Komal New Movie – Yala Kunni: ವಜ್ರಮುನಿಯವರ ಫೇಮಸ್ ಬೈಗುಳ ‘ಯಲಾ ಕುನ್ನಿ’ ಯೇ ಈ ಚಿತ್ರದ ಟೈಟಲ್ ! ಹಾಸ್ಯ ಪಾತ್ರದಲ್ಲಿ ನಗಿಸಲು ಬರ್ತಿದ್ದಾರೆ ನಟ ಕೋಮಲ್ !

Komal New Movie Yala kunni: ಕನ್ನಡದ ರಾಜ್ ಕುಮಾರ್ ಕಾಲದ ನಟ, ನಟಭಯಂಕರ ರೌದ್ರ ಪಾತ್ರಧಾರಿ ಖಳನಾಯಕ ವಜ್ರಮುನಿ ಹೆಸರು ಕೇಳದವರು ಯಾರು? ಹಳೆಯ ಕನ್ನಡ ಚಿತ್ರಗಳನ್ನು ವೀಕ್ಷಿಸುವ ಅಭ್ಯಾಸ ಇರುವ ಜನರಿಗೆ ವಜ್ರಮುನಿ ಎಂಬ ಹೆಸರು ಇವತ್ತಿಗೂ ಮೈಯಲ್ಲಿ ಮುಳ್ಳನ್ನೆಬಿಸಬಲ್ಲ ಪಾತ್ರವೇ! ಆ ಮಟ್ಟಿಗೆ ವಜ್ರಮುನಿಯವರು ಖಳ ಪಾತ್ರದಲ್ಲಿ ಜೀವಿಸಿದ್ದರು. ದುಂಡು ಕಜ್ಜಿ ಕಜ್ಜಿ ಮುಖ, ಕೆಂಪನೆಯ ಕಾದ ಕೆಂಡದಂತಹಾ ಕಣ್ಣುಗಳು, ಬಿಗಿದುಕೊಂಡ ಹುಬ್ಬುಗಳು ಮತ್ತು ಕಣಂಗ್ ಅನ್ನುವ ಗಡುಸು ಕಂಠ- ಜತೆಗೆ ‘ ಯಲಾ ಕುನ್ನಿ’ ಎಂಬ ಜಗತ್ರಸಿದ್ದ ಡೈಲಾಗು ಇವು ಕನ್ನಡದ ವರ, ಖಳ ನಟ ವಜ್ರಮುನಿಯವರ ವ್ಯಕ್ತಿತ್ವದ ಒಂದು ಕ್ಲುಪ್ತ ಪರಿಚಯ. ಯಲಾ ಕುನ್ನಿ ವಜ್ರಮುನಿಯವರ ಸಿಗ್ನೇಚರ್ ಬೈಗುಳ. ಅದನ್ನೇ ಇಟ್ಟುಕೊಂಡು ಈಗ ಸಿನಿಮಾ ಒಂದು ಸೆಟ್ಟೇರುತ್ತಿದೆ.

ನವರಸ ನಾಯಕ ಜಗ್ಗೇಶ್ ಅವರದ್ದು ಹಾಸ್ಯವನ್ನು ಮೈಗೂಡಿಸಿಕೊಂಡು ಬಂದಂತಹ ಫ್ಯಾಮಿಲಿ. ವಾಚಿಕ ಅಥವಾ ಆಂಗಿಕ ಯಾವುದೇ ಇರಲಿ, ಅದರಲ್ಲಿ ಜಗ್ಗೇಶ್ ಮಾತ್ರವಲ್ಲ, ನಟ ಕೋಮಲ್ ಕೂಡಾ ಎತ್ತಿದ ಕೈ. ಹಾಸ್ಯದ ಪೊಗರ್ದಸ್ತು ಮಜಾ ನೀಡುತ್ತ ಬಂದಿರುವ ನಟ ಕೋಮಲ್‌, ಇತ್ತೀಚಿನ ಕೆಲ ವರ್ಷಗಳಿಂದ ಸಿನಿಮಾದಿಂದಲೇ ದೂರ ಉಳಿದಿದ್ದರು. ಇದೀಗ ಅವರು ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಿಗೆ ಸಹಿ ಮಾಡುತ್ತಿದ್ದಾರೆ. ಅದರಂತೆ ಇದೀಗ ಮತ್ತೊಂದು ಸಿನಿಮಾ (komal new movie) ಘೋಷಣೆ ಆಗಿದ್ದು, ಅಷ್ಟೇ ಅಲ್ಲ ಚಿತ್ರದ ಶೀರ್ಷಿಕೆಯೂ ರಿವೀಲ್‌ ಆಗಿದೆ. ಹಾಗೆ ವಜ್ರಮುನಿಯವರ ಬೈಗುಳವನ್ನೇ ಎತ್ತಿಕೊಂಡು ‘ ಯಲಾ ಕುನ್ನಿ ‘ ಚಿತ್ರ ರೆಡಿಯಾಗುತ್ತಿದೆ. ಕೋಮಲ್ ‘ಯಲಾ ಕುನ್ನಿ’ ಹೆಸರಿನ ಚಿತ್ರದಲ್ಲಿ ನಟಿಸುತ್ತಿದ್ದು, ವಜ್ರಮುನಿ ಪಾತ್ರ ಮಾಡಲಿದ್ದಾರೆ.

