Relieving Period Pain : ಮುಟ್ಟಾದಾಗ ಈ 5 ಪಾನೀಯ ಕುಡಿದರೆ, ನೋವು ನಿವಾರಣೆ ಖಂಡಿತ!
Relieving Period Pain: ಮಹಿಳೆಯರಲ್ಲಿ (Women)ಮುಟ್ಟು (Periods) ನೈಸರ್ಗಿಕ ಕ್ರಿಯೆಯಾಗಿದ್ದು, ಕೆಲವರಿಗಂತೂ ಅತಿ ತ್ರಾಸದಾಯಕ ನೋವು ಉಂಟಾಗುತ್ತದೆ. ಈ ಮುಟ್ಟಿನ ದಿನಗಳಲ್ಲಿ ನೈರ್ಮಲ್ಯ ಕಾಪಾಡುವುದು ಕೂಡ ಅಷ್ಟೇ ಮುಖ್ಯವಾಗಿದ್ದು, ಇಲ್ಲದಿದ್ದರೆ ತುರಿಕೆ, ಸೋಂಕಿನ ಸಮಸ್ಯೆ ಉಂಟಾಗುವುದು. ಋತುಚಕ್ರದ (Menstruation)ಸಮಯದಲ್ಲಿ ಕೆಲವರಿಗೆ ಅತೀವ ರಕ್ತಸ್ರಾವವಾಗುವ, ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ಕಂಡುಬಂದರೆ, ಮತ್ತೆ ಕೆಲವರಿಗೆ ತೀವ್ರ ಮೈಕೈ ನೋವು, ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಮಹಿಳೆಯರೇ ನಿಮಗೇನಾದರೂ ಈ ರೀತಿ ಸಮಸ್ಯೆ ಕಾಡುತ್ತಿದ್ದರೆ ಈ ಸರಳ ಪಾನೀಯಗಳ ಬಳಕೆ ಮಾಡಿ ನೋಡಿ ಪರಿಹಾರ ನೀವೇ ಕಂಡುಕೊಳ್ಳಿ.
ಹೆಚ್ಚಿನ ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ (Menstrual period) ಹೊಟ್ಟೆ ನೋವು, ಮೈ ಕೈ ಸೆಳೆತ, ಮೈ ಕೈ ನೋವು ಕಾಣಿಸಿಕೊಳ್ಳುವ ಜೊತೆಗೆ ಹೆಚ್ಚಿನ ರಕ್ತ ಸ್ರಾವವಾಗುವಾಗ ಸ್ಯಾನಿಟರಿ ಪ್ಯಾಡ್(Sanitary Napkins)ಬಳಸಿದರೂ ಕೂಡ ಆ ಸಮಯದಲ್ಲಿ ಹೆಚ್ಚಿನ ಮಹಿಳೆಯರಿಗೆ ಕಿರಿಕಿರಿ ಉಂಟಾಗುತ್ತದೆ. ಸಾಮಾನ್ಯವಾಗಿ ತಿಂಗಳಿಗೊಮ್ಮೆ ಪೀರಿಯಡ್ಸ್ ನ ಸಮಸ್ಯೆ ಇರುವುದು ಸಹಜವಾಗಿದ್ದು, ಈ ನಾಲ್ಕೈದು ದಿನದ ಈ ನೋವು ಯಾತನೆ ಮಾತ್ರ ಅಸಹನೀಯವಾಗಿರುತ್ತದೆ. ಈ ವೇಳೆ ನೋವು ನಿವಾರಣೆಗೆ ಮಾತ್ರೆಗಳ ಮೊರೆ ಹೋಗುವುದನ್ನು ನೋಡಿರಬಹುದು. ಆದರೆ, ಹೆಚ್ಚಿನ ಮಾತ್ರೆಗಳ ಸೇವನೆ ಕೂಡ ದೇಹದ ಮೇಲೆ ಗಂಭೀರ ಪರಿಣಾಮ ಉಂಟು ಮಾಡಬಹುದು. ಇದರ ಬದಲಿಗೆ ಇದಕ್ಕೆ ಕೆಲವೊಂದು ಸರಳ ಮನೆ ಮದ್ದುಗಳನ್ನು ಮಾಡುವ ಮೂಲಕ ಹೊಟ್ಟೆ ನೋವು, ಮೈ ಕೈ ನೋವಿನಿಂದ ಪರಿಹಾರ ಪಡೆಯಬಹುದು.
