ ಚಿತ್ರದ ‘ವರಾಹ ರೂಪಂ’ ಹಾಡು ತೈಕುಡಂ ಬ್ರಿಡ್ಜ್ ಮ್ಯೂಸಿಕ್ ಬ್ಯಾಂಡ್ ಸಂಯೋಜಿಸಿರುವ ‘ನವರಸಂ’ ಹಾಡಿನ ನಕಲು ಎಂದು ಆರೋಪ ಮಾಡಲಾಗಿದೆ. ಅಲ್ಲದೇ ಹಕ್ಕುಸ್ವಾಮ್ಯವನ್ನು ಉಲ್ಲಂಘಿಸಲಾಗಿದೆ ಎಂದು ‘ನವರಸಂ’ ಹಾಡಿನ ಮಾಲೀಕರಾದ ತೈಕುಡಂ ಬ್ರಿಡ್ಜ್ ಮತ್ತು ಮಾತೃಭೂಮಿ ಸಂಸ್ಥೆಯು ಕಾಂತಾರ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರ ವಿರುದ್ಧ ಕ್ಯಾಲಿಕಟ್ ಟೌನ್ ಪೊಲೀಸರಿಗೆ ದೂರು ನೀಡಿತ್ತು.
ಈ ಹಿನ್ನೆಲೆಯಲ್ಲಿ ಕನ್ನಡದ ಆಕ್ಷನ್ ಡ್ರಿಲ್ಲರ್ ಕಾಂತಾರ ಸಿನಿಮಾದ ವಿವಾದಾತ್ಮಕ ಹಾಡು ವರಾಹ ರೂಪಂ ಅನ್ನು ಚಿತ್ರಮಂದಿರಗಳಲ್ಲಿ ಹಾಗೂ ಒಟಿಟಿ ಮತ್ತು ಡಿಜಿಟಲ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಳಸುವುದನ್ನು ನಿರ್ಬಂಧಿಸಿ ಕೇರಳದ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆಯನ್ನ ನೀಡಿದೆ. ಇದು ಹಕ್ಕುಸ್ವಾಮ್ಯ ಕಾಯ್ದೆಯ ಉಲ್ಲಂಘನೆ ಎಂದು ಉಲ್ಲೇಖಿಸಿ ಆದೇಶ ನೀಡಿದೆ.
ಪ್ರಕರಣದ ವಿಚಾರಣೆ ನಡೆಸಿದ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಕೆ ಇ ಸಾಲಿಹ್ ಅವರು ‘ವರಾಹ ರೂಪಂ’ ಹಾಡಿಗೆ ಅಳವಡಿಸಿದ ‘ನವರಸಂ’ ಟ್ರ್ಯಾಕ್‌ನ ಹಕ್ಕುಸ್ವಾಮ್ಯವನ್ನು ಹೊಂದಿರುವ ಮ್ಯೂಸಿಕ್ ಬ್ಯಾಂಡ್ ಥೈಕ್ಕುಡಂ ಬ್ರಿಡ್ಜ್, ಮಾತೃಭೂಮಿ ಪ್ರಿಂಟಿಂಗ್ ಮತ್ತು ಪಬ್ಲಿಷಿಂಗ್ ಕಂಪನಿ ಲಿಮಿಟೆಡ್‌ಗೆ ಸಹ ಕ್ರೆಡಿಟ್ ನೀಡಿ, ಸಮಂಜಸ ಹೇಳಿಕೆ ನೀಡಬೇಕು ಎಂದು ನಿರ್ದೇಶನ ನೀಡಿದರು.
ಈ ಹಿಂದೆ ಕೂಡ ‘ವರಾಹರೂಪಂ’ ಹಾಡನ್ನು ನಿಷೇಧಿಸಿದ್ದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿತ್ತು. ಹಕ್ಕುಸ್ವಾಮ್ಯ ಉಲ್ಲಂಘನೆ ಪ್ರಕರಣಗಳಲ್ಲಿ ಜಾಮೀನು ನೀಡುವಾಗ ಅಂತಹ ಸೂಚನೆಗಳು ಅಗತ್ಯವಿಲ್ಲ ಎಂದು ಸುಪ್ರೀಂ ಆದೇಶದಲ್ಲಿ ತಿಳಿಸಿತ್ತು ಎಂಬ ಮಾಹಿತಿ ಇದೆ.
ಈಗಾಗಲೇ ಕಳೆದ ವಾರ ವಿಚಾರಣೆ ನಡೆಸಿದ್ದ ಕೋಯಿಕ್ಕೋಡ್ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಎಸ್ ಸೂರಜ್, ಕೇಸ್ ಡೈರಿ ಪರಿಶೀಲಿಸಿದ ನಂತರ, ಕೃತಿಸ್ವಾಮ್ಯ ಕಾಯ್ದೆ 1957 ರ (ಹಕ್ಕುಸ್ವಾಮ್ಯ ಉಲ್ಲಂಘನೆ) ಸೆಕ್ಷನ್ 64 ರ ಅಡಿ ಕೃತಿಚೌರ್ಯದ ಹಾಡಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದರು. ಅಲ್ಲದೇ, ಡಿಜಿಟಲ್ ಹಕ್ಕುಗಳು, ಹಾಡಿನ ಕಂಪೋಸ್‌ಗೆ ಬಳಸಿದ ನೋಟ್‌ಗಳನ್ನು ಸಂಗ್ರಹಿಸುವಂತೆ ಏಪ್ರಿಲ್ 5 ರಂದು ತನಿಖಾಧಿಕಾರಿಗೆ ಹೇಳಿದ್ದರು. ಮೇ 4 ರ ಒಳಗಾಗಿ ತನಿಖೆಯ ಕುರಿತು ವರದಿಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.