‘ ಹಿಂದುತ್ವ ಬಿಟ್ರು ಜಾತಿತ್ವ ತಂದ್ರು ‘ : ಸಂಜೀವ ಮಠಂದೂರು ಅವರಿಗೆ ಟಿಕೆಟ್ ತಪ್ಪಲು ಇವರೇ ನೋಡಿ ಕಾರಣ !
Sanjeeva Matandoor: ಪುತ್ತೂರು ಶಾಸಕ ಮತ್ತು ಬಿಜೆಪಿಯ ಸೈಲೆಂಟ್ ವರ್ಕರ್ ಸಂಜೀವ ಮಠಂದೂರು (Sanjeeva Matandoor) ಅವರಿಗೆ ಟಿಕೆಟ್ ತಪ್ಪಿದೆ. ಅತ್ತ ಸುಳ್ಯದ ಶಾಸಕ ಅಂಗಾರ ಅವರಿಗೆ ಟಿಕೆಟ್ ತಪ್ಪಿದ ತಕ್ಷಣ, 30 ವರ್ಷಗಳ ಕಾಲ ಸುಳ್ಯ ಕ್ಷೇತ್ರವನ್ನು ಪ್ರತಿನಿಧಿಸಿದ ಅಂಗಾರರವರು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಈ ನಡುವೆ ಎಸ್ ಅಂಗಾರ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.
ಪುತ್ತೂರಿನಲ್ಲಿ ಶಾಸಕ ಮಠಂದೂರು ಅವರಿಗೆ ಟಿಕೆಟ್ ತಪ್ಪಲು ಕಾರಣ ಏನು ? ಪಕ್ಷದ ಮತ್ತು ಸಂಘ ಪರಿವಾರದ ಕಟ್ಟುನಿಟ್ಟಿನ ಕಾರ್ಯಕರ್ತರಾಗಿರುವ ಸಂಜೀವ ಮಠಂದೂರು ಅವರು ಕಳೆದ ಬಾರಿ 1,200 ಕೋಟಿಗಳ ಅಭಿವೃದ್ಧಿಯನ್ನು ಪುತ್ತೂರು ತಾಲೂಕಿನಲ್ಲಿ ಮಾಡಿ ಸೈ ಎನಿಸಿಕೊಂಡಿದ್ದರು. ಆದರೆ ತೀರ ಚುನಾವಣೆಗೆ ಆರು ತಿಂಗಳು ಇದೆ ಎನ್ನುವಾಗ ಪುತ್ತೂರು ತಾಲೂಕಿನಲ್ಲಿ ದೊಡ್ಡ ಮಟ್ಟದ ಹುನ್ನಾರಕ್ಕೆ ಸ್ಕೆಚ್ ಬರೆಯಲಾಗಿದೆ. ಜಾತಿ ರಾಜಕೀಯಕ್ಕೆ ಮುಹೂರ್ತ ಇಟ್ಟು ಇದೀಗ ಜಾತಿವಾದಿಗಳು ಗೆದ್ದ ಖುಷಿಯಲ್ಲಿ ಬೀಗುತ್ತಿದ್ದಾರೆ.
ಸಂಜೀವ ಮಠಂದೂರರಿಗೆ ಟಿಕೆಟ್ ಕೈ ತಪ್ಪಲು ಏನು ಕಾರಣ ಎನ್ನುವುದು ಇವತ್ತು ಕರಾವಳಿಯಾದ್ಯಂತ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ವಿಷಯ. ಇದೀಗ ಅದಕ್ಕೆ ಸಂಬಂಧಿಸಿದ ಕಂಪ್ಲೀಟ್ ಮಾಹಿತಿಯನ್ನು ನಾವೀಗ ನೀಡಲಿದ್ದೇವೆ.
