Nandamuri Taraka Ratna no more: ತೆಲುಗಿನ ಖ್ಯಾತ ನಟ, ರಾಜಕಾರಣಿ ನಂದಮೂರಿ ತಾರಕ ರತ್ನ ಇನ್ನಿಲ್ಲ! ಮರೆಯಾಯ್ತು ಟಾಲಿವುಡ್ ನ ಅಮೂಲ್ಯ ‘ರತ್ನ’

Nandamuri Taraka Ratna: ತೆಲುಗಿನ ಖ್ಯಾತ ನಟ ಹಾಗೂ ರಾಜಕಾರಣಿಯಾದ ನಂದಮೂರಿ ತಾರಕ ರತ್ನ(Nandamuri Taraka Ratna) ಇನ್ನಿಲ್ಲ! ಕಳೆದ 15ದಿನಗಳಿಂದ ಹೃದಯಘಾತದ ಸಲುವಾಗಿ ಬೆಂಗಳೂರಿನ ನಾರಾಯಣ ಹೃದಯಾಲಯ(Narayana hrudayalaya)ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, 23 ದಿನಗಳಿಂದ ಸಾವು ಬದುಕಿನ ನಡುವೆ ಹೋರಾಟ ಮಾಡ್ತಿದ್ದ, ನಂದಮೂರಿ ತಾರಕ ರತ್ನ (39) ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ಕೊನೆಯುಸಿರೆಳೆದಿದ್ದಾರೆ.

ಕಳೆದ ಜನವರಿ 28 ರಂದು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು(Chandrababu Naydu) ಅವರ ಪುತ್ರ ನರಾ ಲೋಕೇಶ್​(Nara Lokesh) ಅವರು ಕುಪ್ಪಂ(Kuppam)ನಲ್ಲಿ ಸುಮಾರು 4000 ಕಿಮೀ ನ ಪಾದಯಾತ್ರೆ ಆರಂಭಿಸಿದ್ದರು. ಈ ಪಾದಯಾತ್ರೆಯಲ್ಲಿ ನಂದಮೂರಿ ತಾರಕ ರತ್ನ ಅವರು ಭಾಗವಹಿಸಿದ್ದರು. ಈ ವೇಳೆ ಮಸೀದಿಯೊಳಗೆ ಹೋಗಿದ್ದ ನಾರಾ ಲೋಕೇಶ್ ಹಾಗೂ ತಾರಕ ರತ್ನ ಹೊರಬರುತ್ತಿದ್ದಂತೆ ಸಾವಿರಾರು ಸಂಖ್ಯೆಯ ತೆಲುಗು ದೇಶಂ ಪಕ್ಷದ ಕಾರ್ಯಕರ್ತರು ಒಮ್ಮೆಗೆ ನುಗ್ಗಿದರು. ಆ ವೇಳೆ ನೂಕುನುಗ್ಗಾಟವಾಗಿ ನಟ ನಂದಮೂರಿ ಅವರು ಪ್ರಜ್ಞೆ ತಪ್ಪಿ (Unconscious)ಕೆಳಗೆ ಬಿದ್ದರು. ಅವರಿಗೆ ಎದೆ ಭಾಗದಲ್ಲಿ ನೋವು ಕಾಣಿಸಿಕೊಂಡಿದೆ ಎಂಬುದನ್ನು ಅರಿತು ಕೂಡಲೇ ಕುಪ್ಪಂನ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಯಿತು.

ನಂದಮೂರಿ ತಾರಕ ರತ್ನ ಅವರನ್ನು ಆಸ್ಪತ್ರೆಗೆ ಕರೆತಂದಾಗ ನಾಡಿಮಿಡಿತ ಇರಲಿಲ್ಲ, ದೇಹ ನೀಲಿ ಬಣ್ಣಕ್ಕೆ ತಿರುಗಿತ್ತು ಎಂದು ಮೂಲಗಳು ತಿಳಿಸಿದ್ದವು. ಆದರೆ, 45 ನಿಮಿಷಗಳ ಚಿಕಿತ್ಸೆಯ ನಂತರ ನಾಡಿಮಿಡಿತ ಮರಳಿತ್ತು. ನಂತರ ಅವರಿಗೆ ಹೃದಯಾಘಾತ (Heart Attack) ವಾಗಿದೆ ಎಂಬುದು ಬಳಿಕ ತಿಳಿದು ಬಂದಿತ್ತು. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವ ವಿಡಿಯೋ ನೋಡಿ ಅಭಿಮಾನಿಗಳು ಆತಂಕಗೊಂಡಿದ್ದರು. ಆರಂಭದಲ್ಲಿ ಕುಪ್ಪಂನ ಆಸ್ಪತ್ರೆಯಲ್ಲೇ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ನಂತರದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಕರೆತರಲಾಗಿತ್ತು.

ಇಲ್ಲಿ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿತ್ತು. ಯಶಸ್ವಿಯಾಗಿ ಆಂಜಿಯೋಗ್ರಾಮ್ (Angiogram) ಮಾಡಿ ಸ್ಟಂಟ್ ಅಳವಡಿಕೆ ಮಾಡಲಾಗಿತ್ತು. ಆದರೂ ಕಳೆದ 23 ದಿನಗಳಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದರು. ಜೊತೆಗೆ ಆರೋಗ್ಯದಲ್ಲಿ ಚೇತರಿಕೆ ಕಂಡಿರಲಿಲ್ಲ. ಅವರು ಬೇಗ ಚೇತರಿಕೆ ಕಾಣಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದರು, ಆದರೆ ಅವರ ಪ್ರಾರ್ಥನೆ ಫಲಿಸಲಿಲ್ಲ. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂಬುದು ವಿಷಾದನೀಯ.

ತಾರಕರತ್ನ ನಿಧನದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಬಳಿ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ. ಅಷ್ಟೇ ಅಲ್ಲದೇ ಪೊಲೀಸ್ ಭದ್ರತೆಯಲ್ಲಿ ಹೈದರಾಬಾದ್ ಆಸ್ಪತ್ರೆಗೆ ನಟ ತಾರಕ ರತ್ನ ಅವರ ಮೃತದೇಹವನ್ನು ಶಿಫ್ಟ್ ಮಾಡಿದ್ದಾರೆ.

ತಾರಕ ರತ್ನ ಅವರು 2002ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ‘ಒಕಟೋ ನಂಬರ್ ಕುರ್ರಾಡು’ ಅವರ ಮೊದಲ ಸಿನಿಮಾ. ‘ಯುವ ರತ್ನ’, ‘ತಾರಕ್​’, ‘ಭದ್ರಾದಿ ರಾಮುಡು’, ‘ನಂದೀಶ್ವರಡು’ ಮುಂತಾದ ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಅವರು ಟಾಲಿವುಡ್​ನಲ್ಲಿ ಖ್ಯಾತಿ ಪಡೆದಿದ್ದಾರೆ. ಅಲ್ಲದೆ ಇತ್ತೀಚೆಗೆ ರಾಜಕೀಯದಲ್ಲೂ ಅವರು ಸಕ್ರಿಯರಾಗಿದ್ದರು.

Leave A Reply

Your email address will not be published.