Varuna Election: ಸಿದ್ದರಾಮಯ್ಯ ವಿರುದ್ಧ ಗೆದ್ದು ಬೀಗುತ್ತಾರಾ ಸೋಮಣ್ಣ? : ಸಿದ್ದು ವಿರುದ್ಧ ಬಿಜೆಪಿ ಹೈಕಮಾಂಡ್ ಇವರನ್ನೇ ಕಣಕ್ಕಿಳಿಸಿದ್ದು ಏಕೆ?
Varuna Election : ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ (BJP candidates list) ಮೊನ್ನೆ ಏಪ್ರಿಲ್ 11 ರಂದು ರಿಲೀಸ್ ಆಗಿತ್ತು. ನಿನ್ನೆ ರಾತ್ರಿ 11 ಗಂಟೆಗೆ ಇನ್ನೊಂದು ಲಿಸ್ಟ್ ರಿಲೀಸ್ ಆಗಿದೆ. ಹಲವು ರಾಜಕೀಯ ಪ್ರಯೋಗಗಳನ್ನು ಬಿಜೆಪಿ ಹೈಕಮಾಂಡ್ ರೂಪಿಸಿದೆ. ಈ ತಂತ್ರದ ಅತ್ಯಂತ ಅಚ್ಚರಿಯ ಎರಡು ಪ್ರಮುಖ ನಿರ್ಧಾರಗಳು ಏನೆಂದರೆ ವರುಣಾ ಕ್ಷೇತ್ರದಲ್ಲಿ (Varuna Constituency) ಬಿಜೆಪಿ ಇಳಿಸಿದ ಕ್ಯಾಂಡಿಡೇಟ್ !
ಸಿದ್ದರಾಮಯ್ಯನವರು ಕಳೆದ ಬಾರಿ ಬಾದಾಮಿ ಹಾಗೂ ತಮ್ಮ ತವರು ಕ್ಷೇತ್ರವಾದ ಚಾಮುಂಡೇಶ್ವರಿ ಎರಡರಿಂದಲೂ ಕಣಕ್ಕಿಳಿದಿದ್ದರು. ಬಾದಾಮಿಯಲ್ಲಿ ಕಠಿಣ ಸ್ಪರ್ಧೆಯನ್ನು ಎದುರಿಸಿ ಕೊನೆಗೂ ಗೆದ್ದ ಸಿದ್ದು, ಚಾಮುಂಡೇಶ್ವರಿಯಲ್ಲಿ ಜಿ ಟಿ ದೇವೇಗೌಡರ ಎದುರು ಮಾತ್ರ ಹೀನಾಯವಾಗಿ ಸೋಲುಂಡರು. ಆದರೆ ಸಿದ್ದರಾಮಯ್ಯಗೆ ರಾಜಕೀಯ ಬದುಕಿನ ಮೂಲ ಕ್ಷೇತ್ರವೆಂದರೆ ಅದು ಚಾಮುಂಡೇಶ್ವರಿಯೇ. ಕೆಲವೊಮ್ಮೆ ಸಿದ್ದುಗೆ ಈ ಕ್ಷೇತ್ರ ಅದೃಷ್ಟದ ಗೆಲುವುನ್ನೂ ತಂದಿದೆ. ಯಾಕೆಂದರೆ ಜೆಡಿಎಸ್ ನಿಂದ ಉಚ್ಛಾಟನೆ ಆದ ಸಿದ್ದು 2006ರ ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಕಾಡಕ್ಕಿಳಿದು ಜೆಡಿಎಸ್ ಕ್ಯಾಂಡಿಡೇಟ್ ಶಿವಬಸಪ್ಪನ ವಿರುದ್ದ ಕೇವಲ 257 ಮತಗಳಿಂದ ಗೆದ್ದಿದ್ದರು. ನಂತರದಲ್ಲಿ ಕ್ಷೇತ್ರ ಮರು ವಿಂಗಡಣೆ ವೇಳೆ ಚಾಮುಂಡೇಶ್ವರಿ ಯಿಂದ ವರುಣಾ ಕ್ಷೇತ್ರ ವಿಂಗಡಣೆಯಾದಾಗ ಸಿದ್ದು ಕಣ್ಣೀರು ಕರೆದಿದ್ದರು.
ಇನ್ನು ಈ ಬಾರಿ ಬಾದಾಮಿ ಬದಲಿಗೆ ಕೋಲಾರದಲ್ಲಿ ಸ್ಪರ್ಧಿಸುವ ಇರಾದೆ ವ್ಯಕ್ತಪಡಿಸಿದ್ದರು. ಅಲ್ಲದೆ ವರುಣಾದಲ್ಲಿ ಕೂಡ ಸ್ಪರ್ಧಿಸಬಹುದೇ ಎಂಬ ಬಗ್ಗೆ ಸಾಕಷ್ಟು ಸಮಾಲೋಚನೆಯನ್ನು ಕೂಡಾ ಸಿದ್ದರಾಮಯ್ಯನವರು ನಡೆಸಿದ್ದರು. ಕೊನೆಗೆ ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುವುದು ಎಂದು ಅವರು ನಿರ್ಧಾರ ಮಾಡಿದ್ದರು. ಆದರೆ ಕಾಂಗ್ರೆಸ್ ಹೈಕಮಾಂಡ್ ಅದಕ್ಕೆ ಒಪ್ಪಿಗೆ ಸೂಚಿಸದೆ, ಸಿದ್ದರಾಮಯ್ಯನವರು ತಮ್ಮ ಮೂಲ ತವರು ಕ್ಷೇತ್ರವಾದ ವರುಣಾದಲ್ಲಿ ಸ್ಪರ್ಧಿಸುವಂತೆ (Varuna Election) ಅಪ್ಪಣೆ ವಿಧಿಸಿತ್ತು.
ಈಗ ವರುಣಾದಲ್ಲಿ ಸಿದ್ದರಾಮಯ್ಯನವರಿಗೆ ಅಲ್ಲಿನ ಸ್ಪರ್ಧೆ ಜಗಿಯಲಾಗದ ಉಕ್ಕಿನ ಕಡಲೆಯಾಗುವಂತೆ ಬಿಜೆಪಿ ಪ್ಲಾನ್ ಮಾಡಿದೆ. ಲಿಂಗಾಯತ ಮತಗಳೆ ಹೆಚ್ಚಿರುವ ವರುಣಾದಲ್ಲಿ, ಸಿದ್ದು ಅವರ ಕ್ಷೇತ್ರದಲ್ಲಿಯೇ ಕಟ್ಟಿ ಮಡಚಲು ಬಿಜೆಪಿ ಸಜ್ಜಾಗಿ ನಿಂತಿದೆ. ಅದರ ಮೊದಲ ಪ್ರಯತ್ನವಾಗಿ ಬಿಜೆಪಿಯು ಲಿಂಗಾಯತ ನಾಯಕ ವಿ ಸೋಮಣ್ಣ ಅವರನ್ನು ಸಿದ್ದರಾಮಯ್ಯನವರ ಎದುರಿಗೆ ತಂದು ನಿಲ್ಲಿಸುತ್ತಿರುವುದು. ಹಾಗಾಗಿ ಈ ಬಾರಿ ವರುಣ ಕ್ಷೇತ್ರ ಕದನ ಕಲಿಗಳ ಬಿಗ್ ಫೈಟ್ ನಿಂದ ಇಡೀ ದೇಶದ ಗಮನ ಸೆಳೆದಿದೆ. ವರುಣದ ನೀರಾವರಿ ರೂವಾರಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಅವರ ಸ್ವಕ್ಷೇತ್ರದಲ್ಲೇ ಸೋಲಿಸಲು ಹೊರಟ ಬಿಜೆಪಿ ಪ್ಲಾನ್ ಸಕ್ಸಸ್ ಆಗುತ್ತಾ ? ಅಷ್ಟಕ್ಕೂ ಯಾಕೆ ಸಿದ್ಧರಾಮಯ್ಯನವರ ಮೇಲೆ ಬಿಜೆಪಿಗೆ ಅಷ್ಟರಮಟ್ಟಿಗೆ ಆಕ್ರೋಶ ? ಅದಕ್ಕೆ ಉತ್ತರ ಇಲ್ಲಿದೆ ನೋಡಿ.
