Chicken 65 name : ಚಿಕನ್ 65 ಅಂತ ಈ ತಿನಿಸಿಗೆ ಹೆಸರು ಯಾಕೆ ಬಂತು ಗೊತ್ತೇ ?

Chicken 65 name : ಚಿಕನ್ ಅಂದರೆ ಅದಕ್ಕೆ ಅನ್ವರ್ಥನಾಮ ರುಚಿ. ಅದರ ರುಚಿ ಯಾರಿಗೆ ಇಷ್ಟ ಆಗಲ್ಲ ಹೇಳಿ ? ಅಂತಹಾ ಬಾಯಲ್ಲಿ ನೀರೂರಿಸುವ, ಹುರಿದ ಚಿಕನ್ ತುಂಡುಗಳಿಂದ ತುಂಬಿದ ಪ್ಲೇಟ್ ಅನ್ನು ಕಲ್ಪಿಸಿಕೊಳ್ಳಿ; ಬೇಡ, ಇನ್ನೂ ಹೆಚ್ಚು ರಸಮಯವಾಗಿ ಚಿಕನ್ ಖಾದ್ಯವನ್ನು ನೀವು ಸವಿಯಬಯಸಿದರೆ ಅದಕ್ಕೆ ಚಿಕನ್ 65 ಸರಿಯಾಗಿ ಹೊಂದಿಕೆ ಆಗಬಹುದು.

ಏನಿದು ಹೆಸರು- ಚಿಕನ್ 65 ? ಹೆಸರು ವಿಚಿತ್ರವಾಗಿ ಇದ್ಯಲ್ಲ, ಇದನ್ನು ಚಿಕನ್ 65 ಎಂದು ಏಕೆ ಕರೆಯಲಾಯಿತು, ಯಾರು ಯಾವಾಗ ಹೆಸರಿಟ್ಟರು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಈ ಚಿಕನ್ 65(Chicken 65 name )ಮಂಚೂರಿಯನ್‌ನಂತಹ ಖಾದ್ಯಗಳ ಥರವೇ ಚೀನಾದಿಂದ ಬಂದಿದೆ ಎಂದು ನೀವು ಭಾವಿಸಿದ್ದರೆ, ನಿಮ್ಮ ಊಹೆ ತಪ್ಪು. ಬದಲಿಗೆ ಇದು ಪಕ್ಕಾ ದಕ್ಷಿಣ ಭಾರತ ಅಡುಗೆ ಪ್ರಿಯರೊಬ್ಬರ ಕೈರುಚಿ !

ಚಿಕನ್ 65 ಅನ್ನುವ ಹೆಸರಿನ ಹಿಂದೆ ಹಲವು ರೀತಿಯ ಸಿದ್ಧಾಂತಗಳಿವೆ. ಕೆಲವರು ಈ ಚಿಕ್ಕನ್ 65 ತಿನಿಸು ತಯಾರಿಸಲು ಒಟ್ಟು 65 ಬಗೆಯ ವಿವಿಧ ಮಸಾಲ ಪದಾರ್ಥಗಳನ್ನು ಬಳಸಲಾಗುತ್ತದೆ ಎನ್ನುತ್ತಾರೆ. ಮತ್ತೆ ಕೆಲವರು ಒಂದು ಕೆಜಿ ಚಿಕನ್ ಅನ್ನು ಸಣ್ಣದಾಗಿ 65 ತುಂಡುಗಳಾಗಿ ಮಾಡಲಾಗುತ್ತದೆ ಹಾಗೆ ಸಣ್ಣ ತುಂಡುಗಳನ್ನು ಮಾಡಿ ತಯಾರಿಸಿದ ಚಿಕನ್ ಅನ್ನು ಚಿಕನ್ 65 ಎನ್ನುತ್ತಾರೆ. ಇನ್ನು ಕೆಲವರು, ಈ ತಿನಿಸು ತಯಾರಿಸಲು 65 ದಿನಗಳ ಕೋಳಿಯನ್ನು ಬಳಸಲಾಗಿದೆ ಎಂಬ ಇನ್ನೊಂದು ಕಥೆಯನ್ನೂ ಹೇಳಿಕೊಂಡು ತಿರುಗಾಡುತ್ತಿದ್ದಾರೆ.

