ನಿಮಗಿದು ಗೊತ್ತೇ ? ಭಾರತದಲ್ಲಿ ಬಳಸಲಾಗುವ ಈ ಆಹಾರ ವಿದೇಶದಲ್ಲಿ ಬ್ಯಾನ್ ಎಂದು ? ಯಾವುದೆಲ್ಲ ಅದು, ಇಲ್ಲಿದೆ ಲಿಸ್ಟ್!
ಮನೆಯಲ್ಲಿ ಅದೆಷ್ಟೇ ಶುಚಿ ರುಚಿಯಾಗಿ ಅಡಿಗೆ ಮಾಡಿದರೂ ಕೂಡ ಹೆಚ್ಚಿನವರಿಗೆ ಮನೆಯ ಮೃಷ್ಟನ್ನಕ್ಕಿಂತ ಹೊರಗಿನ ಫಾಸ್ಟ್ ಫುಡ್ ಕಡೆಗೆ ಒಲವು ಹೆಚ್ಚು ಎಂದರೆ ತಪ್ಪಾಗದು. ಅದರಲ್ಲೂ ರೋಡ್ ಬದಿಯಲ್ಲಿ ಮಾರಾಟ ಮಾಡುವ ತಿಂಡಿಗಳೆಂದರೆ ಸಾಕು ಬಾಯಲ್ಲಿ ನೀರೂರಿ ಜಂಕ್ ಫುಡ್ ತಿನ್ನದೆ ಇದ್ದರೆ ಮನಸ್ಸಿಗೆ ಸಮಾಧಾನವೇ ಆಗದು.
ಕೆಲವರಿಗೆ ಕಾಫಿ, ಟೀ ಕುಡಿಯುವ ಹವ್ಯಾಸವಿರುವಂತೆ ಕೆಲ ಪದಾರ್ಥಗಳ ಸೇವನೆ ಅಭ್ಯಾಸ ರೂಡಿಯಾಗಿರುತ್ತೆ. ಕೆಲವರಿಗೆ ದಿನಕ್ಕೊಮ್ಮೆ ಚಾಕ್ಲೇಟ್, ಚೂಯಿಂಗ್ ಗಮ್ ತಿನ್ನುವ ಅಭ್ಯಾಸ ಇರೋದು. ಆದ್ರೆ ನಾವು ಹೀಗೆ ಸೇವಿಸುವ ಅದೆಷ್ಟೋ ಪದಾರ್ಥಗಳು ವಿದೇಶದಲ್ಲಿ ಬ್ಯಾನ್ ಆಗಿವೆ ಎಂಬ ವಿಚಾರ ನಿಮಗೆ ತಿಳಿದಿದೆಯೇ??
ಕೆಲವರಿಗೆ ಬೆಳಿಗ್ಗೆ ಎದ್ದ ಕೂಡಲೇ ಟೀ, ಕಾಫಿ ಕುಡಿಯುವ ಅಭ್ಯಾಸ ಇರೋದು ಸಹಜ. ಅದೇ ರೀತಿ ಹೆಚ್ಚಿನವರು ಬಾಯಿ ಚಪ್ಪರಿಸಿಕೊಂಡು ಸೇವಿಸುವ ಅದೆಷ್ಟೋ ಪದಾರ್ಥಗಳನ್ನು ವಿದೇಶದಲ್ಲಿ ನಿಷೇಧಿಸಲಾಗಿದೆ. ಹಾಗಿದ್ರೆ ಅದು ಯಾವುದೆಲ್ಲ ಅನ್ನೋ ವಿಚಾರ ತಿಳಿದುಕೊಳ್ಳುವ ಕುತೂಹಲ ನಿಮಗಿದೆಯಾ??? ಹಾಗಿದ್ರೆ ಈ ಆಸಕ್ತಿದಾಯಕ ವಿಚಾರ ನಿಮಗಾಗಿ.
ಚೂಯಿಂಗ್ ಗಮ್: ಸಾಮಾನ್ಯವಾಗಿ ಚಿಕ್ಕವರಿಂದ ಹಿಡಿದು ವಯಸ್ಸಾದವರು ಕೂಡ ಮೆಚ್ಚಿಕೊಂಡು ನೆಚ್ಚಿಕೊಂಡು ತಿನ್ನುವ ಚಾಕ್ಲೇಟ್, ಚೂಯಿಂಗ್ ಗಮ್ ಅನ್ನು ಯಾವುದೇ ಅಂಗಡಿಗೆ ಭೇಟಿ ಕೊಟ್ಟರೆ ಈ ವಸ್ತುಗಳನ್ನು ಕಾಣದೇ ಇರಲು ಸಾಧ್ಯವೇ ಇಲ್ಲ. ಎಷ್ಟೋ ಬಾರಿ ಚಿಲ್ಲರೆ ಎಂದಾಗ ಅಂಗಡಿಯವರು ಚಾಕ್ಲೇಟ್ ಇಲ್ಲವೇ ಚೂಯಿಂಗ್ ಗಮ್ ಕೊಡೋದು ಕಾಮನ್. ಚಿಕ್ಕವರಿಗೆ ಚಾಕ್ಲೇಟ್ ಚೂಯಿಂಗ್ ಗಮ್ ತಿನ್ನುವ ಅಭ್ಯಾಸ ಸಹಜವಾಗಿ ರೂಡಿಯಾಗಿರುತ್ತೆ. ಆದ್ರೆ, ಕೆಲವರು ಸಿಗರೇಟ್, ಬೀಡಿ ಸೇದುವ ಹವ್ಯಾಸ ಇಟ್ಟುಕೊಂಡ ಸಂದರ್ಭದಲ್ಲಿ ಮನೆಯವರಿಂದ ತಪ್ಪಿಸಿಕೊಳ್ಳಲು ನೆರವಾಗುವ ಚೂಯಿಂಗ್ ಗಮ್.
ಅಷ್ಟೆ ಏಕೆ, ಎಷ್ಟೋ ಬಾರಿ ಕ್ಲಾಸ್ ನಡೆಯುವಾಗ ನಿದ್ದೆಯ ಮಂಪರು ಬೆನ್ನು ಬಿಡದೇ ಇದ್ದಾಗ ಚೂಯಿಂಗ್ ಗಮ್ ತಿನ್ನುವ ಅಭ್ಯಾಸ ಕೂಡ ಹೆಚ್ಚಿನವರಿಗಿದೆ. ಹೀಗೆ ಇಷ್ಟೆಲ್ಲ ಇತಿಹಾಸ ಇರುವ ಚೂಯಿಂಗ್ ಗಮ್ ಅನ್ನು ಸಿಂಗಾಪುರ ದಲ್ಲಿ ನಿಷೇಧಿಸಲಾಗಿದ್ದು, ಇದರ ಸಲುವಾಗಿ ಬಿಗಿ ನಿಯಮಗಳಿದ್ದು, ಅಷ್ಟೆ ಅಲ್ಲದೆ, ಚೂಯಿಂಗ್ ಗಮ್ ನ ಮಾರಾಟ ಮತ್ತು ಬಳಕೆ ಮಾಡಲು ಅವಕಾಶವೇ ಇಲ್ಲ.
