ಹಲ್ಲು ಒಸಡುಗಳ ಆರೋಗ್ಯಕ್ಕೆ ಈ ರೀತಿ ಮಾಡಿ, ಬಾಯಿ ವಾಸನೆ ಮಾರು ದೂರ ಹೋಗುತ್ತೆ!!!
ನಾವು ಒಂದು ದಿನ ಸರಿಯಾಗಿ ಹಲ್ಲುಜ್ಜದೇ ಇದ್ದರೆ, ನಮ್ಮ ಬಾಯಿಯ ವಾಸನೆಯನ್ನು ನಾವೇ ಸಹಿಸಿಕೊಳ್ಳಲು ಸಾಧ್ಯವಿರುವುದಿಲ್ಲ. ಇನ್ನು ಅಕ್ಕಪಕ್ಕದವರು ಅದು ಹೇಗೆ ತಡೆದುಕೊಳ್ಳುತ್ತಾರೆ ದೇವರೇ ಬಲ್ಲ. ಬಾಯಿಯ ದುರ್ಗಂಧ ಹಲವರನ್ನು ಕಾಡುವ ಬಹುದೊಡ್ಡ ಸಮಸ್ಯೆ ಆಗಿದೆ.ಇದಕ್ಕೆ ಮುಖ್ಯ ಕಾರಣ ಆಹಾರದಲ್ಲಿ ವ್ಯತ್ಯಾಸ, ಅಲರ್ಜಿ ಸಮಸ್ಯೆ, ಇತರ ಆರೋಗ್ಯ ಸಮಸ್ಯೆಗಳು. ಆದರೆ ಇದು ಶಾಶ್ವತ ಸಮಸ್ಯೆಯೇನಲ್ಲ. ಹಾಗಂತ ನಿರ್ಲಕ್ಷಿಸಬೇಡಿ. ಏಕೆ ಗೊತ್ತಾ? ಇತ್ತೀಚಿನ ಅಧ್ಯಯನಗಳ ವರದಿಯ ಪ್ರಕಾರ, ಬಾಯಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಿಮ್ಮ ಮೆದುಳಿನ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಸಾಬೀತುಪಡಿಸಿದೆ. ಸರಿಯಾದ ಸ್ವಚ್ಛತೆಯನ್ನು ಹೊಂದಿಲ್ಲದಿದ್ದರೆ ಹಲವಾರು ರೀತಿಯ ಹಲ್ಲುಗಳು ಮತ್ತು ವಸಡು ಕಾಯಿಲೆಗಳಿಗೆ ಕಾರಣವಾಗಬಹುದು ಎನ್ನಲಾಗಿದೆ.
ಈ ಬಗ್ಗೆ ಸರ್ ಹೆಚ್.ಎನ್. ರಿಲಯನ್ಸ್ ಫೌಂಡೇಷನ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ದಂತ ಸೇವೆಗಳ ವಿಭಾಗದ ಓರಲ್ ಮತ್ತು ಮ್ಯಾಕ್ಸಿಲೊ-ಫೇಷಿಯಲ್ ಸರ್ಜನ್ ಡಾ. ಪ್ರತಿಭಾ ಮಹಾಜನ್ ಇಂಡಿಯಾ ಟುಡೇಗೆ ನೀಡಿರುವ ಸಂದರ್ಶನದಲ್ಲಿ ಹಲವಾರು ಪ್ರಮುಖ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಬಲವಾದ ಮತ್ತು ಆರೋಗ್ಯಕರ ಹಲ್ಲುಗಳು ಮತ್ತು ಒಸಡುಗಳನ್ನು ಹೊಂದಬೇಕೆಂದರೆ ಮೊದಲು ಸರಿಯಾದ ನೈರ್ಮಲ್ಯವನ್ನು ಹೊಂದಿರುವುದು ಬಹುಮುಖ್ಯ. ಬಾಯಿಯ ವಾಸನೆಯನ್ನು ತೊಲಗಿಸಲು ನಿಮ್ಮ ಬಾಯಿಯನ್ನು ಸ್ವಚ್ಛವಾಗಿಡುವ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ. ಹಲ್ಲುಗಳನ್ನು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿಡಲು ಸಾಂಪ್ರದಾಯಿಕ ವಿಧಾನಗಳು ಮತ್ತು ಆಧುನಿಕ ವಿಧಾನಗಳು ಎಂಬ ಎರಡು ಮಾರ್ಗಗಳಿವೆ ಎಂದು ವಿವರಿಸಿದ್ದಾರೆ.
