Credit card: ಕ್ರೆಡಿಟ್ ಕಾರ್ಡ್ ಮಿತಿಯನ್ನು ಹೆಚ್ಚಿಸುವ ಬಯಕೆಯೇನಾದರೂ ಇದೆಯೇ ? ಹಾಗಾದರೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!
ಇತ್ತೀಚೆಗೆ ಡಿಜಿಟಲ್ ಪೇಮೆಂಟ್ ಹೆಚ್ಚಿನ ಬಳಕೆಯಲ್ಲಿದ್ದು, ಈ ಯುಪಿಐ ಮೂಲಕ ಮನೆಯಲ್ಲಿಯೇ ಕುಳಿತು ಯಾವುದೇ ಬ್ಯಾಂಕಿನ ಹಣಕಾಸು ವ್ಯವಹಾರವನ್ನು ನಿರ್ವಹಿಸಬಹುದಾಗಿದೆ. ಸದ್ಯ ಭಾರತದಲ್ಲಿ ಯುಪಿಐ ಪಾವತಿ ಸೇವೆಯನ್ನು ಫೋನ್ ಪೇ ಗೂಗಲ್ ಪೇ (Google Pay), (Paytm) ನಂತಹ ಆ್ಯಪ್ಗಳು ನೀಡುತ್ತಿವೆ.ಇಂದಿನ ಡಿಜಿಟಲ್ ಯಗದಲ್ಲಿ ಮನೆಯಲ್ಲೇ ಕುಳಿತು ಕ್ಷಣಮಾತ್ರದಲ್ಲಿಯೇ ಎಲ್ಲ ವ್ಯವಹಾರ ವಹಿವಾಟು ನಡೆಸುವ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಳವಣಿಗೆ ಆಗಿದ್ದು, ಕೆಲಸದ ಒತ್ತಡದ ನಡುವೆ ಬ್ಯಾಂಕಿಂಗ್ ವಹಿವಾಟು ನಡೆಸಲು ಸಾಧ್ಯವಾಗದೇ ಇದ್ದವರು ಪರಿತಪಿಸುವ ಅವಶ್ಯಕತೆ ಈಗಿಲ್ಲ. ಈಗ ಕ್ಷಣ ಮಾತ್ರದಲ್ಲಿಯೇ ಬೆರಳ ತುದಿಯಲ್ಲಿ ಎಲ್ಲ ವ್ಯವಹಾರ ವಹಿವಾಟು ನಡೆಸಲು ಎಲ್ಲ ಬ್ಯಾಂಕಿಂಗ್ ವ್ಯವಸ್ಥೆಗಳು ಅನುವು ಮಾಡಿಕೊಟ್ಟಿವೆ.
ಕ್ರೆಡಿಟ್ ಕಾರ್ಡ್ ಸದ್ಯ ಮಧ್ಯಮವರ್ಗದ ದೈನಂದಿನ ಅವಶ್ಯಕತೆಗಳಲ್ಲಿ ಒಂದಾಗಿಬಿಟ್ಟಿದೆ. ಕ್ರೆಡಿಟ್ ಕಾರ್ಡ್ ಕೇವಲ ಸ್ಕೋರ್ ಹೆಚ್ಚಿಸುವುದು ಮಾತ್ರವಲ್ಲದೆ ಬಿಲ್ಗಳ ಪಾವತಿ, ಆಫ್ಲೈನ್-ಆನ್ಲೈನ್ ಶಾಪಿಂಗ್ ಸಂದರ್ಭಗಳಲ್ಲಿ ನೆರವಾಗುತ್ತವೆ. ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ ಮಿತಿ ಕಡಿಮೆ ಇದ್ದಾಗ ಕ್ರೆಡಿಟ್ ಕಾರ್ಡ್ ಮಿತಿ ಹೆಚ್ಚಿಸುವುದು ಹೇಗೆ ಎಂಬ ಪ್ರಶ್ನೆ ಸಹಜವಾಗಿ ಹೆಚ್ಚಿನವರಿಗೆ ಕಾಡುತ್ತದೆ.
ಬ್ಯಾಂಕ್ಗಳು, ಹಣಕಾಸು ಸಂಸ್ಥೆಗಳು ನೀಡುವ ಕ್ರೆಡಿಟ್ ಕಾರ್ಡ್ನ ಮಿತಿಯು ಸಂಸ್ಥೆ ಇಲ್ಲವೇ ಬ್ಯಾಂಕ್ ನ ಅನುಸಾರ ವ್ಯತ್ಯಾಸ ಕಂಡುಬರುತ್ತದೆ. ಅದೇ ರೀತಿ ಕೆಲವೊಮ್ಮೆ ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳುವವರ ಹಣಕಾಸು ಹಿನ್ನೆಲೆ, ಕ್ರೆಡಿಟ್ ಸ್ಕೋರ್ ಇತ್ಯಾದಿ ಅಂಶಗಳ ಆಧಾರದಲ್ಲಿಯೂ ಕ್ರೆಡಿಟ್ ಕಾರ್ಡ್ ಮಿತಿ ವ್ಯತ್ಯಾಸ ಕಂಡುಬರುತ್ತದೆ. ಸಾಮಾನ್ಯವಾಗಿ ಬ್ಯಾಂಕ್ಗಳು ವರ್ಷಕ್ಕೊಮ್ಮೆ ಕ್ರೆಡಿಟ್ ಮಿತಿಯನ್ನು ಹೆಚ್ಚಳ ಮಾಡುತ್ತವೆ. ಆದರೆ ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಸಮಯಕ್ಕೆ ಸರಿಯಾಗಿ ಪಾವತಿ ಮಾಡುವ ಜೊತೆಗೆ ಒಟ್ಟಾರೆ ಬಳಕೆಯ ಆಧಾರದ ಮೇಲೆ ಈ ನಿರ್ಣಯ ಕೈಗೊಳ್ಳಲಾಗುತ್ತದೆ. ಹೀಗಾಗಿ ನಿಯಮಿತವಾಗಿ ಕಾರ್ಡ್ ಬಳಕೆ ಮಾಡುವ ಕ್ರಮ ಅನುಸರಿಸುವ ಜೊತೆಗೆ ಸಮಯಕ್ಕೆ ಸರಿಯಾಗಿ ಪಾವತಿ ಮಾಡುವ ಮೂಲಕ ಕ್ರೆಡಿಟ್ ಮಿತಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.