ಚವನ್ ಪ್ರಾಶ್ : ಕೊರೊನಾ ಮಹಾಮಾರಿ ಲಗ್ಗೆ ಇಟ್ಟ ಬಳಿಕ ಎಲ್ಲೆಡೆ ರಾರಾಜಿಸುತ್ತಿದ್ದ ಚ್ಯವನ್ ಪ್ರಾಶ್ (Chyawan Prash)ಆರೋಗ್ಯಕ್ಕೆ ಒಳ್ಳೆಯದು ಎಂಬ ನಂಬಿಕೆ ಹೆಚ್ಚಿನವರಿಗೆ ಇದೆ. ಇದನ್ನು ರೋಗನಿರೋಧಕ ಶಕ್ತಿ ವೃದ್ಧಿ ಗಾಗಿ ಬಳಕೆ ಮಾಡೋದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಈ ಚ್ಯವನ್ ಪ್ರಾಶ್ ಅನ್ನು ಹೆಚ್ಚಾಗಿ ಗಿಡಮೂಲಿಕೆ ಬಳಸಿ ತಯಾರಿಸಲಾಗುತ್ತದೆ. ಭಾರತದಲ್ಲಿ ಹೆಚ್ಚಿನವರು ಬಳಕೆ ಮಾಡುವ ಈ ಚ್ಯವನ ಪ್ರಾಶ್ ಅನ್ನು ಕೆನಡಾದಲ್ಲಿ 2005ರಲ್ಲೇ ಮಾರಾಟ ಹಾಗೂ ಬಳಕೆಗೆ ನಿಷೇಧ ಹೇರಲಾಗಿದೆ. ಇದರಲ್ಲಿ ಪಾದರಸದ ಅಂಶ ಹಾಗೂ ಹೆಚ್ಚಿನ ಮಟ್ಟದ ಸೀಸ ಇದೆ ಎನ್ನಲಾಗಿದೆ.
ಕೆಚಪ್ : ದಿನಂಪ್ರತಿ ಹೆಚ್ಚಿನವರು ಚಪಾತಿ, ಚೌಮಿನ್, ಸ್ಯಾಂಡ್ ವಿಚ್, ಫಿಂಗರ್ ಚಿಪ್ಸ್, ಪರೋಟಾ, ಸಮೋಸಾಗಳ ಜೊತೆಗೆ ನೆಚ್ಚಿಕೊಂಡು ಸೇವಿಸುವ ಕೆಚಪ್ (Ketchup) ಬಳಕೆ ಮಾಡೋದು ಕಾಮನ್. ಯಾವುದೇ ಫಾಸ್ಟ್ ಫುಡ್ ಆರ್ಡರ್ ಮಾಡಿದಾಗ, ಇಲ್ಲವೇ ಹೋಟೆಲ್ ಗೆ ಭೇಟಿ ಕೊಟ್ಟಾಗ, ಪಿಜ್ಜಾ ಬರ್ಗರ್ ಜೊತೆಗೆ ಒಳ್ಳೆ ಕಾಂಬಿನೇಶನ್ ಆಗಿ ಬಳಸುವ ಕೆಚಪ್ ವಿದೇಶದಲ್ಲಿ ನಿಷೇಧ ಹೇರಲಾಗಿದೆ. ಹೌದಾ?? ಯಾಕಪ್ಪಾ ಅಂತಾ ಯೋಚಿಸುತ್ತಿದ್ದೀರಾ?? ಸಣ್ಣ ಮಕ್ಕಳಿಂದ ಹಿಡಿದು ಹದಿಹರೆಯದವರು ಕೆಚಪ್ ಅನ್ನು ಹೆಚ್ಚಾಗಿ ಉಪಯೋಗಿಸಿದರೆ ಅನಾರೋಗ್ಯಕ್ಕೆ ಎಡೆ ಮಾಡಿಕೊಡುವ ಹಿನ್ನೆಲೆ,ಫ್ರೆಂಚ್ ಸರ್ಕಾರದ ಶಾಲೆ ಮತ್ತು ಕೆಫೆಗಳಲ್ಲಿ ಕೆಚಪ್ ಬಳಕೆಗೆ ನಿಷೇಧ ಹೇರಿದೆ ಎನ್ನಲಾಗಿದೆ.