ಮಾಜಿ ಸಿಎಂ ಸಿದ್ದರಾಮಯ್ಯನವರು ಜನತಾ ಪಾಳಯದಿಂದ ಬಂದು ಇದೀಗ ಕಾಂಗ್ರೆಸ್ಸಿನಲ್ಲಿದ್ದಾರೆ. ಕಾಂಗ್ರೆಸಿನಲ್ಲಿ ಒಂದು ಬಾರಿ ಮುಖ್ಯಮಂತ್ರಿ ಪಟ್ಟವನ್ನು ಕೂಡ ಅಲಂಕರಿಸಿದ್ದಾರೆ. ಇತ್ತೀಚೆಗೆ ಸಿದ್ದರಾಮಯ್ಯನವರು ಹಲವು ಸಂದರ್ಭಗಳಲ್ಲಿ ಪದೇ ಪದೇ ಬಿಜೆಪಿಯ ಪ್ರೇರಣಾ ಶಕ್ತಿ ಮಾತೃ ಸಂಸ್ಥೆ ಆರ್ ಎಸ್ ಎಸ್ ಮೇಲೆ ಒಂದೇ ಸಮನೆ ಮುಗಿ ಬೀಳುತ್ತಿದ್ದಾರೆ. ಆರ್ ಎಸ್ ಎಸ್ ಅನ್ನು ಕೆಲ ಬಾರಿ ಇದೆಲ್ಲ ಅನಗತ್ಯ ಅನ್ನಿಸುವ ಸಂದರ್ಭಗಳಲ್ಲಿ ಕೂಡಾ ತಡಕಾಡಿಕೊಂಡಿದ್ದಾರೆ ಸಿದ್ದು. ಎಲ್ಲಿ ಏನೇ ಆದರೂ ಅದಕ್ಕೆ ಆರ್ ಎಸ್ ಎಸ್ ಅನ್ನು ಎಳೆದು ತಂದು RSS ಇದಕ್ಕೆಲ್ಲ ಕಾರಣ ಎನ್ನುವುದನ್ನು ಬಿಂಬಿಸಲು ಸಿದ್ದು ಪ್ರಯತ್ನಿಸಿದ್ದರು. ಸಿದ್ದರಾಮಯ್ಯನವರ ಪ್ರಯತ್ನ ಎಷ್ಟರ ಮಟ್ಟಿಗೆ ಯಶಸ್ಸು ಕಂಡಿತು ಎನ್ನುವುದು ಬೇರೆ ವಿಚಾರ. ಆದರೆ ತನ್ನ ಮೇಲೆ ಆಗುತ್ತಿರುವ ವಿನಾಕಾರಣದ ಅಟ್ಯಾಕ್ ಅನ್ನು ಆರ್ ಎಸ್ ಎಸ್ ಗಂಭೀರವಾಗಿ ತೆಗೆದುಕೊಂಡಿದೆ. ಈ ಬಾರಿ ಕಾಂಗ್ರೆಸ್ಸಿನ ನೆಚ್ಚಿನ ಮುಖ್ಯಮಂತ್ರಿ ಅಭ್ಯರ್ಥಿಯು ಆಗಿರುವ ಸಿದ್ದುವನ್ನು ಮನೆಯ ದಾರಿ ಹಿಡಿಸಲು ಸಂಘ ಪರಿವಾರ ಸಮೇತ ಬಿಜೆಪಿ ಸಜ್ಜಾಗಿ ನಿಂತಿದೆ. ಈ ‘ ಆಪರೇಶನ್ ವರುಣಾ ‘ ಪ್ರಾಜೆಕ್ಟ್ ನ ಅಗ್ರೆಸ್ಸಿವ್ ನಡೆಯೇ ಬೆಂಗಳೂರಿನ ಸೋಮಣ್ಣರನ್ನು ಏರ್ ಲಿಪ್ಟ್ ಮಾಡಿ ತಂದು ಎದುರಿಗೆ ವರುಣಾದಲ್ಲಿ ಸಿದ್ದು ಎದುರು ತಂದು ನಿಲ್ಲಿಸುತ್ತಿರುವುದು.
ಹಾಗಾಗಿ ರಣರಂಗವಾಗಲಿದೆ ವರುಣಾ (Varuna Election). ಈ ಹಿಂದೆ ಕೂಡಾ ಒಂದು ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಇಂತಹುದೇ ಪರಿಸ್ಥಿತಿಯನ್ನು ಎದುರಿಸಿದ್ದರು. ಆಗ ಚಾಮುಂಡೇರಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿಯು ಸ್ಥಳೀಯ ಅನಾಮಿಕ ಉದ್ಯಮಿಯೊಬ್ಬರನ್ನು ಸಿದ್ದರಾಮಯ್ಯನವರ ಎದುರು ನಿಲ್ಲಿಸಿ ರಣ ಕಹಳೆ ಮೊಳಗಿಸಿತ್ತು. ಆ ಬಾರಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಪ್ರಯತ್ನಿಸಿತ್ತು. ಅದು ಸಿದ್ದರಾಮಯ್ಯನವರು ಎದುರಿಸಿದ ಅತ್ಯಂತ ಕಠಿಣ ಚುನಾವಣೆ. ಅಲ್ಲಿ ಕೆಲವೇ 100 ಮತಗಳ ಅಂತರದಿಂದ ಸಿದ್ದು ಅವರು ಗೆದ್ದಿದ್ದರೂ, ಅವರದಕ್ಕೆ ಅದೆಷ್ಟು ಕಷ್ಟಪಟ್ಟಿದ್ದಾರೆ ಎಂಬುದು ಅವರಿಗೆ ಗೊತ್ತು. ಆಗ ಸಿದ್ದರಾಮಯ್ಯನವರು ಇನ್ನು ಮುಂದೆ ನಾನು ಚುನಾವಣೆಗೆ ನಿಲ್ಲಲ್ಲ ಅನಿಸಿಬಿಟ್ಟಿದೆ ಎಂದು ಹೇಳಿದ್ದರು. ಈಗ ಮತ್ತದೇ ಸನ್ನಿವೇಶ ಸಿದ್ದರಾಮಯ್ಯನವರಿಗೆ ಎದುರಾಗಿದೆ.
