Smokemon smart Necklace: ಧೂಮಪಾನ ಬಿಡಬೇಕು ಅನ್ನೋರಿಗೆ ಈ ಸಾಧನ ನೆರವಾಗೋದು ಪಕ್ಕಾ!
ಕೆಲವೊಂದು ಕೆಟ್ಟ ಹವ್ಯಾಸಗಳು ಅಭ್ಯಾಸವಾಗಿ ಚಟವಾಗಿ ಪರಿಣಮಿಸುತ್ತದೆ. ಎಷ್ಟೋ ಮಂದಿ ಸಿಗರೇಟ್ ಬಿಡಬೇಕು ಅಂದುಕೊಳ್ಳುತ್ತಾರೆ. ಆದ್ರೆ, ವಾಸ್ತವದಲ್ಲಿ ಈ ಚಟ ಎಷ್ಟು ಅವರೊಂದಿಗೆ ಬೆರೆತು ಹೋಗಿರುತ್ತದೆ ಎಂದರೆ ನೀ ಎನ್ನ ಬಿಟ್ಟರೂ ನಾನಿನ್ನ ಬಿಡಲಾರೆ ಅನ್ನೋ ಹಾಗೆ ಬಿಟ್ಟಿರಲಾದಷ್ಟು ಹಾಸು ಹೊಕ್ಕಾಗಿರುತ್ತದೆ. ಏನೇ ಆಗಲಿ ನಾನು ಸಿಗರೇಟ್ ಬೀಡಿ ಸೇದುವ ಹವ್ಯಾಸ ಬಿಡಲೇ ಬೇಕು ಎಂದು ದೃಢ ಸಂಕಲ್ಪ ಹೊತ್ತಿದ್ದರೆ ಈ ಮಾಹಿತಿ ತಿಳಿದುಕೊಳ್ಳೋದು ಉತ್ತಮ. ಏಕೆಂದರೆ, ನಿಮಗೆ ಸಹಾಯ ಮಾಡಲೆಂದೇ ಸಂಶೋಧಕರು ಸಾಧನವೊಂದನ್ನು ಅನ್ವೇಷಣೆ ಮಾಡಿದ್ದಾರೆ.
ಈ ಸಾಧನದ ಮೂಲಕ ಧೂಮಪಾನ ಮಾಡುವ ವ್ಯಕ್ತಿಯು ಸಿಗರೇಟ್ ಅನ್ನು ಎಷ್ಟು ಹೊತ್ತು ಬಾಯಿಯಲ್ಲಿ ಹಿಡಿದಿಟ್ಟು ಪಫ್ ತೆಗೆದುಕೊಳ್ಳುತ್ತಾರೆ. ಈ ಸಂದರ್ಭದ ಉಸಿರಾಟ, ಪಫ್ಗಳ ನಡುವೆ ತೆಗೆದುಕೊಳ್ಳುವ ಸಮಯ, ಅವರ ಬಾಯಿಯಲ್ಲಿ ಎಷ್ಟು ಸಮಯ ಸಿಗರೇಟ್ ಇದೆ ಎಂಬುದನ್ನು ಪತ್ತೆ ಮಾಡಬಹುದು ಎಂದು ಹಿರಿಯ ತನಿಖಾಧಿಕಾರಿಗಳು ಮಾಹಿತಿ ನೀಡಿದ್ದು, ನಬಿಲ್ ಅಲ್ಶುರಾಫಾ, ನಾರ್ತ್ವೆಸ್ಟರ್ನ್ ಯೂನಿವರ್ಸಿಟಿ ಫೀನ್ಬರ್ಗ್ ಸ್ಕೂಲ್ ಆಫ್ ಮೆಡಿಸಿನ್ನಲ್ಲಿ ಸಹಾಯಕ ಪ್ರಾಧ್ಯಾಪಕರು ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಹಾಗಿದ್ರೆ, ಆ ಸಾಧನ ಯಾವುದು ಎಂಬ ಮಾಹಿತಿ ಇಲ್ಲಿದೆ ನೋಡಿ.
