ಒಂದು ಪ್ಲೇಟ್ ಪಾನಿಪೂರಿಗೆ ಭರ್ಜರಿ 30ಸಾವಿರ ಪಂಗನಾಮ ಹಾಕಿದ ವ್ಯಕ್ತಿ ! ವಿಷಯ ಏನು ಗೊತ್ತಾ? ಇಲ್ಲಿದೆ ವಿವರ
ಚಾಮರಾಜನಗರದಲ್ಲಿ ಯುವಕನೋರ್ವ ಪಾನಿಪೂರಿ ತಿಂದ ಬಳಿಕ ವ್ಯಾಪಾರಿಯ ಖಾತೆಗೆ ಕನ್ನ ಹಾಕಲು ಮಾಸ್ತರ್ ಪ್ಲಾನ್ ಮಾಡಿ ಫ್ಲಾಪ್ ಆಗಿ ಕೊಳ್ಳೇಗಾಲದ ಜೈಲು ಸೇರಿದ ಘಟನೆ ವರದಿಯಾಗಿದೆ.
ಮೋಸ ಮಾಡಲು ಕಳ್ಳರು ನಾನಾ ರೀತಿಯ ಪ್ರಯೋಗ ನಡೆಸಿ ದುಡ್ಡು ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡೋದು ಕಾಮನ್. ಆದರೆ, ಕೊಳ್ಳೇಗಾಲದಲ್ಲಿ ಪಾನಿಪುರಿ ಅಂಗಡಿಯ ಮಾಲೀಕನಿಗೆ ಟೋಪಿ ಹಾಕಲು ಹೋಗಿ ಆಸಾಮಿಯೊಬ್ಬ ಪೋಲೀಸರ ಅತಿಥಿಯಾದ ಘಟನೆ ನಡೆದಿದೆ.
ಬೆಂಗಳೂರು ಮೂಲದ ವಿಶಾಲ್ (19) ಬಂಧಿತ ಯುವಕನಾಗಿದ್ದು,ಗೆಳೆಯರ ಜೊತೆ ಕೊಳ್ಳೇಗಾಲಕ್ಕೆ ಬಂದಿದ್ದ ಆರೋಪಿ ಕೊಳ್ಳೇಗಾಲದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿನ ಲೋಕೇಶ್ ಎಂಬವರ ಪಾನಿಪೂರಿ ಅಂಗಡಿಗೆ ತೆರಳಿದ್ದು, ಮೂರು ಪ್ಲೇಟ್ ಪಾನಿಪೂರಿ ಆರ್ಡರ್ ಮಾಡಿ ತಿಂದ ಬಳಿಕ ಬರಿ ಕೈಯಲ್ಲಿ ಹೋಗೋದು ತರವಲ್ಲ ಎಂದು ಕೊಂಡು ವ್ಯಾಪಾರಿಗೆ ಪಾನಿಪುರಿಯ ಹಣವನ್ನು ಫೋನ್ ಪೇ ಮಾಡುವುದಾಗಿ ಹೇಳಿದ್ದಾನೆ ಎನ್ನಲಾಗಿದೆ. ಹೀಗಾಗಿ, ಮಾಲೀಕನ ಫೋನ್ ಪಡೆದ ಗ್ರಾಹಕ ಬೇರೊಬ್ಬನಿಗೆ ಕರೆ ಮಾಡಿ ಆತ ದುಡ್ಡು ಕಳುಹಿಸಿದ್ದಾನೆ ಒಮ್ಮೆ ಚೆಕ್ ಮಾಡಿ ಎಂದು ವ್ಯಾಪಾರಿಗೆ ಹೇಳಿದ್ದಾನೆ.
ಈ ಸಂದರ್ಭದಲ್ಲಿ ವ್ಯಾಪಾರಿ ಫೋನ್ ಪೇ ತೆರೆಯುವುದನ್ನೆ ಕಾದುಕೊಂಡು ಅವರು ಬಳಸುವ ಪಾಸ್ ವರ್ಡ್ ನೋಡಿಕೊಂಡಿದ್ದು, ಸ್ವಲ್ಪ ಸಮಯದ ನಂತರ ನಿಮ್ಮ ಫೋನ್ ನಲ್ಲಿ ಸರ್ವರ್ ಸಮಸ್ಯೆ ಇರಬಹುದು. ಹೀಗಾಗಿ ಹಣ ಸಂದಾಯವಾಗಿಲ್ಲ ಎಂದು ಫೋನ್ ಪರಿಶೀಲನೆ ನಡೆಸುವ ನೆಪದಲ್ಲಿ ವ್ಯಾಪಾರಿಯ ಮೊಬೈಲ್ ಪಡೆದು 30 ಸಾವಿರ ರೂ.ವನ್ನು ತನ್ನ ಖಾತೆಗೆ ಕಳುಹಿಸಿಕೊಂಡು ಪಾನಿಪೂರಿ ಹಣ 120 ರೂ. ವ್ಯಾಪಾರಿಗೆ ರವಾನೆ ಮಾಡಿ ಉಂಡು ಹೋದ ಕೊಂಡು ಹೋದ ಎಂಬಂತೆ ಖತರ್ನಾಕ್ ಕಳ್ಳ ಹಣ ಪಡೆದು ವ್ಯಾಪಾರಿಗೆ ಟೋಪಿ ಹಾಕಿದ್ದಾನೆ.
ಈ ಘಟನೆಯ ಬಗ್ಗೆ ವ್ಯಾಪಾರಿಗೆ ತಿಳಿದಾಗ ಅಚ್ಚರಿಯ ಜೊತೆಗೆ ಗಾಬರಿಯಾಗಿ ಫೆ. 11 ರಂದು ಪ್ರಕರಣ ದಾಖಲಿಸಿದ್ದು, ಕೂಡಲೇ ಕಾರ್ಯ ಪ್ರವೃತ್ತರಾದ ಚಾಮರಾಜನಗರ ಸಿಇಎನ್ ಠಾಣೆಯ ಪಿಐ ಆನಂದ್ ಮತ್ತು ತಂಡ ಆರೋಪಿಯನ್ನು ಬಂಧಿಸಿ 30ಸಾವಿರ ವಶಕ್ಕೆ ಪಡೆದಿದ್ದಾರೆ. ಹೀಗಾಗಿ, ಅಂಗಡಿಗಳಲ್ಲಿ ಪಾಸ್ವರ್ಡ್ ಬಳಸುವಾಗ ಜಾಗ್ರತೆ ವಹಿಸಬೇಕು ಎಂಬುದಕ್ಕೆ ಈ ಪ್ರಕರಣವೆ ನಿದರ್ಶನ.