ಇದೇ ಆ ನಾಲ್ಕು ಕಾರಣಗಳು:
1) ಹೊಡಿ ಬಡಿ ಕಡಿ ರಾಜಕಾರಣದ ಬಗ್ಗೆ ಒಲವಿಲ್ಲದೆ ಇರುವುದು ಮೊದಲ ಕಾರಣ ( ಅನಗತ್ಯ ಡೈಲಾಗ್ ಹೊಡೆಯದೆ ಇದ್ದುದು)
2) ಎಲ್ಲಾ ವರ್ಗದ ಜನರನ್ನು ಆದಷ್ಟು ಸಮಾನತೆಯಿಂದ ನೋಡಿದ್ದು ಮತ್ತು ಅಭಿವೃದ್ದಿಯಲ್ಲಿ ಧರ್ಮಾತೀತ ಮತ್ತು ಜಾತ್ಯಾತೀತ ರಾಜಕೀಯ ಜೀವನ
3) ಪಕ್ಕದ ಕ್ಷೇತ್ರದ ಡೈನಮಿಕ್ ಎನ್ನಿಸಿಕೊಂಡ ಸಣ್ಣ ಮನಸ್ಸಿನ ದೊಡ್ಡ ದುರಾಸೆಯ ನಾಯಕನೊಬ್ಬ ಒಳಗೊಳಗೇ ಗುಟ್ಟಾಗಿ ತನ್ನ ಚೇಲಾಗಳನ್ನು ಸಂಜೀವ ಮಠಂದೂರು ವಿರುದ್ಧ ಎತ್ತಿ ಕಟ್ಟಿದ್ದು. ಜತೆಗೆ ಪುತ್ತೂರು ತಾಲೂಕಿನ ಗೆಳೆಯರನ್ನು ಅದಕ್ಕೆ ಬಳಸಿಕೊಂಡಿದ್ದು ( ಜಾತಿ ರಾಜಕೀಯಕ್ಕೆ ಕುಮ್ಮಕ್ಕು)
4) ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹು ಸಂಖ್ಯಾತರಿರುವ ಒಕ್ಕಲಿಗ ಸಮುದಾಯವನ್ನು ಹಣಿಯುವ ವ್ಯವಸ್ಥಿತ ಪ್ರಯತ್ನ ( ಜಾತಿ ರಾಜಕೀಯಕ್ಕೆ ಕುಮ್ಮಕ್ಕು)
ಟಿಕೆಟ್ ತಪ್ಪಲು ಕಾರಣವಾದವರ ಬಗ್ಗೆ ಪೂರ್ತಿ ವಿವರ:
‘ಸೈಲೆಂಟ್ ಸಂಜೀವಣ್ಣ’ ಎಂದೇ ಕರೆಸಿಕೊಳ್ಳುವ, ಪಕ್ಷ ಮತ್ತು ಸಂಘ ಪರಿವಾರದ ನಿಷ್ಠ ಕಾರ್ಯಕರ್ತ ಸಂಜೀವ ಮಟನ್ದೂರ್ ಅವರು ತಮ್ಮ 5 ವರ್ಷಗಳ ಅಭಿವೃದ್ಧಿ ಕಾರ್ಯಗಳ ಮೂಲಕ ಗಮನಸೆಳೆದಿದ್ದರು. ಅಭಿವೃದ್ಧಿಯ ಮಾತು ಬಂದಾಗ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಮತ್ತು ಧರ್ಮತೀತವಾಗಿ ನಡೆದುಕೊಂಡು ಸಮಾನ ಅವಕಾಶಗಳನ್ನು ಎಲ್ಲರಿಗೂ ನೀಡಿದ್ದರು. ಅತ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಕ್ಷ ಸಂಘಟನೆಯಲ್ಲಿ ಹಿರಿಯರು ಕೂಡಾ ಆಗಿರುವ ಸಂಜೀವ ಮಠಂದೂರು ಕಳೆದ 30 ವರ್ಷಗಳಿಗೂ ಹೆಚ್ಚುಕಾಲ ಬಿಜೆಪಿಯಲ್ಲಿ ದುಡಿದಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಸೀಟು ಸಿಕ್ಕು ಗೆದ್ದಿದ್ದರೆ ಅವರಿಗೆ ಮಿನಿಸ್ಟರ್ ಸಿಗುವ ಎಲ್ಲ ಸಾಧ್ಯತೆಗಳು ಇತ್ತು. ಆದರೆ ಯಾವುದೇ ಕಾರಣಕ್ಕೂ ಒಕ್ಕಲಿಗ ಸಮುದಾಯವನ್ನು ಬೆಳೆಯಲು ಬಿಡಬಾರದು ಎನ್ನುವ ದೊಡ್ಡ ಮಟ್ಟಿನ ಒಳಸಂಚು ಮತ್ತು ಜಾತಿ ರಾಜಕೀಯ ಪ್ರಜ್ಞೆ ಆಗ ಜಾಗೃತವಾಗಿತ್ತು.
