NPS ವಿತ್ಡ್ರಾಗೆ ಹೊಸ ನಿಯಮ ಜಾರಿ, ಬರಲಿದೆ ಎಪ್ರಿಲ್ 1ರಿಂದ ಈ ರೂಲ್ಸ್!
NPS: ಎನ್ಪಿಎಸ್ (NPS)ಎಂಬುದು ರಾಷ್ಟ್ರೀಯ ಅಥವಾ ಹೊಸ ಪಿಂಚಣಿ ಯೋಜನೆಯಾಗಿದ್ದು, ಪಿಂಚಣಿ ಮತ್ತು ಹೂಡಿಕೆಗಳ ಸಂಯೋಜನೆಯಾಗಿದೆ. ಈ ಯೋಜನೆಯಲ್ಲಿ ಸರ್ಕಾರಿ ಉದ್ಯೋಗಿ ಕೂಡ ಮೂಲ ವೇತನದ ಶೇಕಡಾ 10ರಷ್ಟನ್ನು ನಿವೃತ್ತಿ ನಿಧಿಗೆ ಕೊಡುಗೆಯಾಗಿ ನೀಡಬೇಕಾಗುತ್ತದೆ. ಇದರ ಜೊತೆಗೆ, ಉದ್ಯೋಗದಾತರು ಮೂಲ ವೇತನದ ಶೇಕಡಾ 14ರಷ್ಟನ್ನು ಕೊಡುಗೆಯಾಗಿ ನೀಡಬೇಕಾಗಿದ್ದು, ಖಾಸಗಿ ಕ್ಷೇತ್ರದ ಉದ್ಯೋಗಿಗೂ ಸೇರಿಕೊಳ್ಳಲು ಅವಕಾಶವಿದೆ. ನಿವೃತ್ತಿಯ ನಂತರ ನಾಗರಿಕರಿಗೆ ಹಣಕಾಸು ಭದ್ರತೆಯನ್ನು ಒದಗಿಸುವುದಕ್ಕಾಗಿ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಇದೀಗ, ಎನ್ ಪಿಎಸ್ ಸದಸ್ಯರಿಗೆ ಬಹು ಮುಖ್ಯ ಮಾಹಿತಿ ಇಲ್ಲಿ ನೀಡಲಾಗಿದೆ.
ರಾಷ್ಟ್ರೀಯ ಪಿಂಚಣಿ ಯೋಜನೆಯ (ಎನ್ ಪಿಎಸ್)(NPS) ಹಣ ವಿತ್ ಡ್ರಾ ಹಾಗೂ ವರ್ಷಾಶನಕ್ಕೆ ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (ಪಿಎಫ್ ಆರ್ ಡಿಎ) ಕೆವೈಸಿ(KYC) ಕಡ್ಡಾಯ ಮಾಡಿದ್ದು ಜೊತೆಗೆ ಎಲ್ಲ ಅಗತ್ಯ ದಾಖಲೆಗಳನ್ನು ಆನ್ ಲೈನ್ ನಲ್ಲೇ ಮಾಡುವಂತೆ ಸೂಚಿಸಿದೆ.
