Grama Panchayath : ಗ್ರಾಮ ಪಂಚಾಯತಿ ಸಿಬ್ಬಂದಿ ನೇಮಕಾತಿ ನಿಯಮ ತಿದ್ದುಪಡಿ | ಫುಲ್ ಡಿಟೇಲ್ಸ್ ಇಲ್ಲಿದೆ!
ಗ್ರಾಮ ಪಂಚಾಯಿತಿ ಸಿಬ್ಬಂದಿ ನೇಮಕಾತಿ (ತಿದ್ದುಪಡಿ) ನಿಯಮಗಳು 2022 ಕುರಿತಂತೆ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದ್ದು, ಇದೀಗ, ಅಂತಿಮ ಅಧಿಸೂಚನೆಯನ್ನು ಕರ್ನಾಟಕ ರಾಜ್ಯಪತ್ರದ ಮೂಲಕ ಅಧಿಕೃತವಾಗಿ ಪ್ರಕಟಿಸಲಾಗಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ (ಗ್ರಾಮ ಪಂಚಾಯತಿಯ ಸಿಬ್ಬಂದಿಯ ಸ್ವರೂಪ, ವೇತನ ಶ್ರೇಣಿಗಳು, ನೇಮಕಾತಿ ವಿಧಾನ ಮತ್ತು ಸೇವಾ ಷರತ್ತುಗಳು) (ತಿದ್ದುಪಡಿ) ನಿಯಮಗಳು 2022ರ ಕರಡನ್ನು ದಿನಾಂಕ 29/10/2022ರ ಕರ್ನಾಟಕ ರಾಜ್ಯ ಪತ್ರದ ಭಾಗ-IV Aರಲ್ಲಿ ಪ್ರಕಟಿಸಲಾಗಿತ್ತು. ಆದರೆ, ಇದರಿಂದ ಬಾಧಿತರಾಗುವ ವ್ಯಕ್ತಿಗಳಿಂದ ಸದರಿ ಕರಡಿಗೆ ಆಕ್ಷೇಪಣೆಯ ಜೊತೆಗೆ ಸಲಹೆಗಳನ್ನು ಆಕ್ಷೇಪಣೆ ಮಾಡಲಾದ ಹಿನ್ನೆಲೆ ಇದೀಗ ತಿದ್ದುಪಡಿ ಮಾಡಿ ಆದೇಶ ಹೊರಡಿಸಿದೆ.
ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ 15 ದಿನಗಳ ಒಳಗೆ ಅರ್ಜಿ ಸಲ್ಲಿಸಬೇಕೆಂದು ತಿಳಿಸಲಾಗಿದೆ. ಇದಲ್ಲದೆ, ಸದರಿ ರಾಜ್ಯ ಪತ್ರವು ಸಾರ್ವಜನಿಕರಿಗೆ ದಿನಾಂಕ 07/11/2022ರಂದು ಲಭ್ಯವಾಗುವಂತೆ ಮಾಡಿರುವ ಹಿನ್ನೆಲೆ ಸದರಿ ಕರಡಿನ ಸಂಬಂಧದಲ್ಲಿ ರಾಜ್ಯ ಸರ್ಕಾರದಲ್ಲಿ ಸ್ವೀಕೃತವಾಗಿರುವ ಆಕ್ಷೇಪಣೆ ಇಲ್ಲವೇ ಸಲಹೆಗಳನ್ನು ಪರಿಗಣಿಸಿ ಆದೇಶ ಹೊರಡಿಸಲಾಗಿದೆ.
ಈಗ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 (1993ರ ಕರ್ನಾಟಕ ಅಧಿನಿಯಮ ಸಂಖ್ಯೆ 14)ರ 311 ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಈ ಮೂಲಕ ನಿಯಮಗಳನ್ನು ರಚಿಸಿ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದ್ದು, ಸದ್ಯ ನಿಯಮಗಳು ಹೀಗಿವೆ:
ಗ್ರಾಮ ಪಂಚಾಯಿತಿ ಸಿಬ್ಬಂದಿ ನೇಮಕಾತಿ ನಿಯಮಗಳು
ಈ ನಿಯಮಗಳನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತಿ ಸಿಬ್ಬಂದಿ ಸ್ವರೂಪ, ವೇತನ ಶ್ರೇಣಿಗಳು, ನೇಮಕಾತಿ ವಿಧಾನ ಮತ್ತು ಇತರ ಸೇವಾ ಷರತ್ತುಗಳು) (ತಿದ್ದುಪಡಿ) ನಿಯಮಗಳು, 2022 ಎಂದು ಪರಿಗಣಿಸಲು ಸೂಚಿಸಲಾಗಿದೆ. ಇವು ರಾಜ್ಯಪತ್ರದಲ್ಲಿ ಅಂತಿಮವಾಗಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರುತ್ತದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತಿ ಸಿಬ್ಬಂದಿ ಸ್ವರೂಪ, ವೇತನ ಶ್ರೇಣಿಗಳು, ನೇಮಕಾತಿ ವಿಧಾನ ಮತ್ತು ಇತರ ಸೇವಾ ಷರತ್ತುಗಳನ್ನೊಳಗೊಂಡಿವೆ.
