EPF ಬಡ್ಡಿದರ ಶೇ.8 ನಿಗದಿ ಸಾಧ್ಯತೆ!
ಇಪಿಎಫ್ ಅಥವಾ ಕಾರ್ಮಿಕ ಭವಿಷ್ಯ ನಿಧಿ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗಾಗಿ ಭಾರತ ಸರಕಾರ ಜಾರಿಗೆ ತಂದಿರುವ ಪ್ರಮುಖ ಉಳಿತಾಯ ಯೋಜನೆಯಾಗಿದೆ. ಉದ್ಯೋಗಿಗಳ ಪಾಲಿಗೆ ಪಿಎಫ್ (PF) ಮೊತ್ತವು ಸಂಕಷ್ಟದ ಸಂದರ್ಭಗಳಲ್ಲಿ ಆರ್ಥಿಕ ನೆರವನ್ನು ನೀಡುವ ಖಾತೆ ಎಂದರೇ ತಪ್ಪಾಗಲಾರದು. ಕುಟುಂಬದ ಸದಸ್ಯರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುತ್ತದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಯುನಿವರ್ಸಲ್ ಅಕೌಂಟ್ ನಂಬರ್ (UAN) ಮೂಲಕ ಇ-ನಾಮನಿರ್ದೇಶನವನ್ನು ಮಾಡಬಹುದಾಗಿದೆ. ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್ ಅಥವಾ ಉದ್ಯೋಗಿಗಳ ಭವಿಷ್ಯ ನಿಧಿ) ಖಾತೆ ಹೊಂದಿದ್ದರೆ, ನೀವು ಈ ಸುದ್ದಿಯನ್ನು ತಿಳಿದುಕೊಂಡರೆ ಒಳ್ಳೆಯದು.
2022-23ನೇ ಆರ್ಥಿಕ ಸಾಲಿಗೆ ನೌಕರರ ಭವಿಷ್ಯ ನಿಧಿ (ಇಪಿಎಫ್) ಠೇವಣಿ ಮೇಲಿನ ಬಡ್ಡಿದರ ಹೆಚ್ಚಳವಾಗುತ್ತದೆ ಎಂದು ನಿರೀಕ್ಷೆಯಿಟ್ಟುಕೊಂಡಿದ್ದ ಉದ್ಯೋಗಿಗಳಿಗೆ ಕಹಿ ಸುದ್ದಿಯೊಂದು ಹೊರಬಿದ್ದಿದೆ. ಇಪಿಎಫ್ ಠೇವಣಿ ಬಡ್ಡಿದರವನ್ನು ಶೇ.8ಕ್ಕೆ ನಿಗದಿಪಡಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗುತ್ತಿದೆ.
ಭಾರತದಲ್ಲಿ ವೇತನ ಪಡೆಯುವ ಎಲ್ಲ ವ್ಯಕ್ತಿಗಳು ನೌಕರರ ಭವಿಷ್ಯ ನಿಧಿ ಸಂಸ್ಥೆಯಲ್ಲಿ (EPFO) ಖಾತೆ ಹೊಂದಿರುವುದಲ್ಲದೆ, ಪ್ರತಿ ತಿಂಗಳು ನೌಕರರ ಮೂಲ ವೇತನದಿಂದ (Basic Salary) ಶೇ. 12ರಷ್ಟು ಮೊತ್ತವನ್ನು ಪಿಎಫ್ ಖಾತೆಗೆ ಜಮಾ ಮಾಡಲಾಗುತ್ತದೆ. ಇದೇ ರೀತಿ, ಕಂಪನಿ (Company) ಕೂಡ ಶೇ.12 ರಷ್ಟು ಪಾಲನ್ನು ತನ್ನ ನೌಕರನ ಪಿಎಫ್ ಖಾತೆಗೆ ಜಮೆ ಮಾಡುತ್ತದೆ. ನಿವೃತ್ತಿ ಅಥವಾ ನಿವೃತ್ತಿಯ ನಂತರದ ಪ್ರಯೋಜನ ಯೋಜನೆಯಾಗಿದ್ದು, ಈ ಸೌಲಭ್ಯವು ಎಲ್ಲ ವೇತನದಾರರಿಗೆ ದೊರೆಯುತ್ತದೆ.