(SmokeMon) ಎಂಬ ಲ್ಯಾಪಿಸ್ ನೀಲಿ ಬಣ್ಣದ ಪೆಂಡೆಂಟ್ನ್ನು ಹೋಲುವ ಸ್ಮಾರ್ಟ್ ನೆಕ್ಲೇಸ್ನಂತೆ (smart necklace) ಧರಿಸುವ ಸಾಧನವಾಗಿದ್ದು, ಸದ್ಯ ಈ ವಿಶೇಷ ಸಾಧನದ ಪ್ರಯೋಜನ ತಿಳಿದರೆ ನೀವು ಕೂಡ ಈ ಸಾಧನದ ಬಳಕೆ ಮಾಡುವ ಮನಸು ಮಾಡುವ ಸಾಧ್ಯತೆಗಳಿವೆ. ಸಂಶೋಧಕರು ಅಭಿವೃದ್ಧಿಪಡಿಸಿರುವ ಈ ಸಾಧನ, ನೀವು ಪ್ರತಿದಿನ ಎಷ್ಟು ಸಲ ಧೂಮಪಾನ ಮಾಡುತ್ತೀರಾ ಎಂಬುದನ್ನು ಕಂಡು ಹಿಡಿಯಲು ನೆರವಾಗುತ್ತದೆ. ಅಷ್ಟೆ ಅಲ್ಲದೇ, ಪ್ರತಿಯೊಂದು ಪಫ್ನೊಂದಿಗೆ ನಿಮ್ಮ ಧೂಮಪಾನದ ಅಭ್ಯಾಸವನ್ನು ಟ್ರ್ಯಾಕ್ ಕೂಡ ಮಾಡಲು ನೆರವಾಗುತ್ತದೆ. ನೀವು ಸಿಗರೇಟು ಸೇದುವ ಸಂದರ್ಭದಲ್ಲಿ ಅದರ ಶಾಖವನ್ನು ಟ್ರ್ಯಾಕ್ ಮಾಡುವ ಸಲುವಾಗಿ ಲ್ಯಾಪಿಸ್ ನೀಲಿ ಬಣ್ಣದ ಪೆಂಡೆಂಟ್ ನೆಕ್ಲೇಸ್ ಅನ್ನು ಹೋಲುವ ಕುತ್ತಿಗೆಗೆ ಧರಿಸಬಹುದಾದ ಸಾಧನವನ್ನು ಅಭಿವೃದ್ಧಿಪಡಿಸಲಾಗಿದೆ.
ಸ್ಮಾರ್ಟ್ ನೆಕ್ಲೇಸ್ ಅನ್ನು ಸ್ಮೋಕಿಂಗ್ ಟೊಪೋಗ್ರಫಿ ಎಂದು ಕೂಡ ಕರೆಯಲಾಗುತ್ತದೆ. ಇದು ಧೂಮಪಾನಿಗಳಿಗೆ ಎಷ್ಟು ಇಂಗಾಲದ ಮಾನಾಕ್ಸೈಡ್ ಅನ್ನು ಒಡ್ಡಲಾಗುತ್ತದೆ ಎಂಬುದನ್ನು ತಿಳಿಸುವ ಮೌಲ್ಯಮಾಪನ ಮಾಡುವ ಸಾಧನವಾಗಿದೆ. ನಮ್ಮ ಜೀವಕೋಶದ ಒಳಗಿನ ಹಾಗೂ ಇತರರ ಮೇಲೆ ಧೂಮಪಾನ ಯಾವ ರೀತಿಯ ಪರಿಣಾಮವನ್ನು ಬೀರುತ್ತದೆ ಎಂದು ತಿಳಿಯುತ್ತದೆ. ಸ್ಮೋಕ್ಮಾನ್ ಸ್ಮಾರ್ಟ್ ನೆಕ್ಲೇಸ್ನ್ನು ಬಳಕೆ ಮಾಡಿದರೆ, ತಂಬಾಕು ಸಂಬಂಧಿತ ಕಾಯಿಲೆಗಳಾದ ಕ್ಯಾನ್ಸರ್, ಹೃದ್ರೋಗ, ಪಾರ್ಶ್ವವಾಯು, ಶ್ವಾಸಕೋಶದ ಕಾಯಿಲೆ, ಮಧುಮೇಹ, ಸಿಒಪಿಡಿ, ದೀರ್ಘಕಾಲದ ಬ್ರಾಂಕೈಟಿಸ್ನ ರಾಸಾಯನಿಕ ರೋಗಗಳ ಕುರಿತ ಮಾಹಿತಿ ಪಡೆದುಕೊಳ್ಳಬಹುದು. ಸಿಗರೇಟ್ ಸೇದುವ ಹವ್ಯಾಸ ಬಿಡಬೇಕು ಅಂದುಕೊಳ್ಳುವವರಿಗೆ ಈ ಸಾಧನ ನೆರವಾಗುವ ಸಾಧ್ಯತೆ ದಟ್ಟವಾಗಿದೆ.