ಅಮೋಘ ಅಭಿನಯದ ಮೂಲಕವೇ ನಾಡಿನ ಜನರ ಮನದಲ್ಲಿರುವ ನಟ ಕೋಮಲ್‌ ಕುಮಾರ್‌ ಇದೀಗ ‘ಯಲಾಕುನ್ನಿ- ಮೇರಾ ನಾಮ್‌ ವಜ್ರಮುನಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಪೋಸ್ಟರ್‌ ರಿವೀಲ್‌ ಆಗಿದ್ದು, ಸದ್ಯಕ್ಕೆ ಶೀರ್ಷಿಕೆಯನ್ನಷ್ಟೇ ಚಿತ್ರತಂಡ ರಿವೀಲ್‌ ಮಾಡಿದ್ದು, ಕುತೂಹಲ ಮೂಡಿಸಿದೆ. ಸೌಭಾಗ್ಯ ಸಿನಿಮಾಸ್ ಬ್ಯಾನರ್‌ ಅಡಿಯಲ್ಲಿ ಮಹೇಶ್ ಗೌಡ್ರು ನಿರ್ಮಿಸುತ್ತಿರುವ ಈ ಚಿತ್ರವನ್ನು ಎನ್. ಆರ್ ಪ್ರದೀಪ್ ನಿರ್ದೇಶಿಸುತ್ತಿದ್ದಾರೆ. ನಟ ಓಂಪ್ರಕಾಶ್ ರಾವ್, ಮುಸ್ಸಂಜೆ ಮಹೇಶ್ ಮುಂತಾದವರ ಗರಡಿಯಲ್ಲಿ ಪಳಗಿರುವ ಪ್ರದೀಪ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ.‌ ಈ ಚಿತ್ರದ ಕಥೆ 1981ರ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿರಲಿದ್ದು ಮೈಸೂರು ಸುತ್ತಮುತ್ತಲಿನಲ್ಲಿ ಹಳ್ಳಿ ಮತ್ತು ದೇವಸ್ಥಾನದ ಸೆಟ್‌ಗಳನ್ನು ನಿರ್ಮಿಸಿ ಚಿತ್ರೀಕರಣ ಮಾಡಲು ತಂಡ ಪ್ಲಾನ್‌ ರೂಪಿಸಿದೆ.‌ ಶೀಘ್ರದಲ್ಲಿ ಚಿತ್ರೀಕರಣ ಶುರುವಾಗಲಿದೆ.

ಕನ್ನಡದ ಖ್ಯಾತ ನಟ ವಜ್ರಮುನಿ ತಮ್ಮ ಚಿತ್ರಗಳಲ್ಲಿ ಹೆಚ್ಚು ಬಯ್ಯಲು ಬಳಸುತ್ತಿದ್ಡ ಸಂಭಾಷಣೆ ಯಲಾ ಕುನ್ನಿ ಡೈಲಾಗು ಇಟ್ಟುಕೊಂಡು ಚಿತ್ರ ಆಸಕ್ತಿ ಮೂಡಿಸಿದೆ. ಚಿತ್ರದಲ್ಲಿ ವಜ್ರಮುನಿಯಾಗಿ ಕೋಮಲ್ ರೆಟ್ರೋ ಲುಕ್‌ನಲ್ಲಿ ಕಮಾಲ್ ಮಾಡಲಿದ್ದಾರೆ. ಹಿರಿಯ ಕಲಾವಿದ ಮುಸುರಿ ಕೃಷ್ಣ ಮೂರ್ತಿ ಅವರ ಮಗ ಜಯಸಿಂಹ ಮುಸುರಿ, ಜಗ್ಗೇಶ್ ಅವರ ಕಿರಿಯ ಮಗ ಯತಿರಾಜ್ ಹಾಗೂ ಫ್ರೆಂಚ್ ಬಿರಿಯಾನಿ ಖ್ಯಾತಿಯ ಮಹಾಂತೇಶ್ ಮುಂತಾದವರು ತಾರಾಗಣದಲ್ಲಿದ್ದಾರೆ.

ಕೋಮಲ್ ಅವರ ಮುಖವು ವಜ್ರಮುನಿಯವರಿಗೆ ಹೋಲಿಕೆಯಾಗಲಿದೆ. ತಿಳಿ ಹಾಸ್ಯದ, ಓರಣದಿಂದ ಕುಟುಂಬ ಸಮೇತ ನೋಡಬಹುದಾದ ಕಥಾಹಂದರವನ್ನು ಈ ಚಿತ್ರ ಹೊಂದಿರಲಿದೆ. ಜೊತೆಗೆ ಭಾವನಾತ್ಮಕ ಸನ್ನಿವೇಶಗಳನ್ನು ಒಳಗೊಂಡಿರುವ ಈ ಚಿತ್ರಕ್ಕೆ ನಿರ್ದೇಶಕ ಪ್ರದೀಪ ಅವರೆ, ಕಥೆ, ಚಿತ್ರಕಥೆ ಬರೆದಿದ್ದಾರೆ. ಅಲ್ಲದೆ, ಸಂಭಾಷಣೆ ಬರೆದು, ಗೀತ ರಚನೆ ಸಹ ಮಾಡಿದ್ದಾರೆ. ಉದಯ್ ಲೀಲಾ ಛಾಯಾಗ್ರಹಣ, ಧರ್ಮ ವಿಶ್ ಸಂಗೀತ, ಹಾಗೂ ದೀಪು ಎಸ್ ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿರಲಿದೆ.

ಇದನ್ನೂ ಓದಿ :Cheeta And Black Panther: ಒಟ್ಪೊಟ್ಟಿಗೇ ಹೆಜ್ಜೆಹಾಕುತ್ತಾ ಖಡಕ್ ಲುಕ್ ಕೊಟ್ವು ಚಿರತೆ ಹಾಗೂ ಬ್ಲಾಕ್ ಪಾಂಥೆರ್! ಇಲ್ಲಿದೆ ನೋಡಿ ಈ ಅಪರೂಪದ ವಿಡಿಯೋ!

Leave A Reply

Your email address will not be published.