ಸರ್ಕಾರ 2022ರ ಮಾರ್ಚ್ ನಲ್ಲಿ ಇಪಿಎಫ್ ಠೇವಣಿಗಳ ಮೇಲಿನ 2021-22 ನೇ ಸಾಲಿನ ಬಡ್ಡಿದರವನ್ನು ಬಡ್ಡಿದರವನ್ನು ಶೇ.8.5ರಿಂದ ಶೇ.8.1ಗೆ ಇಳಿಸಲು ತೀರ್ಮಾನ ಕೈಗೊಂಡಿತ್ತು. ಈ ವೇಳೆ, ಕಾರ್ಮಿಕ ಸಂಘಟನೆಗಳ ಜೊತೆಗೆ ವಿಪಕ್ಷಗಳು ಈ ನಿರ್ಧಾರಕ್ಕೆ ವಿರೋಧ ವ್ಯಕ್ತ ಪಡಿಸಿ ಅಸಮಾಧಾನ ಹೊರ ಹಾಕಿದ್ದರು. ಆದರೂ ಕೂಡ, ಕೇಂದ್ರ ಕಾರ್ಮಿಕ ಸಚಿವಾಲಯವು ಇಪಿಎಫ್ ಬಡ್ಡಿದರವನ್ನು ಶೇ.8.5ರಿಂದ ಶೇ.8.1ಕ್ಕೆ ಇಳಿಸುವ ಮಂಡಳಿಯ ನಿರ್ಧಾರಕ್ಕೆ ಅಸ್ತು ಎಂದು ಅನುಮೋದಿಸಿತ್ತು.2021-22ನೇ ಆರ್ಥಿಕ ಸಾಲಿನಲ್ಲಿ ಪಿಎಫ್ ಠೇವಣಿಗಳ ಬಡ್ಡಿದರವನ್ನು ಸರ್ಕಾರ ಶೇ8.1ಕ್ಕೆ ಇಳಿಕೆ ಮಾಡಿದ್ದು, ಇದು ನಾಲ್ಕು ದಶಕಗಳ ಬಳಿಕದ ಅತೀಕಡಿಮೆ ಬಡ್ಡಿದರ ಎನ್ನಲಾಗಿದೆ.
ರೆಪೋ ದರ ಏರಿಕೆಯಾದರೆ, ವೈಯಕ್ತಿಕ ಸಾಲದ ಇಎಂಐ ಎಷ್ಟು ಏರಿಕೆಯಾಗುತ್ತದೆ??
ಇಪಿಎಫ್ ಠೇವಣಿಗಳಿಗೆ 2015-16ರಲ್ಲಿ ಶೇ.8.8, 2016-17ರಲ್ಲಿ ಶೇ.8.65, 2017-18ರಲ್ಲಿ ಶೇ.8.55, 2018-19ರಲ್ಲಿ ಶೇ.8.65, 2019-20ರಲ್ಲಿ ಶೇ.8.5 ಮತ್ತು 2020-21ರಲ್ಲಿ ಶೇ.8.5ರಷ್ಟುಬಡ್ಡಿ ನೀಡಲಾಗಿತ್ತು.
