What to do when mobile lost: ಮೊಬೈಲ್ ಕಳೆದುಹೋದರೆ ಈ ಕೆಲಸ ಮೊದಲು ಮಾಡಿ: ಡಿಜಿಪಿ ಟ್ವೀಟ್
ಹೇಳಿ ಕೇಳಿ ಇದು ಡಿಜಿಟಲ್ ಯುಗ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರ ಕೈಯಲ್ಲಿ ಸ್ಮಾರ್ಟ್ ಫೋನ್ ಗಳು ಹರಿದಾಡಿ ಸಂಚಲನ ಮೂಡಿಸುತ್ತಿದೆ. ಇಂದಿನ ಕಾಲದಲ್ಲಿ ಮೊಬೈಲ್ ಎಂಬ ಸಾಧನದ ಬಳಕೆ ಮಾಡದವರೆ ವಿರಳ. ಮೊಬೈಲ್ ಎಂಬ ಸಾಧನದ ಹೆಚ್ಚಿನವರ ಪಾಲಿನ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಆದರೆ, ಈ ಮೊಬೈಲ್ ಕಳೆದು ಹೋದರೆ ಏನೂ ಮಾಡೋದು ಎಂಬ ಗೊಂದಲ ಹೆಚ್ಚಿನವರಿಗೆ ಕಾಡದಿರದು.
ಹೌದು!!! ಇಂದಿನ ದಿನದಲ್ಲಿ ಮೊಬೈಲ್ ಕಾಂಟ್ಯಾಕ್ಟ್ ನಿಂದ ಹಿಡಿದು ಬ್ಯಾಂಕ್ ಜೊತೆಗೆ ಇನ್ನಿತರ ಮುಖ್ಯ ಮಾಹಿತಿಗಳು ಈ ಮೊಬೈಲ್ ಎಂಬ ಸಾಧನದ ಒಳಗೆ ಭದ್ರವಾಗಿರುತ್ತದೆ. ಹೀಗಿರುವಾಗ, ಮೊಬೈಲ್ ಕಳೆದುಹೋದರೆ ನಮ್ಮ ಖಾಸಗಿ ಮಾಹಿತಿಗಳು,ಹಣ ಲೂಟಿಯಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ, ಜನರಿಗೆ ಮೊಬೈಲ್ ಕಳೆದುಹೋದರೆ ಏನು ಮಾಡೋದು ಎಂಬ ಗೊಂದಲವನ್ನು ಪರಿಹರಿಸುವ ನಿಟ್ಟಿನಲ್ಲಿ ರಾಜ್ಯ ಡಿಜಿಪಿ ವೀಡಿಯೋವೊಂದನ್ನು ಹಂಚಿಕೊಂಡು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಸರ್ಕಾರದ ಸಿಇಐಆರ್ ಪೋರ್ಟಲ್ನಲ್ಲಿ ಕಳೆದುಹೋದ ಮೊಬೈಲ್ ಅನ್ನು ಬ್ಲಾಕ್ ಮಾಡಿಸಲೂ ಅವಕಾಶವಿದ್ದು, ಹಾಗಾದ್ರೆ ಅದಕ್ಕೂ ಮೊದಲು ಏನು ಮಾಡಬೇಕು ಎಂಬ ಮಾಹಿತಿ ನಿಮಗಾಗಿ.
ಮೊಬೈಲ್ನಲ್ಲಿ ಲಾಗಿನ್ ಪಾಸ್ವರ್ಡ್ಗಳಿಂದ ಹಿಡಿದು ನಮ್ಮ ಅದೆಷ್ಟೋ ಸೂಕ್ಷ್ಮ ವಿಷಯಗಳಿರುತ್ತವೆ. ಹೀಗಾಗಿ, ಮೊಬೈಲ್ ಕಳೆದುಹೋದರೆ (Lost Mobile) ನಮ್ಮ ಖಾಸಗಿ ಮಾಹಿತಿಗಳು ದುರ್ಬಳಕೆ ಆಗುವ ಸಾಧ್ಯತೆ ದಟ್ಟವಾಗಿರುತ್ತದೆ. ಸದ್ಯ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಉಪಯುಕ್ತ ಮಾಹಿತಿ ಹಂಚಿಕೊಂಡಿದ್ದಾರೆ. ಸಿಇಐಆರ್ ಪೋರ್ಟಲ್ ಮೂಲಕ ಈಗಾಗಲೇ ಬೀದರ್ ಪ್ರಕರಣವೊಂದನ್ನು ಭೇದಿಸಿರುವ ಕುರಿತು ಉಲ್ಲೇಖಿಸಿ ಡಿಜಿಪಿ ಟ್ವೀಟ್ ಮಾಡಿದ್ದಾರೆ. ಬೀದರ್ನ ಬಸವಕಲ್ಯಾಣದ ರಂಜಾನ್ ಖಾನ್ ಎಂಬುವವರು ಎರಡು ತಿಂಗಳ ಹಿಂದಷ್ಟೇ ಕಳೆದುಕೊಂಡ ವಿವೊ ವಿ11 ಮೊಬೈಲ್ ಅನ್ನು ಸಿಇಐಆರ್ ಪೋರ್ಟಲ್ ನೆರವಿನಿಂದ ಯಶಸ್ವಿಯಾಗಿ ಶೋಧ ನಡೆಸಿರುವುದನ್ನು ಕೂಡ ಪೊಲೀಸ್ ಮಹಾನಿರ್ದೇಕರು ತಿಳಿಸಿದ್ದಾರೆ.