ಅದಕ್ಕಾಗಿ ಹೇಗಾದರೂ ಮಾಡಿ ಸಂಜೀವ ಮಠಂದೂರು ಅವರಿಗೆ ಈ ಬಾರಿ ಟಿಕೆಟ್ ತಪ್ಪಿಸಬೇಕು. ಆ ಮೂಲಕ ಒಕ್ಕಲಿಗ ಸಮುದಾಯದ ನಾಯಕತ್ವವನ್ನು ಚಿಗುರಿನಲ್ಲಿಯೇ ಎಡಗಾಲಿನಿಂದ ಹೊಸಕಿ ಹಾಕಬೇಕು ಎನ್ನುವುದು ಎರಡು ವಿಭಿನ್ನ ಜಾತಿಗಳ ಪ್ರಯತ್ನ ಶುರುವಾಗಿತ್ತು. ಅದಕ್ಕಾಗೇ ಆ ಎರಡು ವಿಭಿನ್ನ ಜಾತಿಯ ವ್ಯಕ್ತಿಗಳ ತಂಡ ಸೇರಿಕೊಂಡು ಒಂದು ವ್ಯವಸ್ಥಿತವಾದ ಪ್ಲಾನ್ ಮಾಡಲಾಯಿತು. ಹಾಲಿ ಶಾಸಕ ಮಠಂದೂರು ಅವರನ್ನು ಬದಿಗಿರಿಸಿ ಬೇರೆ ವ್ಯಕ್ತಿಗೆ ಟಿಕೆಟ್ ನೀಡಲಾಗುತ್ತದೆ, ನೀಡಬೇಕು ಎಂದು ಯಾವಾಗ ಕೆಲ ಪ್ರಾಯೋಜಿತ ಬೇಡಿಕೆಗಳು ಬರಲಾರಂಭಿಸಿದವೋ, ಆಗ ಸಹಜವಾಗಿ ಒಕ್ಕಲಿಗರ ಸಂಘಗಳು ಎಚ್ಚೆತ್ತುಕೊಂಡಿವೆ. ‘ ನಾವು ಜನಸಂಖ್ಯೆಯಲ್ಲಿ ಇಡೀ ಜಿಲ್ಲೆಯಲ್ಲಿ ಮೊದಲನೆಯ /ದ್ವಿತೀಯ ಸ್ಥಾನದಲ್ಲಿದ್ದೇವೆ. ಪುತ್ತೂರು ಸುಳ್ಯದಲ್ಲಿ ನಮ್ಮದೇ ಬಾಹುಳ್ಯ. ಇಡೀ ಜಿಲ್ಲೆಯಲ್ಲಿ ಇರುವ 8 ಸ್ಥಾನಗಳಲ್ಲಿ ನಮಗೆ ಒಂದಾದರೂ ಪ್ರಾತಿನಿಧ್ಯ ಕೊಡಿ. ಹಾಗಾಗಿ ಗೆಲ್ಲುವ ಅಭ್ಯರ್ಥಿಯಾದ ಪುತ್ತೂರಿನ ಹಾಲಿ ಶಾಸಕರಿಗೆ ಟಿಕೆಟ್ ನೀಡಿ. ನಮಗೆ ಸಹಾಯ ಮಾಡಿ’ ಎಂಬ ಬೇಡಿಕೆಯ ಜತೆ ಸ್ವಾಮೀಜಿಯ ಬಳಿ ನಿಯೋಗವೊಂದು ತೆರಳಿತ್ತು. ಇಂತಹಾ ಬೇಡಿಕೆಗಳು ಈ ದಿನಮಾನದ ರಾಜಕೀಯ ಪರಿಸ್ಥಿತಿಗಳಲ್ಲಿ ಮಾಮೂಲು. ಎಲ್ಲಾ ಜಾತಿಗೂ ಆಯಾ ಜಾತಿಯ ಸ್ವಾಮೀಜಿಗಳು ಇದ್ದಾರೆ. ಅವರುಗಳು ತಮ್ಮವರ ಪರ ಸಹಾಯಕ್ಕೆ ಧಾವಿಸುವುದು ಎಲ್ಲಾ ಸಮುದಾಯಗಳಲ್ಲೂ ನಡೆಯುತ್ತಿದೆ. ಆಗ ಶುರುವಾಯ್ತು ‘ ಆಯೆ ಗೌಡೆಯಾ, ಆಕುಳು ಜಾತಿ ರಾಜಕೀಯ ಮಲ್ಪುವೆರ್ ‘ ಅನ್ನುವ ಕೂಗು!