ವರುಣಾ ಕ್ಷೇತ್ರದ ಜಾತಿ ಲೆಕ್ಕಾಚಾರ
ವರುಣಾ ಕ್ಷೇತ್ರದಲ್ಲಿ ಒಟ್ಟು 221050 ಮತದಾರರಿದ್ದಾರೆ. ಈ ಪೈಕಿ 111980 ಪುರಷರಿದ್ದರೆ, 109052 ಮಹಿಳಾ ಮತದಾರರಿದ್ದಾರೆ. ಇತರೆ 13 ಮತದಾರರು ಅಲ್ಲಿ ಇದ್ದಾರೆ. ವರುಣಾ ಕ್ಷೇತ್ರದಲ್ಲಿ ಸುಮಾರು 55 ಸಾವಿರದಷ್ಟು ಲಿಂಗಾಯತ ಮತದಾರರಿದ್ದಾರೆ. ಹಾಗೆಯೇ ಒಕ್ಕಲಿಗ ಸಮುದಾಯದ ಜನಸಂಖ್ಯೆ ಸುಮಾರು 12,000 ದಷ್ಟಿದೆ. ಅದೇ ರೀತಿ 35000 ಕುರುಬರು, 12 ಸಾವಿರದಷ್ಟು ಇತರ ಹಿಂದುಳಿದ ವರ್ಗಗಳ ಸಮುದಾಯದವರು, 43,000 ದಲಿತರು ಮತ್ತು ಸುಮಾರು 23,000 ನಾಯಕ ಸಮುದಾಯದ ಮತಗಳಿವೆ. ಹೀಗಾಗಿ ಸಿದ್ದರಾಮಯ್ಯ ಅವರು ಕುರುಬ ಮತ್ತು ದಲಿತ ಮತ್ತು ಹಿಂದುಳಿದ ವರ್ಗಗಳ ಮತಗಳ ಮೇಲೆ ಕಣ್ಣಿಟ್ಟಿದ್ದರೆ, ಬಿಜೆಪಿ ಲಿಂಗಾಯತ ಮತ್ತು ಒಕ್ಕಲಿಗ ಮತಗಳನ್ನು ಸೆಳೆಯಲು ತಂತ್ರ ಹೂಡಿದೆ. ಹೀಗಾಗಿ, ಸೋಮಣ್ಣ ಅವರನ್ನು ಕಣಕ್ಕಿಳಿಸಿದರೆ ಈ ಎರಡೂ ಸಮುದಾಯಗಳ ಮತಗಳನ್ನು ಸುಲಭವಾಗಿ ಬಗಲಿಗೆ ಹಾಕಿ ಕೊಳ್ಳಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿದೆ.
ಸೋಮಣ್ಣರನ್ನೇ ಆಯ್ಕೆ ಮಾಡಿದ್ದಕ್ಕೆ ಕಾರಣ ಕೂಡಾ ಇದೆ.
