ಕರ್ನಾಟಕ ಪಬ್ಲಿಕ್ ಸ್ಕೂಲ್‌ಗೆ 58 ಉಪ ಪ್ರಾಂಶುಪಾಲರ ಹುದ್ದೆ ಸೃಷ್ಟಿಸಲು ಸೂಚನೆ
ಬೆಂಗಳೂರು: ರಾಜ್ಯದ 58 ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್) ಗಳಿಗೆ ಆಡಳಿತಾತ್ಮಕ ಮತ್ತು ಶೈಕ್ಷಣಿಕ ಹಿತದೃಷ್ಟಿಯಿಂದ ಉಪ ಪ್ರಾಂಶುಪಾಲರ ಹುದ್ದೆಗಳನ್ನು ಸೃಷ್ಟಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದೆ.
ರಾಜ್ಯದಲ್ಲಿ ಸದ್ಯ 276 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಹೊಸದಾಗಿ ಆರಂಭಿಸಲಾಗಿದೆ. ಈ ಶಾಲೆಗಳಲ್ಲಿ ಖಾಲಿ ಇರುವ ಪ್ರಾಶುಪಾಲರು/ಉಪ ಪ್ರಾಂಶುಪಾಲರ ಹುದ್ದೆಗಳನ್ನು ಪ್ರಭಾರಿಗಳಾಗಿ ಸಹ ಶಿಕ್ಷಕರು ನಿರ್ವಹಣೆ ಮಾಡುತ್ತಿದ್ದಾರೆ.
ಹುದ್ದೆಗಳನ್ನು ಸೃಷ್ಟಿಸುವ ಸಂಬಂಧ ಈಗಾಗಲೇ ಸರ್ಕಾರವು ಅನುಮತಿ ನೀಡಿದೆ. ಹುದ್ದೆಗಳ ಪೈಕಿ ಪ್ರಸ್ತುತ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳ ದಾಖಲಾತಿಯನ್ನು ಸ್ಯಾಟ್ಸ್ ತಂತ್ರಾಂಶದಲ್ಲಿನ ಮಾಹಿತಿಯ ಆಧಾರದಲ್ಲಿ ಪರಿಗಣಿಸಿ ಅತಿ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿರುವ ಶಾಲೆಯಿಂದ ಆರಂಭಿಸಿ ಇಳಿಕೆ ಕ್ರಮದಲ್ಲಿ 58 ಶಾಲೆಗಳನ್ನು ಗುರುತಿಸಿ ಮಂಜೂರಾತಿ ನೀಡಲು ನಿರ್ಧರಿಸಲಾಗಿದೆ.