ಕಳೆದ ವಾರ್ಷಿಕ ಸಾಲಿನಲ್ಲಿ ಪಿಎಫ್ ಬಡ್ಡಿದರ ಶೇ.8.1ರಷ್ಟಿತ್ತು. ಸದ್ಯ, ಈ ಬಾರಿಯ ಬಡ್ಡಿದರದ ಕುರಿತು ತೀರ್ಮಾನ ಕೈಗೊಳ್ಳಲು ಇಪಿಎಫ್ಒ ಟ್ರಸ್ಟಿಗಳ ಕೇಂದ್ರೀಯ ಮಂಡಳಿ (ಸಿಬಿಟಿ) ಸಭೆಯು ಈ ತಿಂಗಳ ಕೊನೆಯಲ್ಲಿ ಅಥವಾ ಮಾರ್ಚ್ ಆರಂಭದಲ್ಲಿ ನಡೆಯುವ ಸಾಧ್ಯತೆಗಳಿವೆ. 2022-23ನೇ ಸಾಲಿನ ಗಳಿಕೆಯನ್ನು ಆಧರಿಸಿ ಹಣಕಾಸು ಹೂಡಿಕೆಯ ಜೊತೆಗೆ ಅಡಿಟ್ ಸಮಿತಿ ಬಡ್ಡಿದರ ನಿರ್ಧಾರದ ಕುರಿತು ಸಿಬಿಟಿಗೆ ಶಿಫಾರಸ್ಸು ಮಾಡಲಿದೆ. ಸಿಬಿಟಿ ಇಪಿಎಫ್ಒನ ತ್ರಿಪಕ್ಷ ಸಮಿತಿಯಾಗಿದ್ದು, ಇದರಲ್ಲಿ ಸರ್ಕಾರ, ಉದ್ಯೋಗಿಗಳು ಹಾಗೂ ಉದ್ಯೋಗದಾತ ಸಂಸ್ಥೆಗಳ ಪ್ರತಿನಿಧಿಗಳು ಕೂಡ ಪಾಲ್ಗೊಳ್ಳುತ್ತಾರೆ. ಕೇಂದ್ರ ರ್ಕಾಮಿಕ ಸಚಿವರು ಸಿಬಿಟಿಯ ಮುಖ್ಯಸ್ಥರಾಗಿರುತ್ತಾರೆ.
ಟಿಡಿಎಸ್ ಕಡಿತ ಇಳಿಕೆ
2023-24ನೇ ಸಾಲಿನ ಬಜೆಟ್ ನಲ್ಲಿ ನೌಕರರ ಭವಿಷ್ಯ ನಿಧಿ (ಇಪಿಎಫ್) ವಿತ್ ಡ್ರಾ ಮೇಲಿನ ಟಿಡಿಎಸ್ ಅನ್ನು ಶೇ.30ರಿಂದ ಶೇ.20ಕ್ಕೆ ಇಳಿಕೆ ಮಾಡಿದ್ದು ಹೆಚ್ಚಿನವರಿಗೆ ತಿಳಿದಿರಬಹುದು. ಪ್ರಸ್ತುತವಿರುವ ಆದಾಯ ತೆರಿಗೆ ಕಾನೂನಿನ ಅನುಸಾರ ಇಪಿಎಫ್ ಖಾತೆ ತೆರೆದು ಐದು ವರ್ಷದೊಳಗೆ ಹಣವನ್ನು ವಿತ್ ಡ್ರಾ ಮಾಡಿದಲ್ಲಿ ಟಿಡಿಎಸ್ ಕಡಿತ ಮಾಡಲಾಗಲಿದ್ದು, ವಿತ್ ಡ್ರಾ ಮೊತ್ತ 50 ಸಾವಿರ ರೂ. ಅಥವಾ ಅದಕ್ಕಿಂತ ಹೆಚ್ಚಾದರೆ ಮಾತ್ರ ಟಿಡಿಎಸ್ ಕಡಿತ ಮಾಡಲಾಗುತ್ತದೆ. ಇದು ಕಾಯಂ ಖಾತೆ ಸಂಖ್ಯೆ ಇಲ್ಲವೇ ಪ್ಯಾನ್ ಕಾರ್ಡ್ ಹೊಂದಿರದ ಪ್ರಕರಣಗಳಿಗೆ ಮಾತ್ರ ಅನ್ವಯವಾಗಲಿದೆ. ಈ ಹೊಸ ತಿದ್ದುಪಡಿ 2023ರ ಏಪ್ರಿಲ್ 1ರಿಂದಲೇ ಜಾರಿಗೆ ಬರಲಿದ್ದು, ಈ ಘೋಷಣೆಯಿಂದ ಇಪಿಎಫ್ಒ ದಾಖಲೆಗಳಲ್ಲಿ ಪ್ಯಾನ್ ಮಾಹಿತಿ ನವೀಕರಿಸದ ವ್ಯಕ್ತಿಗಳಿಗೆ ಅನುಕೂಲವಾಗಲಿದೆ.