ಮನೆಯಲ್ಲೇ ಬಳಸೋ ಈ ವಸ್ತು ತಲೆಹೊಟ್ಟನ್ನು ಕಡಿಮೆ ಮಾಡುತ್ತೆ!

ತಲೆ ಕೂದಲ ಸಮಸ್ಯೆ ಪ್ರತಿಯೊಬ್ಬರಲ್ಲು ಕಂಡುಬರುವ ಸಾಮಾನ್ಯ ಸಮಸ್ಯೆಯೆಂದೇ ಹೇಳಬಹುದು. ಕೂದಲು ಉದುರುವುದು, ಬೆಳ್ಳಗಾಗುವುದು, ತಲೆಹೊಟ್ಟು, ತುರಿಕೆ ಹೀಗೆ ಹೇಳುತ್ತಾ ಹೋದರೆ ಸಮಸ್ಯೆಗಳ ಪಟ್ಟಿ ನಿಲ್ಲುವುದಿಲ್ಲ. ಇದಕ್ಕಾಗಿ ಜನರು ಮಾರುಕಟ್ಟೆಯಿಂದ ಶಾಂಪು, ಹೇರ್ ಕಂಡೀಷನರ್’ಗಳನ್ನು ಖರೀದಿಸುತ್ತಾರೆ. ಆದರೆ, ಇಂತಹ ಸಮಸ್ಯೆಯನ್ನು ಹೋಗಲಾಡಿಸುವ ಕೆಲವೊಂದು ತಂತ್ರಗಳನ್ನು ಮನೆಮದ್ದುಗಳ ರೂಪದಲ್ಲಿ ಬಳಕೆ ಮಾಡಬಹುದು. ಅಂತಹ ಒಂದು ಅತ್ಯದ್ಭುತ ಮನೆಮದ್ದು ಎಂದರೆ ಅದು ಕರ್ಪೂರ. ಹೌದು, ದೇವರ ಪೂಜೆಯಲ್ಲಿ ಬಳಸುವ ಈ ಕರ್ಪೂರ ಕೂದಲಿನ ಅನೇಕ ಸಮಸ್ಯೆ ನಿವಾರಣೆಗೆ ಸಹಾಯ ಮಾಡುತ್ತದೆ. ಹಾಗಾದ್ರೆ, ಬನ್ನಿ ಇದರ ಆರೋಗ್ಯ ಲಾಭಗಳನ್ನು ತಿಳಿದುಕೊಳ್ಳೋಣ.

ಕರ್ಪೂರ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಉದಾಹರಣೆಗೆ ಇದೊಂದು ಆಂಟಿ ಬ್ಯಾಕ್ಟೀರಿಯಲ್, ಆಂಟಿ ಇಂಪ್ಲಾಮೆಟರಿ ಮತ್ತು ಆಂಟಿಸೆಪ್ಟಿಕ್ ಗುಣಗಳನ್ನು ಹೊಂದಿರುವ ಒಂದು ಪದಾರ್ಥ. ಇದು ತಲೆ ಕೂದಲು ಉದುರುವಿಕೆ ಸಮಸ್ಯೆಯನ್ನು, ತಲೆ ಕೂದಲು ಬೆಳಗಾಗುವ ಸಾಧ್ಯತೆಯನ್ನು ಹಾಗೂ ತಲೆ ಕೂದಲಿನ ಕಿರು ಚೀಲಗಳನ್ನು ಸದೃಢಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಜೊತೆಗೆ ತಲೆಯಲ್ಲಿ ಹೇನುಗಳನ್ನು ಕೊಂದು ಹಾಕುತ್ತದೆ. ಕರ್ಪೂರ ತಲೆಹೊಟ್ಟಿನ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ. ನೀವು ಕರ್ಪೂರದ ಈ ಟ್ರಿಕ್ ಅಳವಡಿಸಿಕೊಳ್ಳಲು ಮುಂದಾಗಿ ಮತ್ತು ನಿಮ್ಮ ತಲೆ ಹೊಟ್ಟಿನ ಸಮಸ್ಯೆಗೆ ಗುಡ್ ಬೈ ಹೇಳಿ.

