ತಮ್ಮ ಹೊಸ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ ಜನಾರ್ದನ ರೆಡ್ಡಿ! ಪ್ರಮುಖ ಭರವಸೆಗಳೇನು ಗೊತ್ತಾ?

ಕರ್ನಾಟಕದಲ್ಲಿ ಇತ್ತೀಚೆಗಷ್ಟೆ ಜನ್ಮ ತಾಳಿ, ಉತ್ತರ ಕರ್ನಾಟಕದ ಭಾಗದಲ್ಲಿ ನೆಲೆಯೂರಲು ಶತಾಯ ಗತಾಯ ಪ್ರಯತ್ನ ಮಾಡುತ್ತಿರುವ ಪಕ್ಷವೆಂದರೆ ಗಣಿಧಣಿ ಜನಾರ್ದನ ರೆಡ್ಡಿಯವರ ಲ್ಯಾಣ ಕರ್ನಾಟಕ ಪ್ರಗತಿ ಪಕ್ಷ. ಈ ಪಕ್ಷದ ಮೂಲಕ ಮೂಲಕ ರಾಜಕೀಯದ ಎರಡನೇ ಇನ್ನಿಂಗ್ಸ್​ ಆರಂಭಿಸಿರುವ ರೆಡ್ಡಿಯವರು ಇಂದು ತಮ್ಮ ನೂತನ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

 

ಮಂಗಳವಾರ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಬೃಹತ್ ಸಮಾವೇಶ ನಡೆಸಿದ ಜನಾರ್ದನ ರೆಡ್ಡಿ 2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದರು. ಹೊಸ ಪಕ್ಷ ಕಟ್ಟಿದ ಬಳಿಕ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಬಿಡುವು ಇಲ್ಲದೆ ಪ್ರಚಾರ ಕಾರ್ಯ ಶುರುಮಾಡಿದ್ದಾರೆ. ಇಂದು ಸಿಂಧನೂರು ಕ್ಷೇತ್ರದಲ್ಲಿ ಪತ್ನಿ ಅರುಣಾಲಕ್ಷ್ಮೀ ಜತೆ ಪಾದಯಾತ್ರೆ ನಡೆಸಿ, ಸುಮಾರು 15 ಕಿಲೋ ಮೀಟರ್​ ಹೆಜ್ಜೆ ಹಾಕಿದ್ದಾರೆ. ಬಳಿಕ ರೆಡ್ಡಿ ದಂಪತಿ, ರೈತ ದಂಪತಿಗಳ ಪಾದಪೂಜೆ ಮಾಡಿ ಸುಕ್ಷೇತ್ರ ಅಂಬಾಮಠದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ.

ಕೊಪ್ಪಳ, ಬಳ್ಳಾರಿ ಮೇಲೆ ಕಣ್ಣಿಟ್ಟಿರುವ ರೆಡ್ಡಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪ್ರಣಾಳಿಕೆಯಲ್ಲಿ ರೈತರಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಹೌದು, ಜನಾರ್ದನ ರೆಡ್ಡಿ ಪಕ್ಷದ ರೈತ ಪ್ರಣಾಳಿಕೆಯಲ್ಲಿ ಪ್ರತಿ ವರ್ಷ ಪ್ರತಿ ರೈತನ ಅಕೌಂಟ್‌ಗೆ 15 ಸಾವಿರ ಹಣ ಜಮಾ ಮಾಡಲಾಗುವುದು. ರೈತರ ಮನೆ ಬಾಗಿಲಿಗೆ ಅಧಿಕಾರಿಗಳು ಹೋಗಿ ಸಮಸ್ಯೆ ಆಲಿಸಲು ಕ್ರಮ ಕೈಗೊಳ್ಳಲಾಗುವುದು. ಎಲ್ಲ ಯೋಜನೆಗಳನ್ನು ಮನೆ ಮನೆಗೆ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು,‌ ನೀರಾವರಿ ಯೋಜನೆ ಸದೃಢಗೊಳಿಸಲಾಗುತ್ತದೆ. ಸಕಾಲಕ್ಕೆ ರಸ ಗೊಬ್ಬರಗಳನ್ನು ರೈತರಿಗೆ ನೀಡಲು ಕ್ರಮ ತೆಗೆದುಕೊಳ್ಳುವ ಬಗ್ಗೆ ಪ್ರಣಾಳಿಕೆಯಲ್ಲಿ ಹೇಳಲಾಗಿದೆ.

ಅಲ್ಲದೆ ಹೊಸ ಪಕ್ಷ ಸ್ಥಾಪನೆ ಮಾಡಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಗಳು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ. ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ ಸಹ ಪತಿಗೆ ಬೆಂಬಲವಾಗಿ ನಿಂತಿದ್ದಾರೆ. ಅವರು ಚುನಾವಣೆಗೆ ಬಳ್ಳಾರಿಯಿಂದ ಕಣಕ್ಕಿಳಿಯುವ ನಿರೀಕ್ಷೆ ಇದೆ.

ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಜನಾರ್ದನ ರೆಡ್ಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ನಾನು ಕೆಲಸ ಮಾಡಿದ ಪಕ್ಷದಿಂದ ಸ್ಥಾನಮಾನ ಸಿಗದ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಕಲ್ಯಾಣ ಪ್ರಗತಿ ಪಕ್ಷ ಸ್ಥಾಪನೆ ಮಾಡಿ ಮುಂದೆ ಹೆಜ್ಜೆ ಹಾಕುತ್ತೇನೆ. ಕಳೆದ ಚುನಾವಣೆಯಲ್ಲಿ ನನ್ನನ್ನು ಚಿತ್ರದುರ್ಗದ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರಕ್ಕೆ ಸೀಮಿತಗೊಳಿಸದೇ ಇಡೀ ರಾಜ್ಯದಲ್ಲಿ ಸಕ್ರಿಯವಾಗಿರಲು ಅವಕಾಶ ಕೊಟ್ಟಿದ್ದರೆ ಬಿಜೆಪಿ ಪಕ್ಷಕ್ಕೆ 130ಕ್ಕೂ ಅಧಿಕ ಸ್ಥಾನಗಳು ಬರುತ್ತಿದ್ದವು’ ಎಂದು ಹೇಳಿದ್ದಾರೆ.

Leave A Reply

Your email address will not be published.