ಜಿಲ್ಲಾ ಪಂಚಾಯಿತಿ ನಿಯಮಗಳ ತಿದ್ದುಪಡಿಗಳು ಹೀಗಿವೆ
ಜಿಲ್ಲಾ ಆಯ್ಕೆ ಸಮಿತಿಯು ಗ್ರಾಮ ಪಂಚಾಯಿತಿಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅನುಸಾರವಾಗಿ ಅರ್ಹ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಪೂರ್ವಾನುಮೋದನೆಯ ಮುಖೇನ ನೇಮಕಾತಿ ಪ್ರಾಧಿಕಾರವು ನೇಮಕಾತಿ ಆದೇಶವನ್ನು ಹೊರಡಿಸಲು ಸೂಚಿಸಲಾಗಿದೆ. ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅನುಮೋದನೆ ಪಡೆದ ಬಳಿಕ ಗ್ರಾಮ ಪಂಚಾಯಿತಿಗಳ ವಾಟರ್ ಆಪರೇಟರ್/ ಅಟೆಂಡಂಡ್/ ಕ್ಲೀನರ್ಸ್ ಗಳಿಗೆ ಬಿಲ್ ಕಲೆಕ್ಟರ್/ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಬಡ್ತಿ ನೀಡುವ ಸಂದರ್ಭ ಮತ್ತೊಮ್ಮೆ ಅಧಿಕಾರಿಗಳ ಅನುಮೋದನೆ ಪಡೆಯಬೇಕಾಗಿಲ್ಲ.
ಬಿಲ್ ಕಲೆಕ್ಟರ್ ಮತ್ತು ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ಗಳ ವರ್ಗಾವಣೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಅನುಮೋದನೆ ಪಡೆದು ಕರ್ತವ್ಯ ನಿರ್ವಹಿಸುತ್ತಿರುವ ಬಿಲ್ ಕಲೆಕ್ಟರ್ ಮತ್ತು ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ಗಳನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಆಯಾ ಜಿಲ್ಲೆಯ ವ್ಯಾಪ್ತಿಯಲ್ಲಿ ವಿಶೇಷ ಸಂದರ್ಭಗಳಲ್ಲಿ ನೌಕರರು ಬಯಸಿದಲ್ಲಿ ಅವರ ಗೌರವಕ್ಕೆ ದಕ್ಕೆಯಾಗ ರೀತಿಯಲ್ಲಿ ಲಭ್ಯವಿರುವ ಖಾಲಿ ಹುದ್ದೆಗೆ ನೇಮಕಾತಿ ಇಲ್ಲವೇ ಪರಸ್ಪರ ವರ್ಗಾವಣೆಯನ್ನು ಸೇವಾ ಅವಧಿಯಲ್ಲಿ ಎರಡು ಬಾರಿ ವರ್ಗಾವಣೆ ಮಾಡಬೇಕು.