ಇವಲ್ಲದೆ ಇನ್ನೊಂದು ಜನಪ್ರಿಯ ಕಥೆ ಕೂಡಾ ಚಾಲ್ತಿಯಲ್ಲಿದೆ. ಅದೇನೆಂದರೆ, ಅವತ್ತು ಅಲ್ಲಿನ ಹೊಟೇಲ್ ನಲ್ಲಿ ಒಟ್ಟು 65 ಥರದ ಅಡುಗೆಗಳಿದ್ದವು. ಮೆನು ಕಾರ್ಡಿನಲ್ಲಿ 65 ನೇ ಐಟಂ ಒಂದು ಚಿಕನ್ ದು ಆಗಿತ್ತು. 65 ನೆಯ ಐಟಂ ಕೊಡಿ, ಅಂತ ಕೇಳಿ ಕೇಳಿ ಅದು ಚಿಕನ್ ಐಟಂ ಆದುದರಿಂದ ಅದಕ್ಕೆ ಚಿಕನ್ 65 ಎಂಬ ಹೆಸರು ಬಂತು ಎನ್ನುವುದು ಈ ಕಥಾ ಸಾರಾಂಶ. ಇನ್ನೂ ಕೆಲವರು, ಚಿಕನ್ ಅನ್ನು 65 ಪರ್ಸೆಂಟ್ ಮಾತ್ರ ಬೇಯಿಸಿ ಅಡುಗೆ ಮಾಡಲಾಗುತ್ತದೆ ಎಂದು ತಮಾಷೆಯಾಗಿ ಅಥವಾ ಸೀರಿಯಸ್ ಆಗಿಯೋ ಏನೋ ಹೇಳುತ್ತಿರುತ್ತಾರೆ. ಇವೆಲ್ಲವುದರ ಮಧ್ಯೆ ನಿಜವಾಗಿಯೂ ಚಿಕನ್ 65 ಎಂಬ ಹೆಸರು ಬರಲು ಏನು ಕಾರಣ ಎನ್ನುವುದನ್ನು ನಾವೀಗ ನಿಮಗೆ ಹೇಳಲಿದ್ದೇವೆ.

ವಾಸ್ತವವಾಗಿ, ಚಿಕನ್ 65 ನ ಮೂಲವು ಇರೋದು ದಕ್ಷಿಣ ಭಾರತದಲ್ಲಿ. ಇದನ್ನು ಹೊರ ಜಗತ್ತಿಗೆ ಪರಿಚಯಿಸಿ ಬಡಿಸಿದವರು ಚೆನ್ನೈನ ಪ್ರಸಿದ್ಧ ಬಾಣಸಿಗ ಎ.ಎಂ. ಬುಹಾರಿ ಎನ್ನುವವರು. ಅವರು 1965 ಇಸವಿಯಲ್ಲಿ ತನ್ನ ಬುಹಾರಿ ಹೋಟೆಲ್‌ನಲ್ಲಿ ಈ ತಿನಿಸನ್ನು ಪರಿಚಯಿಸಿದರು. ಅದನ್ನು ಮೊದಲಿಗೆ 1965 ರಲ್ಲಿ ಪರಿಚಯಿಸಲಾದ ಕಾರಣದಿಂದ, ಈ ದಿನಸಿಗೆ ಚಿಕನ್ 65 ಎಂಬ ಹೆಸರು ಇಡಲಾಯಿತು.