ಕರ್ಪೂರ ಮತ್ತು ತೆಂಗಿನ ಎಣ್ಣೆ :- ಒಂದು ಸಣ್ಣ ತಳ ಆಳವಿರುವ ಪಾತ್ರೆ ತೆಗೆದುಕೊಳ್ಳಿ. ಅದಕ್ಕೆ ತೆಂಗಿನ ಎಣ್ಣೆ ಹಾಕಿ ಸ್ವಲ್ಪ ಹೊತ್ತು ಕುದಿಸಿ. ಒಂದು ನಿಮಿಷ ಕಳೆದ ನಂತರದಲ್ಲಿ ಗ್ಯಾಸ್ ಆಫ್ ಮಾಡಿ. ಇದಕ್ಕೆ ಕರ್ಪೂರದ ಹುಡಿಯನ್ನು ಹಾಕಿ ಮಿಕ್ಸ್ ಮಾಡಿ. ಸ್ವಲ್ಪ ಹೊತ್ತು ಇದನ್ನು ತಣ್ಣಗಾಗಲು ಬಿಟ್ಟು ಆನಂತರ ಇದೇ ಎಣ್ಣೆಯಿಂದ ನಿಮ್ಮ ತಲೆಗೆ ಚೆನ್ನಾಗಿ ಮಸಾಜ್ ಮಾಡಿ. ನಂತರ ಸೌಮ್ಯವಾದ ಶಾಂಪೂವಿನಿಂದ ತೊಳೆಯಿರಿ. ನೀವು ಪ್ರತಿದಿನ ಇದನ್ನು ಅನುಸರಿಸಿಕೊಂಡು ಬಂದಿದ್ದೆ ಆದರೆ ಕ್ರಮೇಣವಾಗಿ ನಿಮ್ಮ ತಲೆಯಲ್ಲಿ ತುರಿಕೆ ಕಡಿಮೆಯಾಗುತ್ತದೆ. ವೈರಸ್ ಕಾರಣದಿಂದ ಉಂಟಾಗುವ ತಲೆಹೊಟ್ಟು ಕಡಿಮೆಯಾಗುತ್ತದೆ.

ಬೇವು ಮತ್ತು ಕರ್ಪೂರ ಹೇರ್ ಮಾಸ್ಕ್ : ಡ್ಯಾಂಡ್ರಫ್ ಅಥವಾ ತಲೆಹೊಟ್ಟಿನ ಸಮಸ್ಯೆ ಇರುವವರು, ಸರಳವಾಗಿ ಮನೆಯಲ್ಲಿಯೇ, ತಯಾರು ಮಾಡಬಹುದಾದ ಬೇವು ಹಾಗೂ ಕರ್ಪೂರದ ಹೇರ್ ಪ್ಯಾಕ್ ಉಪಯೋಗಿಸಬಹುದು. ಒಂದು ಕೈ ಹಿಡಿಯಷ್ಟು, ಬೇವಿನ ಎಲೆಗಳನ್ನು ಕರ್ಪೂರದೊಂದಿಗೆ ಚೆನ್ನಾಗಿ ರುಬ್ಬಿಕೊಳ್ಳಿ. ಹೀಗೆ ರುಬ್ಬಿಕೊಂಡ ಮಿಶ್ರಣವನ್ನು ಕೂದಲು ಮತ್ತು ನೆತ್ತಿಯ ಮೇಲೆ ಹಚ್ಚಿ. ಸುಮಾರು 30 ನಿಮಿಷಗಳ ಕಾಲ ಬಿಡಿ. ನಂತರ ಕೂದಲನ್ನು ಚೆನ್ನಾಗಿ ತೊಳೆಯಿರಿ. ಈ ಮಿಶ್ರಣ ನಿಮ್ಮ ನೆತ್ತಿಯನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಅಲ್ಲದೆ, ತಲೆಹೊಟ್ಟು ಮತ್ತು ತುರಿಕೆಯನ್ನು ನಿವಾರಿಸುತ್ತದೆ.

