10 ದಿನಗಳಲ್ಲಿ ಜಿ.ಪಂ.,ತಾ.ಪಂ. ಕ್ಷೇತ್ರಗಳ ಪುನರ್ ವಿಂಗಡಣೆಗೆ ಅಂತಿಮ ಅಧಿಸೂಚನೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ಬೆಂಗಳೂರು: ಜಿ.ಪಂ.ಹಾಗೂ ತಾ.ಪಂ.ಕ್ಷೇತ್ರಗಳ ಪುನರ್ ವಿಂಗಡಣೆ ವಿಚಾರದಲ್ಲಿ 10 ದಿನಗಳಲ್ಲಿ ಅಂತಿಮ ಅಧಿಸೂಚನೆಯನ್ನು ಪ್ರಕಟಿಸಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಲೆ ಹಾಗೂ ನ್ಯಾ.ಅಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ವಿಚಾರಣೆಯ ವೇಳೆ ರಾಜ್ಯ ಸರ್ಕಾರದ ಪರ ಹಾಜರಾದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ, ಜಿ.ಪಂ.ತಾ.ಪಂ. ಕ್ಷೇತ್ರಗಳ ಪುನರ್‌ವಿಂಗಡಣೆಗೆ ಸಂಬಂಧಿಸಿದಂತೆ ಕರ್ನಾಟಕ ಪಂಚಾಯತ್‌ರಾಜ್ ಸೀಮಾ ನಿರ್ಣಯ ಆಯೋಗ ಜ.30ರಂದು ಸರ್ಕಾರಕ್ಕೆ ಸಲ್ಲಿಸಿದ ಅಂತಿಮ ವರದಿಯಂತೆ ರಾಜ್ಯ ಸರ್ಕಾರ 10 ದಿನಗಳಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಿದೆ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು.
ಅಡ್ವೋಕೇಟ್ ಜನರಲ್ ಅವರ ಭರವಸೆಯನ್ನು ದಾಖಲಿಸಿಕೊಂಡ ನ್ಯಾಯಪೀಠ, ತಾ.ಪಂ.-ಜಿ.ಪಂ ಕ್ಷೇತ್ರಗಳ ಪುನರ್‌ವಿಂಗಡಣೆಗೆ ಸಂಬಂಧಿಸಿದ ಅಂತಿಮ ಅಧಿಸೂಚನೆಯನ್ನು 10 ದಿನಗಳಲ್ಲಿ ಹೊರಡಿಸಿ, ವರದಿಯನ್ನು ಮುಂದಿನ ಕ್ರಮಕ್ಕಾಗಿ ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿ ವಿಚಾರಣೆಯನ್ನು 2 ವಾರ ಮುಂದೂಡಿತು.
ಜತೆಗೆ ಇತರೆ ಹಿಂದುಳಿದ ವರ್ಗಗಳಿಗೆ (ಓಬಿಸಿ) ರಾಜಕೀಯ ಮೀಸಲಾತಿ ಕಲ್ಪಿಸುವ ಸಂಬಂಧ ರಾಜ್ಯ ಸರ್ಕಾರ ರಚಿಸಿರುವ ಆಯೋಗಕ್ಕೆ 2023ರ ಮಾರ್ಚ್ 31ರೊಳಗೆ ವರದಿ ನೀಡುವಂತೆ 2022ರ ಡಿ.12ರಂದು ಸುಪ್ರೀಂಕೋರ್ಟ್ ಹೇಳಿದೆ.
ತಾ.ಪಂ.ಜಿ.ಪಂ ಕ್ಷೇತ್ರಗಳ ಮೀಸಲಾತಿ ವಿಚಾರದಲ್ಲೂ ರಾಜ್ಯ ಸರ್ಕಾರ ಅದರಂತೆ ಮುಂದುವರಿಯಬಹುದು ಎಂದು ನ್ಯಾಯಪೀಠ ಹೇಳಿದೆ.
ಇದೇ ವೇಳೆ ತಾ.ಪಂ.-ಜಿ.ಪಂ ಕ್ಷೇತ್ರಗಳ ಪುನರ್‌ವಿಂಗಡಣೆ ಪ್ರಕ್ರಿಯೆ ಹಾಗೂ ಅಂತಿಮ ವರದಿಗೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರ ಪ್ರಮಾಣಪತ್ರವನ್ನು ಸರ್ಕಾರದ ಪರ ವಕೀಲೆ ಪ್ರತಿಮಾ ಹೊನ್ನಾಪುರ ನ್ಯಾಯಪೀಠಕ್ಕೆ ಸಲ್ಲಿಸಿದರು.
ರಾಜ್ಯದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಸುವ ನಿಟ್ಟಿನಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆ ಮತ್ತು ಹಿಂದುಳಿದ ವರ್ಗಗಳೂ ಸೇರಿದಂತೆ ಇತರೆ ಸಮುದಾಯಗಳಿಗೆ ಕಾಲಮಿತಿಯಲ್ಲಿ ಮೀಸಲಾತಿ ನಿಗದಿಪಡಿಸಲು ವಿಫಲವಾಗಿರುವ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ₹5 ಲಕ್ಷ ದಂಡ ವಿಧಿಸಿತ್ತು.
2023ರ ಜನವರಿ 28ರ ಒಳಗೆ ಐದು ಲಕ್ಷ ರೂಪಾಯಿ ದಂಡದ ಮೊತ್ತವನ್ನು ಪಾವತಿಸುವುದನ್ನು ಆಧರಿಸಿ ರಾಜ್ಯ ಸರ್ಕಾರದ ಕಾಲಾವಕಾಶ ವಿಸ್ತರಣೆ ಮನವಿಯನ್ನು ಪರಿಗಣಿಸಲಾಗಿದೆ. ಈ ಪೈಕಿ ತಲಾ ಎರಡು ಲಕ್ಷ ರೂಪಾಯಿಗಳನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಬೆಂಗಳೂರು ವಕೀಲರ ಸಂಘ ಹಾಗೂ ಒಂದು ಲಕ್ಷ ರೂಪಾಯಿಯನ್ನು ವಕೀಲರ ಗುಮಾಸ್ತರ ಕಲ್ಯಾಣ ನಿಧಿಯಲ್ಲಿ ಠೇವಣಿ ಇಡಬೇಕು ಎಂದು ಆದೇಶಿಸಿತ್ತು.
ರಾಜ್ಯ ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ.ಎನ್ ಫಣೀಂದ್ರ ವಾದ ಮಂಡಿಸಿದರು.