ವಿಧಿಯ ಕ್ರೂರ ಲೀಲೆಗೆ ಸಿಲುಕಿದ ಎಳೆಯ ಬಾಲಕ | ಹೃದಯಾಘಾತಕ್ಕೆ 2ನೇ ತರಗತಿ ವಿದ್ಯಾರ್ಥಿ ಬಲಿ !!

ಹೃದಯಾಘಾತದಿಂದ ಎಳೆಯ ಶಾಲಾ ವಿದ್ಯಾರ್ಥಿ ಸಾವನ್ನಪ್ಪಿರುವ ಮನಕಲಕುವ ಘಟನೆ ಬುಧವಾರ ದ.ಕ ಜಿಲ್ಲೆಯಲ್ಲಿ ಸಂಭವಿಸಿದೆ.

 

ಸುಳ್ಯ ತಾಲೂಕಿನ ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕ ಸ.ಹಿ.ಪ್ರಾ. ಶಾಲೆಯ 2ನೇ ತರಗತಿ ವಿದ್ಯಾರ್ಥಿ ವಿಧಿಯ ಕ್ರೂರ ಕೃತ್ಯಕ್ಕೆ ಬಲಿಯಾಗಿದ್ದಾನೆ.

ಮೃತ ಬಾಲಕ ಕುಂಟಿಕಾನದ ಚಂದ್ರಶೇಖರ ಆಚಾರ್ಯ ಪುತ್ರನಾಗಿದ್ದನೆ. ಮೋಕ್ಷಿತ್‌ ಕೆ.ಸಿ ಗೆ ಕೇವಲ 7 ವರ್ಷ ವಯಸ್ಸಾಗಿದ್ದು, ಆತ ಎರಡನೆಯ ಕ್ಲಾಸಿನಲ್ಲಿ ಓದುತ್ತಿದ್ದ.

ಮೊನ್ನೆ ಕನ್ನಡ ರಾಜ್ಯೋತ್ಸವದ ದಿನದಂದು ಬಾಲಕನು ಎಂದಿನಂತೆ ಶಾಲೆಗೆ ಬಂದಿದ್ದ. ಆತ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕೂಡಾ ಭಾಗವಹಿಸಿದ್ದ. ಮಧ್ಯಾಹ್ನದ ವೇಳೆಗೆ ಆತನಿಗೆ ಸಣ್ಣಗೆ ಜ್ವರ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು ದೂರವಾಣಿ ಮೂಲಕ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ತಂದೆ ಚಂದ್ರಶೇಖರ ಆಚಾರ್ಯ ಅವರು ಶಾಲೆಗೆ ಬಂದಿರುವ ಸಂದರ್ಭದಲ್ಲೇ ಬಾಲಕ ನಿಂತಲ್ಲಿಯೇ ಕುಸಿದು ಬಿದ್ದಿದ್ದಾನೆ.

ಆಗ ಆತನನ್ನು ತತ್‌ಕ್ಷಣ ಸುಳ್ಯದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ವೈದ್ಯರು ಪರೀಕ್ಷಿಸಿ, ಬಾಲಕನಿಗೆ ಹೃದಯಾಘಾತ ಸಂಭವಿಸಿದ್ದರಿಂದ ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ. ಮೃತ ಬಾಲಕ ತಂದೆ, ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ.

Leave A Reply

Your email address will not be published.