ಮೃತ ವಿವಾಹಿತ ಗ್ರಾಮ ಪಂಚಾಯತಿ ನೌಕರನ/ ಳ ಪತ್ನಿ /ಪತಿ ಈಗಾಗಲೇ ಮೃತಪಟ್ಟಿದ್ದು ಜೊತೆಗೆ ಅವರಿಗೆ ಅಪ್ರಾಪ್ತ ವಯಸ್ಕ ಮಕ್ಕಳಿದ್ದ ಸಂದರ್ಭದಲ್ಲಿ, ಸಂಬಂಧಿತ ಕಾನೂನಿನ ಉಪಬಂಧಗಳನ್ವಯ ಆ ಮಕ್ಕಳೊಂದಿಗೆ ವಾಸಿಸುವ ಹಾಗೂ ಅವರನ್ನು ಪೋಷಿಸುವ ಪ್ರಮಾಣೀಕೃತ ಪೋಷಕರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಮೃತ ನೌಕರನ ಕಾನೂನು ಬಾಹಿರ ಎರಡನೆ ಪತ್ನಿ ಮತ್ತು ತದನಂತರದ ಪತ್ನಿಗೆ ಜನಿಸಿದ ಮಕ್ಕಳಿಗೆ ಅನ್ವಯವಾಗದು. ಈ ನಿಯಮಗಳ ಅಡಿಯಲ್ಲಿ ನೇಮಕಾತಿಯನ್ನು ಕೋರುವ ಮೃತ ಗ್ರಾಮ ಪಂಚಾಯತಿ ನೌಕರನ/ ಳ ವಿಧವಾ ಪತ್ನಿ ಅಥವಾ ವಿಧುರ ಪತಿಗೆ ಈ ಮೇಲೆ ನಿರ್ದಿಷ್ಟಪಡಿಸಿರುವ ವಯೋಮಿತಿಯು ಅನ್ವಯವಾಗುವುದಿಲ್ಲ ಎಂಬುದನ್ನು ಗಮನಿಸಬೇಕು.
ಈ ಅವಲಂಬಿತರ ವಯೋಮಿತಿಯು ಅರ್ಜಿ ಸಲ್ಲಿಸುವ ಸಮಯದಲ್ಲಿ 55 ವರ್ಷಗಳ ಒಳಗಿರಬೇಕು. ಗ್ರಾಮ ಪಂಚಾಯತಿಯಲ್ಲಿ ಬಹುಪಯೋಗಿ ಹುದ್ದೆ ಕ್ಲೀನರ್ಸ್ ನೇಮಕಾತಿ ವಿಧಾನವು 7ನೇ ತರಗತಿ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಆಧರಿಸಿ ನೇರ ನೇಮಕಾತಿ ಮಾಡಲಾಗುತ್ತದೆ. ಕನ್ನಡವನ್ನು ಒಂದು ಭಾಷೆಯನ್ನಾಗಿ 7ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವವರನ್ನು ನೇಮಕ ಮಾಡಬೇಕು. ಮೃತ ಪುರುಷ ಅವಿವಾಹಿತನಾಗಿದ್ದರೆ, ಆತನ ಪೋಷಕರು ಆಯ್ಕೆ ಮಾಡಿದ ಅಥವಾ ಅವರ ಆಯ್ಕೆಯಲ್ಲಿ ಭಿನ್ನಾಭಿಪ್ರಾಯವಿದ್ದಲ್ಲಿ, ಆತನ ತಾಯಿಯು ಆಯ್ಕೆ ಮಾಡಿದ ಸಹೋದರ ಅಥವಾ ಸಹೋದರಿ ಅಥವ ಮೃತ ಗ್ರಾಮ ಪಂಚಾಯತಿ ನೌಕರನ ತಂದೆ/ ತಾಯಿ ಆತನಿಗೂ ಮೊದಲೇ ಮೃತಪಟ್ಟಿದ್ದಲ್ಲಿ, ಸಹೋದರ/ ಸಹೋದರಿಯ ವಯಸ್ಸಿಗನುಗುಣವಾಗಿ ಆದ್ಯತೆಯನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ.
ನಿಯಮ 9ರ ತಿದ್ದುಪಡಿಯ ಅನುಸಾರ, ನೌಕರನ ಸಾವು ಸಂಭವಿಸಿದ ದಿನಾಂಕದಿಂದ ಒಂದು ವರ್ಷದೊಳಗಾಗಿ ಪ್ರತಿಯೊಬ್ಬ ಮೃತ ಗ್ರಾಮ ಪಂಚಾಯಿತಿ, ನೌಕರನ/ ಳ ಅವಲಂಬಿತರು ಗ್ರಾಮ ಪಂಚಾಯಿತಿ, ನೌಕರನು/ ಳು ಮರಣ ಹೊಂದಿದ ದಿನಾಂಕದಿಂದ ಒಂದು ವರ್ಷದ ಒಳಗೆ ಕಾರ್ಯನಿರ್ವಹಿಸುತ್ತಿದ್ದ, ಗ್ರಾಮ ಪಂಚಾಯಿತಿಗೆ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಒಂದು ವೇಳೆ, ಮರಣ ಹೊಂದಿದ ವ್ಯಕ್ತಿಯ ಮಗ ಇಲ್ಲವೇ ಮಗಳು ಅಪ್ರಾಪ್ತ ವಯಸ್ಕರಾಗಿದ್ದಲ್ಲಿ ಗ್ರಾಮ ಪಂಚಾಯಿತಿಗೆ ವ್ಯಕ್ತಿ ಮರಣ ಹೊಂದಿದ ದಿನಾಂಕದಿಂದ ಎರಡು ವರ್ಷಗಳ ಒಳಗೆ 18 ವರ್ಷಗಳನ್ನು ಪೂರೈಸ ಬೇಕಾಗುತ್ತದೆ. ನಂತರ ಎರಡು ವರ್ಷಗಳ ಒಳಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ.
