ಮನೆಯ ಕರೆಂಟ್ ಬಿಲ್ ಹೆಚ್ಚು ಬರದಿರಲು ಈ ಟಿಪ್ಸ್ ಫಾಲೋ ಮಾಡಿ ಹಣ ಉಳಿಸಿ!
ವಿದ್ಯುತ್ ಬಳಕೆ ಮತ್ತು ಅದಕ್ಕೆ ಖರ್ಚು ಮಾಡುವ ಹಣವು ಪ್ರತಿಯೊಬ್ಬ ವ್ಯಕ್ತಿಯ ಆದಾಯದ ಮೇಲೆ ಪರಿಣಾಮ ಬೀರುತ್ತದೆ. ಈ ಪರಿಸ್ಥಿತಿಯಲ್ಲಿ ವಿದ್ಯುತ್ ಬಿಲ್ ಕಡಿಮೆ ಮಾಡುವತ್ತ ನಿಗಾ ವಹಿಸಿ ಉಳಿತಾಯ ಮಾಡುವ ಕಡೆಗೆ ಹೆಚ್ಚು ಗಮನ ಕೊಡೋದು ಸಹಜ. ಫೆಬ್ರುವರಿ ತಿಂಗಳು ಮುಗಿಯುತ್ತಿದ್ದಂತೆ ಬೇಸಿಗೆ ಕಾಲದ ಅನುಭವ ಉಂಟಾಗುತ್ತದೆ. ಅದರಲ್ಲೂ ಕರಾವಳಿ ಭಾಗದಲ್ಲಿ ಮಧ್ಯಾಹ್ನದ ಉರಿಬಿಸಿಲಿನ ಬೇಗೆಯ ಬಗ್ಗೆ ವಿವರಿಸಬೇಕಾಗಿಲ್ಲ. ಹೀಗಾಗಿ, ಮಾರ್ಚ್ ಆರಂಭದಲ್ಲೇ ಜನರು ಮನೆಯಲ್ಲಿ ಫ್ಯಾನ್ ಹಾಕಿಕೊಳ್ಳಲಾರಂಭಿಸೋದು ಕಾಮನ್. ತಾಪಮಾನ ಹೆಚ್ಚಾದಂತೆ ಜನರು ಫ್ಯಾನ್, ಕೂಲರ್ ಮತ್ತು ಎಸಿಗಳನ್ನು ಚಲಾಯಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಆದರೆ ಇದರಿಂದ ವಿದ್ಯುತ್ ಬಿಲ್ ಕೂಡ ಹೆಚ್ಚಾಗುತ್ತಾ ಹೋಗೋದು ಫಿಕ್ಸ್.
ಬೇರೆ ಸಮಯಕ್ಕೆ ಹೋಲಿಸಿದರೆ ಬೇಸಿಗೆಯಲ್ಲಿ ಎಲೆಕ್ಟ್ರಾನಿಕ್ ಸಾಧನಗಳಿಂದಾಗಿ ವಿದ್ಯುತ್ ಬಿಲ್ ಕೂಡ ಹೆಚ್ಚು ಬರುತ್ತದೆ ಹಾಗಾಗಿಯೇ, ಅನೇಕ ಜನರು ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಲು ಹರಸಾಹಸ ಪಡುತ್ತಾರೆ. ಆದಾಗ್ಯೂ, ಬಿಲ್ ಮಾತ್ರ ಕಡಿಮೆ ಬರಲ್ಲ. ಆದರೆ ಇಂತಹ ಪರಿಸ್ಥಿತಿಯಲ್ಲಿ ನೀವು ಈ ಕೆಳಗಿನ ಸಲಹೆಗಳನ್ನು ಪಾಲಿಸಿದರೆ ಈ ಎಲೆಕ್ಟ್ರಾನಿಕ್ ಸಾಧನಗಳನ್ನು ನಿಮಗಿಷ್ಟ ಬಂದಂತೆ ಬಳಸಬಹುದು ಹಾಗೆಯೇ ವಿದ್ಯುತ್ ಬಿಲ್ ಕೂಡ ಕಡಿಮೆ ಬರುತ್ತದೆ. ದಿನಂಪ್ರತಿ ಪ್ರತಿ ವಸ್ತುಗಳ ಬೆಲೆ ಏರಿಕೆ ಬಿಸಿ ಜನರನ್ನು ಹೈರಾಣಾಗಿ ಹೋಗುವಂತೆ ಮಾಡುವುದರ ಜೊತೆಗೆ ಕರೆಂಟ್ ಬಿಲ್ ಕೂಡ ಹೆಚ್ಚಾದರೆ ಅನ್ನೋ ತಲೆಬಿಸಿ ಕೂಡ ಕಾಡುತ್ತದೆ. ಹೀಗಾಗಿ, ಕರೆಂಟ್ ಬಿಲ್ ಹೆಚ್ಚಾಗದಂತೆ ಹಿತ ಮಿತವಾಗಿ ಬಳಕೆ ಮಾಡುವ ಅಭ್ಯಾಸ ರೂಡಿಸಿಕೊಂಡರೆ ಒಳ್ಳೆಯದು.
