ಸಕ್ಕರೆಯ ಅಂಶ ಪುರುಷರ ಕೂದಲು ಉದುರುವಲ್ಲಿ ಮಹತ್ವದ ಪಾತ್ರ ವಹಿಸುತ್ತಾ? ಏನಿದು ಹೊಸ ಅಧ್ಯಯನದ ವರದಿ? ಇಲ್ಲಿದೆ ಡಿಟೇಲ್ಸ್
ಮಹಿಳೆಯರಲ್ಲಿ ಕೂದಲು ಉದುರುವ ಸಮಸ್ಯೆ ಇರುವಂತೆ ಪುರುಷರಲ್ಲಿ ಕೂಡ ಇಂತಹ ಸಮಸ್ಯೆ ಕಂಡುಬರುತ್ತದೆ. ಇದನ್ನು ನಿವಾರಣೆ ಮಾಡಲು ಕೆಲವರು ಎಲ್ಲಾ ರೀತಿಯಲ್ಲೂ ಪ್ರಯತ್ನ ಮಾಡುತ್ತಾರೆ. ಆದರೆ ಕೊನೆಗೆ ಬೋಳು ತಲೆಯನ್ನು ಮುಚ್ಚಿಡಬೇಕಾದಂತಹ ಪರಿಸ್ಥಿತಿ ಬರುವುದು. ಈ ಕೂದಲು ಉದುರುವ ಸಮಸ್ಯೆ ಹಲವು ಕಾರಣಗಳಿಂದ ಕಂಡು ಬರುವುದು. ಅದರಲ್ಲಿ ಸಕ್ಕರೆ ಹಾಕಿದ ಜ್ಯೂಸ್ಗಳನ್ನು ಕುಡಿಯುವುದರಿಂದ ಕೂಡ ಕೂದಲು ಉದುರುತ್ತದೆ ಎಂದು ಅಧ್ಯಯನದ ವರದಿ ಹೇಳಿದೆ.
ವರದಿ ಪ್ರಕಾರ, ಕೂದಲ ಆರೋಗ್ಯದಲ್ಲಿ ಆಹಾರ ಕ್ರಮ, ಜೀವನ ಶೈಲಿ, ಒತ್ತಡದ ಮಟ್ಟ ತುಂಬಾನೇ ಪರಿಣಾಮ ಬೀರುತ್ತದೆ. ಸಕ್ಕರೆ ಹಾಕಿರುವ ಪಾನೀಯಗಳಾದ ಸಾಫ್ಟ್ ಡ್ರಿಂಕ್ಸ್ , ಎನರ್ಜಿ ಮತ್ತು ಸ್ಪೋರ್ಟ್ಸ್ ಡ್ರಿಂಕ್ಸ್ , ಸಕ್ಕರೆ ಹಾಕಿದ ಹಾಲು, ಸಕ್ಕರೆ ಹಾಕಿದ ಟೀ ಮತ್ತು ಕಾಫಿ ಸೇವನೆಯಿಂದ ಕೂದಲು ಉದುರುವ ಸಮಸ್ಯೆ ಹೆಚ್ಚಾಗುವುದು.
ಪುರುಷರಲ್ಲಿ ತಲೆ ಕೂದಲು ಉದುರಲು ಇನ್ನೂ ಕೆಲವು ಕಾರಣಗಳಿವೆ.
- ವಯಸ್ಸು, ಅತಿಯಾದ ಧೂಮಪಾನ, ದೈಹಿಕ ಚಟುವಟಿಕೆ ಇಲ್ಲದಿರುವುದು.
- ಕುಟುಂಬದ ಇತಿಹಾಸ ಅಂದ್ರೆ ಮನೆಯಲ್ಲಿ ಅಪ್ಪ, ಅಜ್ಜನಿಗೆ ಬಕ್ಕತಲೆ ಉಂಟಾಗಿದ್ದರೆ ಅದು ನಿಮಗೂ ಬರಬಹುದು.