ಮೊಬೈಲ್ ಕಳೆದುಹೋದ ಸಂದರ್ಭದಲ್ಲಿ ಮೊದಲಿಗೆ, ಆದಷ್ಟೂ ಬೇಗ ಸಮೀಪದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿ ಎಫ್ಐಆರ್ ನೊಂದಾಯಿಸಿಕೊಳ್ಳಬೇಕು. ಆ ಬಳಿಕ, ಎಫ್ಐಆರ್ನ ಪಿಡಿಎಫ್ ಕಾಪಿ ಮಾಡಿಟ್ಟು ಕೊಂಡಿರ ಬೇಕಾಗುತ್ತದೆ. ಕಳೆದುಹೋದ ಮೊಬೈಲ್ ನಂಬರಿನ ಡೂಪ್ಲಿಕೇಟ್ ಸಿಮ್ ಕಾರ್ಡ್ ನಿಮ್ಮ ಹೆಸರಿನಲ್ಲಿದ್ದರೆ ಮಾತ್ರ ಡುಪ್ಲಿಕೇಟ್ ಸಿಮ್ ಕಾರ್ಡ್ ಪಡೆಯಬಹುದು. ಡೂಪ್ಲಿಕೇಟ್ ಸಿಮ್ ಕಾರ್ಡ್ ಪಡೆದುಕೊಂಡ ನಂತರ ಓಟಿಪಿ ಮೂಲಕ ಸಿಮ್ ಆಕ್ಟಿವೇಟ್ ಮಾಡಬೇಕಾಗುತ್ತದೆ. ಐಎಂಇಐ ನಂಬರ್ ಇದ್ದರೆ ನಮೂದಿಸಬಹುದಾಗಿದ್ದು, ಒಂದು ವೇಳೆ ಇಲ್ಲ ಎಂದಾದರೆ, ಪೊಲೀಸ್ ಕಂಪ್ಲೇಂಟ್ ನಂಬರ್ ಅನ್ನು ಹಾಕಿದ ಬಳಿಕ ಕಂಪ್ಲೇಂಟ್ನ ಪಿಡಿಎಫ್ ಪ್ರತಿಯನ್ನು ಲಗತ್ತಿಸಬೇಕಾಗುತ್ತದೆ.
ಈ ಪ್ರಕ್ರಿಯೆಯ ನಂತರ, ಮೊಬೈಲ್ ಮಾಲೀಕರ ಹೆಸರು, ವಿಳಾಸ, ಅವರ ಆಧಾರ್ ಇತ್ಯಾದಿ ಗುರುತನ್ನು ಸೂಚಿಸುವ ವಿವರಗಳ ಮಾಹಿತಿ ನೀಡಬೇಕು. ಕೊನೆಗೆ ಮೊಬೈಲ್ಗೆ ಒಟಿಪಿ ದೊರೆಯಲಿದ್ದು, ಸಬ್ಮಿಟ್ ಮಾಡಿದ್ದಲ್ಲಿ ನಿಮ್ಮ ಅರ್ಜಿ ಸ್ವೀಕೃತವಾಗುತ್ತದೆ. ಈ ಪ್ರಕ್ರಿಯೆಯಾದ 24 ಗಂಟೆಯಲ್ಲಿ ನಿಮ್ಮ ಮೊಬೈಲ್ ಅನ್ನು ಬ್ಲಾಕ್ ಮಾಡಲಾಗುವ ಕುರಿತು ಡಿಜಿಪಿ ಹಂಚಿಕೊಂಡಿರುವ ವೀಡಿಯೊದಲ್ಲಿ ಮಾಹಿತಿ ನೀಡಿದ್ದು, ಆದರೆ, ಸಿಇಐಆರ್ ಪೋರ್ಟಲ್ಗೆ ಹೋಗುವ ಮೊದಲು ಸಮೀಪದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವುದಲ್ಲದೆ ನಕಲಿ ಸಿಮ್ ಕಾರ್ಡ್ ಪಡೆಯುವುದನ್ನು ಮರೆಯಬಾರದು.