ಮೃತ ಗ್ರಾಮ ಪಂಚಾಯತಿ ನೌಕರನ ಪತ್ನಿಯು ಆತನಿಗೂ ಮೊದಲೇ ಮೃತಪಟ್ಟಿದ್ದಲ್ಲಿ ಮಕ್ಕಳ ವಯಸ್ಸಿಗನುಗುಣವಾಗಿ ಆದ್ಯತೆ ನೀಡಬೇಕಾಗುತ್ತದೆ. ವಿವಾಹಿತ ಗ್ರಾಮ ಪಂಚಾಯತಿ ನೌಕರನ ಸಂದರ್ಭದಲ್ಲಿ ಆತನೊಂದಿಗೆ ವಾಸವಾಗಿದ್ದ ವಿಧವಾ ಪತ್ನಿ ಮತ್ತು ಮೃತನ ವಿಧವಾ ಪತ್ನಿಯು ನೇಮಕಾತಿಗೆ ಅರ್ಹರಾಗಿಲ್ಲದೆ ಇದ್ದಲ್ಲಿ ನಿಖರ ಕಾರಣಕ್ಕಾಗಿ ಅವಳು ನೇಮಕಾತಿಯನ್ನು ಒಪ್ಪದಿದ್ದಲ್ಲಿ, ಮೃತ ಗ್ರಾಮ ಪಂಚಾಯತಿ ನೌಕರನ ವಿಧವಾ ಪತ್ನಿಯು ಆಯ್ಕೆ ಮಾಡಿದ ಆತನ ಮಗ ಅಥವಾ ಮಗಳು ಅರ್ಜಿ ಸಲ್ಲಿಸಲು ಅವಕಾಶವಿದೆ. .
ಅದೇ ರೀತಿ, ಗ್ರಾಮ ಪಂಚಾಯತಿ ನೌಕರಳ ಪತಿಯು ಆಕೆಗೂ ಮೊದಲೇ ಮೃತಪಟ್ಟಿದ್ದಲ್ಲಿ, ಮಕ್ಕಳ ವಯಸ್ಸಿಗನುಗುಣವಾಗಿ ಆದ್ಯತೆಯನ್ನು ನೀಡಲಾಗುತ್ತದೆ. ಮೃತ ಮಹಿಳಾ ಅವಿವಾಹಿತರಾಗಿದ್ದರೆ, ಆಕೆಯೊಂದಿಗೆ ವಾಸವಾಗಿದ್ದ ಆಕೆಯ ತಂದೆ ಅಥವಾ ತಾಯಿಯು ಆಯ್ಕೆ ಮಾಡಿದ ಇಲ್ಲವೇ ಅವರ ಆಯ್ಕೆಯಲ್ಲಿ ಭಿನ್ನಾಭಿಪ್ರಾಯವಿದ್ದಲ್ಲಿ, ಆಕೆಯ ತಾಯಿಯು ಆಯ್ಕೆ ಮಾಡಿದ ಸಹೋದರ ಅಥವಾ ಸಹೋದರಿಗೆ ಅವಕಾಶ ಸಿಗಲಿದೆ. ಒಂದು ವೇಳೆ, ನೌಕರಳ ತಂದೆ/ ತಾಯಿ ಆಕೆಗೂ ಮೊದಲೇ ಮೃತಪಟ್ಟಿದಲ್ಲಿ, ಸಹೋದರ/ ಸಹೋದರಿಯ ವಯಸ್ಸಿಗನುಗುಣವಾಗಿ ಆದ್ಯತೆಯನ್ನು ನೀಡಲಾಗುತ್ತದೆ.