ಅವತ್ತು ಇನ್ನೇನು ನಿಯೋಗ ಸ್ವಾಮೀಜಿಯ ಬಳಿ ತೆರಳಿದ ತಕ್ಷಣ ಕೇವಲ ಒಂದು ಗಂಟೆಯ ಒಳಗೆ ಎಡಿಟ್ ಮಾಡಲಾದ ಫೋಟೊಗಳನ್ನು ಹರಿಯಬಿಡಲಾಯಿತು. ಅದಕ್ಕೆ ‘ ಕೊಂಬು ‘ ಊದುವ ಮಾಧ್ಯಮವೊಂದು ಸಹಾಯ ಮಾಡಿದ ವಿಷ್ಯ ಈಗ ಗುಟ್ಟಾಗಿ ಉಳಿದಿಲ್ಲ.
ಪುತ್ತೂರು ಶಾಸಕರ ವೈಯಕ್ತಿಕ ತೇಜೋವಧೆ ನಡೆಸಲು ಪ್ರಯತ್ನಿಸಿದ್ದು ಕೂಡಾ ಆ ಸಂಚಿನ ಒಂದು ಭಾಗವೇ ! ಆ ಮೂಲಕ ಯಾವುದೇ ಕಾರಣಕ್ಕೂ ಅವರಿಗೆ ಟಿಕೆಟ್ ದೊರೆಯಬಾರದು ಎನ್ನುವುದು ದೊಡ್ಡ ಮುಂಡಾಸಿನವರ ಪ್ಲಾನ್. ಅದರ ಹಿಂದೆ ಇದ್ದುದು ಕೂಡಾ ಸ್ವಜಾತಿ ರಾಜಕೀಯವೇ !
ಇದೆಲ್ಲ ಜಾತಿವಾದಿ ಲೀಡರ್ ಗಳ ನಡೆ ಅಂತ ಸುಮ್ಮನಾಗಿ ಬಿಡಬಹುದಿತ್ತು. ಆದರೆ, ತಾಲೂಕು ಮಟ್ಟದಲ್ಲಿ ಮತ್ತು ಜಿಲ್ಲಾಮಟ್ಟದಲ್ಲಿ, ಅಲ್ಲದೆ, ರಾಜ್ಯಮಟ್ಟದಲ್ಲಿ ಕೂಡ ಪಕ್ಷದ ಕಾರ್ಯಕರ್ತರ ಮತ್ತು ಪದಾಧಿಕಾರಿಗಳ ಬೆಂಬಲ ಇದ್ದರೂ ಕೊನೆಯ ಕ್ಷಣದಲ್ಲಿ ಮಠಂದೂರು ಅವರು ಟಿಕೆಟ್ ವಂಚಿತರಾದದ್ದು ಹೇಗೆ ? ಸಂಜೀವ ಮಠಂದೂರು ಅವರ ಪರವಾಗಿ ಕಾರ್ಯಕರ್ತರು ಧನಾತ್ಮಕ ಅಭಿಪ್ರಾಯವನ್ನೇ ಹೈಕಮಾಂಡಿಗೆ ನೀಡಿದ್ದರು. ಬಿಜೆಪಿ ಶಕ್ತಿ ಕೇಂದ್ರದ 112 ಜನರಲ್ಲಿ 