ಕೆರೆಯ ನೀರಿನಲ್ಲಿ ಪುಟ್ಟ ಕಂದನನ್ನು ಎದೆಗಪ್ಪಿಕೊಂಡೇ ಕೊಂದುಬಿಟ್ಟ ಈ ಟೆಕ್ಕಿ ಅಪ್ಪ! ಸಾಲಬಾಧೆಗೆ ಪುಟ್ಟ ಕಂದನನ್ನೇ ಬಲಿಕೊಟ್ಟ ಪಾಪಿ |
ಆತ ಸಾಲಬಾಧೆಯಿಂದ ತತ್ತರಿಸಿ ಹೋಗಿದ್ದ. ಕೆಲಸವಿಲ್ಲದೆ ಮನೆಯಲ್ಲಿ ಇದ್ದಾತನ ಬಳಿ ಸಾಲಗಾರರು ಬಂದು ಹಣ ಕೇಳಿದಾಗ ಆತ ಸಾಯೋ ನಿರ್ಧಾರ ಮಾಡಿದ್ದ. ಆತ ಒಬ್ಬನೇ ಸಾಯೋ ನಿರ್ಧಾರಕ್ಕೆ ಬಂದಿದ್ದಲ್ಲ ಆತನ ಜೊತೆ ಆತನ ಮಗುವನ್ನು ಕೂಡಾ ತನ್ನೊಂದಿಗೆ ಕರೆದುಕೊಂಡು ಹೋಗಿದ್ದ. ಆದರೆ ಕೊನೇ ಕ್ಷಣದಲ್ಲಿ ಆತ ತನ್ನ ನಿರ್ಧಾರ ಬದಲಿಸಿದ್ದ. ಕೇವಲ ಮಗೂನ ಕೊಂದು ಆತ ಮಾತ್ರ ಊರು ಬಿಟ್ಟ. ಆದರೆ ಅಲ್ಲೂ ಒಂದು ಸುಳ್ಳಿನ ಕಂತೆ ಎಳೆದ. ಏನದು?
ಸಾಯುವ ನಿರ್ಧಾರ ಮಾಡಿ ಮನೆಯಿಂದ ಹೊರಟ ತಂದೆಯ ಹೆಸರು ರಾಹುಲ್. ಶಾಲೆಗೆ ತನ್ನ ಮಗಳನ್ನು ಕರೆದುಕೊಂಡು ಹೋಗುತ್ತೇನೆ ಎಂದು ಮನೆಯಲ್ಲಿ ಹೇಳಿ ಹೊಸಕೋಟೆ ಮಾರ್ಗವಾಗಿ ಸೀದಾ ಕೋಲಾರ ತಾಲ್ಲೂಕು ಕೆಂದಟ್ಟಿ ಗ್ರಾಮದ ಕೆರೆಯ ಬಳಿ ಬಂದಿದ್ದಾನೆ. ಆದರೆ ಅಷ್ಟೊತ್ತಿಗಾಗಲೇ ಸಂಜೆಯಾಗಿತ್ತು. ನಂತರ ತನ್ನ ಮಗಳೊಂದಿಗೆ ತಾನು ಕೆರೆಯಲ್ಲಿ ಮುಳುಗಿ ಸಾಯಲು ನಿರ್ಧಾರ ಮಾಡಿದ್ದ.
ಎದೆಯ ಮೇಲೆ ಆಟವಾಡಿಸಿಕೊಂಡು ಬೆಳೆಸಿದ್ದ ಅದೇ ಪುಟ್ಟ ಕಂದನನ್ನು ತನ್ನ ಎದೆಯಲ್ಲಿಯೇ ಒತ್ತಿ ಹಿಡಿದು ಕರೆಯ ನೀರಿನಲ್ಲಿ ಒತ್ತಿ ಹಿಡಿದು ಕೊಂದೇ ಬಿಟ್ಟ. ಯಾವ ಮಗಳಿಗೆ ತನ್ನ ಸರ್ವಸ್ವವನ್ನೇ ಧಾರೆ ಎರೆದಿದ್ದನೋ ಅದೇ ಮಗಳನ್ನು ಇಲ್ಲವಾಗಿಸಿದ್ದ. ಆತನಿಗಿದ್ದದ್ದು, ಸಾಲದ ಭಾದೆ ಆತನ ಹೂಡಿಕೆಯಲ್ಲಿನ ನಷ್ಟಕ್ಕೆ ಮಗು ಇಲ್ಲವಾಯಿತು.