ಆನ್ಲೈನ್ ಶಾಪಿಂಗ್ ವೇಳೆ ಝೀರೋ ಕಾಸ್ಟ್ ಇಎಂಐಯಂಥ ಅನೇಕ ಆಯ್ಕೆಗಳನ್ನು ಕ್ರೆಡಿಟ್ ಕಾರ್ಡ್ ಮೂಲಕ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ, ವಸ್ತುವಿನ ಒಟ್ಟು ಮೊತ್ತದಷ್ಟು ಮಿತಿ ಕ್ರೆಡಿಟ್ ಕಾರ್ಡ್ನಲ್ಲಿ ಇರಬೇಕು ಎಂಬುದು ಮುಖ್ಯ ವಿಚಾರ. ಕ್ರೆಡಿಟ್ ಕಾರ್ಡ್ ಮಿತಿ ಹೆಚ್ಚಿಸಬೇಕಾದ ಸಂದರ್ಭಗಳಲ್ಲಿ ಹೊಸ ಕ್ರೆಡಿಟ್ ಕಾರ್ಡ್ಗೆ ಅರ್ಜಿ ಸಲ್ಲಿಸುವ ವಿಧಾನವನ್ನು ಅನುಸರಿಸಬಹುದು. ಈಗ ಬಳಕೆ ಮಾಡುತ್ತಿರುವ ಕಾರ್ಡ್ಗಿಂತ ಹೆಚ್ಚಿನ ಮಿತಿಯ ಕ್ರೆಡಿಟ್ ಕಾರ್ಡ್ಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ ಹೆಚ್ಚು ಮಿತಿಯ ಕಾರ್ಡ್ ಅನ್ನು ಬ್ಯಾಂಕ್ಗಳು ಆಫರ್ ಕೂಡ ಮಾಡುವ ಸಾಧ್ಯತೆ ಇದೆ.
ಇದಲ್ಲದೆ, ಕ್ರೆಡಿಟ್ ಕಾರ್ಡ್ ಮಿತಿ ಹೆಚ್ಚಿಸುವಂತೆ ಈಗ ಬಳಕೆ ಮಾಡುತ್ತಿರುವ ಕ್ರೆಡಿಟ್ ಕಾರ್ಡ್ ನೀಡಿರುವ ಬ್ಯಾಂಕ್ ಇಲ್ಲವೇ ಹಣಕಾಸು ಸಂಸ್ಥೆಗಳಲ್ಲಿಯೂ ಮನವಿ ಸಲ್ಲಿಸಲು ಅವಕಾಶವಿದ್ದು, ಆದರೆ, ನಿಮ್ಮ ಬಳಕೆಯ ಹಿನ್ನೆಲೆಯನ್ನು ಪರಿಶೀಲನೆ ಮಾಡಿದ ಬಳಿಕವಷ್ಟೇ ಕಾರ್ಡ್ ಮಿತಿಯನ್ನು ಹೆಚ್ಚಿಸುವ ಸಾಧ್ಯತೆ ಇದೆ. ನಿಗದಿತ ಸಮಯಕ್ಕೆ ಸರಿಯಾಗಿ ಇಎಂಐ ಇಲ್ಲವೇ ಕ್ರೆಡಿಟ್ ಬಿಲ್ ಪಾವತಿ ಮಾಡುವ ಅಭ್ಯಾಸ ಇಟ್ಟುಕೊಂಡರೆ ಕ್ರೆಡಿಟ್ ಕಾರ್ಡ್ ಮಿತಿ ಹೆಚ್ಚಿಸುವಲ್ಲಿ ಈ ಅಂಶ ಕೂಡ ನೆರವಾಗುತ್ತದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಒಂದು ವೇಳೆ, ಸಾಲ ಪಡೆದಿದ್ದರೆ, ಈ ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ಮರು ಪಾವತಿ ಮಾಡಿದರೆ , ನಿಮ್ಮ ವಹಿವಾಟು ನಡೆಸುವ ವೈಖರಿಯನ್ನು ಕೂಡ ಗಮನದಲ್ಲಿರಿಸಿ ಬ್ಯಾಂಕ್ ನಿಮ್ಮ ಕ್ರೆಡಿಟ್ ಮಿತಿಯನ್ನು ಹೆಚ್ಚಿಸುವ ಸಾಧ್ಯತೆ ಹೆಚ್ಚಿದೆ.