ಸಮೋಸ : ರೋಡ್ ಬದಿಯಲ್ಲಿ ಸಿಗುವ ಆಹಾರ ಪದಾರ್ಥಗಳೆಂದರೆ ಸಾಕು ಎಲ್ಲರ ಬಾಯಲ್ಲಿ ನೀರೂರಿಸುವುದು ಸಹಜ. ಬೇಕರಿ ಪದಾರ್ಥಗಳು ಗೂಡಂಗಡಿಯಿಂದ ಹಿಡಿದು ದೊಡ್ದ ಫೈವ್ ಸ್ಟಾರ್ ಹೋಟೆಲ್ಗಳಲ್ಲಿ ಕೂಡ ಲಭ್ಯವಾಗುತ್ತದೆ. ಆದರೆ ದಕ್ಷಿಣ ಆಫ್ರಿಕಾದ ಸೊಮಾಲಿಯಾದಲ್ಲಿ 2011ರಿಂದ ಸಮೋಸಾವನ್ನು ನಿಷೇಧ ಹೇರಲಾಗಿದೆ. ಅಲ್ಲಿನ ತ್ರಿಕೋನಾಕಾರದ ಆಕಾರವು ‘ಅಲ್-ಶಬಾಬ್ ಗುಂಪಿನಲ್ಲಿ’ ಕ್ರಿಶ್ಚಿಯನ್ ಧರ್ಮದ ಸಂಕೇತವೆಂದು ಹೇಳಲಾಗುತ್ತಿದೆ.
ಡಿಸ್ಪ್ರಿನ್ (Disprin): ಸಣ್ಣ ತಲೆನೋವು ಕಾಣಿಸಿಕೊಂಡಾಗ ಹೆಚ್ಚಿನವರು ಮೆಡಿಕಲ್ ನಿಂದ ಟ್ಯಾಬ್ಲೆಟ್ ತೆಗೆದುಕೊಳ್ಳುವುದು ಸಹಜ. ಆದ್ರೆ ಈ ಟ್ಯಾಬ್ಲೆಟ್ ದೇಹದಿಂದ ಪ್ಲೇಟ್ಲೆಟ್ಗಳನ್ನು ಕಡಿಮೆ ಮಾಡುವ ಕೆಲಸ ಮಾಡುತ್ತದೆ. ಹೀಗಾಗಿ, ಡಿಸ್ಪ್ರಿನ್ ಅಮೆರಿಕ ಮತ್ತು ಯುರೋಪ್ ನಲ್ಲಿ ನಿಷೇಧಿಸಲಾಗಿದೆ.
ಕಿಂಡರ್ ಜಾಯ್ (Kinder Joy): ಚಾಕಲೇಟ್ ಎಂದರೆ ಸಾಕು ಎಲ್ಲರ ಬಾಯಲ್ಲಿ ನೀರೂರಿಸುವ ಜೊತೆಗೆ ಹೆಚ್ಚಿನವರ ನೆಚ್ಚಿನ ಕಿಂಡರ್ ಜಾಯ್ ಮಕ್ಕಳ ನೆಚ್ಚಿನ ಸಿಹಿ ತಿನಿಸು ಆಗಿದ್ದು, ಅದರಲ್ಲಿಯೂ ಆಟಿಕೆ ಸಿಗುತ್ತದೆ ಎನ್ನುವ ಕಾರಣಕ್ಕೆ ಮಕ್ಕಳು ಹೆಚ್ಚು ಕೊಂಡುಕೊಳ್ಳುತ್ತಾರೆ. ಇದನ್ನು ಚಾಕೊಲೇಟ್ ನಿಂದ ತಯಾರಿಕೆ ಮಾಡಲಾಗುತ್ತದೆ. ಭಾರತದಲ್ಲಿ ಹೆಚ್ಚಿನವರು ಬಯಸುವ ಕಿಂಡರ್ ಜಾಯ್ ಚಾಕ್ಲೇಟ್ ಕುರಿತ ಅನೇಕ ಪ್ರಕರಣ ವರದಿಯಾದ ಹಿನ್ನೆಲೆ ಯುಎಸ್ನಲ್ಲಿ ನಿಷೇಧಿಸಲಾಗಿದೆ. ಮೊಟ್ಟೆಯ ಆಕಾರದ ಈ ಕಿಂಡರ್ ಜಾಯ್ ಚಾಕಲೇಟ್ ಮಕ್ಕಳ ಗಂಟಲಿನಲ್ಲಿ ಸಿಲುಕಿಕೊಂಡ ಪ್ರಕರಣ ವರದಿಯಾದ ಹಿನ್ನೆಲೆ ಯು ಎಸ್ ನಲ್ಲಿ ಮಾರಾಟ ನಿಷೇಧ ಹೇರಲಾಗಿದೆ.