- ಹಾಗೂ ಸರಿಯಾಗಿ ಕೂದಲಿನ ಆರೈಕೆ ಮಾಡದಿರುವುದು. ಅಲ್ಲದೆ, ಹೆಚ್ಚಿನ ಮಾನಸಿಕ ಒತ್ತಡ.
- ಕಳಪೆ ಆಹಾರಕ್ರಮ ಅಂದ್ರೆ, ಸರಿಯಾದ ಆಹಾರ ಕ್ರಮ ಇಲ್ಲದಿದ್ದರೆ ಕೂದಲಿನ ಬುಡಕ್ಕೆ ಸರಿಯಾದ ಪೋಷಕಾಂಶ ದೊರೆಯದೆ ಕೂದಲಿನ ಬುಡ ಸಡಿಲವಾಗಿ ಕೂದಲು ಉದುರುವ ಸಮಸ್ಯೆ ಕಂಡು ಬರುವುದು.
- ಇದಿಷ್ಟೇ ಅಲ್ಲದೆ, ರಕ್ತ ತೆಳ್ಳಗಾಗುವುದು, ಅತ್ಯಧಿಕ ರಕ್ತದೊತ್ತಡ, ಥೈರಾಯ್ಡ್ ಸಮಸ್ಯೆ, ಕ್ಯಾನ್ಸರ್ಗೆ ಚಿಕಿತ್ಸೆ ಇಂತಹ ಸಮಸ್ಯೆ ಇದ್ದರೆ ಕೂದಲು ಉದುರುತ್ತದೆ.
- ಅಧಿಕ ರಾಸಾಯನಿಕವಿರುವ ಹೇರ್ ಕೇರ್ ಪ್ರಾಡೆಕ್ಟ್ಗಳನ್ನು ಬಳಸುವುದರಿಂದ ಅಥವಾ ಕೂದಲಿಗೆ ಬಣ್ಣ ಹಾಕುವುದರಿಂದ ಕೂಡ ಕೂದಲು ಉದುರುವ ಸಮಸ್ಯೆ ಕಂಡುಬರುತ್ತದೆ.
ಕೂದಲು ಉದುರುವುದನ್ನು ತಡೆಗಟ್ಟುವುದು ಹೇಗೆ?
ಹರಳೆಣ್ಣೆ: ಕೂದಲು ಉದುರುವುದನ್ನು ತಡೆಗಟ್ಟಲು ಈ ಎಣ್ಣೆಗಳಿಂದ ಮಸಾಜ್ ಮಾಡಿದರೆ ಒಳ್ಳೆಯದು. ಹರಳೆಣ್ಣೆ ಕೂದಲಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಇದು ಕೂದಲನ್ನು ಮಂದವಾಗಿಸುತ್ತದೆ ಜೊತೆಗೆ ಕೂದಲು ಬೇಗನೆ ಬೆಳ್ಳಗಾಗುವುದನ್ನು ತಡೆಗಟ್ಟುತ್ತದೆ. ನೆತ್ತಿಯ ಆರೋಗ್ಯಕ್ಕೆ, ತಲೆಹೊಟ್ಟು ಸಮಸ್ಯೆ ನಿವಾರಣೆಗೆ ಮತ್ತು ಕೂದಲಿನ ಬೆಳವಣಿಗೆಗೆ ನೆತ್ತಿಯ ಮೇಲೆ ಈ ಎಣ್ಣೆಯನ್ನು ಹಾಕಿ ಮಸಾಜ್ ಮಾಡಿ. ಬೆರಳ ತುದಿಯಿಂದ ನೆತ್ತಿಯನ್ನು ಮೃದುವಾಗಿ ಮಸಾಜ್ ಮಾಡಿ. 10 ನಿಮಿಷ ಮಾಡಿ. ನಂತರ 30 ನಿಮಿಷ ಕಾಲ ಕೂದಲು ಸ್ಟೀಮರ್ ಬಳಸಿ. ಇದು ತೈಲವನ್ನು ನೆತ್ತಿಯೊಳಗೆ ಹೀರಿಕೊಳ್ಳಲು ಸಹಕಾರಿ. ಮತ್ತು ಒಂದು ಗಂಟೆಯ ನಂತರ ಕೂದಲನ್ನು ತೊಳೆಯಿರಿ.
