Dakshina kannada : ಗಮನಿಸಿ ಭಕ್ತರೇ| ಈ ದೇವಸ್ಥಾನಗಳ ದರ್ಶನ ಸಮಯ, ಪೂಜೆ, ಅನ್ನಪ್ರಸಾದದ ಸಮಯ ಬದಲಾವಣೆ!!!
ಮಂಗಳೂರು: ಎರಡನೇ ಸೂರ್ಯಗ್ರಹಣವು ಈ ವರ್ಷದ ಇದೇ ಅಕ್ಟೋಬರ್ 25 ರ ಮಂಗಳವಾರದಂದು (Solar Eclipse) ಆಗಲಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಸೂರ್ಯಗ್ರಹಣ ಕಾಣಲಿದೆ. ಹಿಂದೂ ಧಾರ್ಮಿಕ ಆಚರಣೆ ಮೇಲೂ ಈ ಸೂರ್ಯಗ್ರಹಣವು ಪ್ರಭಾವ ಬೀರುವ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಪ್ರಮುಖ ದೇಗುಲಗಳಲ್ಲಿ (Temples In Dakshina Kannada) ದೇವರ ದರ್ಶನ ಹಾಗೂ ಇತರೆ ಸೇವೆಗಳಲ್ಲಿ ಬದಲಾವಣೆ ಕಾಣಬಹುದಾಗಿದೆ. ಹಾಗಾಗಿ ಯಾರೆಲ್ಲ ಭಕ್ತಾಧಿಗಳು ಸೂರ್ಯ ಗ್ರಹಣ ದಿನ ದೇಗುಲಕ್ಕೆ (Temple Visit On Surya Grahan) ತೆರಳಲು ಬಯಸುತ್ತೀರೋ ಕಡ್ಡಾಯವಾಗಿ ಈ ಬದಲಾವಣೆಯನ್ನು ಗಮನಿಸಿದರೆ ಉತ್ತಮ. ಸೂರ್ಯಗ್ರಹಣದ ದಿನದಂದು ಕರಾವಳಿಯ ದೇವಾಲಯಗಳಲ್ಲಿ ದೇವರ ದರ್ಶನ ಹಾಗೂ ಸೇವೆಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಯ ಆಗಲಿದೆ.
ಧರ್ಮಸ್ಥಳ : ಸೂರ್ಯ ಗ್ರಹಣವು ಸಾಯಂಕಾಲ ಘಟಿಸುವುದರಿಂದ ಮಧ್ಯಾಹ್ನದವರೆಗೆ ಎಂದಿನಂತೆ ದೇವರ ದರ್ಶನ, ಅನ್ನ ಪ್ರಸಾದಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಧ್ಯಾಹ್ನ 2.30ರಿಂದ ರಾತ್ರಿ 7.30ರ ವರೆಗೆ ದೇವರ ದರ್ಶನಕ್ಕೆ ಅವಕಾಶವಿರುವುದಿಲ್ಲ. ಅಲ್ಲದೇ, ಅನ್ನಛತ್ರದಲ್ಲಿ ಮಧ್ಯಾಹ್ನ 2.30 ರವರೆಗೆ ಭೋಜನದ ವ್ಯವಸ್ಥೆಯೂ ಇರಲಿದೆ. ಮಾತ್ರವಲ್ಲದೇ ರಾತ್ರಿ 7.30 ರ ನಂತರ ಮತ್ತೆ ಅನ್ನ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಕ್ಷೇತ್ರದ ಪ್ರಕಟಣೆಯು ತಿಳಿಸಿದೆ. ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ದರ್ಶನದ ಸಮಯದಲ್ಲಿ ಕೊಂಚ ಬದಲಾವಣೆಯನ್ನಷ್ಟೇ ಮಾಡಲಾಗಿರುತ್ತದೆ.
ಬಪ್ಪನಾಡು : ದೇವಿ ದೇವಸ್ಥಾನ ಮಂಗಳೂರು ಹೊರವಲಯದ ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸೂರ್ಯ ಗ್ರಹಣ ಸಮಯದಲ್ಲಿ ಯಾವುದೇ ಸೇವೆ, ಪೂಜೆ, ಪ್ರಸಾದ ವಿತರಣೆ ನಡೆಯದು. ಅಂದು ಸಂಜೆ 4.45ರಿಂದ 6.45ರ ವರೆಗೆ ಯಾವುದೇ ಪೂಜೆ, ಸೇವೆ, ಪ್ರಸಾದ ವಿತರಣೆ ಇರುವುದಿಲ್ಲ. ಸಂಜೆ 6.45ರ ಬಳಿಕ ನಿತ್ಯ ಪೂಜೆ ಜರುಗಲಿದೆ. ಆದರೆ, ಮಧ್ಯಾಹ್ನ ಜರುಗುವ ಅನ್ನಪ್ರಸಾದ ಇರುವುದಿಲ್ಲ.
ಕಟೀಲು : ಕರಾವಳಿಯ ಪ್ರಸಿದ್ಧ ದೇವಿ ದೇವಸ್ಥಾನಗಳಲ್ಲಿ ಒಂದಾದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲೂ ಸಣ್ಣ ಮಟ್ಟಿನ ಬದಲಾವಣೆ ಇದೆ. ಸೂರ್ಯಗ್ರಹಣ ದಿನ ಮಧ್ಯಾಹ್ನ ಎಂದಿನಂತೆ ಅನ್ನಪ್ರಸಾದವಿರುತ್ತದೆ. ಗ್ರಹಣ ಸಮಯದಲ್ಲೂ ದೇಗುಲಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಗ್ರಹಣದಿಂದ ಮೋಕ್ಷದ ಅವಧಿವರೆಗೂ ಭಕ್ತರಿಗೆ ದೇವಳಕ್ಕೆ ಸುತ್ತು ಬರಲು ಹಾಗೂ ಜಪ ಮಾಡಬಹುದಷ್ಟೇ. ಅದರ ಹೊರತಾಗಿ ಈ ಅವಧಿಯಲ್ಲಿ ಯಾವುದೇ ಸೇವೆ, ಪ್ರಸಾದ ವಿತರಣೆ ಇರುವುದಿಲ್ಲ.
ಕುಕ್ಕೆ : ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೂರ್ಯ ಗ್ರಹಣ ದಿನ ಅಕ್ಟೋಬರ್ 25 ರಂದು ಯಾವುದೇ ಸೇವೆಗಳು, ದರ್ಶನ ಹಾಗೂ ಭೋಜನ ಪ್ರಸಾದ ವ್ಯವಸ್ಥೆ ಇರುವುದಿಲ್ಲ. ಮರುದಿನ ಅಕ್ಟೋಬರ್ 26ರಂದು ಕ್ಷೇತ್ರದಲ್ಲಿ ನಿತ್ಯ ಪೂಜಾ ಸಮಯಗಳಲ್ಲೂ ವ್ಯತ್ಯಯ ಉಂಟಾಗಲಿದೆ. ಬೆಳಗ್ಗೆ ಗಂಟೆ 9 ಯಿಂದ ಭಕ್ತಾದಿಗಳಿಗೆ ಶ್ರೀ ದೇವರ ದರ್ಶನ, ಸೇವೆಗಳು ಆರಂಭಗೊಳ್ಳಲಿವೆ.