ವಿದ್ಯುತ್ ಬಿಲ್ ಕಡಿಮೆ ಮಾಡಲು ಕೆಲ ಸರಳ ವಿಧಾನಗಳನ್ನೂ ಅನುಸರಿಸಿ :
ನೀವು ಫ್ರಿಜ್, ಎಸಿಯಂತಹ ಉಪಕರಣಗಳನ್ನು ಖರೀದಿಸಿದಾಗ, ರೇಟಿಂಗ್ ಬಗ್ಗೆ ವಿಶೇಷ ಗಮನ ಹರಿಸಿದರೆ ಒಳ್ಳೆಯದು. ಐದು ಸ್ಟಾರ್ ರೇಟಿಂಗ್ ಹೊಂದಿರುವ ಎಲೆಕ್ಟ್ರಾನಿಕ್ ಉತ್ಪನ್ನವನ್ನು ಖರೀದಿಸಲು ಪ್ರಯತ್ನಿಸೋದು ಉತ್ತಮ. ಇವುಗಳ ಬೆಲೆ ಕೊಂಚ ಹೆಚ್ಚೆಂದು ಭಾಸವಾದರು ಕೂಡ ಪ್ರತಿ ತಿಂಗಳು ಬರುವ ಎಲೆಕ್ಟ್ರಿಕ್ ಬಿಲ್ ನಲ್ಲಿ ಸಾಕಷ್ಟು ಉಳಿತಾಯ ಮಾಡಬಹುದು. ಇದಲ್ಲದೇ, ಕಡಿಮೆ ಸ್ಟಾರ್ ರೇಟಿಂಗ್ ಹೊಂದಿರುವ ಎಲೆಕ್ಟ್ರಿಕ್ ಉತ್ಪನ್ನ ನಿಮಗೆ ಕಡಿಮೆ ಬೆಲೆಗೆ ಕೈಗೆ ಎಟಕುವ ದರದಲ್ಲಿ ಲಭ್ಯವಾಗುತ್ತದೆ ಎಂದು ಕೊಂಡುಕೊಂಡರೆ ಪ್ರತಿ ತಿಂಗಳು ಕರೆಂಟ್ ಬಿಲ್ ಕೂಡ ಹೆಚ್ಚಾಗಿ ಪಾವತಿ ಮಾಡಬೇಕಾಗುತ್ತದೆ.
ಅನೇಕ ಜನರು ಈಗಲೂ ತಮ್ಮ ಮನೆಗಳಲ್ಲಿ ಹಳೆಯ ಫಿಲಮೆಂಟ್ ಬಲ್ಬ್‌ಗಳು ಮತ್ತು ಸಿಎಫ್‌ಎಲ್‌ಗಳನ್ನು ಬಳಕೆ ಮಾಡುತ್ತಾರೆ. ಈ ಹಳೆಯ ಸಾಧನಗಳು ಹೆಚ್ಚಿನ ಶಕ್ತಿಯನ್ನು ಬಳಕೆ ಮಾಡುತ್ತವೆ. ಈ ಪರಿಸ್ಥಿತಿಯಲ್ಲಿ, ಅವುಗಳ ಬದಲಿಗೆ, ನೀವು ಮನೆಯಲ್ಲಿ ಎಲ್ಇಡಿ ಬಲ್ಬ್ ಗಳನ್ನು ಬಳಕೆ ಮಾಡಿದ್ದಲ್ಲಿ ನಿಮ್ಮ ವಿದ್ಯುತ್ ಬಿಲ್ ಕಡಿಮೆ ಆಗಲಿದೆ. 100 ವ್ಯಾಟ್ ಫಿಲಮೆಂಟ್ ಬಲ್ಬ್ 10 ಗಂಟೆಗಳಲ್ಲಿ 1 ಯೂನಿಟ್ ವಿದ್ಯುತ್ ಅನ್ನು ಬಳಸುತ್ತದೆ. ಅದೇ ಸಮಯದಲ್ಲಿ, 15 ವ್ಯಾಟ್ ಗಳ CFL 66.5 ಗಂಟೆಗಳಲ್ಲಿ 1 ಯೂನಿಟ್ ವಿದ್ಯುತ್ ಅನ್ನು ಬಳಸುತ್ತದೆ. 9-ವ್ಯಾಟ್ ಎಲ್ಇಡಿ ಬಲ್ಬ್ 111 ಗಂಟೆಗಳಲ್ಲಿ 1 ಯೂನಿಟ್ ವಿದ್ಯುತ್ ಅನ್ನು ಬಳಸುತ್ತದೆ.