102 ಜನರ ಬೆಂಬಲ ಸಂಜೀವರಿಗೆ ಸಿಕ್ಕಿತ್ತು. ಇತ್ತೀಚೆಗೆ ನಡೆದ ಆಂತರಿಕ ಸಮೀಕ್ಷೆಯಲ್ಲೂ ಕೂಡ ಸಂಜೀವ ಮಠಂದೂರು ಪರವಾಗಿಯೇ ಅಭಿಪ್ರಾಯ ಸಂಗ್ರಹವಾಗಿತ್ತು. ಮಂಗಳೂರಿನಲ್ಲಿ ನಡೆದ ಸಭೆಯಲ್ಲೂ ಮುಖಂಡರು, ಕಾರ್ಯಕರ್ತರು ಮಠಂದೂರು ಪರವಾಗಿಯೇ ಮತ ಚಲಾಯಿಸಿದ್ದರು. ಸಮುದಾಯದ ಪ್ರಮುಖರು ಮಠಂದೂರು ಪರವಾಗಿಯೇ ನಿಂತಿದ್ದರು. ಆದರೂ ಬಿಜೆಪಿ ಹೈಕಮಾಂಡ್ ಟಿಕೇಟ್ ನಿರಾಕರಣೆ ಮಾಡಿ, ಕಾರ್ಯಕರ್ತರ ಶ್ರಮವನ್ನು ಕಡೆಗಣಿಸಿದೆ. ಬಿಜೆಪಿ ಕಾರ್ಯಕರ್ತರ ಪಕ್ಷ ಎನ್ನುವುದು ಮಾತಿಗೆ ಮಾತ್ರ ಎಂಬಂತಾಗಿದೆ. ಕಾರ್ಯದಲ್ಲಿ ಮಾತ್ರ ಇದನ್ನು ಅನುಷ್ಠಾನಕ್ಕೆ ತರುತ್ತಿಲ್ಲ. ಇಲ್ಲಿ ಕಾರ್ಯಕರ್ತರ ಅಭಿಪ್ರಾಯಕ್ಕೆ, ಭಾವನೆಗೆ ಬೆಲೆಯೇ ಇಲ್ಲವಾಗಿದೆ ಎಂದು ಹಲವು ಶಕ್ತಿ ಕೇಂದ್ರದ ನಾಯಕರುಗಳೇ ಬೇಸರ ತೋಡಿಕೊಂಡಿದ್ದಾರೆ. ಎಲ್ಲಿಯೋ ಕೂತ ವ್ಯಕ್ತಿಯೊಬ್ಬ ತನ್ನ ಮನಸೋ ಇಚ್ಛೆ ಟಿಕೆಟ್ ಹರಿದು ಕೊಟ್ಟಿದ್ದಾರೆ. ಇಲ್ಲದೆ ಹೋದರೆ, ಕೊನೆಯ ಕ್ಷಣದವರೆಗೂ ಅಭ್ಯರ್ಥಿ ತನದ ರೇಸಿನಲ್ಲಿಯೇ ಇರದ ಆಶಾ ತಿಮ್ಮಪ್ಪ ಗೌಡರು ‘ ಅಚ್ಚರಿಯ ಅಭ್ಯರ್ಥಿ ‘ ಆದದ್ದು ಹೇಗೆ ?
