ಕಾಂಗ್ರೆಸ್ ಪಕ್ಷ ರೌಡಿಗಳನ್ನ ತಯಾರು ಮಾಡೋ ಫ್ಯಾಕ್ಟರಿ – ಆರ್.ಅಶೋಕ್

ಕಾಂಗ್ರೆಸ್ ಪಕ್ಷವು ರೌಡಿಗಳನ್ನ ತಯಾರು ಮಾಡೋ ಫ್ಯಾಕ್ಟರಿ ಎನ್ನುವ ಮೂಲಕ ಕಂದಾಯ ಸಚಿವ ಆರ್.ಅಶೋಕ್ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

 

ರೌಡಿ ವಿಲ್ಸನ್ ಗಾರ್ಡನ್ ನಾಗ ಸಚಿವ ಸೋಮಣ್ಣರನ್ನು ಭೇಟಿ ವಿಚಾರಕ್ಕೆ ಎದ್ದ ಗದ್ದಲಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಚಿವ ಸೋಮಣ್ಣ ಪರ ಬ್ಯಾಟಿಂಗ್ ನಡೆಸಿದ್ದಾರೆ.

ಸಚಿವ ಸೋಮಣ್ಣ ಅವರು ಬಸವ ತತ್ವದಲ್ಲಿ ನಂಬಿಕೆ ಇಟ್ಟವರು. ಅವರು ಜೀವನದಲ್ಲಿ ಯಾವತ್ತಿಗೂ ರೌಡಿಗಳ ಸಹವಾಸ ಮಾಡಿಲ್ಲ. ರೌಡಿಗಳಿಂದ ಚುನಾವಣೆ ಗೆದ್ದಿಲ್ಲ. ಅಂತಹವರ ವಿರುದ್ಧ ಹೀಗೆಲ್ಲಾ ಮಾತನಾಡುವುದು ಸರಿಯಲ್ಲ. ಸೋಮಣ್ಣ ಅವರಿಗೆ ಅಂತಹ ರೌಡಿ ರಾಜಕೀಯದ ಹಿನ್ನೆಲೆಯಿಲ್ಲ. ರಾಜಕೀಯ ವ್ಯಕ್ತಿಗಳು ಯಾವುದೇ ಪಕ್ಷದವರಾಗಿದ್ದರೂ ಅಂತಹವರನ್ನ ದೂರ ಇಡಬೇಕು. ಆದರೆ ಕಾಂಗ್ರೆಸ್ ಈ ಘಟನೆಯನ್ನು ದೊಡ್ಡದು ಮಾಡ್ತಿದೆ. ಅದರ ಬಗ್ಗೆ ನಿತ್ಯ ಟ್ವೀಟ್ ಮಾಡಲಾಗುತ್ತಿದೆ. ಇದು ಸರಿಯಲ್ಲ ಅಂತ ಕಿಡಿಕಾರಿದ್ದಾರೆ.

ರೌಡಿಗಳಿಗೆ ಬೆಳೆಯಲು ಅವಕಾಶ ಇರೋ ಪಕ್ಷ ಇದೆ ಅಂದ್ರೆ ಅದು ಕಾಂಗ್ರೆಸ್ ಮಾತ್ರ. ಕಾಂಗ್ರೆಸ್ ಪಕ್ಷಕ್ಕೇನೇ ಗೂಂಡಾಗಿರಿಯ ಹಿನ್ನೆಲೆಯಿದೆ. ಅದು ರೌಡಿಗಳನ್ನ ತಯಾರು ಮಾಡೋ ಕಾರ್ಖಾನೆಯಾಗಿದೆ. ಅವರು ಹಿಂದೆ ಅಧಿಕಾರದಲ್ಲಿದ್ದಾಗ ಡಾನ್‌ಗಳು ಇದ್ದರು. ಈಗ ಅಂಥವರು ಯಾರು ಇಲ್ಲ. ನಮ್ಮದು ನೇರವಾದ ರಾಜಕೀಯ, ಗೂಂಡಾಗಿರಿ ರಾಜಕೀಯ ಬಿಜೆಪಿ ಮಾಡೊಲ್ಲ. ಯಾರಾದರೂ ಕೇಸರಿ ಶಾಲು ಹಾಕಿದ ಕೂಡಲೇ ಅವರು ಬಿಜೆಪಿಯವರು ಅಲ್ಲ. ಕೇಸರಿಯ ಜೊತೆ ಹಸಿರು ಬಣ್ಣ ಮತ್ತು ಕಮಲದ ಗುರುತಿನ ಶಾಲು ಇದ್ದರೆ ಮಾತ್ರ ಅವರು ಬಿಜೆಪಿಯ ಜನ. ಅನೇಕ ಸ್ವಾಮೀಜಿಗಳು, ಮುಸ್ಲಿಮರೂ ಕೇಸರಿ ಹಾಕ್ತಾರೆ. ಹಾಗಾದರೆ ಅವರು ಬಿಜೆಪಿ ಆಗ್ತಾರಾ? ಪಕ್ಷದ ಸದಸ್ಯತ್ವ ಕಡ್ಡಾಯವಾಗಿ ಆಗಿದ್ದರೆ ಮಾತ್ರ ಅವರು ಬಿಜೆಪಿಯವರು.

ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಜೊತೆ ರೌಡಿಗಳು ನಿಂತು ತೆಗೆದುಕೊಂಡ ನೂರಾರು ಫೋಟೋಗಳಿವೆ. ಕಾಂಗ್ರೆಸ್ ಪಕ್ಷದ್ದು ರೌಡಿಗಳ ಜಾತಕ. ಅದನ್ನ ಮೊದಲು ನೋಡಿಕೊಳ್ಳಲಿ ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ,
ಫೈಟರ್ ರವಿ ಪಕ್ಷ ಸೇರ್ಪಡೆ ಬಗ್ಗೆ ಉತ್ತರಿಸಿದ ಅವರು, ಈ ಬಗ್ಗೆ ನನಗೆ ತಿಳಿದಿಲ್ಲ. ರಾಜ್ಯಾಧ್ಯಕ್ಷರು, ಸಿಎಂ ಜೊತೆ ಮಾತಾಡುತ್ತೇನೆ. ರೌಡಿ ಹಿನ್ನೆಲೆ, ಸಮಾಜಘಾತುಕವಾಗಿರೋದು ಕಂಡುಬಂದಲ್ಲಿ ಅಂತಹವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ.

Leave A Reply

Your email address will not be published.