ಅದು ಭಾರತವು ಮತ್ತು ಪಾಕಿಸ್ತಾನದ ವಿರುದ್ಧ ಯುದ್ಧದಲ್ಲಿದ್ದಾಗಿನ ಸಂದರ್ಭ. ಆಗ ಅವರಿಗೆ ಇಂತಹ ಭಕ್ಷ್ಯದ ಕಲ್ಪನೆಯು ಹುಟ್ಟಿಕೊಂಡಿತು. ಬುಹಾರಿ ಅವರಿಗೆ ಸೈನಿಕರಿಗೆ ಕೆಲವು ರುಚಿಕರವಾದ ಮಾಂಸಾಹಾರಿ ತಿನಿಸನ್ನು ತಕ್ಷಣ ತಯಾರಿಸಿ ಬಡಿಸಬೇಕಿತ್ತು. ಆಗ ಚಿಕನ್ 65 ಅಂತಹ ಹೊಸ ಪ್ರಯೋಗ ಶುರು ಆಗಿ ಆ ಪ್ರಯೋಗ ಯಶಸ್ವಿಯಾಯಿತು. ಮುಂದಕ್ಕೆ ಚಿಕನ್ 65 ತುಂಬಾ ಜನಪ್ರಿಯವಾಯಿತು.

ಮುಂದೆ, ಈ ತಿನಿಸಿನ ಜನಪ್ರಿಯತೆಯಿಂದ ಪ್ರೇರಿತರಾದ ಬುಹಾರಿ ಅವರು 1978, 1982 ಮತ್ತು 1990 ರಲ್ಲಿ ಚಿಕನ್ ಐಟಂಗಳ ಹೊಸ ಆವೃತ್ತಿಗಳನ್ನು ಕಂಡುಹಿಡಿದರು ಮತ್ತು ಅದಕ್ಕೆ ಆಯಾ ಇಷವಿಗಳ ಹೆಸರನ್ನು ನೀಡಿದರು. ಆದರೆ ಇವ್ಯಾವೂ ಚಿಕನ್ 65 ನಂತೆ ಜನಪ್ರಿಯವಾಗಲಿಲ್ಲ.

ಆ 1990 ರಲ್ಲಿ ದೂರದರ್ಶನದಲ್ಲಿ ಕ್ವಿಸ್ ಮಾಸ್ಟರ್ ಸಿದ್ದಾರ್ಥ್ ಬಸು ಮತ್ತು ಅಮಿತಾಬ್ ಬಚ್ಚನ್ ಅವರ ಕೌನ್ ಬನೇಗಾ ಕರೋಡ್‌ಪತಿಯಲ್ಲಿ ಕಾಣಿಸಿಕೊಂಡ ಪ್ರಶ್ನೆಗಳಲ್ಲಿ ಚಿಕನ್ 65 ರ ಮೂಲವೂ ಒಂದು ಎನ್ನುವುದನ್ನು ನಾವಿಲ್ಲಿ ನೆನೆಯಬಹುದು.

ಬುಹಾರಿ ಅವರಿಂದ ಶುರುವಾದ ಈ ತಿನಿಸನ್ನು ಪೇಟೆಂಟ್ ಮಾಡಲು ಅವರಿಗೆ ಕೆಲವರು ಸಲಹೆ ನೀಡಿದ್ದರಂತೆ. ಅದಕ್ಕೆಅವರು ನಿರಾಕರಿಸಿ, ‘ ಆಹಾರವು ಯಾರ ಸ್ವತ್ತೂ ಅಲ್ಲ, ಅದನ್ನು ವ್ಯಾಪಾರೀಕರಣಗೊಳಿಸಬಾರದು ಎಂದು ಅವರು ಹೇಳಿ ‘ ಎಂದು ಹೇಳಲಾಗುತ್ತಿದೆ. ಅವರ ಕಲ್ಪನೆ ಮತ್ತು ನಿಸ್ವಾರ್ಥ ಮನೋಭಾವದಿಂದಾಗಿಯೇ ಚಿಕನ್ 65 ಮಾಂಸಾಹಾರಿ ಮೆನುಗಳಲ್ಲಿ ತನ್ನ ಸ್ಥಾನವನ್ನು ಭದ್ರವಾಗಿ ಉಳಿಸಿಕೊಂಡಿದೆ, ಮತ್ತು ರುಚಿ ಪ್ರಿಯರಲ್ಲಿ ಚಿಕನ್ 65 ಮುಂಚೂಣಿಯಲ್ಲಿ ನಿಲ್ಲುತ್ತಿದೆ.

Leave A Reply

Your email address will not be published.