ಹೆಚ್ಚಿನವರು ಅನುಸರಿಸುವ ಕ್ರಮ ಇದಾಗಿದ್ದು, ಮನೆಯಲ್ಲಿ ಯಾವುದೇ ಉಪಯೋಗ ಇಲ್ಲದೆ ಇದ್ದರೂ ಸಹಿತ ಲೈಟ್, ಫ್ಯಾನ್, ಎಸಿ , ಕೂಲರ್, ಟಿವಿ ಗಳನ್ನ ಹಾಕಿರುತ್ತೇವೆ. ಆದರೆ, ವಿದ್ಯುತ್ ಬಿಲ್ ಹೆಚ್ಚಾದ ಸಂದರ್ಭದಲ್ಲಿ ಚಿಂತಿಸುವ ಬದಲಿಗೆ ಅನಾವಶ್ಯಕವಾಗಿ ಬೇಡವೆಂದಾಗ ಫ್ಯಾನ್, ಲೈಟ್ ಗಳನ್ನೂ ಆಫ್ ಮಾಡುವುದು ವಿದ್ಯುತ್ ಬಿಲ್ ಉಳಿತಾಯ ಮಾಡಲು ನೆರವಾಗುತ್ತದೆ. ಅಷ್ಟೆ ಅಲ್ಲದೇ, ತಿಂಗಳ ಬಿಲ್ ನಲ್ಲಿ ಹೆಚ್ಚು ಇಳಿಕೆ ಕಾಣಬಹುದು.
ಶಾಖ ಹೆಚ್ಚಾದ ಸಂದರ್ಭದಲ್ಲಿ ಹೆಚ್ಚಿನವರು ಕೋಣೆಯನ್ನು ತಂಪಾಗಿಸಲು ಎಸಿಯ ತಾಪಮಾನವನ್ನು 18 ರಿಂದ 19 ಕ್ಕೆ ತಿರುಗಿಸುತ್ತಾರೆ. ಇದು ಹೆಚ್ಚಿನ ವಿದ್ಯುತ್ ಬಳಕೆಗೆ ಕಾರಣವಾಗುತ್ತದೆ. ಈ ಪರಿಸ್ಥಿತಿಯಲ್ಲಿ, ನೀವು ಎಸಿಯನ್ನು ಬಳಸುವಾಗ, ಅದರ ತಾಪಮಾನವನ್ನು 24 ಡಿಗ್ರಿಗಳಲ್ಲಿ ಇರಿಸಿದ್ದಲ್ಲಿ ನಿಮ್ಮ ಕೊಠಡಿ ಕೂಡ ತಂಪಾಗಿರುತ್ತದೆ ಮತ್ತು ವಿದ್ಯುತ್ ಬಳಕೆ ಕೂಡ ಕಡಿಮೆ ಆಗುತ್ತದೆ. ಅದಲ್ಲದೇ, ನೀವು ಎಸಿಯಲ್ಲಿ ಟೈಮರನ್ನು ಸಹ ಸೆಟ್ ಮಾಡಬಹುದು. ಇದು ಕೊಠಡಿ ತಣ್ಣಗಾದಾಗ ಸ್ವಯಂಚಾಲಿತವಾಗಿ AC ಅನ್ನು ಆಫ್ ಮಾಡುತ್ತದೆ. ನೀವು ನಿಮ್ಮ ಮನೆಗೆ ಯಾವುದೇ ಹೊಸ ಎಲೆಕ್ಟ್ರಿಕ್ ಉತ್ಪನ್ನವನ್ನು ಖರೀದಿ ಮಾಡುವ ಸಂದರ್ಭದಲ್ಲಿ ಖರೀದಿ ಮಾಡುವ ಸಾಧನದ ಬಗ್ಗೆ ಮಾಹಿತಿ ತಿಳಿದಿದ್ದರೆ ಒಳಿತು.ಇಲ್ಲದೆ ಹೋದರೆ ಅನಾವಶ್ಯಕವಾಗಿ ಜೇಬಿಗೆ ಕತ್ತರಿ ಬೀಳುವ ಪ್ರಮೇಯವನ್ನು ಅಲ್ಲಗಳೆಯುವಂತಿಲ್ಲ. ಮೇಲೆ ತಿಳಿಸಿದ ಸರಳ ವಿಧಾನ ಅನುಸರಿಸಿ ವಿದ್ಯುತ್ ಬಿಲ್ ಕಡಿಮೆ ಮಾಡಿಕೊಳ್ಳಬಹುದು.