ಸ್ಥಿರ ಠೇವಣಿಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಆದಾಯ ಗಳಿಸಿ
ಭವಿಷ್ಯದ ದೃಷ್ಟಿಯಿಂದ ಉಳಿತಾಯ ಬಹಳ ಮುಖ್ಯ. ಇದಕ್ಕಾಗಿಯೇ ಪ್ರತಿಯೊಬ್ಬರೂ ತಮ್ಮ ಅಗತ್ಯಗಳಿಗೆ ಅನುಗುಣವಾಗಿ ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಕೆಲವರು ಉತ್ತಮ ಆದಾಯ ಗಳಿಸಲು ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ, ಇನ್ನೂ ಕೆಲವರು ತೆರಿಗೆ ಉಳಿಸುವ ಸಲುವಾಗಿ ಹಣವನ್ನು ಹೂಡಿಕೆ ಮಾಡುತ್ತಾರೆ. ಹೌದು ತೆರಿಗೆ ಉಳಿತಾಯ ಮಾಡಲು ಸ್ಥಿರ ಠೇವಣಿ ಮೂಲಕ ಉಳಿತಾಯ ಮಾಡಬಹುದಾಗಿದೆ.
ತಮ್ಮ ಹಣದ ಸುರಕ್ಷತೆಯನ್ನು ಬಯಸುವವರು ಬ್ಯಾಂಕ್ಗಳು ಮತ್ತು ಬ್ಯಾಂಕಿಂಗ್ ಅಲ್ಲ ಹಣಕಾಸು ಕಂಪನಿಗಳು (ಎನ್ಬಿಎಫ್ಸಿ) ನೀಡುವ ತೆರಿಗೆ ಉಳಿತಾಯ ಸ್ಥಿರ ಠೇವಣಿ (ಎಫ್ಡಿ)ಗಳ ಕಡೆ ಹೋಗಬಹುದು. ಇಲ್ಲಿ ಪ್ರತಿಯೊಬ್ಬರೂ ತಮ್ಮ ವಾರ್ಷಿಕ ಹಣಕಾಸು ಯೋಜನೆಗಳ ಪ್ರಮುಖ ಭಾಗವಾಗಿ ತೆರಿಗೆ ಉಳಿತಾಯವನ್ನು ಪರಿಗಣಿಸಬೇಕು.
ಮುಖ್ಯವಾಗಿ ಈ ಸ್ಥಿರ ಠೇವಣಿಗಳು ಐದು ವರ್ಷದ ಅವಧಿಗಳನ್ನು ಹೊಂದಿರುತ್ತದೆ. ಈ ನಿರ್ದಿಷ್ಟ ಅವಧಿಯಲ್ಲಿ ನಾವು ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ. ಅಲ್ಲದೆ, ಈ ಸ್ಥಿರ ಠೇವಣಿಗಳ ಮೂಲಕ ಯಾವುದೇ ಸಾಲವನ್ನು ಪಡೆಯಲಾಗುವುದಿಲ್ಲ. ಈ ಠೇವಣಿಗಳ ಮೇಲಿನ ಬಡ್ಡಿ ದರವು ಬ್ಯಾಂಕ್ನಿಂದ ಬ್ಯಾಂಕ್ಗೆ ವ್ಯತ್ಯಾಸವಿರುತ್ತದೆ.
ಅದಲ್ಲದೆ ನಿರ್ದಿಷ್ಟ ಮಿತಿಗಳ ಒಳಗೆ ತೆರಿಗೆ ವಿನಾಯಿತಿ ಮೂಲಕ ತೆರಿಗೆ ಉಳಿಸಲು ಬಯಸುವವರು ಪ್ರಸಕ್ತ ಹಣಕಾಸು ವರ್ಷ ಮುಗಿಯುವ ಮೊದಲು ಎಫ್ಡಿ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು. ಇದರಿಂದ ಆದಾಯ ತೆರಿಗೆ ಕಾಯಿದೆ 1961ರ ಸೆಕ್ಷನ್ 80C ಅಡಿಯಲ್ಲಿ ನಿರ್ದಿಷ್ಟ ಮಿತಿಗಳವರೆಗೆ ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ಇದು ವಿವಿಧ ತೆರಿಗೆ ಉಳಿತಾಯ ಯೋಜನೆಗಳಲ್ಲಿ ಮಾಡಿದ ಹೂಡಿಕೆಯ ಮೇಲೆ 1,50,000 ರೂ.ವರೆಗೆ ತೆರಿಗೆ ವಿನಾಯಿತಿಯನ್ನು ನೀಡುತ್ತದೆ.