1. ಸೋಮಣ್ಣನವರು ಲಿಂಗಾಯಿತ ನಾಯಕ
2. ತಳಮಟ್ಟದ ರಾಜಕೀಯ ಮಾಡಿ ರಾಜಕೀಯದ ತಳಮಟ್ಟದ ನಾಡಿಮಿಡಿತ ಬಲ್ಲ ಲೀಡರ್ ಸೋಮಣ್ಣ
3. ರಾಜ್ಯ ಬಿಜೆಪಿ ಸರ್ಕಾರ ಇತ್ತೀಚಿಗಷ್ಟೇ ಒಕ್ಕಲಿಗರಿಗೆ ಹಿಂದುಳಿದ ವರ್ಗಗಳ ಅಡಿಯಲ್ಲಿ ಮೀಸಲಾತಿ ಕಲ್ಪಿಸಿದೆ. ಅದೇ ರೀತಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಹೆಚ್ಚಿಸಲಾಗಿದ್ದು, ಎಸ್‌ಸಿ, ಎಸ್‌ಟಿ ಹಾಗೂ ದಲಿತ ಸಮುದಾಯದ ಬಹುಪಾಲು ಮತಗಳು ಸುಲಭವಾಗಿ ದೊರೆಯಲಿದೆ ಎಂಬ ವಿಶ್ವಾಸ ಬಿಜೆಪಿಗೆ ಇದೆ. ಹೀಗಾಗಿ ವಿ. ಸೋಮಣ್ಣ ಅವರನ್ನು ಕಣಕ್ಕಿಳಿಸುವುದರಿಂದ ಲಿಂಗಾಯತ ಮತಗಳು ಮತ್ತು ಮೀಸಲಾತಿಯ ಕಾರಣಕ್ಕೆ ಒಕ್ಕಲಿಗ ಮತ್ತು ಹಿಂದುಳಿದ ವರ್ಗಗಳ ಮತಗಳನ್ನು ಸುಲಭವಾಗಿ ಬಾಚಿಕೊಳ್ಳಬಹುದು ಎಂಬುದು ಬಿಜೆಪಿ ಹೈಕಮಾಂಡ್ ಲೆಕ್ಕಹಾಕಿದೆ. ಹೀಗಾಗಿಯೇ ಜಾತಿ ಲೆಕ್ಕಾಚಾರದ ಆಧಾರ ಮೇಲೆ ಬಿಜೆಪಿ ಹೈಕಮಾಂಡ್ ಪ್ರಭಾವಿ ಲಿಂಗಾಯತ ನಾಯಕನಿಗೆ ಮಣೆ ಹಾಕಿದೆ.
ಸೋಮಣ್ಣನವರು ಇದೀಗ ವಸತಿ ಸಚಿವರಾಗಿದ್ದಾರೆ. ಸಂಪನ್ಮೂಲಕ್ಕೆ ಯಾವುದೇ ಕೊರತೆ ಇಲ್ಲ. ಚುನಾವಣಾ ಖರ್ಚು ವೆಚ್ಚಗಳನ್ನು ಬಿಜೆಪಿ ನೋಡಿಕೊಳ್ಳಲಾಗಿದೆ. ಹಾಗಾಗಿ ವರ್ಣದಲ್ಲಿ ಈ ಸಲ ಸಮಾನ ದೈತ್ಯ ಶಕ್ತಿಗಳು ಪರಸ್ಪರ ಗುದ್ದಾಡಲಿವೆ. ಪಟ್ಟಿಗೆ ಪಟ್ಟು, ತಂತ್ರಕ್ಕೆ ಪತಿ ತಂತ್ರ, ಅಲ್ಲಲ್ಲಿ ಕುತಂತ್ರ – ಏನೇ ಆಗಲಿ ಗೆಲ್ಲಲೇ ಬೇಕೆಂದು ಇಬ್ಬರು ನಾಯಕರು ಭುಜಕ್ಕೆ ಭುಜದ ಉಳಿಸಿ ಕಾದಾಡಲಿದ್ದಾರೆ. ಮತದಾರ ಮಹಾಪ್ರಭುವಿನ ಅವರಿಬ್ಬರ ಭವಿಷ್ಯ ಅಡಗಿದೆ. ಒಂದು ವೇಳೆ ಸಿದ್ದರಾಮಯ್ಯ ಅವರು ಸೋತರೆ, ಅಲ್ಲಿಗೆ ಅವರ ರಾಜಕೀಯ ಜೀವನ ಬಹುತೇಕ ಅಂತ್ಯಗೊಳ್ಳಲಿದೆ. ಇನ್ನೊಂದು ಕಡೆ ವಿ ಸೋಮಣ್ಣನವರು ಗೆದ್ದರೆ, ಅವರಿಗೆ ‘ ಜಯಿಂಟ್ ಕಿಲ್ಲರ್ ‘ ಬಿರುದಿನ ಜೊತೆ, ರಾಜ್ಯ ಬಿಜೆಪಿಯಲ್ಲಿ ಬಹುದೊಡ್ಡ ಸ್ಥಾನಮಾನ ದೊರೆಯುವ ನಿಚ್ಚಳ ಸಾಧ್ಯತೆ ಇದೆ. ಯಾರಿಗೆ ಗೊತ್ತು ಸೋಮಣ್ಣ ಅವರು ಮುಖ್ಯಮಂತ್ರಿ ಆದರೂ ಆದಾರು.