ನಿಮಗೇನಾದರೂ ನೈಲ್‌ಪಾಲಿಶ್ ಹಾಕೋ ಅಭ್ಯಾಸ ಇದೆಯೇ ? ಅಧ್ಯಯನದಿಂದ ಬಯಲಾಯ್ತು ಶಾಕಿಂಗ್ ಸುದ್ದಿ!
ಪ್ರತಿಯೊಬ್ಬ ಹೆಣ್ಣುಮಕ್ಕಳು ತಾವು ಸುಂದರವಾಗಿ ಕಾಣಿಸಬೇಕೆಂದು ಏನೇನೆಲ್ಲಾ ಪ್ರಯತ್ನಪಡುತ್ತಾರೆ. ತನ್ನ ಕೈಗಳು ಸುಂದರವಾಗಿ ಕಾಣಲು ನೈಲ್ ಪಾಲಿಶ್ ಹಚ್ಚುತ್ತಾರೆ. ಹಾಗೆಯೇ ಕೂದಲಿನ ಆರೈಕೆಗೆಂದು ಶ್ಯಾಂಪು ಹಾಕುತ್ತಾರೆ. ನೀವು ಇವರಲ್ಲಿ ಒಬ್ಬರಾ? ಹಾಗಾದ್ರೆ, ಈ ಅಗತ್ಯ ಮಾಹಿತಿಯನ್ನು ನೀವು ತಿಳಿಯಲೇಬೇಕು. ಹೌದು, ನಿಮ್ಮ ಉಗುರುಗಳ ಅಂದವನ್ನು ಇಮ್ಮಡಿಗೊಳಿಸಲು ಬಳಸುವ ನೈಲ್ ಪಾಲಿಶ್(Nail Polish)ನಿಂದ ನಿಮ್ಮ ಆರೋಗ್ಯವೇ ಹದಗೆಡಬಹುದು!! ನೀವು ಹೆಚ್ಚಾಗಿ ನೈಲ್ ಪಾಲಿಶ್, ಶಾಂಪೂ ಮತ್ತು ಸುಗಂಧ ದ್ರವ್ಯಗಳಂತಹ ಸೌಂದರ್ಯವರ್ಧಕಗಳನ್ನು ಬಳಸುತ್ತಿದ್ದರೆ, ಅಂತಹ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಬಳಸುವ ರಾಸಾಯನಿಕ ಅಂಶಗಳ ಬಗ್ಗೆ ಮೊದಲು ತಿಳಿದುಕೊಳ್ಳಬೇಕು.
ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ ನೈಲ್ ಪಾಲಿಶ್ ಮತ್ತು ಶಾಂಪೂಗಳಲ್ಲಿನ ರಾಸಾಯನಿಕಗಳು ಮಹಿಳೆಯರಲ್ಲಿ ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿಸಬಹುದು ಎಂಬ ಆಘಾತಕಾರಿ ವಿಚಾರವನ್ನು ಬಿಚ್ಚಿಟ್ಟಿದೆ. ಅದರಂತೆ ಅಧ್ಯಯನದಲ್ಲಿ ಹೇರ್ ಸ್ಪ್ರೇ ಮತ್ತು ಆಫ್ಟರ್ ಶೇವ್ನಂತಹ ಉತ್ಪನ್ನಗಳಲ್ಲಿ ಕಂಡುಬರುವ ವಿಷಕಾರಿ ರಾಸಾಯನಿಕಗಳು ಚರ್ಮವನ್ನು ಸೇರಿಕೊಳ್ಳಬಹುದು. ಅಲ್ಲದೇ ಯಕೃತ್ತು, ಮೂತ್ರಪಿಂಡಗಳು, ಶ್ವಾಸಕೋಶಗಳು ಮತ್ತು ಇತರ ಅಂಗಗಳ ಮೇಲೆ ಪರಿಣಾಮ ಬೀರಬಹುದು ಎಂದು ತಿಳಿದು ಬಂದಿದೆ.
ಮೇಲೆ ತಿಳಿಸಲಾದ ಸೌಂದರ್ಯ ವರ್ಧಕದ ಉತ್ಪನ್ನಗಳಲ್ಲಿ ಕಂಡುಬರುವ ಅಂತಃಸ್ರಾವಕ-ಅಡಚಣೆಯ ರಾಸಾಯನಿಕಗಳು (EDC ಗಳು) ಮಹಿಳೆಯರಲ್ಲಿ ಮಧುಮೇಹದ ಅಪಾಯವನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಎಂಡೋಕ್ರೈನ್ ಸೊಸೈಟಿಯ ಜರ್ನಲ್ ಆಫ್ ಕ್ಲಿನಿಕಲ್ ಎಂಡೋಕ್ರೈನಾಲಜಿ & ಮೆಟಾಬಾಲಿಸಂನಲ್ಲಿ ಪ್ರಕಟವಾದ ಅಧ್ಯಯನವು ವರದಿ ಮಾಡಿದೆ.
ಥಾಲೇಟ್ಗಳು ವೈಯಕ್ತಿಕ ಆರೈಕೆಯ ಉತ್ಪನ್ನಗಳು(ಉದಾ: ಸ್ಯಾನಿಟರಿ ಪ್ಯಾಡ್), ಮಕ್ಕಳ ಆಟಿಕೆಗಳು, ಆಹಾರ ಮತ್ತು ಪಾನೀಯ ಪ್ಯಾಕೇಜಿಂಗ್ನಂತಹ ಪ್ಲಾಸ್ಟಿಕ್ಗಳಲ್ಲಿ ವ್ಯಾಪಕವಾಗಿ ಬಳಸಲಾಗುವ ರಾಸಾಯನಿಕ ವಸ್ತುವಾಗಿದೆ. ಈ ರೀತಿಯಾದ ಥಾಲೇಟ್ಗಳನ್ನೊಳಗೊಂಡಿರುವ ಉತ್ಪನ್ನಗಳನ್ನು ಬಳಸುವುದರಿಂದ ಫಲವತ್ತತೆ ಸಮಸ್ಯೆಗಳು, ಮಧುಮೇಹ ಮತ್ತು ಇತರ ಅಂತಃಸ್ರಾವಕ ಅಸ್ವಸ್ಥತೆಗಳು ಕಂಡುಬರುತ್ತವೆ.