ಎನ್ ಪಿಎಸ್ ಖಾತೆದಾರರು ಆನ್ ಲೈನ್ ವಿತ್ ಡ್ರಾ ಮನವಿ ಸಲ್ಲಿಸಲು ಕೇಂದ್ರೀಯ ದಾಖಲೆಗಳ ನಿರ್ವಹಣಾ ಏಜೆನ್ಸಿ (ಸಿಆರ್ ಎ)(CRA) ವ್ಯವಸ್ಥೆಗೆ ಲಾಗಿ ಇನ್ (login) ಆಗಬೇಕಾಗುತ್ತದೆ. ನಂತರ, ಇ-ಸೈನ್/ ಒಟಿಪಿ (OTP) ದೃಢೀಕರಣ ಮಾಡಬೇಕಾಗಿದ್ದು ಬಳಿಕ ನೋಡಲ್ ಆಫೀಸ್ /ಪಿಒಪಿ (nodal office/POP) ಅವರಿಗೆ ಮನವಿ ಸಲ್ಲಿಸಬೇಕು. ಈ ಮನವಿಗೆ ಪೂರಕ ಅಗತ್ಯ ಮಾಹಿತಿಗಳಾದ ವಿಳಾಸ, ಬ್ಯಾಂಕ್ ಮಾಹಿತಿಗಳು, ನಾಮನಿರ್ದೇಶನ ಮಾಹಿತಿಗಳನ್ನು ಸಲ್ಲಿಸಬೇಕಾಗುತ್ತದೆ. ಎನ್ ಪಿಎಸ್ ಖಾತೆಯಿಂದ ಅಗತ್ಯ ಮಾಹಿತಿಗಳನ್ನು ಪಡೆದ ಬಳಿಕ ಮುಂದಿನ ಪ್ರಕ್ರಿಯೆಗಳಿಗೆ ಮನವಿ ಕಳುಹಿಸಲಾಗುತ್ತದೆ.
ಎನ್ ಪಿಎಸ್ ಖಾತೆದಾರರು ಎಸ್ ಎಂಎಸ್ (SMS) ಹಾಗೂ ಇ-ಮೇಲ್ (e-mail) ಅಥವಾ ಆಧಾರ್ ಮುಖಾಂತರ ಇ-ಸಹಿ ಮೂಲಕ ಒಟಿಪಿ (OTP) ದೃಢೀಕರಣ ಮಾಡಬೇಕಾಗಿದ್ದು, ಪೂರ್ಣ ಪ್ರಕ್ರಿಯೆಯನ್ನು ಡಿಜಿಟಲ್ ವಿಧಾನ ಅನುಸರಿಸಿ ಪೂರ್ಣಗೊಳಿಸಬೇಕಾಗುತ್ತದೆ. ಸದ್ಯ, ಎನ್ ಪಿಎಸ್ (NPS) ಖಾತೆಯಲ್ಲಿರುವ ಹಣ ವಿತ್ ಡ್ರಾ ಮಾಡಲು ನಿವೃತ್ತಿ ಬಳಿಕ ಒಂದು ತಿಂಗಳು ಬೇಕಾಗಬಹುದು. ಇನ್ನು ವರ್ಷಾಶನ ಹಾಗೂ ಪಿಂಚಣಿ (Pension) ಪಡೆಯುವ ಇಡೀ ಪ್ರಕ್ರಿಯೆಗೆ ಎರಡರಿಂದ ಮೂರು ತಿಂಗಳ ಅವಧಿ ಬೇಕಾಗುತ್ತದೆ.
ಸಿಆರ್ ಎಯಲ್ಲಿ (CRA) ನೋಂದಣಿ ಪ್ರಕ್ರಿಯೆ ಆಗಿರುವ ಎನ್ ಪಿಎಸ್ ಖಾತೆದಾರರ ಬ್ಯಾಂಕ್ ಖಾತೆಯನ್ನುಆನ್ ಲೈನ್ ಬ್ಯಾಂಕ್ ಖಾತೆ ಮೂಲಕ ಪರಿಶೀಲಿಸಬಹುದು. ಮನವಿ ಸಲ್ಲಿಸಿದ ಸಂದರ್ಭದಲ್ಲಿ ವಿಳಾಸ ದೃಢೀಕರಣ ದಾಖಲೆಗಳು, ಬ್ಯಾಂಕ್ ಖಾತೆ ಪುರಾವೆ ಹಾಗೂ ಪ್ಯಾನ್ ಕಾರ್ಡ್ ಪ್ರತಿ ಅವಶ್ಯಕ ಕೆವೈಸಿ ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ. ಇಲ್ಲಿ ದಾಖಲೆಗಳನ್ನು ಅಪ್ಲೋಡ್ ಮಾಡುವಾಗ ಜಾಗ್ರತೆ ವಹಿಸುವುದು ಅವಶ್ಯಕ. ಹೆಸರು, ಜನ್ಮದಿನಾಂಕ ಹಾಗೂ ನಾಮಿನಿ ಹೆಸರನ್ನು ಸರಿಯಾಗಿ ಪರಿಶೀಲನೆ ನಡೆಸಿದ ನಂತರವೇ ಅಪ್ಲೋಡ್ ಮಾಡಬೇಕಾಗುತ್ತದೆ.
