D Group Employees : ಡಿ ಗ್ರೂಪ್ ನೌಕರರಿಗೆ ಸಿಹಿ ಸುದ್ದಿ ಕೊಟ್ಟ ಸರಕಾರ!
D Group Employees: ಇದೀಗ ಸರ್ಕಾರ ಡಿ ಗ್ರೂಪ್ ನೌಕರರಿಗೆ (D Group Employees) ಸಿಹಿ ಸುದ್ದಿ ನೀಡಿದೆ. ಪತಿ, ಪತ್ನಿ ಡಿ ಗ್ರೂಪ್ ನೌಕರರಾಗಿದ್ದರೆ ಅವರ ವರ್ಗಾವಣೆಗೆ ಸಹಕಾರಿ ಆಗುವಂತೆ ನಿಯಮಗಳನ್ನು ತಿದ್ದುಪಡಿ ಮಾಡಲಾಗಿದೆ. ಹಾಗಾಗಿ ನಿಯಮ (rules) ಮತ್ತು ಷರತ್ತುಗಳ ಪ್ರಕಾರ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ ಎಂದು ಕರ್ನಾಟಕ ರಾಜ್ಯಪಾಲರ ಆದೇಶದ ಮೇರೆಗೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ವೀರಭದ್ರ ಆದೇಶವನ್ನು ಹೊರಡಿಸಿದ್ದಾರೆ.
ಆದೇಶದಲ್ಲಿ, ಕರಡು ನಿಯಮಗಳನ್ನು ದಿನಾಂಕ 21/12/2022 ರಂದು ಅಧಿಸೂಚಿಸಿ, ಸದರಿ ರಾಜ್ಯಪತ್ರವನ್ನು ಸಾರ್ವಜನಿಕರಿಗೆ ನೀಡಲಾಗಿದ್ದು, ಸ್ವೀಕರಿಸಿದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ರಾಜ್ಯ ಸರ್ಕಾರ ಪರಿಗಣಿಸಿದ್ದು, ಇದೀಗ ಕರ್ನಾಟಕ ರಾಜ್ಯ ಸಿವಿಲ್ ಸೇವಾ ಅಧಿನಿಯಮ, 1978 (1990 ಅಧಿನಿಯಮ ಸಂಖ್ಯೆ: 14)ರ 3ನೇ ಪ್ರಕರಣದ 1ನೇ ಉಪ ಪ್ರಕರಣವನ್ನು 8ನೇ ಪುಕರಣದೊಂದಿಗೆ ಓದಿಕೊಂಡು ಕರ್ನಾಟಕ ಸರ್ಕಾರವು ನಿಯಮಗಳನ್ನು ರಚಿಸುತ್ತದೆ. ನಿಯಮಗಳು ಅಧಿಕೃತ ರಾಜ್ಯಪತ್ರದಲ್ಲಿ ಅಂತಿಮ ಪ್ರಕಟಣೆಯ ದಿನಾಂಕದಿಂದ ಜಾರಿಗೆ ಬರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಗುಂಪು-ಸಿ ಅಥವಾ ಡಿ ಗ್ರೂಪ್ ನೌಕರರಲ್ಲಿ ಪತಿ-ಪತ್ನಿ ಇವರಿಬ್ಬರಲ್ಲಿ ಯಾರಾದರೂ ಒಬ್ಬರು ಕೆಲಸಕ್ಕೆ ಸಂಬಂಧಿಸಿದಂತೆ ಕೋರಿಕೆ ಸಲ್ಲಿಸಿದ್ದಲ್ಲಿ ಹುದ್ದೆಯ ಒಂದು ಜೇಷ್ಠತಾ ಘಟಕದಿಂದ ಮತ್ತೊಂದು ಜೇಷ್ಠತಾ ಘಟಕದಲ್ಲಿನ ಅದೇ ಕೇಡರ್ನ ಸಮಾನ ಹುದ್ದೆಗೆ ವರ್ಗಾವಣೆ ಮಾಡಲಾಗುತ್ತದೆ. ಆದರೆ ಇದಕ್ಕೆ ಷರತ್ತುಗಳು ಅನ್ವಯವಾಗುತ್ತದೆ. ಯಾವ ಷರತ್ತುಗಳು? ಇಲ್ಲಿದೆ ಮಾಹಿತಿ.
ಏನೆಲ್ಲಾ ಷರತ್ತುಗಳಿವೆ?
• ವರ್ಗಾವಣೆ ಬಯಸುವ ಸರ್ಕಾರಿ ನೌಕರ ಈಗಾಗಲೇ ಕೆಲಸ ಮಾಡುತ್ತಿರುವ ಸ್ಥಳದಲ್ಲಿ ಕನಿಷ್ಠ 7 ವರ್ಷ ಸೇವೆ ಸಲ್ಲಿಸಿರಬೇಕು.
• ಹಾಗೆಯೇ ವರ್ಗಾವಣೆ (transfer) ಆಗಬೇಕಾದ ಸ್ಥಳದಲ್ಲಿ ಮಂಜೂರಾದ ಹುದ್ದೆ ಖಾಲಿ ಇರಬೇಕು.
• ಅಂತಹ ವರ್ಗಾವಣೆಯನ್ನು ಒಂದು ಕೇಡರ್ನಿಂದ ಮತ್ತೊಂದು ಕೇಡರಿಗೆ ಮಾಡತಕ್ಕದ್ದಲ್ಲ.
• ವರ್ಗಾವಣೆಯನ್ನು ಸರ್ಕಾರಿ ನೌಕರರ (government employees) ಕೋರಿಕೆಯ ಮೇರೆಗೆ ಮಾಡುವುದರಿಂದ ಅವರ ಜೇಷ್ಠತೆಯನ್ನು ವರ್ಗಾವಣೆಗೊಂಡ ಘಟಕದಲ್ಲಿನ ಕೇಡರ್ನ ಕೊನೆಯ ವ್ಯಕ್ತಿಯ ಕೆಳಗಿರಿಸಬೇಕು.
• ವರ್ಗಾವಣೆಯನ್ನು ಒಂದೇ ಬಾರಿ ಮಾಡಲಾಗುವುದು. ಅದಕ್ಕಿಂತ ಹೆಚ್ಚಿನ ಬಾರಿ ಮಾಡಲಾಗುವುದಿಲ್ಲ ಎಂದು ಹೇಳಲಾಗಿದೆ.
• ಈ ಷರತ್ತುಗಳಿಗೆ ಒಳಪಟ್ಟ ಡಿ ಗ್ರೂಪ್ ನೌಕರ ವರ್ಗಾವಣೆ ಆಗಿ ನೇಮಕಗೊಳ್ಳಬಹುದು.