ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗಳ ಪತ್ತೆಗೆ 40 ಕಡೆ ವಾಂಟೆಡ್ ಪೋಸ್ಟರ್
ದೇಶಾದ್ಯಂತ ಸಂಚಲನ ಮೂಡಿಸಿದ ದ.ಕ.ಸುಳ್ಯ ತಾಲೂಕಿನ ಬೆಳ್ಳಾರೆಯ ಮಾಸ್ತಿಕಟ್ಟೆಯಲ್ಲಿ ನಡೆದ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆ ಮರೆಸಿಕೊಂಡ ನಾಲ್ವರು ಆರೋಪಿಗಳ ಪತ್ತೆಗೆ ಎನ್‌ಐಎ ಈಗಾಗಲೇ ಲಕ್ಷಗಟ್ಟಲೆ ಬಹುಮಾನ ಘೋಷಿಸಿದೆ.
ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಗಳಾದ ಮಹಮ್ಮದ್ ಮುಸ್ತಾಫ ಬೆಳ್ಳಾರೆ, ತುಫೈಲ್ ಮಡಿಕೇರಿ ಅವರ ಬಗ್ಗೆ ಮಾಹಿತಿ ನೀಡಿದವರಿಗೆ ತಲಾ 5 ಲಕ್ಷ ,ಉಮ್ಮರ್ ಫಾರೂಕ್ ಸುಳ್ಯ,ಅಬೂಬಕ್ಕರ್ ಸಿದ್ದೀಕ್ ಬೆಳ್ಳಾರೆ ಬಗ್ಗೆ ಮಾಹಿತಿ ನೀಡಿದವರಿಗೆ ತಲಾ 2 ಲಕ್ಷ ಬಹುಮಾನ ನೀಡುವುದಾಗಿ ಎನ್.ಐ.ಎ.ಘೋಷಣೆ ಮಾಡಿತ್ತು.
ಈಗ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆ ಪ್ರಮುಖ ಆರೋಪಿ ತುಫೈಲ್‌ನ ಹುಡುಕಾಟಕ್ಕೆ ಕೊಡಗು ಪೊಲೀಸರು ಮುಂದಾಗಿದ್ದಾರೆ. ಈತ ಮಡಿಕೇರಿಯ ಗದ್ದಿಗೆ ನಿವಾಸಿ, ಈತನ ಮನೆ ಸೇರಿದಂತೆ ಸುಮಾರು 40 ಕಡೆಗಳಲ್ಲಿ ವಾಂಟೆಡ್ ಪೋಸ್ಟರ್ ಅಂಟಿಸಿದ್ದು, ಸುಳಿವು ಸಿಕ್ಕಿದಲ್ಲಿ ಪೊಲೀಸರಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
ಈತನನ್ನು ಹುಡುಕಿಕೊಟ್ಟವರಿಗೆ 5 ಲಕ್ಷ ರು.ನಗದು ಬಹುಮಾನವನ್ನು ರಾಷ್ಟ್ರೀಯ ತನಿಖಾದಳ ಘೋಷಿಸಿದೆ. ಈತನನ್ನು ಹುಡುಕಿಕೊಂಡು ಎನ್‌ಐಎ ತಂಡ ಸೆಪ್ಟೆಂಬರ್ ತಿಂಗಳಲ್ಲಿ ಎರಡು ಬಾರಿ ಮಡಿಕೇರಿಗೆ ಬಂದಿತ್ತು. ಆದರೆ, ಆತನನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ.
ತುಫೈಲ್ ಮನೆ ಬಿಟ್ಟು 8 ತಿಂಗಳಾಗಿದೆ. 8 ತಿಂಗಳಿಂದ ಆತ ನಮ್ಮ ಸಂಪರ್ಕದಲ್ಲಿ ಇಲ್ಲ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ. ಆದರೆ, ಪ್ರವೀಣ್ ಹತ್ಯೆ ಬಳಿಕ ಆತ ಮಡಿಕೇರಿಯಲ್ಲಿಯೇ ಇದ್ದ. ಕೆಲ ದಿನಗಳ ಬಳಿಕ, ಆತ ನಾಪತ್ತೆಯಾಗಿದ್ದಾನೆ ಎಂದು ತಿಳಿಸಿವೆ.