ನಿಂಬೆರಸ, ಕರ್ಪೂರ ಎಣ್ಣೆ ಮತ್ತು ಮೊಟ್ಟೆಯ ಹಳದಿ ಭಾಗ : ಕರ್ಪೂರ ಎಣ್ಣೆ, ನಿಂಬೆ ರಸ ಮತ್ತು ಮೊಟ್ಟೆಯ ಹಳದಿ ಭಾಗವನ್ನು ಸಮಪ್ರಮಾಣದಲ್ಲಿ ಚೆನ್ನಾಗಿ ಬೆರೆಸಿ ಕೂದಲಿಗೆ ಹಚ್ಚುವಷ್ಟು ದಪ್ಪನಾದ ಲೇಪ ತಯಾರಿಸಿರಿ. ಇದಕ್ಕೆ 1 ಚಮಚ ಆಲಿವ್ ಎಣ್ಣೆಯನ್ನು ಬಿಸಿ ಮಾಡಿ ಚೆನ್ನಾಗಿ ಮಿಶ್ರಣ ಮಾಡಿರಿ. ಸ್ನಾನಕ್ಕೂ ಮುನ್ನ ಈ ಲೇಪವನ್ನು ಕೂದಲ ಬುಡಕ್ಕೆ ತಾಕುವಂತೆ ನಯವಾದ ಮಸಾಜ್ ಮೂಲಕ ಹಚ್ಚಿಕೊಳ್ಳಿ. ವಿಶೇಷವಾಗಿ ತಲೆಹೊಟ್ಟು ಇರುವಲ್ಲಿ ಹೆಚ್ಚು ಪ್ರಮಾಣವನ್ನು ಹಚ್ಚಿ. ಬಳಿಕ ಮುಂದಿನ 30-40 ನಿಮಿಷಗಳ ಕಾಲ ಹಾಗೇ ಒಣಗಲು ಬಿಡಿ. ನಂತರ ನಿಮ್ಮ ಕೂದಲನ್ನು ಸೌಮ್ಯ ನೈಸರ್ಗಿಕ ಅಥವಾ ಗಿಡಮೂಲಿಕೆಗಳ ಶಾಂಪೂವಿನಿಂದ ತೊಳೆಯಿರಿ. ಉತ್ತಮ ಪರಿಣಾಮಕ್ಕಾಗಿ ವಾರಕ್ಕೊಮ್ಮೆ ಈ ವಿಧಾನವನ್ನು ಅನುಸರಿಸಿ. ತಲೆಹೊಟ್ಟು ಕೆಲವೇ ವಾರಗಳಲ್ಲಿ ಇಲ್ಲವಾಗುತ್ತದೆ. ಪೂರ್ಣವಾಗಿ ಇಲ್ಲವಾದ ಬಳಿಕವೂ ಕೆಲವು ವಾರ ಈ ವಿಧಾನವನ್ನು ಮುಂದುವರೆಸಿ. ಈ ಮೂಲಕ ಕೂದಲ ಬುಡಗಳು ಇನ್ನಷ್ಟು ಬಲಗೊಂಡು ಕೂದಲು ಉದುರದಂತೆ ಮಾಡುತ್ತದೆ ಹಾಗೂ ತಲೆಹೊಟ್ಟಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುತ್ತದೆ.

ಕರ್ಪೂರ ಮತ್ತು ಆಲಿವ್ ಎಣ್ಣೆ :- ತಲೆಹೊಟ್ಟಿನ ಕಾರಣದಿಂದ ತಲೆಯಲ್ಲಿ ತೀವ್ರವಾದ ತುರಿಕೆ ಇದ್ದರೆ, ಕರ್ಪೂರ ಮತ್ತು ಆಲಿವ್ ಎಣ್ಣೆಯನ್ನು ಬಳಸಬಹುದು. ಇದಕ್ಕಾಗಿ ಕರ್ಪೂರದ ತೈಲ ಮತ್ತು ಆಲಿವ್ ಎಣ್ಣೆ ಎರಡನ್ನೂ ಸಮಾನ ಪ್ರಮಾಣದಲ್ಲಿ ಒಂದು ಚಿಕ್ಕ ಪಾತ್ರೆಯಲ್ಲಿ ಮಿಶ್ರಣ ಮಾಡಿ. ಈ ಎಣ್ಣೆಗಳ ಮಿಶ್ರಣವನ್ನು ಬಳಸಿ ನಿಮ್ಮ ನೆತ್ತಿಯನ್ನು ಚೆನ್ನಾಗಿ ಮಸಾಜ್ ಮಾಡಿ. ಎಣ್ಣೆ ಮಸಾಜ್ ಮಾಡಿದ ಬಳಿಕ 30 ನಿಮಿಷಗಳ ಕಾಲ ಹಾಗೇ ಇರಿಸಿ ನಂತರ ಶಾಂಪೂ ಬಳಸಿ ಸ್ನಾನ ಮಾಡಿ. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಬಾರಿ ಅನ್ವಯಿಸಿ.