ಮಿಚಿಗನ್ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್’ನ ಸಂಶೋಧಕ ಸುಂಗ್ ಕ್ಯುನ್ ಪಾರ್ಕ್ ನೀಡಿರುವ ಮಾಹಿತಿ ಪ್ರಕಾರ, ಥಾಲೇಟ್ಗಳಿಗೆ ಒಡ್ಡಿಕೊಳ್ಳುವುದರಿಂದ ಆರು ವರ್ಷಗಳ ಅವಧಿಯಲ್ಲಿ ಮಹಿಳೆಯರಲ್ಲಿ ಮಧುಮೇಹದ ಅಪಾಯ ಹೆಚ್ಚಾಗುತ್ತದೆ ಎಂದಿದ್ದಾರೆ. ಅನೇಕ ಜನರು ಪ್ರತಿದಿನ ಥಾಲೇಟ್ಗಳಿಗೆ ಒಗ್ಗಿಕೊಳ್ಳುತ್ತಾರೆ. ಇದು ಅನೇಕರಿಗೆ ಚಯಾಪಚಯ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಅಲ್ಲದೇ ಮಾನವನ ಆರೋಗ್ಯಕ್ಕೆ ಹಾನಿಕಾರಕವಾದ ಇಡಿಸಿ(EDC) ಗಳ ಬಗ್ಗೆ ಕೂಡ ಅರಿವು ಮೂಡಿಸುವುದು ಬಹಳ ಮುಖ್ಯ ಮತ್ತು ಅತ್ಯವಶ್ಯಕವಾಗಿದೆ ಎಂದು ತಿಳಿಸಿದ್ದಾರೆ.
ಥಾಲೇಟ್ಗಳು ಮಧುಮೇಹಕ್ಕೆ ಕಾರಣವಾಗುವುದು ನಿಜವೇ? ಎಂಬುದನ್ನು ನಿರ್ಧರಿಸಲು ಆರು ವರ್ಷಗಳ ಕಾಲ SWAN (ರಾಷ್ಟ್ರದಾದ್ಯಂತ ಮಹಿಳೆಯರ ಆರೋಗ್ಯದ ಅಧ್ಯಯನ) ಅಧ್ಯಯನದಿಂದ 1,308 ಮಹಿಳೆಯರನ್ನು ಸಂಶೋಧಕರು ಅಧ್ಯಯನ ಮಾಡಿದರು. ಇದರಲ್ಲಿ ಸುಮಾರು 5% ಮಹಿಳೆಯರು 6 ವರ್ಷಗಳಲ್ಲಿ ಮಧುಮೇಹವನ್ನು ಹೊಂದುತ್ತಿದ್ದಾರೆ. ಈ ಮಹಿಳೆಯರಿಂದ ಸಂಗ್ರಹಿಸಿದ ಮೂತ್ರದ ಮಾದರಿಗಳಲ್ಲಿ ಈ ಮಹಿಳೆಯರು ತಮ್ಮ ಮೂತ್ರದಲ್ಲಿ 2000 ರ ದಶಕದ ಆರಂಭದಲ್ಲಿ ಮಧ್ಯವಯಸ್ಕ ಅಮೆರಿಕನ್ ಮಹಿಳೆಯರಂತೆ ಥಾಲೇಟ್ಗಳ ಸಾಂದ್ರತೆಯನ್ನು ಹೊಂದಿದ್ದಾರೆ.
ಅಮೆರಿಕನ್ ಮಹಿಳೆಯರು ಥಾಲೇಟ್ಗಳಿಗೆ ಹೆಚ್ಚಿಗೆ ಒಡ್ಡಿಕೊಳ್ಳುವುದರಿಂದ ಮಧುಮೇಹ ಬರುವ ಸಾಧ್ಯತೆ 30-63 ಪ್ರತಿಶತ ಹೆಚ್ಚು. ಆದರೆ, ಇದೀಗ ನೈಲ್ ಪಾಲಿಷ್ನಲ್ಲಿ ಕೂಡಾ ಹಾನಿಕಾರಕ ಕೆಮಿಕಲ್’ಗಳಿರುವುದರಿಂದ ಮಹಿಳೆಯರಲ್ಲಿ ಮಧುಮೇಹ ಉಂಟಾಗುತ್ತದೆ ಎಂಬ ಮಾಹಿತಿ ಹೊರಬಿದ್ದಿದೆ. ಮೆಟಬಾಲಿಕ್ ಕಾಯಿಲೆಗಳ ಮೇಲೆ ಥಾಲೇಟ್ಗಳ ಪರಿಣಾಮವನ್ನು ಚೆನ್ನಾಗಿ ತಿಳಿದುಕೊಳ್ಳಲು ನಮ್ಮ ಸಂಶೋಧನೆಯು ಪ್ರಗತಿಯಲ್ಲಿದೆ. ಆದರೆ ಈ ಬಗ್ಗೆ ಇನ್ನೂ ತೀವ್ರವಾದ ಸಂಶೋಧನೆಯ ಅಗತ್ಯವಿದೆ ಎಂದು ಸುಂಗ್ ಕ್ಯುನ್ ಹೇಳಿದ್ದಾರೆ.