ತೆಂಗಿನೆಣ್ಣೆ: ತೆಂಗಿನೆಣ್ಣೆ ಕೂಡ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು. ತೆಂಗಿನೆಣ್ಣೆಯಲ್ಲಿ ಟ್ರೈಗ್ಲಿಸರೈಡ್ ಅಣುಗಳಿದ್ದು ಇದು ಕೂದಲಿನ ಬುಡವನ್ನು ಗಟ್ಟಿಗೊಳಿಸಿ ಕೂದಲಿನ ಪೋಷಣೆ ನೀಡುತ್ತದೆ. ಟ್ರೈಗ್ಲಿಸರೈಡ್ ಎಂಬುದು ಗ್ಲಿಸರಾಲ್ ಮತ್ತು ಮೂರು ಕೊಬ್ಬಿನಾಮ್ಲ ಗುಂಪುಗಳಿಂದ ರೂಪುಗೊಂಡ ಎಸ್ಟರ್ ಆಗಿದೆ. ಹಾಗಾಗಿ ತೆಂಗಿನೆಣ್ಣೆಯನ್ನು ದಿನವೂ ಕೂದಲಿಗೆ ಬಳಸುವುದು ಹಾಗೂ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಕೂದಲು ಉದುರುವ ಸಮಸ್ಯೆ ದೂರಾಗುತ್ತದೆ.
ಈರುಳ್ಳಿ ಎಣ್ಣೆ: ಕೂದಲು ಉದುರುವುದನ್ನು ತಡೆಗಟ್ಟಲು ಈರುಳ್ಳಿ ಎಣ್ಣೆ ತುಂಬಾ ಪ್ರಯೋಜನಕಾರಿ. ಈರುಳ್ಳಿ ಎಣ್ಣೆ ನಿಮ್ಮ ಕೂದಲು ಮತ್ತು ನೆತ್ತಿಗೆ ಹೆಚ್ಚು ಉಪಯೋಗಕಾರಿಯಾಗಿದೆ. ಇದರಲ್ಲಿ ರಕ್ತ ಪರಿಚಲನೆಗೆ ಸಹಾಯ ಮಾಡುವ ಅಂಶಗಳು ಸಮೃದ್ಧವಾಗಿದೆ. ಅದರಲ್ಲಿರುವ ಉತ್ಕರ್ಷಣ ನಿರೋಧಕಗಳು ನಿಮ್ಮ ಕೂದಲನ್ನು ಮತ್ತಷ್ಟು ಹಾನಿಯಾಗದಂತೆ ರಕ್ಷಿಸುತ್ತದೆ. ಹಾಗಾಗಿ ಇದು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಕೂದಲಿನ ಬೆಳವಣಿಗೆಗೆ ಕೂಡ ಸಹಕಾರಿಯಾಗಿದೆ.
ನೆಲ್ಲಿಕಾಯಿ ಎಣ್ಣೆ: ಕೂದಲು ಉದುರುವುದನ್ನು ತಡೆಗಟ್ಟಲು ನೆಲ್ಲಿಕಾಯಿ ಎಣ್ಣೆ ಕೂಡ ಪ್ರಯೋಜನಕಾರಿ. ನೆಲ್ಲಿಕಾಯಿ ಕೂದಲಿಗೆ ಅಗತ್ಯ ಪೋಷ್ಟಿಕಾಂಶವನ್ನು ಒದಗಿಸಿ, ಕೂದಲು ಉದುರುವ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ತಲೆಯ ಬುಡಕ್ಕೆ ನೆಲ್ಲಿಕಾಯಿ ಎಣ್ಣೆಯಿಂದ ವಾರಕ್ಕೆ 2-3 ಬಾರಿ ಮಸಾಜ್ ಮಾಡಿದರೆ ಕೂದಲು ಉದುರುವುದನ್ನು ಸಂಪೂರ್ಣವಾಗಿ ತಡೆಯಬಹುದು ಎನ್ನಲಾಗಿದೆ.