ಕರ್ಪೂರದ ಎಣ್ಣೆ ಮತ್ತು ಮೊಟ್ಟೆಯ ಹೇರ್ ಪ್ಯಾಕ್:- ಒಂದು ಬಟ್ಟಲಿನಲ್ಲಿ, 3 ರಿಂದ 4 ಚಿಕ್ಕ ಚಮಚ ಕರ್ಪೂರದ ಎಣ್ಣೆ, ಇದಕ್ಕೆ 1 ಚಿಕ್ಕ ಚಮಚ ಮೊಸರು ಮತ್ತು 1 ಮೊಟ್ಟೆ ಸೇರಿಸಿ. ಜೊತೆಗೆ ಉತ್ತಮ ಫಲಿತಾಂಶಕ್ಕಾಗಿ ನೀವು ಕೊಂಚ ಗೋರಂಟಿ ಎಣ್ಣೆ ಅಥವಾ ಮದರಂಗಿಯ ಎಣ್ಣೆಯನ್ನೂ ಸೇರಿಸಬಹುದು. ಕೂದಲಿಗೆ ಹಚ್ಚಿಕೊಳ್ಳುವಷ್ಟು ಸಾಂದ್ರತೆ ಬರುವಂತೆ ಇವೆಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕಾಗಿ ಮೊಸರಿನ ಪ್ರಮಾಣವನ್ನು ಕೊಂಚ ಹೆಚ್ಚು ಕಡಿಮೆ ಮಾಡಿಕೊಂಡು ಸೇರಿಸಬಹುದು. ಈ ಮಿಶ್ರಣವನ್ನು ನೀವು ತಲೆ ಸ್ನಾನ ಮಾಡುವ ಮುನ್ನ ಸುಮಾರು ಒಂದು ಘಂಟೆಗೂ ಮೊದಲು ಕೂದಲ ಬುಡದಿಂದ ತುದಿಯವರೆಗೆ ಬರುವಂತೆ ಹಚ್ಚಿಕೊಳ್ಳಿ. ಕೂದಲ ಬುಡಗಳಿಗೆ ನಯವಾಗಿ ಮಸಾಜ್ ಮಾಡಿಕೊಂಡು ಹಚ್ಚಿಕೊಳ್ಳಿ. ಒಂದು ಟೆಯ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ಕರ್ಪೂರ, ರೀಟಾ ಮತ್ತು ಮೊಸರಿನ ಮಿಶ್ರಣ :- ಕರ್ಪೂರ, ರೀಟಾ ಮತ್ತು ಮೊಸರಿನ ಮಿಶ್ರಣವನ್ನು ಕೂದಲಿಗೆ ಹಚ್ಚುವುದರಿಂದ ಅನೇಕ ರೀತಿಯ ಕೂದಲಿನ ಸಮಸ್ಯೆಗೆ ಪ್ರಯೋಜನಗಳು ಲಭಿಸುತ್ತದೆ. ಮೊದಲನೆಯದಾಗಿ, ರೀಟಾ ಕೂದಲಿನ ಆರೋಗ್ಯಕ್ಕೆ ಹೇಳಿ ಮಾಡಿಸಿದ ಮದ್ದು. ಕರ್ಪೂರ ಆಂಟಿಬ್ಯಾಕ್ಟೀರಿಯಲ್ ಆಗಿದ್ದು ಅದು ನೆತ್ತಿಯನ್ನು ಸ್ವಚ್ಛಗೊಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಹಾಗೂ ಮೊಸರು ನೆತ್ತಿಯನ್ನು ತಂಪಾಗಿಸುತ್ತದೆ. ರೀಟಾವನ್ನು ಕುದಿಸಿ ಮತ್ತು ಅದರಲ್ಲಿ ಮೊಸರು ಮತ್ತು ಕರ್ಪೂರವನ್ನು ಬೆರೆಸಿ ಮಿಶ್ರಣ ಮಾಡಿಕೊಳ್ಳಿ. ಈಗ ಇದೆಲ್ಲವನ್ನೂ ನೆತ್ತಿಯ ಮೇಲೆ ಹಚ್ಚಿ ಮತ್ತು 30 ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ಶಾಂಪೂ ಹಚ್ಚಿ ಸ್ನಾನಮಾಡಿ.

Leave A Reply

Your email address will not be published.