ವೃತ್ತಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ಆತ ತನ್ನ ಮಗಳನ್ನು ತಾನೇ ಕೊಂದ ಸ್ಥಳವನ್ನು ಪೊಲೀಸರೊಂದಿಗೆ ಕೆರೆಯ ಬಳಿ ತೆರಳಿ ತೋರಿಸಿದ್ದಾನೆ. ಈ ದೃಶ್ಯ ಕಂಡು ಬಂದಿದ್ದು ಕೋಲಾರ ತಾಲ್ಲೂಕು ಕೆಂದಟ್ಟಿ ಬಳಿಯಲ್ಲಿ. ಹೌದು ಅದು ನವೆಂಬರ್ 16 ರಂದು ನಡೆದಿದ್ದ ಘಟನೆ. ಗುಜರಾತ್ ಮೂಲದ ಸಾಫ್ಟ್ವೇರ್ ಎಂಜಿನಿಯರ್ ಒಬ್ಬ ತನ್ನ ಮಗಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದುಕೊಂಡಿದ್ದ ಪ್ರಕರಣದ ಅಸಲಿಯತ್ತು ಇದೀಗ ಬಯಲಾಗಿದೆ.
ರಾಹುಲ್ ಗುಜರಾತ್ ಮೂಲದ ಸಾಫ್ಟ್ವೇರ್ ಎಂಜಿನಿಯರ್ . ಬೆಂಗಳೂರಿನ ಬಾಗಲೂರಿನಲ್ಲಿ ತಾನು ಪ್ರೀತಿಸಿ ಮದುವೆಯಾಗಿದ್ದ ಭವ್ಯ ಎಂಬ ಹುಡುಗಿಯ ಜೊತೆಗೆ ರಾಗಾ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದ. ಕಳೆದ ಐದಾರು ವರ್ಷಗಳಿಂದ ಇಲ್ಲಿ ವಾಸವಿದ್ದ ರಾಹುಲ್ ಮತ್ತು ಭವ್ಯಾಗೆ ಮೂರು ವರ್ಷದ ಒಂದು ಮುದ್ದಾದ ಹೆಣ್ಣು ಮಗು ಕೂಡಾ ಇತ್ತು. ಆ ಮಗುವಿನ ಹೆಸರು ಜಿಯಾ.
ಆದರೆ ಕಳೆದ ಒಂದೂವರೆ ವರ್ಷದಿಂದ ಕೆಲಸವಿಲ್ಲದೆ ಇದ್ದ ಆತ, 2016 ರಿಂದ ಬಿಟ್ಕಾಯಿನ್ ಮೇಲೆ ಹೂಡಿಕೆ ಮಾಡಿ ಸಾಕಷ್ಟು ನಷ್ಟ ಅನುಭವಿಸಿದ್ದ. ರಾಹುಲ್ ಅವತ್ತು ನವೆಂಬರ್ 15 ರಂದು ತಾನು ಮಗುವನ್ನು ಶಾಲೆಗೆ ಬಿಡಲು ಸಿದ್ಧತೆ ನಡೆಸಿದ್ದ. ಅವತ್ತು ಸಾಲಗಾರರು ಮನೆಯ ಬಳಿ ಬಂದು ನಿಂತಿದ್ದರು. ತಾನು ನೀಡಿದ್ದ ಸುಳ್ಳು ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಬಂದು ಠಾಣೆಗೆ ಬರುವಂತೆ ಕರೆದಿದ್ದರು. ಇದರ ಜೊತೆಗೆ ತನ್ನ ಪತ್ನಿ ಕೇಳಿದ್ದನ್ನು ಕೊಡಬೇಕು ಎನ್ನುವ ಹಂಬಲ ಆತನನ್ನು ಈ ದುರಾವಸ್ಥೆಗೆ ತಂದು ನಿಲ್ಲಿಸಿತ್ತು.
ಆತನ ಇಂಥ ಪರಿಸ್ಥಿತಿಯಲ್ಲಿ ಜೇಬಲ್ಲಿ ಒಂದು ನಯಾಪೈಸೆಯೂ ಇಲ್ಲವಾಗಿತ್ತು. ಹೀಗಿರುವಾಗ ಅವತ್ತು ತನ್ನ ಮಗುವನ್ನು ಶಾಲೆಗೆ ಬಿಟ್ಟು ಬರುವುದಾಗಿ ಹೊರಬಂದ ರಾಹುಲ್ ಗೆ ವಾಪಸ್ ಮನೆಗೆ ಹೋಗಲಾಗದ ಸ್ಥಿತಿ ಎದುರಾಗಿತ್ತು. ಒಂದು ವೇಳೆ ವಾಪಸು ಮನೆಗೆ ಹೋದರೂ ಅಲ್ಲಿನ ಪರಿಸ್ಥಿತಿಯನ್ನು ನಿಭಾಯಿಸಲಾಗದ ಪರಿಸ್ಥಿತಿ ಆತನದ್ದು. ಅದರ ಪರಿಣಾಮ ತನ್ನ ಮಗಳಗೊಂದಿಗೆ ತಾನೂ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದುಬಿಟ್ಟಿದ್ದ.
