Sumalatha Mandya BJP candidate: ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಕಣಕ್ಕಿಳಿಸಲು ಕೇಸರಿ ಪಾಳಯ ಮಾಸ್ಟರ್ ಪ್ಲಾನ್ !
Sumalatha Mandya BJP candidate :ಮೈಸೂರು ಕರ್ನಾಟಕದ (Mysore Karnataka) ಅದರಲ್ಲೂ ಜೆಡಿಎಸ್ ಭದ್ರಕೋಟೆ ಎಂದೇ ಪರಿಗಣಿಸಲಾಗಿರುವ ಮಂಡ್ಯ ಜಿಲ್ಲೆಯನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಶತಾಯಗತಾಯ ಗೆಲ್ಲಬೇಕು ಎಂದುಕೊಂಡಿರುವ ಬಿಜೆಪಿ, ಸಂಸದೆ ಸುಮಲತಾ ಅಂಬರೀಶ್(Sumalatha Mandya BJP candidate) ಅವರನ್ನು ಮುಂಬರುವ ವಿಧಾನಸಭೆ ಚುನಾವಣೆಗೂ ಮುನ್ನ ರಾಜ್ಯ ರಾಜಕಾರಣಕ್ಕೆ ಕರೆತರಲು ಚಿಂತನೆ ನಡೆಸಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಮಂಡ್ಯ ವಿಧಾನಸಭಾ ಕ್ಷೇತ್ರದಿಂದ (Mandya Vidhansabha Constituency) ಸುಮಲತಾ ಅವರನ್ನು ಕಣಕ್ಕಿಳಿಸಲು ಕೇಸರಿ ಪಕ್ಷ ಬಿಜೆಪಿ ಆಂತರಿಕ ಗೇಮ್ ಪ್ಲಾನ್ ಮಾಡಿದೆ ಎನ್ನಲಾಗಿದೆ. ಮೇ 10 ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸುವುದು ಮಾತ್ರವಲ್ಲದೆ, ಜಿಲ್ಲೆಯ ಇತರ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಟಾರ್ ಪ್ರಚಾರಕಿಯಾಗಿಯೂ ಕೆಲಸ ಮಾಡಲಿದ್ದಾರೆ ಎನ್ನಲಾಗಿದೆ. ಸುಮಲತಾ ಅವರು ಇತ್ತೀಚೆಗೆ ಮೋದಿಗೆ ಮತ್ತು ಬಿಜೆಪಿಗೆ ಬೆಂಬಲ ಸೂಚಿಸಿದ್ದರು.
ಮಂಡ್ಯ ಜಿಲ್ಲೆಯಲ್ಲಿ ( Mandya Politics) ಒಟ್ಟು 7 ಜನ ಎಂಎಲ್ಎಗಳು ಇದ್ದಾರೆ. ಮದ್ದೂರು, ಮಳವಳ್ಳಿ, ಮಂಡ್ಯ, ನಾಗಮಂಗಲ, ಮೇಲುಕೋಟೆ, ಕೃಷ್ಣರಾಜಪೇಟೆ ಮತ್ತು ಶ್ರೀರಂಗಪಟ್ಟಣ ಈ ಆರು ವಿಧಾನಸಭಾ ಕ್ಷೇತ್ರಗಳಲ್ಲಿ 6 ರಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಒಬ್ಬರು ಬಿಜೆಪಿ ಶಾಸಕರಿದ್ದಾರೆ.
ಮದ್ದೂರು ಕ್ಷೇತ್ರದಲ್ಲಿ ಡಿಸಿ ತಮ್ಮಣ್ಣನವರು, ಮಳವಳ್ಳಿಯಲ್ಲಿ ಕೆ ಅನ್ನದಾನಿಯವರು, ಮಂಡ್ಯದಲ್ಲಿ ಕೆ. ಶ್ರೀನಿವಾಸ, ನಾಗಮಂಗಲದಲ್ಲಿ ಸುರೇಶ್ ಗೌಡ ಕೆ, ಮೇಲುಕೋಟೆಯಲ್ಲಿ ಸಿ ಎಸ್ ಪುಟ್ಟರಾಜು, ಶ್ರೀರಂಗಪಟ್ಟಣದಲ್ಲಿ ಶ್ರೀಕಂಠಯ್ಯ ಹೇಗೆ ಆರು ಜನರು ಜೆಡಿಎಸ್ ಶಾಸಕರು. ಏಳನೆಯ ಶಾಸಕರು, ನಾರಾಯಣಗೌಡರು 2018 ರ ಚುನಾವಣೆಯಲ್ಲಿ ಜೆಡಿಎಸ್ನಿಂದ ಆಯ್ಕೆಯಾಗಿ ಬಂದಿದ್ದರು. ಆನಂತರ ಅವರು ಜೆಡಿಎಸ್ ಗೆ ವಿದಾಯ ಹೇಳಿ ಬಿಜೆಪಿ ಸೇರಿ 2019ರಲ್ಲಿ ಬಿಜೆಪಿಯ ಟಿಕೆಟ್ ನೊಂದಿಗೆ ಉಪಚುನಾವಣೆ ಎದುರಿಸಿದ್ದರು.
ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ಬಿ ಎಲ್ ದೇವರಾಜು ಅವರ ವಿರುದ್ಧ 10,000 ಮತಗಳ ಅಂತರದಿಂದ ಗೆದ್ದು ಬೀಗಿದ್ದರು. ಆವಾಗ ಜೆಡಿಎಸ್ ಪ್ರಾಬಲ್ಯದ ಮಂಡ್ಯದಲ್ಲಿ ಎರಡನೆಯ ಬಾರಿಗೆ ದಳಪತಿಗಳಿಗೆ ಕನಲಿಕೆ ಉಂಟಾಗಿತ್ತು. ಅದಕ್ಕೂ ಮೊದಲು ನಡೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಏಳಕ್ಕೆ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರನ್ನು ಇಟ್ಟುಕೊಂಡು ಜೆಡಿಎಸ್ ಗೆ ಯುದ್ಧ ಗೆಲ್ಲಲಾಗಲಿಲ್ಲ. ಮಂಡ್ಯದ ಲೋಕಸಭಾ ಸ್ಥಾನವನ್ನು ಅಂಬರೀಶ್ ಅವರ ಧರ್ಮಪತ್ತಿ ಸುಮಲತಾ ಅವರು ಬಿಜೆಪಿಯ ಬೆಂಬಲದೊಂದಿಗೆ ಗೆದ್ದುಕೊಂಡಿದ್ದರು.
2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದರು. ಅವರ ಉಮೇದುವಾರಿಕೆಗೆ ಕೇಸರಿ ಪಕ್ಷ ಬೆಂಬಲ ಘೋಷಿಸಿತ್ತು. 2019 ರ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸಿದರು. ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು ಸುಮಲತಾ ಅಂಬರೀಶ್.
ಮಂಡ್ಯ ಮೈಸೂರು ಸೇರಿದಂತೆ 57 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮುನ್ನಡೆ ಸೂಚಿಸಿದ್ದಾರೆ. ಈ ಭಾಗದಿಂದ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಆಕಾಂಕ್ಷೆಯನ್ನು ಬಿಜೆಪಿ ಹೊಂದಿದ್ದು, ಶತಾಯಗತಾಯ ಅಷ್ಟು ಸೀಟುಗಳನ್ನು ಪಡೆದೆ ತೀರಬೇಕೆಂದು ಅಮಿತ್ ಶಾ ಅವರು ಕಟ್ಟಪ್ಪಣೆ ವಿಧಿಸಿದ್ದಾರೆ ಎನ್ನಲಾಗಿದೆ.
ಸುಮಲತಾ ಅಂಬರೀಶ್ ಎಂಬ ಮೆದು ಮಾತಿನ ಚಾಣಾಕ್ಷ ಹೆಣ್ಣು ಮಗಳಿಗೆ ಏನು ಮಾತಾಡದೆ ಜನರನ್ನು ಮೋಡಿ ಮಾಡುವ ಕಲೆ ಸಿದ್ಧಿಗೊಂಡಿದೆ. ಅವರ ಆಗಮನದಿಂದ ದಕ್ಷಿಣದ ಜಿಲ್ಲೆಗಳ ಒಟ್ಟಾರೆ ಲೆಕ್ಕಾಚಾರವೇ ಬದಲಾಗುವ ನಿರೀಕ್ಷೆ ಇದೆ. ಬಿಜೆಪಿ ಆಲೋಚನೆ ನಡೆಸಿದಂತೆ ನಡೆದರೆ ಜೆಡಿಎಸ್ ಬಕ್ಕಾ ಬೋರಲು ಬೀಳಲಿದೆ. ಸಂಸದೆ ಸುಮಲತಾರ ಪ್ರಚಾರ ಒಕ್ಕಲಿಗ ಮತಬ್ಯಾಂಕ್ ಅನ್ನು ಒಡೆದು ಬಿಜೆಪಿಯತ್ತ ತಂದು ಕ್ರೋಢೀಕರಿಸಲು ಸಹಕಾರಿಯಾಗಲಿದೆ.
ಮೇಡಂ ಸುಮಲತಾರನ್ನು ಒಕ್ಕಲಿಗರ ಸ್ವಘೋಷಿತ ನಾಯಕರ ತಾವು.ಎನ್ನಲಾಗುತ್ತಿರುವ ಜೆಡಿಎಸ್ ನ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಬಿಜೆಪಿಯ ಒಕ್ಕಲಿಗ ಪ್ರತಿನಿಧಿಯನ್ನಾಗಿ ಬಿಂಬಿಸಲು ಕೇಸರಿ ಪಕ್ಷ ತುದಿಗಾಲಿನಲ್ಲಿ ನಿಂತಿದೆ. ಕ್ಷಣ ಕ್ಷಣಕ್ಕೂ ಹೊಸ ರಾಜಕೀಯ ಬೆಳವಣಿಗಳು ನಡೆಯುತ್ತಿವೆ. ಮತ್ತೊಂದು ರಣ ಘೋರ ಕದನಕ್ಕೆ ಇಡೀ ಮಂಡ್ಯ ಜಿಲ್ಲೆ ಸಾಕ್ಷಿ ಆಗಲಿದೆ.