ದಿನಕ್ಕೆ ಎರಡು ಬಾರಿ ಹಲ್ಲುಜ್ಜಬೇಕು: ಸಾಂಪ್ರದಾಯಿಕ ವಿಧಾನದಲ್ಲಿ, ದಿನಕ್ಕೆ ಕನಿಷ್ಠವೆಂದರು 2 ಬಾರಿಯಾದರೂ ನಿಮ್ಮ ಹಲ್ಲುಗಳನ್ನು ಉಜ್ಜಬೇಕು. ಬೆಳಿಗ್ಗೆ ಮತ್ತು ರಾತ್ರಿ ಮಲಗುವ ಮೊದಲು ಹಲ್ಲುಜ್ಜುವುದರಿಂದ ಬಾಯಿಯ ಆರೋಗ್ಯವನ್ನು ಉತ್ತಮಗೊಳಿಸಬಹುದು. ಅಷ್ಟು ಮಾತ್ರವಲ್ಲದೆ, ಫ್ಲೋಸಿಂಗ್ ಅನ್ನು ಹಲ್ಲು ಮತ್ತು ಒಸಡುಗಳ ನಡುವಿನ ಬಿರುಕುಗಳನ್ನು ತಲುಪಲು ಉಪಯೋಗಿಸಿದರೆ ಒಳಗಿರುವ ಎಲ್ಲ ಗಲೀಜು, ಆಹಾರದ ತುಣುಕುಗಳೂ ಹೊರಬರುತ್ತದೆ. ಬಯೋಫಿಲ್ಮ್ ಅನ್ನು ರೂಪಿಸುವ ಬಹಳಷ್ಟು ಬ್ಯಾಕ್ಟೀರಿಯಾಗಳು ಇರುವುದರಿಂದಾಗಿ ಹಲ್ಲುಗಳು ಮತ್ತು ವಸಡು ಹಲ್ಲುಗಳನ್ನು ಜೋಡಿಸುವ ಪ್ರದೇಶಗಳನ್ನು ಕೂಡ ಕ್ಲೀನ್ ಮಾಡಬೇಕು. ಪ್ರತಿದಿನ ನಾವು ತಿನ್ನುತ್ತೇವೆ ಮತ್ತು ಕುಡಿಯುತ್ತೇವೆ. ಇದರಿಂದಾಗಿ ಜೈವಿಕ ಫಿಲ್ಮ್ ಅನ್ನು ರಚಿಸುತ್ತದೆ. ಹೀಗಾಗಿ, ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಬಾಯಿಯ ಆರೋಗ್ಯ ಕೆಡುತ್ತದೆ.
ಫ್ಲೋಸಿಂಗ್: “ನಾವು ಹಲ್ಲುಜ್ಜುತ್ತೇವೆ, ಆದರೆ ಫ್ಲೋಸ್ ಮಾಡುವುದಿಲ್ಲ. ಫ್ಲೋಸ್ ಮಾಡುವುದು ಸ್ವಲ್ಪ ಕಷ್ಟ. ಹಾಗಾಗಿ ಪ್ರತಿದಿನ ನಿಮ್ಮ ಹಲ್ಲುಗಳನ್ನು ಫ್ಲೋಸ್ ಮಾಡುವ ಸರಿಯಾದ ವಿಧಾನವನ್ನು ಅರ್ಥಮಾಡಿಕೊಳ್ಳಲು ನಿಮ್ಮ ದಂತವೈದ್ಯರನ್ನು ಭೇಟಿ ಮಾಡಿ” ಎಂದು ಡಾ. ಪ್ರತಿಭಾ ಮಹಾಜನ್ ಹೇಳಿದ್ದಾರೆ.
ನಾವು ಹಲ್ಲುಗಳನ್ನು ಸ್ವಚ್ಛಗೊಳಿಸಿದ ನಂತರವೇ ಜೈವಿಕ ಫಿಲ್ಮ್ ಅನ್ನು ತೆಗೆದುಹಾಕಲಾಗುತ್ತದೆ. ಪ್ಲೇಕ್ ಎಂದು ಕರೆಯಲ್ಪಡುವ ಮೃದುವಾದ ನಿಕ್ಷೇಪಗಳು ಮತ್ತು ಟಾರ್ಟರ್ ಎಂದು ಕರೆಯಲ್ಪಡುವ ಹಾರ್ಡ್ ನಿಕ್ಷೇಪಗಳನ್ನು ತೆಗೆದುಹಾಕಲಾಗುತ್ತದೆ. ಆದರೆ, ಅನೇಕ ಜನರು ಫ್ಲೋಸ್ ಮಾಡುವುದಿಲ್ಲ. ಆದರಿಂದ ಇದು ಗಮ್ ಕಾಯಿಲೆಗೆ ಕಾರಣವಾಗುತ್ತದೆ.
