C M Bommai : ಬೊಮ್ಮಾಯಿ ಕಟ್ಟಿ ಹಾಕಲು ಕಾಂಗ್ರೆಸ್ ರಣತಂತ್ರ; ಕಾಂಗ್ರೆಸ್ ನಿಂದ ಶಿಗ್ಗಾಂವಿಯಲ್ಲಿ ಯಾರು ಕಣಕ್ಕೆ?
Congress : ಲಿಂಗಾಯತ (ಸಾದರ) ಸಮುದಾಯಕ್ಕೆ ಸೇರಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಅದೇ ಸಮುದಾಯದ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸಿ ಲಿಂಗಾಯತ ಮತಗಳನ್ನು ವಿಭಜಿಸಿ ಕಾಂಗ್ರೆಸ್(Congress) ಅಭ್ಯರ್ಥಿ ಗೆಲುವಿಗಾಗಿ ರಹಸ್ಯವಾಗಿ ಲೆಕ್ಕಾಚಾರ ಹಾಕತೊಡಗಿದೆ.
ಸಿಎಂ ಬೊಮ್ಮಾಯಿ ಪ್ರತಿನಿಧಿಸುವ ಹಾವೇರಿ ಜಿಲ್ಲೆಯ ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಪಂಚಮಸಾಲಿ ಮತಗಳೇ ಅತ್ಯಧಿಕ ಸಂಖ್ಯೆಯಲ್ಲಿದ್ದು, ಗೆಲುವಿಗೆ ನಿರ್ಣಾಯಕವಾಗಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಪಂಚಮಸಾಲಿ ಸಮುದಾಯಕ್ಕೆ ಸೇರಿದ ಮತ್ತು ಪಂಚಮಸಾಲಿ ಮೀಸಲು ಹೋರಾಟದಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದ ಮಾಜಿ ಸಚಿವ ವಿನಯ ಕುಲಕರ್ಣಿಯನ್ನು ಬೊಮ್ಮಾಯಿ ವಿರುದ್ಧ ಕಣಕ್ಕಿಳಿಸಲು ಚಿಂತನೆ ನಡೆಸಿರುವ ಮಾಹಿತಿ ಲಭ್ಯವಾಗಿದೆ.
ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧ ಸ್ಪರ್ಧಿಸಲು ಕೇಂದ್ರ ಚುನಾವಣಾ ಸಮಿತಿ ಸಭೆ ಒಪ್ಪಿಗೆ ಸೂಚಿಸಿದೆ.
ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಹೊರಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಈ ಬಾರಿ ಚುನಾವಣೆಯಲ್ಲಿ ಶಿಗ್ಗಾಂವಿ ಕ್ಷೇತ್ರದಿಂದ ಸಿಎಂ ಬೊಮ್ಮಾಯಿ ವಿರುದ್ಧ ಸ್ಪರ್ಧಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದರು.
ನವದೆಹಲಿಯಲ್ಲಿ ಎಐಸಿಸಿ ಕಚೇರಿಯಲ್ಲಿ ನಡೆಯುತ್ತಿರುವ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ವಿನಯ್ ಕುಲಕರ್ಣಿ, ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧ ಶಿಗ್ಗಾಂವಿ ಕ್ಷೇತ್ರದಿಂದ ಸ್ಪರ್ಧಿಸಲು ಗ್ರೀನ್ ಸಿಗ್ನಲ್ ನೀಡಲಾಗಿದೆ.
ಹೈಕಮಾಂಡ್ ಜೊತೆ ಚರ್ಚಿಸಲು ವಿನಯ್ ಕುಲಕರ್ಣಿ ಇಂದು ದೆಹಲಿಗೆ ತೆರಳಿದ್ದರು. ಇದೀಗ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ವಿನಯ್ ಕುಲಕರ್ಣಿ ಸಿಎಂ ಬೊಮ್ಮಾಯಿ ವಿರುದ್ಧವೇ ಸ್ಪರ್ಧೆಗೆ ಸಮ್ಮತಿ ಸೂಚಿಸಲಾಗಿದೆ.
ಬೊಮ್ಮಾಯಿ ಸ್ಪರ್ಧಿಸುವ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಕ್ಷೇತ್ರದಿಂದಲೇ ವಿನಯ್ ಕುಲಕರ್ಣಿ ಸ್ಪರ್ಧೆ ಮಾಡಲಿದ್ದಾರೆ. ಶಿಗ್ಗಾಂವಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಕಾಂಗ್ರೆಸ್ ನಾಯಕರು ಒತ್ತಡ ಹೇರಿದ್ದರು ಎನ್ನಲಾಗಿದೆ.
ಎಐಸಿಸಿ ಕಚೇರಿಯಲ್ಲಿ ಇಂದು ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಕುಲಕರ್ಣಿ ಅವರನ್ನು ಬೊಮ್ಮಾಯಿ ವಿರುದ್ಧ ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ. ಇದಕ್ಕೆ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿಯೂ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ. ಎಐಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಕ್ಷದ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತಿತರರಿದ್ದರು.