ಜನಸಾಮಾನ್ಯರೇ ಗಮನಿಸಿ, ಬರಲಿದೆ ಕ್ಯೂಆರ್ ಕೋಡ್ ಆಧಾರಿತ ಕಾಯಿನ್ ವೆಂಡಿಂಗ್ ಮೆಷಿನ್! ಆರ್ಬಿಐ ಯಿಂದ ಹೊಸ ಯೋಜನೆ
ಇಂದಿನ ಯುಗದಲ್ಲಿ ಎಲ್ಲವೂ ಡಿಜಿಟಲ್ ಮಾಯವಾಗಿ ಬಿಟ್ಟಿದೆ. ಇತ್ತೀಚೆಗೆ ಡಿಜಿಟಲ್ ಪೇಮೆಂಟ್ ಹೆಚ್ಚಿನ ಬಳಕೆಯಲ್ಲಿದ್ದು, ಈ ಯುಪಿಐ ಮೂಲಕ ಮನೆಯಲ್ಲಿಯೇ ಕುಳಿತು ಯಾವುದೇ ಬ್ಯಾಂಕಿನ ಹಣಕಾಸು ವ್ಯವಹಾರವನ್ನು ನಿರ್ವಹಿಸಬಹುದಾಗಿದೆ. ಈ ನಡುವೆ, 12 ನಗರಗಳಲ್ಲಿ ಪ್ರಾಯೋಗಿಕವಾಗಿ ಕ್ಯುಆರ್ ಕೋಡ್ ಆಧಾರಿತ ಕಾಯಿನ್ ವೆಂಡಿಂಗ್ ಮಷಿನ್ಗಳನ್ನು ಸ್ಥಾಪಿಸುವ ಕುರಿತಂತೆ ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಮಾಹಿತಿ ನೀಡಿದ್ದಾರೆ. ಜನರ ಕೆಲಸ ಕಾರ್ಯಗಳಿಗೆ ಬ್ಯಾಂಕ್ ಗೆ ಅಲೆದಾಡುವ ತಾಪತ್ರಯ ತಪ್ಪಿಸುವ ಉದ್ದೇಶದಿಂದ ಈ ಹೊಸ ಯೋಜನೆ ರೂಪಿಸಲು ಆರ್ ಬಿಐ ಮುಂದಾಗಿದೆ.
ಆರ್ಬಿಐ ರೆಪೊ ದರವನ್ನು ಮತ್ತೆ 25 ಮೂಲಾಂಶ ಹೆಚ್ಚಿಸಿ ಶೇ 6.50ಕ್ಕೆ ನಿಗದಿಪಡಿಸಿದೆ. 2022ರ ಮೇ ತಿಂಗಳ ನಂತರ ಸತತವಾಗಿ ಆರ್ಬಿಐ ರೆಪೊ ದರ ಏರಿಸಿದೆ. ಒಟ್ಟಾರೆಯಾಗಿ 23ನೇ ಹಣಕಾಸು ವರ್ಷದಲ್ಲಿ ಆರ್ಬಿಐ 250 ಮೂಲಾಂಶದಷ್ಟು ರೆಪೊ ದರ ಏರಿಕೆ ಮಾಡಿದಂತಾಗಿದೆ. ಇದೀಗ ಮತ್ತೆ ರೆಪೊ ದರ ಹೆಚ್ಚಿಸಿರುವುದರಿಂದ ಗೃಹ, ವಾಹನ ಸಾಲ ಸೇರಿದಂತೆ ವಿವಿಧ ಸಾಲಗಳ ಬಡ್ಡಿ ದರ, ಇಎಂಐ ಮೊತ್ತದ ಹೊರೆ ಹೆಚ್ಚಾಗಲಿದೆ. ಈ ನಡುವೆ ಆರ್ ಬಿಐ ಹಣಕಾಸು ನೀತಿ ಸಮಿತಿ ಸಭೆಯ ತೀರ್ಮಾನಗಳನ್ನು ಪ್ರಕಟಿಸಿದ ನಂತರ , ಜನಸಾಮಾನ್ಯರಿಗೆ ಅನುಕೂಲ ನಿಟ್ಟಿನಲ್ಲಿ ಕೆಲ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.
ಆರ್ಬಿಐ (RBI) ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ದೇಶದ 12 ನಗರಗಳಲ್ಲಿ ಪ್ರಾಯೋಗಿಕವಾಗಿ ಕ್ಯುಆರ್ ಕೋಡ್ ಆಧಾರಿತ ಕಾಯಿನ್ ವೆಂಡಿಂಗ್ ಮಷಿನ್ಗಳನ್ನು (QR Code Coin Vending Machines) ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದು, ಕಾಯಿನ್ ವೆಂಡಿಂಗ್ ಮಷಿನ್ಗಳ ಮೂಲಕವೇ ಜನರು ಹಣ ಪಡೆಯಬಹುದು ಎಂದು ಶಕ್ತಿಕಾಂತ ದಾಸ್ ಅವರು ಮಾಹಿತಿ ನೀಡಿದ್ದಾರೆ. ವೆಂಡಿಂಗ್ ಮಷಿನ್ಗಳಲ್ಲಿ ಕ್ಯುಆರ್ ಕೋಡ್ ಇರಲಿದ್ದು ಅದನ್ನು ಸ್ಕ್ಯಾನ್ ಮಾಡಿ ಬೇಕಾದ ಮೊತ್ತದ ಹಣ ನಮೂದಿಸಿದಲ್ಲಿ ಅಷ್ಟು ಹಣವನ್ನು ಮಷಿನ್ ನೀಡಲಿದೆ.
ಜಿ20 ಸದಸ್ಯರ ರಾಷ್ಟ್ರಗಳ ಜನತೆಗೂ ಕೂಡ ಯುಪಿಐ ವ್ಯವಸ್ಥೆಯ ಸೌಲಭ್ಯದ ಪ್ರಯೋಜನ ಲಭ್ಯವಾಗುವಂತೆ ಮಾಡಲಾಗುವ ಕುರಿತು ಶಕ್ತಿ ಕಾಂತ್ ದಾಸ್ ರವರು ಮಾಹಿತಿ ನೀಡಿದ್ದಾರೆ. ಇದಲ್ಲದೆ, ಸದಸ್ಯ ರಾಷ್ಟ್ರಗಳ ಜನರು ಭಾರತಕ್ಕೆ ಬಂದಾಗ ಇಲ್ಲಿನ ವಿಮಾನ ನಿಲ್ದಾಣಗಳಲ್ಲಿ ಯುಪಿಐ ಮೂಲಕವೇ ಪಾವತಿ ಮಾಡುವ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಇದೇ ವೇಳೆ ತಿಳಿಸಿದ್ದಾರೆ. ಆದರೆ ಈ ಯೋಜನೆಯ ಪ್ರಾಯೋಗಿಕ ಯೋಜನೆಯ ಯಶಸ್ಸನ್ನು ಆಧರಿಸಿ ಯೋಜನೆಯನ್ನು ಮುಂದುವರೆಸುವ ಕುರಿತು ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದ್ದು ಆದರೆ ಯಾವುದೆಲ್ಲ ನಗರಗಳಲ್ಲಿ ಕಾಯಿನ್ ವೆಂಡಿಂಗ್ ಮಷಿನ್ಗಳನ್ನು ಸ್ಥಾಪಿಸಲಾಗುತ್ತದೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ.