Areca Nut : ಅಡಿಕೆ ಆರೋಗ್ಯವರ್ಧಕವೇ ಹೊರತು Cancer ಕಾರಕವಲ್ಲ : ರಾಮಯ್ಯ ವಿವಿಯ ಸಂಶೋಧನೆಯಿಂದ ಸಾಬೀತು – ಆರಗ ಜ್ಞಾನೇಂದ್ರ
ಅಡಿಕೆ ಬೆಳೆಗಾರರಿಗೆ (Areca Nut) ರಾಜ್ಯ ಸರ್ಕಾರ ಸಿಹಿಸುದ್ಸಿ ನೀಡಿದೆ : ಅಡಿಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಇಲ್ಲ ಎಂದು ವರದಿ ಹೇಳಿದೆ. ಅಡಿಕೆಯಲ್ಲಿ ಕ್ಯಾನ್ಸರ್ (Cancer) ಕಾರಕ ಅಂಶಗಳು ಇಲ್ಲ, ಔಷಧೀಯ ಗುಣವಿದೆ ಎಂದು ರಾಮಯ್ಯ ತಾಂತ್ರಿಕ ವಿವಿ ವರದಿ ನೀಡಿದ್ದು, ಸುಪ್ರೀಂ ಕೋರ್ಟಿಗೆ ಅಡಿಕೆ ಸೇವನೆಯಿಂದ ಆಗುವ ಹಲವು ಆರೋಗ್ಯ ಲಾಭಗಳ ಕುರಿತು ಮಾಹಿತಿ ನೀಡಲಾಗುವುದು. ಅಲ್ಲದೆ ಸಂಶೋಧನಾ ಫಲಿತಾಂಶ ವರದಿಗಳನ್ನು ಸಲ್ಲಿಸಲಾಗುವುದು ಎಂದು ಆರಗ ಜ್ಞಾನೇಂದ್ರ (Araga Jnanendra) ಅವರು ತಿಳಿಸಿದರು.
ಮಂಗಳವಾರ ವಿಧಾನ ಪರಿಷತ್ತಿನಲ್ಲಿ ಗಮನ ಸೆಳೆವ ಸೂಚನೆಯ ವೇಳೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಾತನಾಡಿ, ಅಡಿಕೆ ಸೇವನೆಯಿಂದ ಹತ್ತು ಹಲವು ಆರೋಗ್ಯ ಲಾಭಗಳಿವೆ ಎಂದು ತಜ್ಞರ ಸಂಶೋಧನಾ ವರದಿಯಿಂದ ಸಾಬೀತಾಗಿದೆ ಎಂದು ಹೇಳಿದರು.
ವರ್ಷದ ಹಿಂದೆಯೇ ಅಡಿಕೆ ಬಗ್ಗೆ ಸಂಶೋಧನೆ ನಡೆಸಲು ರಾಮಯ್ಯ ತಾಂತ್ರಿಕ ವಿವಿಗೆ ಹೇಳಿದ್ದೆವು , ಇದೀಗ ರಾಮಯ್ಯ ತಾಂತ್ರಿಕ ವಿವಿ ವರದಿ ಸಲ್ಲಿಕೆ ಮಾಡಿದೆ. ಈ ವರದಿಯಲ್ಲಿ ಅಡಿಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಇಲ್ಲ, ಔಷಧೀಯ ಗುಣವಿದೆ ಎಂದು ಉಲ್ಲೇಖಿಸಲಾಗಿದೆ. ಸದ್ಯದಲ್ಲಿಯೇ ಅಂತರಾಷ್ಟ್ರೀಯ ಮಾನ್ಯತೆ ಪಡೆದ ನಿಯತಕಾಲಿಕಾದಲ್ಲಿ ಈ ಫಲಿತಾಂಶ ಪ್ರಕಟಣೆಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಸಂಸ್ಥೆಯು ನಡೆಸಿದ ಪ್ರಾಥಮಿಕ ಸಂಶೋಧನೆಗಳ ಪ್ರಕಾರ, ಅಡಿಕೆ ತೀವ್ರತರದ ಗಾಯವನ್ನು ಗುಣಪಡಿಸುವ ಗುಣ ಹೊಂದಿದೆ, ಅದು ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಡಬಲ್ಲುದು. ಹೃದಯ ಸಂಬಂಧಿತ ಕಾಯಿಲೆಗಳು, ಉದರದ ಅಲ್ಸರ್ ಹಾಗೂ ಇನ್ನಿತರ ಸಮಸ್ಯೆಗಳ ಪರಿಹಾರಕ್ಕೆ ಅಡಕೆ ಸೇವನೆಯು ಆಶಾದಾಯಕ ಫಲಿತಾಂಶವನ್ನು ನೀಡಿದೆ. ಅಡಕೆಯ ಬಗ್ಗೆ ನಡೆದ ಈ ಸಂಶೋಧನೆಯ.ಬಗ್ಗೆ ಸುಪ್ರೀಂ ಕೋರ್ಟಿಗೆ ಮಾಹಿತಿ ಒದಗಿಸಲಾಗುವುದು. ಜೊತೆಗೆ ಅಡಿಕೆ ಸೇವನೆಯಿಂದ ಆಗುವ ಆರೋಗ್ಯ ಲಾಭಗಳ ಕುರಿತು ಕಂಡು ಬಂದಿರುವ ಸಂಶೋಧನಾ ಫಲಿತಾಂಶ ವರದಿಗಳನ್ನು ಸಲ್ಲಿಸಲಾಗುವುದು ಎಂದು ಸದನಕ್ಕೆ ತಿಳಿಸಿದರು.
ಗೃಹ ಸಚಿವ ಆರಗ ಜ್ಞಾನೇಂದ್ರರವರ ಅಧ್ಯಕ್ಷತೆಯಲ್ಲಿ ವಿಕಾಸಸೌಧದಲ್ಲಿ ರಾಜ್ಯ ಅಡಕೆ ಟಾಸ್ಕ್ ಫೋರ್ಸ್ ಮಹತ್ವದ ಸಭೆ ನಡೆಸಿತ್ತು. ರಾಜ್ಯದಲ್ಲಿ ಅಡಿಕೆ ಬೆಳೆ ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆಗಳು ಅಡಿಕೆ ಮಾರುಕಟ್ಟೆ ಎದುರಿಸುತ್ತಿರುವ ಬದಲಾವಣೆಗಳು ಹಾಗೂ ಇನ್ನಿತರ ಸಂಬಂಧಿತ ವಿಷಯಗಳ ಕುರಿತು ಚರ್ಚಿಸಲಾಯಿತು. ರಾಜ್ಯ ತೋಟಗಾರಿಕಾ ವಿಶ್ವ ವಿದ್ಯಾಲಯದ ಉಪ ಕುಲಪತಿಯಾದ ಆರ್. ಸಿ. ಜಗದೀಶ್, ರಾಜ್ಯ ಅಡಿಕೆ ಕಾರ್ಯಪಡೆಯ ರಾಜ್ಯ ಮಂಡಳಿಯ ಹಿರಿಯ ಸದಸ್ಯರು ಸೇರಿದಂತೆ ರಾಜ್ಯ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕರು ಹಲವರು ಸಭೆಯಲ್ಲಿ ಭಾಗವಹಿಸಿದ್ದರು.