Mohammed Shami : ಕ್ರಿಕೆಟ್‌ ಮೈದಾನದಲ್ಲಿ ʼಜೈ ಶ್ರೀರಾಮ್‌ʼ ಎಂದು ಘೋಷಣೆ ಕೂಗಿದ ಅಭಿಮಾನಿಗಳು! ಯಾಕಾಗಿ?

Mohammed Shami: ಬಾರ್ಡರ್-ಗವಾಸ್ಕರ್ ಟ್ರೋಫಿಯ (Border Gavaskar trophy) ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವಿನ 4 ನೇ ಮತ್ತು ಕೊನೆಯ ಟೆಸ್ಟ್ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಪಂದ್ಯ ಮಾರ್ಚ್ 9 ರಂದು ಆರಂಭವಾಗಿದ್ದು, 13 ರವರೆಗೆ ನಡೆಯಲಿದೆ. ಪಂದ್ಯದ ವೇಳೆ ಕ್ರಿಕೆಟ್ ಅಭಿಮಾನಿಗಳು ಅನುಚಿತವಾಗಿ ವರ್ತಿಸಿದ್ದು, ಇದೀಗ ಅಭಿಮಾನಿಗಳ ಅತಿರೇಕದ ವರ್ತನೆಯ ವಿಡಿಯೋ ವೈರಲ್ ಆಗಿದೆ.

ಕ್ರಿಕೆಟ್ ಅಭಿಮಾನಿಗಳು ಟೆಸ್ಟ್ ಆರಂಭಕ್ಕೂ ಮುನ್ನ ಬೌಂಡರಿ ಬಳಿ ಇದ್ದ ಭಾರತೀಯ ಆಟಗಾರನನ್ನು ನಿಂದಿಸಿದ್ದಾರೆ. ಅದರಲ್ಲೂ
ಬೌಂಡರಿ ಬಳಿ ಆಟಗಾರರ ಜೊತೆಗಿದ್ದ ಮೊಹಮ್ಮದ್ ಶಮಿ (Mohammed Shami) ಅವರನ್ನು ಹೆಚ್ಚು ನಿಂದಿಸಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಅಭಿಮಾನಿಗಳು ಮೊದಲು ಸೂರ್ಯಕುಮಾರ್​ (soorya kumar) ಹೆಸರನ್ನು ಕೂಗಲಾರಂಭಿಸಿದ್ದಾರೆ. ಈ ವೇಳೆ ಸೂರ್ಯಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಇದಾದ ಬಳಿಕ ಜೈ ಶ್ರೀರಾಮ್​ (jai shree raam) ಎಂದು ಕೂಗಲು ಪ್ರಾರಂಭಿಸಿದರು. ಎಲ್ಲಾರೂ ಒಟ್ಟು ಸೇರಿ ಜೋರು ಧ್ವನಿಯಲ್ಲಿ ಘೋಷಣೆ ಕೂಗಿದರು. ಇದಿಷ್ಟೇ ಅಲ್ಲದೆ, ಈ ವೇಳೆ ಅಭಿಮಾನಿಗಳ ಕಣ್ಣಿಗೆ ಮೊಹಮ್ಮದ್ ಶಮಿ ಬಿದ್ದಿದ್ದಾರೆ. ಅವರನ್ನು ಕಂಡೊಡನೆ ‘ಶಮಿ… ಜೈ ಶ್ರೀರಾಮ್​’, ‘ಶಮಿ…ಜೈ ಶ್ರೀರಾಮ್​’ ಎಂದು ಕೂಗಲು ಪ್ರಾರಂಭಿಸಿದರು. ಜೈ ಶ್ರೀರಾಮ್ ಎಂದು ಕೂಗುತ್ತಲೇ ಇದ್ದರು, ಯಾರೂ ಕೂಡ ಏನು ಪ್ರತಿಕ್ರಿಯೆ ನೀಡಲಿಲ್ಲ.

ಸದ್ಯ ಈ ದೃಶ್ಯಾವಳಿ ವಿಡಿಯೋದಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಸೋಷಿಯಲ್ಸ್ ವಿಭಿನ್ನ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆಲವರು ಅಭಿಮಾನಿಗಳ ಅತಿರೇಕದ ವರ್ತನೆ, ಕ್ರಿಕೆಟ್ ನಲ್ಲೂ ಧರ್ಮದ ವಿಚಾರ ತಂದೊಡ್ಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಗುಜರಾತ್​ ಕ್ರಿಕೆಟ್​ ಅಸೋಸಿಯೇಷನ್​ (Gujarat Cricket Association) ಶಮಿ ಘಟನೆಗೆ ಸಂಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದ್ದಾರೆ.

ಈ ಮೊದಲೂ ಮೊಹಮ್ಮದ್ ಶಮಿ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ನೆಟ್ಟಿಗರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು.
ಕಾರಣ, 2021ರ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ (icc T20 world cup) ಪಾಕಿಸ್ತಾನ ವಿರುದ್ಧ ಭಾರತ ತಂಡವು (Pakistan vs India) ಹೀನಾಯ ಸೋಲು ಅನುಭವಿಸಿತ್ತು. ಈ ಕಾರಣದಿಂದ ಶಮಿ ನಿಂದನೆಗೆ ಒಳಗಾಗಿದ್ದರು. ಈ ವೇಳೆ ಬಹಿರಂಗವಾಗಿಯೇ ಶಮಿಗೆ ವಿರಾಟ್ ಕೊಹ್ಲಿ (Virat Kohli) ಬೆಂಬಲ ಸೂಚಿಸಿದ್ದರು. ಹಾಗೆಯೇ ಮಾಜಿ ಆಟಗಾರರಾದ ವಿರೇಂದ್ರ ಸೆಹ್ವಾಗ್ (Virender Sehwag) , ಹರ್ಭಜನ್ ಸಿಂಗ್ (Harbhajan Singh) ಸೇರಿದಂತೆ ಆಟಗಾರರು ಬೆಂಬಲ ವ್ಯಕ್ತಪಡಿಸಿದ್ದರು. ಇದೀಗ ಮತ್ತೆ ಶಮಿ ಕುರಿತು ಧ್ವನಿ ಕೇಳಿಬರುತ್ತಿದೆ.

Leave A Reply

Your email address will not be published.