ಗಾರ್ಗ್ಲಿಂಗ್: ನಾವು ಬೆಳಗಿನ ಉಪಹಾರ ಸೇವನೆ ಮಾಡಿದ ನಂತರ ಅಥವಾ ಮಧ್ಯಾಹ್ನ ಊಟ ಮಾಡಿದ ನಂತರ ಚಹ ಕುಡಿಯುವುದು ಅಥವಾ ಬೇರೆ ಬೇರೆ ಬಗೆಯ ಸ್ನ್ಯಾಕ್ಸ್ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡಿರುತ್ತೇವೆ. ಹೀಗಾಗಿ ನಾವು ಸೇವನೆ ಮಾಡುವ ಆಹಾರ ಪದಾರ್ಥಗಳ ಪಳೆಯುಳಿಕೆಗಳು ನಮ್ಮ ಹಲ್ಲುಗಳ ಸಂದುಗಳಲ್ಲಿ ಹಾಗೂ ವಸಡಿನ ಭಾಗದಲ್ಲಿ ಹಾಗೇ ಉಳಿಯುತ್ತವೆ. ಇವುಗಳಿಂದ ಮುಕ್ತಿ ಪಡೆಯಲು ಆಗಾಗ ಸ್ವಚ್ಛವಾದ ನೀರಿನಿಂದ ಬಾಯಿ ಮುಕ್ಕಳಿಸುವ ಅಭ್ಯಾಸವನ್ನು ಇಟ್ಟುಕೊಳ್ಳಬೇಕು. ಇದರಿಂದಲೂ ಸಹ ಬಾಯಿಯ ದುರ್ವಾಸನೆ ದೂರವಾಗುತ್ತದೆ. ಅಲ್ಲದೇ, ಲಾಲಾರಸದ pH ಅನ್ನು ಬದಲಾಯಿಸುತ್ತದೆ. ಇಲ್ಲವಾದರೆ, ಹಲ್ಲುಗಳ ಸಂದಿಯಲ್ಲಿ ಸಣ್ಣ ಸಣ್ಣ ಆಹಾರದ ತುಣುಕುಗಳು ಹಾಗೇ ಉಳಿದು, ಕೊಳೆತು ಹಲ್ಲು ಹುಳುಕಾಗುತ್ತದೆ.
ಆಧುನಿಕ ವಿಧಾನಗಳು: ಆಧುನಿಕ ವಿಧಾನದಲ್ಲಿ ಮೌತ್‌ವಾಶ್ ಅನ್ನು ಬಳಸುವುದು ಬಾಯಿಯನ್ನು ಸ್ವಚ್ಛವಾಗಿಡಲು ಮತ್ತೊಂದು ಮದ್ದು ಎಂದೇ ಹೇಳಬಹುದು. ರಾತ್ರಿ ಮಲಗಿಕೊಳ್ಳುವ ಮುಂಚೆ ಒಮ್ಮೆ ನಿಮ್ಮ ಬಾಯಿಯನ್ನು ಸ್ವಚ್ಛ ಮಾಡಿಕೊಳ್ಳಲು ಮೌತ್ ವಾಶ್ ಉಪಯೋಗಿಸಿ. ಇದರಿಂದ ನಿಮ್ಮ ಹಲ್ಲುಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಆಹಾರದ ಪಳೆಯುಳಿಕೆಗಳು ದೂರವಾಗುತ್ತವೆ. ಒಂದು ವೇಳೆ ಆಲ್ಕೋಹಾಲ್ ಅಂಶವನ್ನು ಒಳಗೊಂಡ ಮೌತ್ವಾಷ್ ನಿಮಗೆ ಬಳಸಲು ಆಗದೇ ಇದ್ದರೆ, ಫ್ಲೋರೈಡ್ ಅಂಶವನ್ನು ಒಳಗೊಂಡ ಮತ್ತು ನಿಮ್ಮ ಬಾಯಿಯ ದುರ್ವಾಸನೆಯನ್ನು ಸುವಾಸನೆಯಾಗಿ ಬದಲಿಸುವ ಮೌತ್ವಾಷ್ ಬಳಕೆ ಮಾಡಬಹುದು.
ನಿಮ್ಮ ಬಾಯಿಯನ್ನು ಮುಚ್ಚಿ ದೀರ್ಘ ಗಂಟೆಗಳ ಕಾಲ ಕೆಲಸ ಮಾಡುವಾಗ, ಸ್ವಲ್ಪ ಸಮಯದ ನಂತರ ನಿಮ್ಮ ಬಾಯಿಯಿಂದ ನಿಮಗೇ ವಾಸನೆ ಬರಲಾರಂಭಿಸುತ್ತದೆ. ಇದು ಜೈವಿಕ ಫಿಲ್ಮ್ ರೂಪುಗೊಳ್ಳುವ ಸಮಯವಾಗಿದೆ. ಹೀಗಾಗಿ, ನೀವು ಮೌತ್‌ವಾಶ್ ಬಳಸಬೇಕು ಎಂದು ಡಾ. ಪ್ರತಿಭಾ ಮಹಾಜನ್ ಸಲಹೆ ನೀಡಿದ್ದಾರೆ.