ಇವತ್ತು ಪುತ್ತೂರಿನಲ್ಲಿ ಬಹುಸಂಖ್ಯಾತ ಒಕ್ಕಲಿಗರಿಗೆ ಟಿಕೆಟ್ ನೀಡಬೇಕಾದ ಅನಿವಾರ್ಯತೆ ಇದೆ. ಯಾಕೆಂದರೆ ಇಡೀ ದಕ್ಷಿಣ ಕನ್ನಡದಲ್ಲಿ ಬಹು ಸಂಖ್ಯಾತರಾಗಿರುವ ಒಕ್ಕಲಿಗರಿಗೆ ಬೇರೆ ಯಾವ ಕ್ಷೇತ್ರದಲ್ಲೂ ಪ್ರಾತಿನಿಧ್ಯವಿಲ್ಲ. ಹಾಗಾಗಿ, ಅತ್ತ ಯಾರಾದರೊಬ್ಬ ಒಕ್ಕಲಿಗರಿಗೆ ಸೀಟು ನೀಡಬೇಕು, ಆದರೆ ಆತ/ ಆಕೆ ಗೆಲ್ಲುವ ಅಭ್ಯರ್ಥಿ ಆಗಿರಬಾರದು. ಮಠಂದೂರು ಅವರಂತಹ ಕೆಲಸಗಾರ ಇದ್ದರೆ, ಈ ಬಾರಿ ಮಂತ್ರಿ ಆಗಿ ಬಿಡ್ತಾರೆ. ಹಾಗಾಗಿ ಹೇಗಾದರೂ ಸರಿ ಅವರನ್ನು ಟಿಕೆಟ್ ಹಂಚಿಕೆಯ ಸಂದರ್ಭದಲ್ಲಿಯೆ ಕಟ್ಟಿ ಹಾಕಬೇಕು. ಓಡಬಲ್ಲ ಕುದುರೆಯ ಬದಲಿಗೆ ಓರ್ವ ಬಲಿಪಶುವನ್ನು ಹುಡುಕಬೇಕು. ಅದು ಗೆಲ್ಲಲಿ ಅಂತಲ್ಲ, ಕೇವಲ ಕಣ್ಣೊರೆಸುವ ತಂತ್ರ. ಇಂತಹ ಹುಡುಕಾಟದಲ್ಲಿ ಸಿಕ್ಕಿದವರು ಆಶಾ ತಿಮ್ಮಪ್ಪ ಗೌಡ ಎಂಬ ಪಾಪದ ಮಹಿಳೆ !
ಆಶಾ ತಿಮ್ಮಪ್ಪ ಗೌಡರು ಮಾಜಿ ಜಿಲ್ಲಾಪಂಚಾಯತ್ ಅಧ್ಯಕ್ಷೆ. ಮೂಲತಃ ಒಳ್ಳೆಯವರು. ಆದರೆ ಶಾಸಕಿಯಾಗಿ ನಿರ್ವಹಿಸಬೇಕಾದ ಜವಾಬ್ದಾರಿಯ ಅನುಭವದ ತೀವ್ರ ಕೊರತೆ ಇದೆ. 69 ವರ್ಷ ವಯಸ್ಸಿನ ಆಕೆಯ ಆಯ್ಕೆ ಎಲ್ಲರಿಗೂ ಅಚ್ಚರಿ ತಂದಿದೆ. ಒಟ್ಟಾರೆಯಾಗಿ ಪುತ್ತೂರಿನಲ್ಲಿ ಬಿಜೆಪಿಯು ದುರ್ಬಲ ಅಭ್ಯರ್ಥಿಯನ್ನು ಬೇಕೆಂದೇ ಕಣಕ್ಕೆ ಇಳಿಸಿದೆ. ಆ ಮೂಲಕ ಒಕ್ಕಲಿಗ ನಾಯಕರು ಬೆಳೆಯದಂತೆ ಮಾಡಿದ ದೊಡ್ಡ ಹುನ್ನಾರಕ್ಕೆ ಈಗ ಜಯ ಸಿಕ್ಕಿದೆ. ಹೀಗೆ ಈ ಬಾರಿ ಒಕ್ಕಲಿಗರನ್ನು ನಿಲ್ಲಿಸಿ ಪುತ್ತೂರಿನಲ್ಲಿ ಸೋಲಿಸುವುದು ‘ ಬ್ರಿಲಿಯಂಟ್ ‘ ತಲೆಗಳ ಪ್ಲಾನ್. ಬರುವ ಸಲ, ಬಲಿಷ್ಠ ಅಭ್ಯರ್ಥಿ ಇಲ್ಲ ಎನ್ನುವ ಕಾರಣ ಕೊಟ್ಟು ಬ್ರಾಹ್ಮಣ ಸಮುದಾಯದ ನಾಯಕತ್ವವನ್ನು ಪುತ್ತೂರಿನಲ್ಲಿ ಸ್ಥಾಪಿಸುವುದು ಸಮುದಾಯದ ಕೆಲವರ ಪ್ರಯತ್ನ. ಅದಕ್ಕೆ ‘ ಕೊಂಬು ‘ ಊದುವ ಮಾಧ್ಯಮವೊಂದು ಸಕಲ ಸಹಾಯ ಮಾಡಿದೆ.
