Bengaluru Mysuru Expressway: ವಾಹನ ಸವಾರರಾಯ್ತು, ಇದೀಗ KSRTC ಪ್ರಯಾಣಿಕರಿಗೂ ಶುಲ್ಕದ ಹೊರೆ! ಟಿಕೆಟ್ ದರ ಏರಿಕೆ ಮಾಡಿದ ಸಾರಿಗೆ ನಿಗಮ!

Bengaluru Mysuru Expressway :ಮೊನ್ನೆ ತಾನೆ ಪ್ರಧಾನಿ ಮೋದಿಯವರು ರಾಜ್ಯದ ಜನತೆಗೆ ಬಹುನಿರೀಕ್ಷಿತವಾಗಿದ್ದ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ (Bengaluru Mysuru Expressway)ಯನ್ನು ಉದ್ಘಾಟನೆ ಮಾಡಿದ್ದಾರೆ. ಇದರ ಲೋಕಾರ್ಪಣೆ ಬಳಿಕ ಮಾರ್ಚ್ 14ರಿಂದಲೇ ಟೋಲ್ (Toll) ಸಂಗ್ರಹ ಆರಂಭವಾಗಿದ್ದು ವಾಹನ ಪ್ರಯಾಣಿಕರಿಗೆ ತೆರಿಗೆಯ ಬಿಸಿ ಮುಟ್ಟಿದೆ. ಈ ಕುರಿತು ಭಾರೀ ಆಕ್ರೋಶವೂ ಬುಗಿಲೇಳುತ್ತಿದೆ. ಇದರ ಬೆನ್ನಲೇ ಬಸ್ ಪ್ರಯಾಣಿಕರಿಗೂ ಇದರ ಬಿಸಿ ಮುಟ್ಟಿದ್ದು, ಈ ಟೋಲ್ ಶುಲ್ಕದ ಹೊರೆಯನ್ನು ಕೆಎಸ್‌ಆರ್‌ಟಿಸಿ (KSRTC) ಪ್ರಯಾಣಿಕರ ಹೆಗಲಿಗೆ ಹೊರಿಸಿದೆ.

ಹೌದು, ಈ ಸಂಬಂಧ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರಕಟಣೆ ಹೊರಡಿಸಿದೆ. ಎಕ್ಸ್‌ಪ್ರೆಸ್‌ವೇಯ ಮೊದಲ ಹಂತದ ಬೆಂಗಳೂರು-ನಿಡಘಟ್ಟ ಮಧ್ಯದಲ್ಲಿನ ಕಣಿಮಿಣಿಕೆ ಟೋಲ್ ಮುಖಾಂತರ ಸಂಚರಿಸುವ ಬಸ್ಸುಗಳಿಂದ ಮಾರ್ಚ್ 14ರಿಂದಲೇ ಟೋಲ್ ಸಂಗ್ರಹಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರಾರಂಭಿಸಿದೆ.

ಈ ವೆಚ್ಚ ಸರಿದೂಗಿಸಲು ಟೋಲ್ ಶುಲ್ಕದ ಹೊರೆಯನ್ನು ಪ್ರಯಾಣಿಕರ ಹೆಗಲಿಗೆ ಹೊರಿಸಲಾಗಿದೆ. ಎಕ್ಸ್‌ಪ್ರೆಸ್‌ವೇ ಮೂಲಕ ಸಂಚರಿಸುವ ನಿಗಮದ ಕರ್ನಾಟಕ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಸುವ ತಲಾ ಪ್ರಯಾಣಿಕರಿಂದ 15 ರೂ., ರಾಜಹಂಸ ಬಸ್ಸುಗಳಲ್ಲಿ ತಲಾ 18 ರೂ. ಹಾಗೂ ಮಲ್ಟಿ ಆಕ್ಸಲ್ ಅಥವಾ ಇತರೇ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಂದ ತಲಾ 20 ರೂ. ಅನ್ನು ಬಳಕೆದಾರರ ಶುಲ್ಕವನ್ನಾಗಿ (ಟೋಲ್) ಸಂಗ್ರಹಿಸುವುದು ಅನಿವಾರ್ಯವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಬಳಕೆದಾರರ ಶುಲ್ಕವು ಎಕ್ಸ್‌ಪ್ರೆಸ್‌ವೇ ಮೂಲಕ ಕಾರ್ಯಾಚರಣೆಯಾಗುವ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಮಾತ್ರ ಅನ್ವಯವಾಗುತ್ತದೆ. ಉಳಿದ ಸಾರಿಗೆಗಳಿಗೆ ಅನ್ವಯಿಸುವುದಿಲ್ಲ ಎಂದು ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ.

ಇನ್ನು ಮಂಗಳವಾರ ಶುರುವಾದ ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್‌ ಸಂಗ್ರಹ ಪ್ರಕ್ರಿಯೆಯು ಹಲವು ಗೊಂದಲಗಳನ್ನು ಸೃಷ್ಟಿಸಿತು. ವಾಹನಗಳು ಉದ್ದದ ಸಾಲುಗಳಲ್ಲಿ ನಿಲ್ಲುವಂತಾಯಿತು. ಟೋಲ್‌ ಸಂಗ್ರಹ ಸಿಬ್ಬಂದಿ ಮತ್ತು ವಾಹನ ಸವಾರರ ನಡುವೆ ವಾಗ್ವಾದಗಳು ಸಾಮಾನ್ಯ ಎನ್ನುವಂತಾಯಿತು. ಮತ್ತೊಂದು ಕಡೆ ಪ್ರತಿಭಟನಾಕಾರರನ್ನು ನಿಯಂತ್ರಿಸುವಲ್ಲಿ ಪೊಲೀಸರು ಮಗ್ನರಾಗಿದ್ದರು.

ಟೋಲ್‌ ಫ್ಲಾಜಾ ಬಳಿಯಲ್ಲಿನ ಸೆನ್ಸಾರ್‌ ಕೆಲಸ ಮಾಡದ ಹಿನ್ನೆಲೆಯಲ್ಲಿ ಬೂಮ್‌ ಬ್ಯಾರಿಯರ್‌ಗಳು ಕಾರಿನ ಗಾಜು, ಡಿಕ್ಕಿಗಳ ಮೇಲೆ ಬೀಳುತ್ತಿದ್ದವು. ಇದರಿಂದ ಸರಕಾರಿ ವಾಹನಗಳು ಜಖಂಗೊಂಡವು. ಹೀಗಾಗಿ ಸವಾರರು ಸಹ ಪರಿಹಾರ ನೀಡುವವರೆಗೆ ಸ್ಥಳ ಬಿಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು. ಟೋಲ್‌ ಸ್ಕ್ಯಾ‌ನ್‌ ಆಗದ ಹಿನ್ನೆಲೆಯಲ್ಲಿ ಏಕಮುಖ ಸಂಚಾರಕ್ಕೆ 135 ರೂ. ಪಾವತಿಸಬೇಕಿದ್ದವರು, 170 ರೂ. ಗಳ ನಗದು ನೀಡಬೇಕಾಯಿತು. ಟ್ರಾಫಿಕ್‌ ಜಾಮ್‌ನಿಂದಾಗಿ ಹೆದ್ದಾರಿಯಲ್ಲೂ10ರಿಂದ 20 ನಿಮಿಷಗಳ ಕಾಲ ಸವಾರರು ಕಾಯಬೇಕಿತ್ತು. ಅರ್ಧ ಕಿ.ಮೀ.ಉದ್ದ ವಾಹನಗಳು ಕಾದು ನಿಂತಿದ್ದವು.

Leave A Reply

Your email address will not be published.