ಈ ಹೊಸ ನಿಯಮ ವಿತ್ ಡ್ರಾ ಹಾಗೂ ವರ್ಷಾಶನ ಪಡೆಯುವಂತಹ ಎರಡೂ ಪ್ರಕ್ರಿಯೆಗಳನ್ನು ಜೊತೆಯಾಗಿ ಪೂರ್ಣ ಗೊಳಿಸುತ್ತದೆ. ಹೀಗಾಗಿ, ಎನ್ ಪಿಎಸ್ ಖಾತೆದಾರರ ಸಮಯ ಉಳಿಯುತ್ತದೆ. ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡಲು ಎನ್ ಪಿಎಸ್ ಹೂಡಿಕೆದಾರರು ಮನವಿ ಸಲ್ಲಿಸಿದ ಬಳಿಕ ದಾಖಲೆಗಳ ಪರಿಶೀಲನೆಗೆ ನೋಡಲ್ ಅಧಿಕಾರಿ ಜವಾಬ್ದಾರರಾಗಿರುತ್ತಾರೆ. ಈ ಪ್ರಕ್ರಿಯೆ ಬಳಿಕ ಒಟಿಪಿ ದೃಢೀಕರಣ ಅಥವಾ ಆಧಾರ್ ಮೂಲಕ ಇ-ಸಹಿ (e-sign) ಆಯ್ಕೆಯನ್ನು ಆರಿಸಿ ಮನವಿಯನ್ನು ದೃಢೀಕರಣ ಪ್ರಕ್ರಿಯೆ ಮಾಡಬೇಕಾಗುತ್ತದೆ.
ಈ ಹೊಸ ನಿಯಮದಿಂದ ಎನ್ ಪಿಎಸ್ ಸದಸ್ಯರಿಗೆ ಪ್ರಯೋಜನವಾಗಲಿದ್ದು, ಸದ್ಯ ಎನ್ ಪಿಎಸ್ ನಿಂದ ಹಣ ವಿತ್ ಡ್ರಾ ಮಾಡಲು ಹಾಗೂ ವರ್ಷಾಶನ ಪಡೆಯಲು ಎನ್ ಪಿಎಸ್ ಖಾತೆದಾರರು ಪ್ರತ್ಯೇಕ ದಾಖಲೆಗಳನ್ನು ಸಲ್ಲಿಕೆ ಮಾಡಲು ಸುದೀರ್ಘವಾದ ಪ್ರಕ್ರಿಯೆಗಳನ್ನು ಅನುಸರಿಸಬೇಕಾಗಿತ್ತು. ಅಷ್ಟೇ ಅಲ್ಲದೆ, ಈ ಎಲ್ಲ ದಾಖಲೆಗಳ ಪರಿಶೀಲನೆಗೆ ಹೆಚ್ಚಿನ ಸಮಯ ಬೇಕಾಗಿತ್ತು. ಇನ್ನೂ, ಪಿಎಫ್ ಆರ್ ಡಿಎ ಸುತ್ತೋಲೆಯ ಅನುಸಾರ ಅವಶ್ಯಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಆನ್ ಲೈನ್ ನಲ್ಲಿ ಅಪ್ಲೋಡ್ ಮಾಡಬೇಕಾಗಿದ್ದು, ದಾಖಲೆಗಳನ್ನು ಭೌತಿಕವಾಗಿ ಸಲ್ಲಿಕೆ ಮಾಡಬೇಕಾದ ಅವಶ್ಯಕತೆ ಇಲ್ಲ. ಹೀಗಾಗಿ, ಹಣ ವಿತ್ ಡ್ರಾ ಹಾಗೂ ವರ್ಷಾಶನಕ್ಕೆ ಹಿಡಿಯುವ ಸಮಯ ಕೂಡ ಉಳಿಯುತ್ತದೆ.