‘ ಅಲ್ಲದೆ, ಬೆಳ್ತಂಗಡಿ ತಾಲೂಕಿನಲ್ಲಿ ಒಕ್ಕಲಿಗ ಸಮುದಾಯ ಹಲವು ದಶಕಗಳ ಕಾಲ ಬಿಜೆಪಿಯನ್ನು ಬೆಂಬಲಿಸಿಕೊಂಡು ಬಂದಿದೆ. ಆದರೂ ಒಕ್ಕಲಿಗರಿಗೆ ಅಲ್ಲಿ ಪ್ರಾತಿನಿಧ್ಯ ನೀಡಲಾಗಿಲ್ಲ. ಆದರೂ ಒಕ್ಕಲಿಗರು ಬಿಜೆಪಿಯನ್ನು, ಜಾತಿ ಭೇದ ನೋಡದೆ ಬೆಂಬಲಿಸಿಕೊಂಡು ಬಂದಿದ್ದಾರೆ. ಯಾವತ್ತೂ ನಮಗೆ ಸೀಟು ಕೊಡಿ ಎಂದು ಅಲ್ಲಿ ಒಕ್ಕಲಿಗರು ಕೇಳಿಲ್ಲ. ಅಷ್ಟಾದರೂ, ಇವತ್ತು ಬೆಳ್ತಂಗಡಿಯಲ್ಲಿ ಕೂಡ ಒಕ್ಕಲಿಗರನ್ನು ಚುನಾವಣೆ ಬಂದಾಗ ಬಳಸಿಕೊಂಡು ಉಳಿದ ಸಂದರ್ಭಗಳಲ್ಲಿ ಮೂಲೆಗುಂಪು ಮಾಡಲಾಗುತ್ತಿದೆ ‘ ಎಂದು ಸಮುದಾಯದ ನಾಯಕರೊಬ್ಬರು ತಮ್ಮ ನೋವು ತೋಡಿಕೊಂಡಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳಿಂದ ಪುತ್ತೂರು, ಸುಳ್ಯ ಬೆಳ್ತಂಗಡಿ ತಾಲೂಕಿನ ಒಕ್ಕಲಿಗ ಮುಖಂಡರುಗಳು ಕೆರಳಿದ್ದಾರೆ. ಅದು ಹೊಸ ರಾಜಕೀಯ ಸಮೀಕರಣಕ್ಕೆ ದಾರಿಯಾಗುತ್ತದೆ. ಒಕ್ಕಲಿಗ ಸಮುದಾಯದ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಿದ್ದವಾಗುತ್ತಿದೆ. ಈ ಮೂರೂ ತಾಲೂಕುಗಳಲ್ಲಿ ಬಿಜೆಪಿಯನ್ನು ಅಡ್ಡಡ್ಡ ಮಲಗಿಸುವ ಸಾಧ್ಯತೆ ದಟ್ಟವಾಗಿದೆ.
” ಸೈಯಡ್, ಈ ಸರ್ತಿ ಎಂಕಲೋ ಒಯಿಟ್ಲಾ ಇಜ್ಜಿ. ಹೈಕಮಾಂಡ್ ಫೀಲ್ಡ್ ಮಲ್ಪಡ್ “,’ ಇಲ್ಲೆಯಾ, ನಾ ಈ ಸಾರಿ ಫೀಲ್ಡ್ ಗೆ ಬಾಕಿಲ್ಲೆಯಾ’ ಮುಂತಾದ ವಾಕ್ಯಗಳು ಗ್ರಾಮದ ಹುಡುಗರ ಬಾಯಿಂದ ಬರುತ್ತಿವೆ. ತಂತ್ರಗಾರಿಕೆ ಶುರುವಾಗಿದೆ. ಯಾರೇ ಇರಲಿ, ವಿನಾಕಾರಣದ ಷಡ್ಯಂತ್ರಕ್ಕೆ ಒಳಗಾಗಿ ಕೆರಳಿ ನಿಂತರೆ ಏನಾಗಬಹುದೋ, ಅದೀಗ ಆಗುತ್ತಿದೆ.