ದಕ್ಷಿಣ ಕನ್ನಡ: ಯಕ್ಷಗಾನಕ್ಕೆ ಕಾಲಮಿತಿ ನಿರ್ಬಂಧಕ್ಕೆ ಯಕ್ಷಪ್ರಿಯರು ಗರಂ | ರಾತ್ರಿ ಪ್ರದರ್ಶನಕ್ಕೆ ಆಗ್ರಹ | ಕಟೀಲು ದೇವಿಯ ಮೊರೆ ಹೋಗಲು ನಿರ್ಧಾರ!!!
ಯಕ್ಷಗಾನ ಕರಾವಳಿ ಕರ್ನಾಟಕ ಜಿಲ್ಲೆಗಳಲ್ಲಿ ಪ್ರಚಲಿತದಲ್ಲಿರುವ ಸಾಂಪ್ರದಾಯಿಕ ಕಲೆ. ವಿಭಿನ್ನ ವೇಷಭೂಷಣ, ಲಯಬದ್ಧವಾದ ಸಂಗೀತ, ನೃತ್ಯ, ಸಂಭಾಷಣೆಗಳ ಸಮ್ಮಿಲನವಾದ ಯಕ್ಷಗಾನವನ್ನು ನೋಡುವುದು ಒಂದು ವಿಶಿಷ್ಟ ಅನುಭವ. ರಾತ್ರಿ ಪೂರ್ತಿ ನಡೆಯುತ್ತಿದ್ದ ಯಕ್ಷಗಾನಕ್ಕೆ ಪ್ರದರ್ಶನಕ್ಕೆ ಈಗ ಬ್ರೇಕ್ ಬಿದ್ದಿದೆ. ಆದರೆ ಇತ್ತೀಚೆಗೆ ಧ್ವನಿ ವರ್ಧಕ ನಿರ್ಬಂಧದ ಕಾರಣದಿಂದ ರಾತ್ರಿ ಯಕ್ಷಗಾನಕ್ಕೆ ತಡೆ ಹಾಕಲಾಗಿತ್ತು. ಆಜಾನ್ ಸಂಘರ್ಷದ ಹಿನ್ನೆಲೆಯಲ್ಲಿ ರಾತ್ರಿ ಧ್ವನಿವರ್ಧಕ ನಿರ್ಬಂಧಿಸಿದ್ದ ಸರ್ಕಾರದ ಆದೇಶದ ಕಾರಣ ರಾತ್ರಿ ಪೂರ್ತಿ ನಡೀತಿದ್ದ ಯಕ್ಷಗಾನಕ್ಕೂ ಈ ಆದೇಶ ನೀಡಲಾಗಿತ್ತು. ಆದರೆ ಈ ನಿರ್ಣಯದಿಂದ ಯಕ್ಷಗಾನ ಪ್ರಿಯರು ಗರಂ ಆಗಿದ್ದು, ಕಾಲಮಿತಿ ನಿರ್ಬಂಧ ಹೇರಿರುವ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಕಟೀಲು ದೇವಿಯ ಮೊರೆ ಹೋಗಲು ಯಕ್ಷ ಪ್ರಿಯರು ನಿರ್ಧರಿಸಿದ್ದಾರೆ.
ಅಕ್ಟೋಬರ್ ಕೊನೆಯ ವಾರ ಕಟೀಲಿಗೆ ಸೇವಾಕರ್ತರು ಮತ್ತು ಅಭಿಮಾನಿಗಳು ಕಾಲಮಿತಿ ಹೇರಿಕೆ ವಿರುದ್ಧ ಕಟೀಲು ದೇವಸ್ಥಾನಕ್ಕೆ ಪಾದಯಾತ್ರೆಗೆ ನಿರ್ಧರಿಸಿದ್ದಾರೆ.
ಯಕ್ಷಗಾನ ಬಯಲಾಟ ಸೇವಾ ಸಮಿತಿ ಮತ್ತು ಹತ್ತು ಸಮಸ್ತರ ಪ್ರತಿನಿಧಿಗಳು ಹಾಗೂ ಯಕ್ಷಗಾನ ಸೇವಾರ್ಥಿಗಳು ಸಭೆ ಸೇರಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗಿದೆ. ಯಕ್ಷಗಾನವನ್ನು ತನ್ನ ಇಡೀ ರಾತ್ರಿ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ನಡೆಸಲು ಆಗ್ರಹ ವ್ಯಕ್ತವಾಗಿದ್ದು, ಮೇಳದ ಆಡಳಿತ ಮಂಡಳಿ, ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಸಂದೇಶ ರವಾನೆಗೆ ಈ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ.
ದ.ಕ ಜಿಲ್ಲೆಯ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಿಂದ ಆರು ಯಕ್ಷಗಾನ ಮೇಳಗಳು ಹೊರಡುತ್ತಿದ್ದು, ಸಂಜೆ 5ರಿಂದ ರಾ.10.30ರವರೆಗೆ ಈಗ ಯಕ್ಷಗಾನ ಪ್ರದರ್ಶನ ನಡೆಯುತ್ತಿದೆ. ಈ ಹಿಂದೆ ರಾತ್ರಿ ಪೂರ್ತಿ ನಡೆಯುತ್ತಿದ್ದ ಯಕ್ಷಗಾನಕ್ಕೆ ಈಗ ಬ್ರೇಕ್ ಹಾಕಲಾಗಿದೆ. ಆದರೆ ಕರಾವಳಿಯಾದ್ಯಂತ ರಾತ್ರಿ ಯಕ್ಷಗಾನ ವೀಕ್ಷಿಸುವ ಯಕ್ಷಪ್ರಿಯರು ಈ ನಿರ್ಬಂಧದ ವಿರುದ್ಧ ಸಿಡಿದೆದ್ದಿದ್ದಾರೆ. ಹಾಗಾಗಿ ಕಟೀಲು ದುರ್ಗಾಪರಮೇಶ್ವರಿ ದೇವರ ಮೊರೆ ಹೋಗಲು ನಿರ್ಧಾರ ಮಾಡಿದ್ದಾರೆ.