ಮುಟ್ಟಿನ ಸಮಯದ ನೋವನ್ನು ನಿವಾರಣೆ (Relieving Period Pain)ಮಾಡುವ 5 ಪಾನೀಯಗಳು ಹೀಗಿವೆ:
ಪುದೀನಾ ಟೀ(Peppermint Tea)
ಪುದೀನಾ ಟೀ ಸೇವನೆಯಿಂದ ಮುಟ್ಟಿನ ಸೆಳೆತ ಕಡಿಮೆಯಾಗುತ್ತದೆ. ಇದನ್ನು ತಯಾರಿಸಲು ತಾಜಾ ಪುದೀನಾ ಎಲೆಗಳನ್ನು ನೀರಿನಲ್ಲಿ ಕುದಿಸಿಕೊಂಡು, ಪುದೀನಾ ಚಹಾವನ್ನು ತಯಾರಿಸಬೇಕು. ಇದನ್ನು ಬಿಸಿ ಬಿಸಿಯಾಗಿ ಮುಟ್ಟಿನ ಸಮಯದಲ್ಲಿ ಕುಡಿಯುವುದರಿಂದ ನೋವಿನ ಸೆಳೆತವನ್ನು ಕಡಿಮೆ ಮಾಡಿಕೊಳ್ಳಬಹುದು.
ಶುಂಠಿ ಟೀ(Ginger Tea)
ಶುಂಠಿಯು ನೈಸರ್ಗಿಕ ಉರಿಯೂತ ವಿರೋಧಿ ಗುಣ ಹೊಂದಿದ್ದು ನೋವು ನಿವಾರಣೆ ಮಾಡುವಲ್ಲಿ ಸಹಕಾರಿಯಾಗಿದೆ. ಇದು ಮುಟ್ಟಿನ ಸಮಯಕ್ಕೆ ಕುಡಿಯುವುದರಿಂದ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಬಹುದು. ಒಂದು ಕಪ್ ಮಸಾಲೆಯುಕ್ತ ಶುಂಠಿ ಚಹಾದೊಂದಿಗೆ ಮುಟ್ಟಿನ ನೋವಿಗೆ ಪರಿಹಾರ ಕಂಡುಕೊಳ್ಳಬಹುದು. ಕುದಿಯುವ ನೀರಿಗೆ ಶುಂಠಿಯ ಕೆಲವು ತೆಳುವಾದ ಹೋಳುಗಳನ್ನು ಸೇರಿಸಬೇಕು. ಇದನ್ನು 5 ನಿಮಿಷಗಳ ಕಾಲ ಕುದಿಯಲು ಬಿಟ್ಟು ನಂತರ ಬಿಸಿ ಬಿಸಿಯಾಗಿ ಟೀ ಸೇವಿಸುವುದರಿಂದ ನೋವು ಕಡಿಮೆಯಾಗುತ್ತದೆ.