ಹಾಗಾಗಿ ಈ ಕೆರೆಯತ್ತ ಬಂದ. ಮಗು ಬದುಕಿ ನಾನು ಸತ್ತರೆ ಎಂದು ತನ್ನ ಮಗಳನ್ನು ಬಿಗಿದಪ್ಪಿಕೊಂಡು ಮೊದಲು ತನ್ನ ಮಗಳ ಉಸಿರುಗಟ್ಟಿಸಿ ಸಾಯಿಸಿದ್ದಾನೆ. ನಂತರ, ಅದಾಗ ತಾನೆ ಉಸಿರು ನಿಲ್ಲಿಸಿದ್ದ ತನ್ನ ಮಗಳನ್ನು ಎದೆಗಪ್ಪಿಕೊಂಡೇ ಕೆರೆಯ ನೀರಿಗೆ ಹಾರಿದ್ದಾನೆ. ಆದರೆ ನೀರು ಆಳವಿರಲಿಲ್ಲ, ಸಾಯಲು ಸಾಧ್ಯವಾಗಿಲ್ಲ. ಅಷ್ಟರಲ್ಲಿ ಆತನಿಗೆ ಸಾಯೋ ಧೈರ್ಯ ಹೋಯಿತು. ಹಾಗಾಗಿ ಮೃತಪಟ್ಟ ತನ್ನ ಮಗುವನ್ನು ಅಲ್ಲೇ ಬಿಟ್ಟು ಕಾರ್ನಲ್ಲಿ ಮೊಬೈಲ್, ಪರ್ಸ್, ಎಲ್ಲವನ್ನೂ ಅಲ್ಲೇ ಬಿಟ್ಟು ಸೀದಾ, ಯಾರೋ ವ್ಯಕ್ತಿಯೊಬ್ಬರಿಂದ ಬಂಗಾರಪೇಟೆ ರೈಲ್ವೆ ನಿಲ್ದಾಣಕ್ಕೆ ಡ್ರಾಪ್ ತೆಗೆದುಕೊಂಡು ರೈಲು ಹತ್ತಿದ್ದಾನೆ. ರಾಹುಲ್ ಅಲ್ಲಿಂದ ತಮಿಳುನಾಡು, ಆಂಧ್ರ, ಮಹಾರಾಷ್ಟ್ರ, ದೆಹಲಿ, ಆಗ್ರಾ ಹೀಗೆ ರೈಲಿನಲ್ಲಿ ನಾಲ್ಕೈದು ರಾಜ್ಯಗಳನ್ನು ಸುತ್ತಾಡಿದ್ದಾನೆ.
ರೈಲಿನಲ್ಲಿ ಪ್ರಯಾಣ ಮಾಡುವ ವೇಳೆ ಮತ್ತೆ ರೈಲಿನಿಂದ ಹಾರಿ ಸಾಯಲು ಯತ್ನಿಸಿದ್ದಾನೆ. ಆದರೂ ಆತನಿಗೆ ಸಾಯಲು ಧೈರ್ಯ ಸಾಕಾಗಿಲ್ಲ. ಆದರೆ ಅಷ್ಟರಲ್ಲಿ ಆತ ತನ್ನ ಹೆಂಡತಿ ಮನೆಯವರಿಗೆ ಪೋನ್ ಮಾಡಿ ಕಿಡ್ನಾಪ್ ಆಗಿದ್ದೇನೆ ಎಂದು ಕಥೆ ಕಟ್ಟಿದ್ದಾನೆ. ನಂತರ ಪೊಲೀಸರು ಈತನಿಗಾಗಿ ಹುಡುಕಾಟ ನಡೆಸಿದಾಗ, ರಾಹುಲ್ ಆಂಧ್ರ ಪ್ರದೇಶದಿಂದ ರೈಲಿನಲ್ಲಿ ಬೆಂಗಳೂರಿನತ್ತ ಹೊರಟಿರುವುದು ತಿಳಿದುಬರುತ್ತದೆ. ಕೊನೆಗೂ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ವಿಚಾರಣೆ ಮಾಡಿದಾಗ ಆತನಿಂದ ಇಷ್ಟೆಲ್ಲಾ ಸತ್ಯ ಹೊರಬಂದಿದೆ.
ಹೆಂಡತಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಸಿಕ್ಕ ಸಿಕ್ಕ ಕಡೆಯಲ್ಲಿ ಸಾಲ ಸೋಲ ಮಾಡಿ, ಕೊನೆಗೆ ಅದರಿಂದ ಹೊರಗೆ ಬರಲಾರದೆ ಸಾಯುವ ದುಃಸ್ಥಿತಿ ತಲುಪಿದ್ದು, ನಿಜಕ್ಕೂ ಖೇದಕರ. ಈ ಎಲ್ಲಾ ಈತನ ಸಾಲದ ಸುಳಿಗೆ ಏನೂ ಅರಿಯದ ಈತನ ಮಗಳು ಬಲಿಯಾದದ್ದು ಮಾತ್ರ ಖೇದಕರ. ಇದಕ್ಕಲ್ಲವೇ ದೊಡ್ಡವರು ಹೇಳೋದು, ‘ಹಾಸಿಗೆ ಇದ್ದಷ್ಟು ಕಾಲು ಚಾಚು’ ಎಂದು.