Golden Tooth: ಇಲ್ಲಿದೆ ನೋಡಿ ಚಿನ್ನದ ಹಲ್ಲಿನ ಚಂದದ ಹುಲಿ!ಕೋರೆಹಲ್ಲು ಮುರಿದುಕೊಂಡ ವ್ಯಾಘ್ರಕ್ಕೆ ಚಿನ್ನದ ಹಲ್ಲು ಅಳವಡಿಸಿದ ವೈದ್ಯರು!
Golden Tooth :ಮೊದಲೆಲ್ಲ ಮನುಷ್ಯರಿಗೆ ಹಲ್ಲು ಹುಳುಕಾದರೆ ಅಥವಾ ಏನಾದರೂ ಕಾರಣದಿಂದ ಹಲ್ಲು ತುಂಡಾದರೆ ಆ ಜಾಗಕ್ಕೆ ವೈದ್ಯರು ಚಿನ್ನದ ಅಥವಾ ಬೆಳ್ಳಿಯ ಹಲ್ಲನ್ನು ಕೂರಿಸುತ್ತಿದ್ದುದನ್ನು ನಾವು ಕಂಡಿದ್ದೇವೆ. ಆದರೆ ಇಲ್ಲೊಂದು ದೇಶದಲ್ಲಿ ವೈದ್ಯರ ತಂಡವು ಹುಲಿಯ ಕೋರೆ ಹಲ್ಲು ಮುರಿದುಹೋಯ್ತು ಅನ್ನೋ ಕಾರಣಕ್ಕೆ ಹಲ್ಲನ್ನು ಬದಲಾಯಿಸಿ ಬದಲಾಯಿಸಿ ಚಿನ್ನದ ಹಲ್ಲನ್ನು (Golden Tooth) ಅಳವಡಿಸಿದ್ದಾರೆ.
ಹೌದು, ಜರ್ಮನಿಯ ಆಶ್ರಯಧಾಮದಲ್ಲಿ ವಾಸಿಸುವ 5 ವರ್ಷದ ಬೆಂಗಾಲ್ ಹುಲಿ ಕಾರಾ ಈ ತಿಂಗಳ ಆರಂಭದಲ್ಲಿ ಮಾಸ್ವೀಲರ್ ಪಟ್ಟಣದ ರಕ್ಷಣಾ ಕೇಂದ್ರದಲ್ಲಿ ಆಟಿಕೆಗಳನ್ನು ಅಗಿಯುವಾಗ ತನ್ನ ಕೋರೆಹಲ್ಲು ಮುರಿದುಕೊಂಡಿದೆ. ಹೀಗಾಗಿ ಚಿಕಿತ್ಸೆ ನಂತರ ಆ ಹುಲಿಗೆ ಚಿನ್ನದ ಕೋರೆಹಲ್ಲನ್ನು ಅಳವಡಿಸಲಾಗಿದೆ.
ಅಂದಹಾಗೆ ಈ ದೊಡ್ಡ ಹುಲಿಯನ್ನು 2013 ರಲ್ಲಿ ಇಟಲಿಯ ಮುಗ್ನಾನೊದಲ್ಲಿನ ಫಾರ್ಮ್‌ಹೌಸ್‌ನಲ್ಲಿ ಖಾಸಗಿ ಮಾಲೀಕತ್ವದಿಂದ ರಕ್ಷಿಸಿ 2015 ರಲ್ಲಿ ಜರ್ಮನಿಯ ಮಾಸ್‌ವೀಲರ್‌ನಲ್ಲಿರುವ ಟಿಯಾರ್ಟ್ ಹುಲಿ ಕೇಂದ್ರಕ್ಕೆ ವರ್ಗಾಯಿಸಲಾಯಿತು. 2019 ರ ಕೊನೆಯಲ್ಲಿಯೇ, ವೈದ್ಯರು ಮುಂಭಾಗದ ಹಲ್ಲಿನ ಮೇಲೆ ಕೆಲವು ಗಂಭೀರವಾದ ಕ್ಷೀಣತೆಯನ್ನು ಗಮನಿಸಿ, ಅದು ಯಾವುದೇ ಕ್ಷಣದಲ್ಲಿ ಬಿರುಕು ಬಿಡಬಹುದು ಎಂದು ತಿಳಿಸಿದ್ದರು.
ಹುಲಿಯ ಈ ಸಮಸ್ಯೆಯನ್ನು ಕಂಡಂತಹ ದಂತ ವೈದ್ಯರು ಹುಲಿಗೆ ಚಿನ್ನದ ಹಲ್ಲನ್ನು ಸಿದ್ಧಪಡಿಸಲು ಅಂತರರಾಷ್ಟ್ರೀಯ ಹುಲಿ ತಜ್ಞರ ತಂಡವನ್ನು ಸಂಪರ್ಕಿಸಿ, ಕರೆಸಿದರು. ಡೆನ್ಮಾರ್ಕ್‌ನ ವಿಶೇಷ ತಜ್ಞರ ತಂಡವು ಚಿನ್ನದಿಂದ ಮಾಡಿದ ಬದಲಿ ಹಲ್ಲನ್ನು ರಚಿಸಿದ್ದು ಮತ್ತು ಅದನ್ನು ಯಶಸ್ವಿಯಾಗಿ ಹುಲಿಗೆ ಅಳವಡಿಸಲಾಗಿದೆ.
ಈ ಹೊಸ ಅನ್ವೇಷಣೆ ಬಗ್ಗೆ ಜೀವಶಾಸ್ತ್ರಜ್ಞ ಇವಾ ಲಿಂಡೆನ್‌ಸ್ಮಿಡ್ಟ್ ಅವರು ಮಾತನಾಡಿ ಕಾರಾ ಈಗ ಯಾವುದೇ ಆಹಾರವನ್ನು ಕಚ್ಚಬಹುದಾಗಿದೆ. ತನಗಿಷ್ಟಬಂದಂತೆ ಯಾವ ರೀತಿಯ ಮಾಂಸವನ್ನೂ ಅವಳು ಜಗಿದು ತಿನ್ನಬಹುದು. ಅಲ್ಲದೆ ಆಕೆ ಈಗ ತನ್ನ ಹೊಸ ಚಿನ್ನದ ಹಲ್ಲನ್ನು ನಮಗೆ ತೋರಿಸಿ ನಗುತ್ತಿರುವುದು ನಿಜವಾಗಿಯೂ ನಮಗೆ ಸಂತಸವನ್ನುಂಟುಮಾಡಿದೆ ಎಂದು ಹೇಳಿದ್ದಾರೆ.