ತೆರಿಗೆ ವಿನಾಯಿತಿ ಪಡೆಯಲು ನಿರ್ದಿಷ್ಟ ವ್ಯಕ್ತಿ ಅಥವಾ ಹಿಂದೂ ಅವಿಭಜಿತ ಕುಟುಂಬಗಳು (HUFs) ಈ ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಮಾಡಬಹುದು. ಈ ಠೇವಣಿಗಳು, ನೀವು ಈಗಾಗಲೇ ಖಾತೆ ಹೊಂದಿರುವ ಬ್ಯಾಂಕಿನಲ್ಲಿ ಅಥವಾ ಬೇರೆ ಯಾವುದೇ ಬ್ಯಾಂಕ್ನಲ್ಲಿ ತೆರೆಯಬಹುದ ಈ ಠೇವಣಿಗಳ ಮೇಲಿನ ಬಡ್ಡಿಯನ್ನು ನಮ್ಮ ಒಟ್ಟು ಆದಾಯದಲ್ಲಿ ಸೇರಿಸಬೇಕು. ಬಳಿಕ ನಮಗೆ ಅನ್ವಯವಾಗುವ ತೆರಿಗೆಯ ಮಿತಿಗಳ ಆಧಾರದ ಮೇಲೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
ಹಣಕಾಸು ವರ್ಷದಲ್ಲಿ ಬ್ಯಾಂಕ್ನಲ್ಲಿ ಠೇವಣಿಯಿಂದ ಪಡೆದ ಬಡ್ಡಿಯು 40,000 ರೂ.ಗಳನ್ನು ಮೀರಿದಾಗ ಟಿಡಿಎಸ್ (TDS) ವಿಧಿಸಲಾಗುತ್ತದೆ. ಈ TDS ಅನ್ನು ಫಾರ್ಮ್ 15G ಮತ್ತು ಫಾರ್ಮ್ 15H ಸಲ್ಲಿಸುವ ಮೂಲಕ ವಿನಾಯಿತಿ ಪಡೆಯಬಹುದು. ಹಿರಿಯ ನಾಗರಿಕರಿಗೆ FD ಗಳ ಮೇಲಿನ ಬಡ್ಡಿ ಆದಾಯವು ರೂ 50,000 ವರೆಗೆ ತೆರಿಗೆ ಮುಕ್ತವಾಗಿದೆ.
ಈ ಮೇಲಿನಂತೆ ತೆರಿಗೆ ಉಳಿತಾಯ ಮಾಡಲು ಸ್ಥಿರ ಠೇವಣಿ ಮೂಲಕ ಉಳಿತಾಯ ಮಾಡಬಹುದಾಗಿದೆ. ಅದಲ್ಲದೆ ನಿರ್ದಿಷ್ಟ ಮಿತಿಗಳ ಒಳಗೆ ತೆರಿಗೆ ವಿನಾಯಿತಿ ಮೂಲಕ ತೆರಿಗೆ ಉಳಿಸಲು ಬಯಸುವವರು ಪ್ರಸಕ್ತ ಹಣಕಾಸು ವರ್ಷ ಮುಗಿಯುವ ಮೊದಲು ಎಫ್ಡಿ ಯೋಜನೆಗಳಲ್ಲಿ ಈ ಮೇಲಿನ ನಿಯಮ ಅನುಸಾರ ಹೂಡಿಕೆ ಮಾಡಬಹುದಾಗಿದೆ.