Anurag Thakur : ರಾಹುಲ್ ಗಾಂಧಿಯವರೇ, ಕನಸಿನಲ್ಲೂ ನೀವು ವೀರ್ ಸಾವರ್ಕರ್ ಆಗಲು ಸಾಧ್ಯವಿಲ್ಲ: ರಾಗಾಗೆ ವಿರುದ್ಧ ಅನುರಾಗ್ ಠಾಕೂರ್ ಟಾಂಗ್

Anurag Thakur :ಸಂಸತ್ತಿನಿಂದ ಅನರ್ಹಗೊಂಡ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ(Rahul Gandhi) ನಾನು ಎಂದಿಗೂ ಕ್ಷಮೆ ಕೇಳೋದಿಲ್ಲ. ಕ್ಷಮೆ ಕೇಳೋದಕ್ಕೆ ನಾನು ಸಾವರ್ಕರ್ ಅಲ್ಲ ಗಾಂಧಿ ವಂಶದವನು ಎಂದು ಹೇಳಿದ್ದು, ಇದಕ್ಕೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಖಾರವಾಗಿಯೇ ಟಕ್ಕರ್ ನೀಡಿದ್ದಾರೆ.

ಹೌದು, ಸಂಸತ್ತಿನಿಂದ ಅನರ್ಹಗೊಂಡ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ ಅವರಿಗೆ ನಿಮ್ಮ ತಪ್ಪಿನ ಕುರಿತು ನೀವು ಕ್ಷಮೆ ಕೇಳುತ್ತೀರಾ? ಎಂದಾಗ ಕ್ಷಮೆ ಕೇಳಲು ನನ್ನ ಹೆಸರು ಸಾವರ್ಕರ್ (Savarkar) ಅಲ್ಲ. ನಾನು ಯಾರಿಗೂ ಕ್ಷಮೆ ಕೇಳಲ್ಲ, ನಾನು ಗಾಂಧಿ ವಂಶದವನು ಎಂದಿದ್ದರು. ಈ ವಿಚಾರವಾಗಿ ಕೇಂದ್ರ ಸಚಿವ ಅನುರಾಗ್ ಠಾಕೂರ್​(Anurag Thakur) ಭಾನುವಾರ ಸಾಲು ಸಾಲು ಟ್ವೀಟ್​ ಮಾಡಿ ‘ಪ್ರೀತಿಯ ಗಾಂಧಿ ಅವರೇ, ನಿಮ್ಮ ಅತ್ಯುತ್ತಮ ಕನಸಿನಲ್ಲಿಯೂ ಸಹ ನೀವು ಸ್ವಾತಂತ್ರ್ಯ ವೀರ್ ಸಾವರ್ಕರ್ ಆಗಲು ಸಾಧ್ಯವಿಲ್ಲ. ಏಕೆಂದರೆ ಸಾವರ್ಕರ್ ಆಗಲು ಬಲವಾದ ಸಂಕಲ್ಪ, ಭಾರತದ ಮೇಲೆ ಪ್ರೀತಿ, ನಿಸ್ವಾರ್ಥತೆ ಮತ್ತು ಬದ್ಧತೆಯ ಅಗತ್ಯವಿದೆ. ಆ ಮೂಲಕ ನಿಮಗೂ ಮತ್ತು ಸಾವರ್ಕರ್​ ಅವರಿಗೆ ಹೋಲಿಕೆ ಸಲ್ಲ’ ಎಂದು ಕಿಡಿಕಾರಿದ್ದಾರೆ.

ಅಲ್ಲದೆ ಠಾಕೂರ್ ಅವರು ಇಂದಿರಾಗಾಂಧಿ ಅವರು ಸಾವರ್ಕರ್​ ಅವರಿಗೆ ಗೌರವಾರ್ಥವಾಗಿ ಬರೆದಿರುವ ಪತ್ರವನ್ನು ನೆನಪಿಸಿದ್ದಾರೆ. ಸಾವರ್ಕರ್​ ಬ್ರಿಟಿಷರ ನೆಲದಲ್ಲಿ ಹೋಗಿ ಭಾರತಿಯರನ್ನು ಗುಲಾಮಗಿರಿಯಿಂದ ಮುಕ್ತಗೊಳಿಸಲು ಹೋರಾಡಿದ್ದಾರೆ. ಆದರೆ ರಾಹುಲ್ ಗಾಂಧಿ ವರ್ಷದ 6 ತಿಂಗಳು ರಜೆಗಾಗಿ ವಿದೇಶಕ್ಕೆ ಹೋಗಿ ದೇಶದ ವಿರುದ್ಧ ವಿದೇಶಿಯರ ಬಳಿ ಸಹಾಯ ಪಡೆಯುತ್ತಾರೆ. ಈ ನಿಟ್ಟಿನಲ್ಲಿ ತಮ್ಮ ಅಜ್ಜಿ ಬರೆದಿರುವ ಪತ್ರವನ್ನು ಓದಬೇಕು. ಇದರಿಂದ ನಿಮ್ಮ ತರ್ಕಕ್ಕೆ ಉತ್ತರ ಸಿಗುತ್ತದೆ ಎಂದು ವಾಗ್ದಾಳಿ ಮಾಡಿದ್ದಾರೆ.

ಅಂದಹಾಗೆ ಇಂದಿರಾ ಗಾಂಧಿ(Indhira Gandhi) ಅವರು 1980ರ ಸಮಯದಲ್ಲಿ ರಾಷ್ಟ್ರೀಯ ಸ್ಮಾರಕದ ಕಾರ್ಯದರ್ಶಿ ಪಂಡಿತ್‌ ಬಖಾಲೆ ಅವರಿಗೆ ಬರೆದ ಪತ್ರದಲ್ಲಿ ಸ್ವಾತಂತ್ರ್ಯ ಚಳವಳಿಗೆ ಸಾವರ್ಕರ್ ಅವರ ಕೊಡುಗೆಯನ್ನು ಉಲ್ಲೇಖಿಸಿದ್ದಾರೆ. ಬ್ರಿಟಿಷ್ ಸರ್ಕಾರದ ವಿರುದ್ಧ ಸಾವರ್ಕರ್ ಅವರ ಪ್ರಬಲ ಪ್ರತಿರೋಧವು ನಮ್ಮ ಸ್ವಾತಂತ್ರ್ಯ ಚಳವಳಿಯಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ ಎಂದು ಇಂದಿರಾ ಅವರು ಉಲ್ಲೇಖಿಸಿದ್ದಾರೆ.

ಸಾವರ್ಕರ್​ ದೇಶಪ್ರೇಮ ಮತ್ತು ಧೈರ್ಯದ ಮುಂದೆ ತಲೆಬಾಗಿದ್ದರು. 19230 ಕಾಕಿನಾಡ ಅಧಿವೇಶನದಲ್ಲಿ ಕಾಂಗ್ರೆಸ್ ಕೂಡ ಸಾವರ್ಕರ್ ಅವರ ಪರವಾಗಿ ನಿರ್ಣಯವನ್ನು ಅಂಗೀಕರಿಸಿತ್ತು. ಭಾರತದ ಸ್ವಾತಂತ್ರ್ಯ ಚಳವಳಿಗೆ ಸಾವರ್ಕರ್ ಅವರ ಕೊಡುಗೆಯ ಸ್ಮರಣಾರ್ಥವಾಗಿ ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ ಅಂಚೆ ಚೀಟಿಯನ್ನು ಸಹ ಬಿಡುಗಡೆ ಮಾಡಿದ್ದರು ಎಂದು ಸಚಿವ ಠಾಕೂರ್ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.