ಯಕ್ಷ ದಿಗ್ಗಜ ಕುಂಬ್ಳೆ ಸುಂದರ್ ರಾವ್ ಇನ್ನಿಲ್ಲ!
ಮಹಾನ್ ಕಲಾವಿದ, ಪ್ರಾಸಬದ್ಧ ಮಾತಿನ ಮೋಡಿಗಾರ ಕುಂಬಳೆ ಸುಂದರ್ ರಾವ್(88)
ಇಂದು ಮುಂಜಾನೆ ನಿಧನ ಹೊಂದಿದರು. ಇವರು ಪತ್ನಿ ಇಬ್ಬರು ಪುತ್ರರು ಮೂವರು ಪುತ್ರಿಯರನ್ನು ಅಗಲಿದ್ದಾರೆ. ಅಂತ್ಯ ಸಂಸ್ಕಾರ ನಾಳೆ ನೆರವೇರಲಿದೆ. ಸಾರ್ವಜನಿಕರಿಗೆ ವೀಕ್ಷಣೆಗೆ ಮಂಗಳೂರು ಪಂಪ್ ವೆಲ್ ಬಳಿ ಇರುವ ಅವರ ಮನೆಯಲ್ಲಿ ಅವಕಾಶವಿದೆ.
ದಕ್ಷಿಣ ಕನ್ನಡ ಜಿಲ್ಲೆಯವರಾದ ಕುಂಬ್ಳೆ ಸುಂದರ ರಾವ್ ಅಥವಾ ಕುಂಬ್ಳೆ ಸುಂದರ್ ರಾವ್ ಒಬ್ಬ ರಾಜಕಾರಣಿ ಮತ್ತು ಯಕ್ಷಗಾನ ಮತ್ತು ತಾಳ-ಮದ್ದಳೆ (ಸಾಂಪ್ರದಾಯಿಕ ನೃತ್ಯ) ಕಲಾವಿದರಾಗಿ ಹೆಸರುವಾಸಿಯಾಗಿದ್ದಾರೆ. ಇವರು ಯಕ್ಷಗಾನದ ತೆಂಕುತಿಟ್ಟು ಅಥವಾ ತೆಂಕತಿಟ್ಟು ಶೈಲಿಯ ಪ್ರತಿಪಾದಕರು. 1994 ರಿಂದ 1999 ರವರೆಗೆ ಸುರತ್ಕಲ್ ಕ್ಷೇತ್ರದಿಂದ ಹತ್ತನೇ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿದ್ದ ಇವರು, ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಗೆದ್ದಿದ್ದರು. ಸುರತ್ಕಲ್, ಧರ್ಮಸ್ಥಳ ಮತ್ತು ಇರಾ ಯಕ್ಷಗಾನ ಮೇಳಗಳಲ್ಲಿ (ಯಕ್ಷಗಾನ ತಂಡಗಳು) ಕಲಾವಿದರಾಗಿ ಪ್ರಖ್ಯಾತಿ ಗಳಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಿ ದಯಾನಂದ ಪೈ ಮತ್ತು ಪಿ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದಿಂದ 2018–2019ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ. ಅಷ್ಟು ಮಾತ್ರವಲ್ಲದೇ ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.