Tirumala Tirupati: ತಿರುಪತಿಗೆ ವಂದೇ ಭಾರತ್‌ ರೈಲು ಸಂಚಾರ ; ಸಂಪೂರ್ಣ ಮಾಹಿತಿ ಇಲ್ಲಿದೆ

Tirumala Tirupati: ತಿರುಪತಿಗೆ (Tirumala Tirupati) ವಂದೇ ಭಾರತ್‌ ರೈಲು ಆಗಮನವಾಗಲಿದೆ. ಹೌದು, ಭಾರತೀಯ ರೈಲ್ವೆಯು (Indian railway) ಸಿಕಂದರಾಬಾದ್ ಮತ್ತು ತಿರುಪತಿ ನಡುವೆ ವಂದೇ ಭಾರತ್‌ ರೈಲನ್ನು ಓಡಿಸಲು ಯೋಜನೆ ರೂಪಿಸಿದೆ. ಈ ರೈಲು (train) ಎಲ್ಲಿಂದ? ಯಾವಾಗ ಆರಂಭ? ಸಂಪೂರ್ಣ ಮಾಹಿತಿ ಇಲ್ಲಿದೆ.

ದಕ್ಷಿಣ ಮಧ್ಯ ರೈಲ್ವೆಯ (SCR ) ಮೂಲಗಳ ಪ್ರಕಾರ, ಸಿಕಂದರಾಬಾದ್‌ನಿಂದ ತಿರುಪತಿಗೆ ಸಂಚರಿಸಲಿರುವ ವಂದೇ ಭಾರತ್ ರೈಲು ಬೀಬಿನಗರ ಮತ್ತು ಗುಂಟೂರು ಮೂಲಕ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ವಂದೇ ಭಾರತ್ ರೈಲು ವಿಜಯವಾಡದ ಮೂಲಕ ಸಂಚರಿಸುತ್ತಿದ್ದು, ಇದು ಖಮ್ಮಂ ಮತ್ತು ವಾರಂಗಲ್ ಅನ್ನು ಒಳಗೊಂಡಿದೆ. ಹಾಗಾಗಿ, ನಲ್ಗೊಂಡ ಮತ್ತು ಗುಂಟೂರಿನ ಪ್ರಯಾಣಿಕರಿಗೆ ಸಿಕಂದರಾಬ್‌ ಹಾಗೂ ತಿರುಪತಿಗೆ ಸಂಪರ್ಕವನ್ನು ಒದಗಿಸಲು ಭಾರತೀಯ ರೈಲ್ವೆ ಯೋಜನೆ ರೂಪಿಸಿದೆ.

ತಿರುಪತಿಗೆ (tirupati) ವಂದೇ ಭಾರತ್ ರೈಲನ್ನು ಬಿಡುಗಡೆ ಮಾಡಲು ಪ್ರಯಾಣಿಕರಿಂದ ಭಾರಿ ಬೇಡಿಕೆ ಬಂದಿದ್ದು, ಪ್ರತಿ ದಿನ ಸಾವಿರಾರು ಭಕ್ತರು ಹಲವಾರು ರೈಲುಗಳ ಮೂಲಕ ತಿರುಮಲಕ್ಕೆ ಪ್ರಯಾಣಿಸುತ್ತಾರೆ. ಸದ್ಯ ಈ ಸೌಲಭ್ಯ ಹೈದರಾಬಾದ್‌- ಸಿಕಂದರಾಬಾದ್‌ ನಿಂದ ತಿರುಮಲಕ್ಕೆ ಭೇಟಿ ನೀಡುವ ಸಾವಿರಾರು ಭಕ್ತರಿಗೆ ಸಹಕಾರಿಯಾಗಲಿದೆ.

ರೈಲುಗಳು ಪ್ರಸ್ತುತ ಬೀಬಿನಗರ – ಗುಂಟೂರು ವಿಭಾಗದಲ್ಲಿ ಗರಿಷ್ಠ 110 ಕಿಮೀ ವೇಗದಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ವಲಯವು ಈ ವಿಭಾಗವನ್ನು ಗರಿಷ್ಠ 130 ಕಿಮೀ ವೇಗಕ್ಕೆ ಅಪ್‌ಗ್ರೇಡ್ ಮಾಡಬೇಕಿದೆ. ಇತರ ವಿಭಾಗಗಳಾದ ಸಿಕಂದರಾಬಾದ್- ಬೀಬಿನಗರ ಮತ್ತು ಗುಂಟೂರು- ಗುಡೂರ್ ಅನ್ನು ಮೇಲ್ದರ್ಜೆಗೇರಿಸಲಾಗಿದೆ. ತಿರುಪತಿಗೆ ವಂದೇ ಭಾರತ ರೈಲನ್ನು ಅನುಮೋದಿಸಿದ ನಂತರ, ರೈಲ್ವೆಯು ಬೀಬಿನಗರ – ಗುಂಟೂರು ವಿಭಾಗವನ್ನು ಸಹ ನವೀಕರಿಸುತ್ತದೆ ಎನ್ನಲಾಗಿದೆ.

ಸದ್ಯ, ಲಿಂಗಂಪಲ್ಲಿ – ತಿರುಪತಿ ನಾರಾಯಣಾದ್ರಿ ಎಕ್ಸ್‌ಪ್ರೆಸ್‌ ಮತ್ತು
ಸಿಕಂದರಾಬಾದ್ – ತಿರುವನಂತಪುರ ಶಬರಿ ಎಕ್ಸ್‌ಪ್ರೆಸ್ ಗುಂಟೂರು ಮೂಲಕ ತಿರುಪತಿಗೆ ಕಾರ್ಯನಿರ್ವಹಿಸುತ್ತಿವೆ. ಈ ಪ್ರಯಾಣ 12 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಯಾಣದ ಸಮಯವನ್ನು ಒಂಬತ್ತು ಗಂಟೆಗಳಿಗಿಂತ ಕಡಿಮೆಗೊಳಿಸುತ್ತದೆ. ಸಿಕಂದರಾಬಾದ್ – ತಿರುಪತಿ ವಂದೇ ಭಾರತ್‌ಗೆ ನಲ್ಗೊಂಡ, ಓಂಗೋಲ್, ನೆಲ್ಲೂರು, ಗುಂಟೂರು ಮತ್ತು ಗುಡೂರಿನಲ್ಲಿ ಎರಡೂ ದಿಕ್ಕುಗಳಲ್ಲಿ ನಿಲುಗಡೆಯಾಗುವ ಸಾಧ್ಯತೆಯಿದೆ.

ಪ್ರಧಾನಿ ನರೇಂದ್ರ ಮೋದಿ (narendra modi) ಏಪ್ರಿಲ್ 8 ರಂದು ಹೈದರಾಬಾದ್‌ಗೆ (Hyderabad) ಭೇಟಿ ನೀಡುವ ನಿರೀಕ್ಷೆಯಿದ್ದು, 700 ಕೋಟಿ ವೆಚ್ಚದ ಸಿಕಂದರಾಬಾದ್ ರೈಲು ನಿಲ್ದಾಣದ ಮರು ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಿದ್ದಾರೆ. ಸಿಕಂದರಾಬಾದ್‌ನಿಂದ ತಿರುಪತಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಲಿದ್ದಾರೆ ಎಂದು ಹೇಳಲಾಗಿದೆ.

Leave A Reply

Your email address will not be published.