ದಾಲ್ಚಿನಿ ಟೀ(Cinnamon Tea)
ದಾಲ್ಚಿನ್ನಿಯು ವಿವಿಧ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಮಸಾಲೆ ಪದಾರ್ಥ ಎಂಬುದು ಹೆಚ್ಚಿನವರಿಗೆ ಗೊತ್ತಿರುವ ವಿಷಯ. ಇದು ಮುಟ್ಟಿನ ಸಮಯದಲ್ಲಿ ಉಂಟಾಗುವ ನೋವನ್ನು ಕಡಿಮೆ ಮಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಒಂದು ದಾಲ್ಚಿನ್ನಿ ತುಂಡು ಮತ್ತು ಒಂದು ಚಿಟಿಕೆ ದಾಲ್ಚಿನ್ನಿ ಪುಡಿಯನ್ನು ನೀರಿನೊಂದಿಗೆ ಬೆರೆಸಿಕೊಂಡು ಈ ಮಿಶ್ರಣವನ್ನೂ ಮಣ್ಣಿನ ಪರಿಮಳ ಬರುವವರೆಗೆ ಸಣ್ಣ ಉರಿಯಲ್ಲಿ ಕುದಿಸಬೇಕು. ಈ ಪ್ರಕ್ರಿಯೆಯ ಬಳಿಕ ನೀರನ್ನು ಸೋಸಿಕೊಂಡು ಅದಕ್ಕೆ ಜೇನುತುಪ್ಪ ಸೇರಿಸಿಕೊಂಡು ಕುಡಿದರೆ ಮುಟ್ಟಿನ ನೋವು ಕಡಿಮೆಯಾಗಿ ದೇಹಕ್ಕೆ ವಿಶ್ರಾಂತಿ ಕೂಡ ದೊರೆಯುತ್ತದೆ.
ಕ್ಯಾಮೊಮೈಲ್ ಟೀ(Chamomile Tea)
ಈ ಕ್ಯಾಮೊಮೈಲ್ ಚಹಾವು ಬ್ರೂ ಹಿಪ್ಪುರೇಟ್ ಮತ್ತು ಗ್ಲೆಸೆಮಿಕ್ನಂತಹ ಸಂಯುಕ್ತಗಳಿಂದ ಕೂಡಿದ್ದು, ಇದು ಸ್ನಾಯು ಸೆಳೆತವನ್ನು ಕಡಿಮೆ ಮಾಡಲು ನೆರವಾಗುತ್ತದೆ. ನೀರನ್ನು ಕುದಿಸಿ, ಅದಕ್ಕೆ ಒಂದು ಟೀ ಚಮಚ ಕ್ಯಾಮೊಮೈಲ್ ಸೇರಿಸಿಕೊಂಡು ಇದನ್ನು ಬಿಸಿ ಬಿಸಿಯಾಗಿ ಕುಡಿಯುವ ಮೂಲಕ ದೇಹಕ್ಕೆ ವಿಶ್ರಾಂತಿಯನ್ನು ಪಡೆದುಕೊಳ್ಳಬಹುದು.
ಹಸಿರು ಸ್ಮೂಥಿಗಳು
ಸ್ವಲ್ಪ ಕಿವಿ ಹಣ್ಣು, ಸೀಯಾಳ, ತಾಜಾ ಪುದೀನಾ ಎಲೆಗಳು ಹಾಗೂ ಕೆಲವು ಶುಂಠಿ ಹೋಳುಗಳನ್ನು ಚೆನ್ನಾಗಿ ಬ್ಲೆಂಡ್ ಮಾಡಿ ಕುಡಿಯುವುದರಿಂದ ಈ ಸ್ಮೂಥಿಯು ಮುಟ್ಟಿನ ನೋವನ್ನು ನಿವಾರಿಸಲು ಸಹಕಾರಿಯಾಗುತ್ತದೆ. ಮುಟ್ಟಿನ ಸಮಯದಲ್ಲಿ ಮಹಿಳೆಯರು ಈ ಮೇಲೆ ತಿಳಿಸಿದ ಪಾನೀಯಗಳನ್ನು ಸೇವನೆ ಮಾಡುವ ಮೂಲಕ ಮೈ ಕೈ ನೋವು, ಬೆನ್ನು ನೋವಿಗೆ ಪರಿಹಾರ ಕಂಡುಕೊಳ್ಳಬಹುದು.
ಇದನ್ನೂ ಓದಿ: Health Tips : ಕಪ್ಪು ಮೊಣಕೈ ಸಮಸ್ಯೆ ನಿವಾರಣೆಗೆ ಈ ಎಲೆ ರಾಮಬಾಣ!