ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ದಶಪಥ ಹೆದ್ದಾರಿ ಇಂದಿನಿಂದ ಟೋಲ್‌ ಸಂಗ್ರಹ ಶುರು; ಟೋಲ್ ಸಂಗ್ರಹ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ

Bengaluru-Mysore highway toll :ರಾಮನಗರ: ಇತ್ತೀಚೆಗೆಷ್ಟೇ ಪ್ರಧಾನಿ ಮೋದಿಯವರು ರಾಜ್ಯಕ್ಕೆ ಆಗಮಿಸಿ, ಬೆಂಗಳೂರ- ಮೈಸೂರು ಎಕ್ಸ್ ಪ್ರೆಸ್ ದಶಪಥ ಹೆದ್ದಾರಿಯನ್ನು ಉದ್ಘಾಟಿಸಿದ್ದರು. ಇದೀಗ ಉದ್ಘಾಟನೆಗೊಂಡು ಎರಡೇ ದಿನಕ್ಕೆ ಇಂದಿನಿಂದ ಟೋಲ್‌ ಸಂಗ್ರಹ (Bengaluru-Mysore highway toll) ಮಾಡುವುದಕ್ಕೆ ಮುಂದಾಗಿದ್ದಾರೆ. ಹೀಗಾಗಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಟೋಲ್ ಸಂಗ್ರಹ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಮನಗರ ತಾಲೂಕಿನ ಶೇಷಗಿರಿಹಳ್ಳಿ ಟೋಲ್ ಬಳಿ ಪ್ರತಿಭಟನೆ ಮಾಡುತ್ತಿದ್ದು, ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ.

ಈ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದ್ದು, ಸ್ಥಳದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ವಾಹನ ಸವಾರರು ಪರದಾಡುತ್ತಿದ್ದಾರೆ.
ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ನಲ್ಲಿ ಟೋಲ್ ಸಂಗ್ರಹದ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ತಾಲೂಕಿನ ಕಣಮಿಣಿಕೆ ಟೋಲ್ ಬಳಿ ಮುಂಜಾಗ್ರತ ಕ್ರಮವಾಗಿ 3 ಕೆಎಸ್ ಆರ್ ಪಿ ತುಕಡಿ, ಸ್ಥಳೀಯ ಪೊಲೀಸರ ನಿಯೋಜನೆ ಮಾಡಲಾಗಿದೆ.ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳ ವಿರುದ್ಧ ಧಿಕ್ಕಾರ ಘೋಷಣೆ ಕೂಗುತ್ತಿದ್ದಾರೆ. ಸದ್ಯ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಬಸ್​ನಲ್ಲಿ ಕರೆದೊಯ್ದಿದ್ದಾರೆ.

ಎಷ್ಟಿದೆ ಟೋಲ್‌ ದರ?
ಕಾರು, ಜೀಪ್, ವ್ಯಾನ್‌ಗಳಿಗೆ ಏಕಮುಖ ಸಂಚಾರಕ್ಕೆ 135 ರೂ. ಯಾದರೆ, ದ್ವಿಮುಖ ಸಂಚಾರಕ್ಕೆ 205 ರೂ. ಆಗುತ್ತದೆ. ಸ್ಥಳೀಯ ವಾಹನಗಳಿಗೆ 70 ರೂ. ಹಾಗೂ ತಿಂಗಳ ಪಾಸ್ 4,525 ರೂ. ಇದೆ. ಲಘು ವಾಹನ, ಮಿನಿಬಸ್‌ಗಳಿಗೆ ಏಕಮುಖ ಸಂಚಾರಕ್ಕೆ 220 ರೂ. ಇದ್ದು, ದ್ವಿಮುಖ ಸಂಚಾರಕ್ಕೆ 330 ರೂ. ಇದೆ. ಸ್ಥಳೀಯ ವಾಹನಗಳಿಗೆ 110 ರೂ. ಇದ್ದು, ತಿಂಗಳ ಪಾಸ್ 7,315 ರೂ. ಇದೆ. ಬಸ್ ಹಾಗೂ ಟ್ರಕ್‌ಗಳ ಏಕಮುಖ ಸಂಚಾರಕ್ಕೆ 460 ರೂ, ದ್ವಿಮುಖ ಸಂಚಾರಕ್ಕೆ 690 ರೂ. ಇದೆ. ಸ್ಥಳೀಯ ವಾಹನಗಳಿಗೆ 230 ರೂ. ಇದೆ.

ಟೋಲ್‌ ಸಂಗ್ರಹ ಮೊದಲ ದಿನವೇ ತಾಂತ್ರಿಕ ಸಮಸ್ಯೆ
ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ನಲ್ಲಿ ಇಂದಿನಿಂದ ಟೋಲ್ ಸಂಗ್ರಹ ಶುರುವಾಗಿದ್ದು, ವಾಹನ ಸವಾರರು ಆಕ್ರೋಶಕ್ಕೆ ಗುರಿಯಾಗಿದೆ. ಯಾಕಂದರೆ ಟೋಲ್‌ ಸಂಗ್ರಹವಾಗಿ ಮೊದಲ ದಿನವೇ ಟೋಲ್‌ ಸಂಗ್ರಹದಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ.ಇದರಿಂದ ವಾಹನ ಸವಾರರು ಬೆಳಗ್ಗೆಯಿಂದಲೇ ಕ್ಯೂ ನಲ್ಲಿ ನಿಂತು ಪರದಾಡುತ್ತಿದ್ದಾರೆ. ಕಣಮಿಣಕಿ ಟೋಲ್‌ನಲ್ಲಿ ಆರಂಭದಲ್ಲೇ ತಾಂತ್ರಿಕ ದೋಷ ಕಂಡುಬಂದಿದೆ. ಇದೀಗ ಸಾಮಾನ್ಯವಾಗಿ ಎಲ್ಲರು ಫಾಸ್ಟ್ ಟ್ಯಾಗ್ ಇಟ್ಟುಕೊಂಡಿರುತ್ತಾರೆ. ಆದರೆ ಇಲ್ಲಿ ಫಾಸ್ಟ್ ಟ್ಯಾಗ್ ಅಳವಡಿಸಲಾಗಿದ್ದರೂ, ಅದು ಕೆಲಸ ಮಾಡುತ್ತಿಲ್ಲ. ಕೆಲ ಬೂತ್‌ಗಳಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದಿದ್ದು, ವಾಹನ ಸವಾರರು ಪರದಾಡಿದ್ದಾರೆ. ಅತ್ತ ಫಾಸ್ಟ್ ಟ್ಯಾಗ್ ಇಲ್ಲದೇ ಹೋದ ವಾಹನ ಸವಾರರು ಅದರ ದುಪ್ಪಟ್ಟು ಹಣ ಕಟ್ಟುತ್ತಿದ್ದಾರೆ.

ಇದನ್ನೂ ಓದಿ : ಭಂಡಾರ ಏರುವ ಸಮಯದಲ್ಲಿ ನಡೆಯಿತು ದೈವಿಕ ದರ್ಶನ, ಬಸವನ ಮೇಲೆಯೇ ದೈವದ ಆವಾಹನೆ! ವೀಡಿಯೋ ಇಲ್ಲಿದೆ

 

Leave A Reply

Your email address will not be published.